ಇದಕ್ಕೆ ನಿದರ್ಶನ ಎಂಬಂತೆ ಹಲವಾರು ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸಿರುವ ಜಮೀರ್ ಅಲಿಯಾಸ್ ಬಚ್ಚ ಎಂಬ ರೌಡಿ ಜೈಲಿನಿಂದ ಶಿವಮೊಗ್ಗದ ಉದ್ಯಮಿ ನಾಸೀರ್ ಎಂಬಾತನಿಗೆ ಮೊಬೈಲ್ ಕರೆ ಮಾಡಿ ತನ್ನ ಕಡೆಯವರಿಗೆ ಹಣ ನೀಡುವಂತೆ ಧಮ್ಕಿ ಹಾಕಿದ್ದಾನೆ. ಅಕ್ಟೋಬರ್ ತಿಂಗಳಲ್ಲಿ ಮಾತ್ರವಲ್ಲದೇ, ಜನವರಿ 18 ರಂದು ಸಹ ಕರೆ ಮಾಡಿ, ಹಣಕ್ಕಾಗಿ ಜೀವ ಬೆದರಿಕೆ ಹಾಕಿದ್ದಾನೆ. ತನಗೆ ಸಾಕಷ್ಟು ಹಣದ ಅವಶ್ಯಕತೆ ಇದ್ದು ದಿನಕ್ಕೆ ಇಪ್ಪತ್ತೈದು ಸಾವಿರ ಹಣ ಬೇಕಾಗಬಹುದು. ಆಗಾಗ ಹಣ ನೀಡಬೇಕು ಇಲ್ಲವಾದರೆ ಜೀವ ತೆಗೆಯುತ್ತೇನೆ ಎಂದು ಜೈಲಿನಲ್ಲಿರುವ ಬಚ್ಚ ಮೊಬೈಲ್ ಬಳಸಿ ಕರೆ ಮಾಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದಾಗಿ ಎರಡು ದಿನಗಳ ನಂತರ ಕೆಲವು ಪುಡಿ ರೌಡಿಗಳನ್ನ ಕಳುಹಿಸಿ ಭಯ ಮೂಡಿಸಿದ್ದಾನೆ. ಪುನಃ ಕರೆ ಮಾಡಿ ತಾನೇ ತನ್ನ ಹುಡುಗರನ್ನ ಬಿಟ್ಟಿದ್ದು ಎಂದು ಹೇಳಿಕೊಂಡಿದ್ದಾನೆ.
ಪರಪ್ಪನ ಅಗ್ರಹಾರದ ಜೈಲಿನಲ್ಲಿ ಐಷಾರಾಮಿ ಜೀವನ ನಡೆಸಿದ್ದ ಕೈದಿಗಳ ವಿಡಿಯೋ ವೈರಲ್ ಆಗಿ ಎರಡೇ ದಿನಕ್ಕೆ ಇಂತಹದೊಂದು ಪ್ರಕರಣ ಶಿವಮೊಗ್ಗ ಜೈಲಿನಿಂದ ಹೊರ ಬಂದಿದೆ. ಅದರಲ್ಲೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರು ಜಿಲ್ಲೆಯಲ್ಲಿ ಕೈದಿಗಳು ಜೈಲಿನಿಂದಲೇ ಧಮ್ಕಿ ಹಾಕುವ ಪ್ರಕರಣ ಪದೇ ಪದೇ ಕೇಳಿಬರುತ್ತಿದ್ದು ಆತಂಕ ಮೂಡಿಸಿದೆ.ಬೆದರಿಕೆ ಪ್ರಕರಣ ನಡೆದು ಎರಡು ದಿನಗಳ ನಂತರ ಉದ್ಯಮಿ ಶಿವಮೊಗ್ಗ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಸಂಬಂಧ ಮಾಧ್ಯಮಗಳಿಗೆ ಮಾತನಾಡಿದ ಶಿವಮೊಗ್ಗ ಎಸ್‌ಪಿ ಬಿಎಂ ಲಕ್ಷ್ಮಿ ಪ್ರಸಾದ್, ಆರೋಪಿ ಮೇಲೆ ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ಆಮೇಲೆ ನಾವು ಅರೆಸ್ಟ್ ಮಾಡಿದ್ದೆವು. ದಾವಣಗೆರೆ, ಬೆಂಗಳೂರು, ಹಾಸನದಲ್ಲಿ ಈತನ ಮೇಲೆ ಪ್ರಕರಣಗಳಿದ್ದವು. ಅಲ್ಲಿಂದ ಇಲ್ಲಿ ತನಕ ಆರೋಪಿ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿದ್ದಾನೆ. ಜೈಲಿನಲ್ಲಿದ್ದುಕೊಂಡೆ ಬೆದರಿಕೆ ಹಾಕುತ್ತಿರೋದರ ಬಗ್ಗೆ ಪ್ರಕರಣ ದಾಖಲಾಗಿತ್ತು. ನಿನ್ನೆ ರಾತ್ರಿ ಕೂಡ ಯಾರದ್ದೋ ಬಳಿ ಮಾತನಾಡುತ್ತಿರೋದು ನಮ್ಮ ಗಮನಕ್ಕೆ ಬಂತು. ಹಾಗಾಗಿ ಸಬ್ ಇನ್ಸ್‌ಪೆಕ್ಟರ್ ತಂಡ ಆತನ ಸೆಲ್ ಮೇಲೆ ದಾಳಿ ಮಾಡಿ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಆತನನ್ನ ಪ್ರತ್ಯೇಕ ಜೈಲಿನಲ್ಲಿರಿಸಿ ಆತನ ಕೈಗೆ ಯಾವುದೇ ಫೋನ್ ಕೊಡಬಾರದು ಎಂದು ನಿರ್ಬಂಧ ಹೇರಲಾಗಿದೆ. ಮುಂದಿನ ತನಿಖೆಗಾಗಿ ಜೈಲು ಮೇಲಧಿಕಾರಿ ಜೊತೆ ಮಾತನಾಡುತ್ತಿದ್ದೇವೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.
ಜೈಲಿನಲ್ಲಿದ್ದುಕೊಂಡೇ ಉದ್ಯಮಿಗಳಿಗೆ ಬೆದರಿಕೆ ಕರೆ ಮಾಡುವ ಖಚಿತ ಮಾಹಿತಿ ಮೇರೆಗೆ ಸೆಂಟ್ರಲ್ ಜೈಲ್ ಮೇಲೆ ಸಿಇಎನ್ ಠಾಣೆ ಸಿಪಿಐ ಹಾಗೂ ತುಂಗಾನಗರ ಠಾಣೆ ಪ್ರಭಾರ ಸಿಪಿಐ ಕೆ.ಟಿ.ಗುರುರಾಜ್ ಕರ್ಕಿ ನೇತೃತ್ವದಲ್ಲಿ ದಾಳಿ ಮಾಡಿ, ಕೈದಿ ಜಮೀರ್ ಬಚ್ಚನ್ ಕೈನಲ್ಲಿದ್ದ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಕರೆ ಮಾಡಿ ಉದ್ಯಮಿಗಳಿಗೆ ಹಣಕ್ಕಾಗಿ ಬೇಡಿಕೆ ಇಟ್ಟು ಬೆದರಿಕೆ ಹಾಕಲು ಬಳಸುತ್ತಿದ್ದ ಮೊಬೈಲ್ ಫೋನ್ ಸಿಕ್ಕಿರುವುದು ಜೈಲ್ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ. ಶಿವಮೊಗ್ಗ ಮಾತ್ರವಲ್ಲದೇ, ರಾಜ್ಯದ ಹಲವು ಹಲವಾರು ಠಾಣೆಯ ಪೊಲೀಸರಿಗೆ ಬೇಕಾದ ವ್ಯಕ್ತಿಯ ಕೈಗೆ ಮೊಬೈಲ್ ಬಂದಿದ್ದು ಹೇಗೆ ಎಂಬ ಅನುಮಾನ ಮೂಡಿದೆ.
Read more
[wpas_products keywords=”deal of the day sale today offer all”]