Karnataka news paper

ಮದುವೆ ಆಹ್ವಾನ ಪತ್ರಿಕೆಯಲ್ಲಿ ಪುನೀತ್ ಫೋಟೋ; ‘ಅಪ್ಪು ಅಮರ’ ಎಂದ ನವಜೋಡಿ


ಹೈಲೈಟ್ಸ್‌:

  • ಅಕ್ಟೋಬರ್ 29ರಂದು ಅಗಲಿದ ‘ಕರುನಾಡ ರಾಜಕುಮಾರ’ ಅಪ್ಪು
  • ಪುನೀತ್ ರಾಜ್‌ಕುಮಾರ್ ಅಗಲಿಕೆಯ ನೋವಿನಿಂದ ಹೊರಬರದ ಫ್ಯಾನ್ಸ್
  • ಮದುವೆ ಆಹ್ವಾನ ಪತ್ರಿಕೆ ಮೇಲೆ ಅಪ್ಪು ಫೋಟೋ ಹಾಕಿಸಿದ ವಧು-ವರ

‘ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್ ಅವರು ನಿಧನರಾಗಿ ತಿಂಗಳಗಳೇ ಕಳೆದರೂ ಅವರ ನೆನಪು ಮಾತ್ರ ಯಾರಿಂದಲೂ ಮರೆಯಲು ಆಗುತ್ತಿಲ್ಲ. ಅಪ್ಪು ಎಂದೆಂದಿಗೂ ಜೀವಂತ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಈಗಲೂ ಕೂಡ ಅವರ ಸಮಾಧಿ ಬಳಿ ಸಾವಿರಾರು ಜನರು ಆಗಮಿಸಿ, ದರ್ಶನ ಪಡೆಯುತ್ತಿದ್ದಾರೆ. ಕರುನಾಡಿನ ಮನೆ ಮಗನನ್ನು ಕಳೆದುಕೊಂಡು ಶೂನ್ಯ ಆವರಿಸಿದೆ. ಇನ್ನು, ಅಪ್ಪು ಹೆಸರಲ್ಲಿ ಅನೇಕ ಕೆಲಸಗಳು ನಡೆಯುತ್ತಲೇ ಇವೆ. ಈ ಮಧ್ಯೆ ಬಾಗಲಕೋಟೆಯ ಜೋಡಿಯೊಂದು ತಮ್ಮ ಮದುವೆ ಆಹ್ವಾನ ಪತ್ರಿಕೆಯಲ್ಲಿ ಪುನೀತ್ ಫೋಟೋವನ್ನು ಹಾಕಿಸಿ, ಅಭಿಮಾನ ಮೆರೆದಿದೆ.

ಅಪ್ಪು ಅಭಿಮಾನಿಗಳಾಗಿರುವ ಸವಿತಾ ಮತ್ತು ಶ್ರೀಧರ
ಬಾಗಲಕೋಟೆ ಜಿಲ್ಲೆಯ ಸವಿತಾ ಮತ್ತು ಶ್ರೀಧರ ಅವರ ವಿವಾಹವು ಇದೇ ಡಿ.27ರಂದು ನಿಶ್ಚಯವಾಗಿದೆ. ವಿಶೇಷವೆಂದರೆ, ಈ ಇಬ್ಬರು ವಧು-ವರರ ಮನೆಯವರು ಮಾಡಿಸಿರುವ ಲಗ್ನಪತ್ರಿಕೆಯಲ್ಲಿ ಪುನೀತ್ ಫೋಟೋ ಇದೆ. ‘ಜೊತೆಗಿರುವ ಜೀವಾ ಎಂದೆಂದಿಗೂ ಜೀವಂತ… ಅಪ್ಪು ಅಮರ’ ಎಂದು ಮದುವೆ ಆಹ್ವಾನ ಪತ್ರಿಕೆ ಮೇಲೆ ಬರೆಸಲಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹೊಸೂರು ಗ್ರಾಮದ ಸಿದ್ದೇಶ್ವರ ದೇವಸ್ಥಾನದಲ್ಲಿ ಈ ಮದುವೆ ನಡೆಯಲಿದೆ. ಅಂದಹಾಗೆ, ವರ ಶ್ರೀಧರ ಮತ್ತು ವಧು ಸವಿತಾ ಇಬ್ಬರೂ ಕೂಡ ಅಪ್ಪುಗೆ ದೊಡ್ಡ ಫ್ಯಾನ್ಸ್. ಅಪ್ಪು ನಿಧನ ಹಿನ್ನೆಲೆಯಲ್ಲಿ ಅವರಿಗೆ ಈ ರೀತಿ ಶ್ರದ್ಧಾಂಜಲಿ ಸಲ್ಲಿಸಲು ಮುಂದಾಗಿದ್ದಾರೆ ಶ್ರೀಧರ ಮತ್ತು ಸವಿತಾ. ಸದ್ಯ ಈ ಮದುವೆ ಆಹ್ವಾನ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಧಾರವಾಡದಿಂದ ಬಂದ ದಾಕ್ಷಾಯಿಣಿ
ಇನ್ನು, ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ಕ್ರೀಡಾಪಟು ದಾಕ್ಷಾಯಿಣಿ ಉಮೇಶ್ ಪಾಟೀಲ್ ಅವರು 550 ಕಿಲೋಮೀಟರ್ ರನ್ನಿಂಗ್‌ ಮಾಡಿಕೊಂಡು ಹೋಗಿ ಅಪ್ಪು ಸಮಾಧಿ ದರ್ಶನವನ್ನು ಪಡೆದಿದ್ದಾರೆ. ಪುನೀತ್ ರಾಜಕುಮಾರ್‌ ನಾಯಕ ನಟನಾಗಿ ಅಭಿನಯಿಸಿದ ಎರಡನೇ ಚಿತ್ರ ಅಭಿ ಚಿತ್ರದಿಂದ ಅವರ ಅಭಿಮಾನಿಯಾಗಿರುವ ದಾಕ್ಷಾಯಿಣಿ ಅವರು, ಓರ್ವ ರನ್ನಿಂಗ್ ಕ್ರೀಡಾ ಪಟುವಾಗಿದ್ದಾರೆ. ಪುನೀತ್ ಅವರ ನಿಧನದ ನಂತರ ಅವರ ಸಮಾಜಮುಖಿ ಕಾರ್ಯಗಳಿಗೆ ಮನಸೋತ ದಾಕ್ಷಾಯಿಣಿ, ಪುನೀತ್‌ ರಾಜಕುಮಾರವರಿಗೆ ವಿಶೇಷ ನಮನ ಸಲ್ಲಿಸಬೇಕು ಎಂದು ಕೊಂಡು, ಈಗ ರನ್ನಿಂಗ್ ಮೂಲಕವೇ 550 ಕಿಲೋಮೀಟರ್ ದೂರವನ್ನು ಕ್ರಮಿಸಿ ಅಪ್ಪು‌ ಸಮಾಧಿಗೆ ಭೇಟಿ‌ ನೀಡಿ ವಿಶೇಷ ನಮನ ಸಲ್ಲಿಸಿದ್ದಾರೆ. ನವೆಂಬರ್ 29ರಂದು ತಮ್ಮ ಸ್ವಗ್ರಾಮವಾದ ಮನಗುಂಡಿ ಗ್ರಾಮದ ಬಸವೇಶ್ವರ ವೃತ್ತದಿಂದ ಬೆಂಗಳೂರಿಗೆ ಓಟವನ್ನು ಆರಂಭಿಸಿದ್ದರು. ಇಂದು (ಡಿ.14) ಅವರು ಅಪ್ಪು ಸಮಾಧಿಗೆ ಭೇಟಿ ನೀಡಿದ್ದಾರೆ. ಈ ವೇಳೆ ರಸ್ತೆಯ ಉದ್ದಕ್ಕೂ ಹಾಗೂ ತಾವು ತಂಗುವ ಪ್ರದೇಶದಲ್ಲಿ ನೇತ್ರದಾನ ಹಾಗೂ ರಕ್ತದಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಅಪ್ಪು ಕಣ್ಣುಗಳಿಂದ ಇನ್ನೂ ಹಲವರಿಗೆ ದೃಷ್ಟಿ ಭಾಗ್ಯ: ನಾರಾಯಣ ನೇತ್ರಾಲಯದಿಂದ ಹೊಸ ಪ್ರಯೋಗ!

ಅಂದಹಾಗೆ, ಅಪ್ಪು ಸಮಾಧಿ ಬಳಿ ಬಂದ ದಾಕ್ಷಾಯಿಣಿ ಅವರನ್ನು ದೊಡ್ಮನೆಯ ಶಿವರಾಜ್‌ಕುಮಾರ್ ಅವರು ಬರಮಾಡಿಕೊಂಡರು. ದಾಕ್ಷಾಯಿಣಿ ಅವರು ಚಿತ್ರದುರ್ಗದ ಬಳಿ ಇರುವಾಗಲೇ ಒಮ್ಮೆ ರಾಘವೇಂದ್ರ ರಾಜ್‌ಕುಮಾರ್ ಕರೆಮಾಡಿ, ಯೋಗ ಕ್ಷೇಮ ವಿಚಾರಿಸಿದ್ದರು.

ಪುನೀತ್‌ ರಾಜ್‌ಕುಮಾರ್‌ ಅವರ ಒತ್ತಾಯದಿಂದಾಗಿ ‘ರಾಜಕುಮಾರ’ ಸಿನಿಮಾವನ್ನು ಥಿಯೇಟರ್‌ಗೆ ಹೋಗಿ ನೋಡಿದ್ದೆ: ಸಿದ್ದರಾಮಯ್ಯ

wedding card

wedding card 2



Read more