Source : The New Indian Express
ಕೊಯಮತ್ತೂರು: ನೀಲಗಿರಿಯ ಕೂನೂರು ಬಳಿಯ ಕಾಟೇರಿ-ನಂಚಪ್ಪನಛತ್ರಂ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ 11 ರಕ್ಷಣಾ ಸಿಬ್ಬಂದಿ ಸಾವನ್ನಪ್ಪಿದ ಎರಡು ದಿನಗಳ ನಂತರ, ಹೆಲಿಕಾಪ್ಟರ್ ಅನ್ನು ಅತ್ಯಂತ ಸಮೀಪದಿಂದ ಗಮನಿಸಿದ ಪ್ರತ್ಯಕ್ಷದರ್ಶಿಯೊಬ್ಬರು ಶುಕ್ರವಾರ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಪ್ರತ್ಯಕ್ಷದರ್ಶಿ ಹೆಲಿಕಾಪ್ಟರ್ ಪತನವಾಗುವ ಕೆಲ ನಿಮಿಷಗಳ ಮುನ್ನ ತಮ್ಮ ಮೊಬೈಲ್‌ನಲ್ಲಿ ಅದರ ವಿಡಿಯೋ ಮಾಡಿದ್ದಾರೆ.
ವಿಡಿಯೋ ನೋಡಿ: ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್ ಪತನ: ಈ ವಿಡಿಯೋದಲ್ಲಿ ದಾಖಲಾಗಿದೆ ಕೊನೆಯ ದೃಶ್ಯ!
“ಬುಧವಾರ ಮಧ್ಯಾಹ್ನ 12.24ಕ್ಕೆ ಹೆಲಿಕಾಪ್ಟರ್ ಕಾಟೇರಿಯನ್ನು ವೇಗವಾಗಿ ದಾಟಲು ಪ್ರಯತ್ನಿಸಿದಾಗ, ಇಡೀ ಪ್ರದೇಶವು ದಟ್ಟವಾದ ಮಂಜಿನಿಂದ ಆವೃತವಾಗಿತ್ತು” ಎಂದು ಪ್ರತ್ಯಕ್ಷದರ್ಶಿಗಳಲ್ಲಿ ಒಬ್ಬರಾದ ನಾಸರ್ ಅವರು ಹೇಳಿದ್ದಾರೆ.
“ನಾವು ಸ್ಥಳದಲ್ಲಿ ಸುಮಾರು 10 ನಿಮಿಷಗಳ ಕಾಲ ಫೋಟೋಗಳನ್ನು ತೆಗೆದುಕೊಂಡೆವು. ದೊಡ್ಡ ಸದ್ದು ಕೇಳಿದ ನಂತರ ನಾವು ತಕ್ಷಣ ಶಬ್ದ ಕೇಳಿದ ಕಡೆಗೆ ಹೋಗಲು ಪ್ರಾರಂಭಿಸಿದೆವು ಮತ್ತು ಆ ಪ್ರದೇಶದಲ್ಲಿ ಏನಾದರೂ ಅಪಘಾತ ಸಂಭವಿಸಿದೆಯೇ ಎಂದು ಹುಡುಕಿದೆವು. ಘಾಟ್ ರಸ್ತೆಯಲ್ಲಿ ಕೆಲವು ತಿರುವುಗಳನ್ನು ದಾಟಿದ ನಂತರ, ನಾವು ಒಂದು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಪೊಲೀಸರು ಮತ್ತು ಆಂಬ್ಯುಲೆನ್ಸ್ ಅನ್ನು ನೋಡಿದ್ದೇವೆ. ನಾವು ಅವರ ಬಳಿಗೆ ಹೋಗಿ ನಾವು ಮಾಡಿದ ವಿಡಿಯೋವನ್ನು ಪೊಲೀಸರಿಗೆ ಒಪ್ಪಿಸಿದೆವು. ನಂತರ ಅಲ್ಲಿಂದ ಹೊರಡುವಂತೆ ನಮಗೆ ಸೂಚಿಸಿದ್ದರಿಂದ ನಾವು ಹೊರಟೆವು” ಎಂದು ಅವರು ತಿಳಿಸಿದ್ದಾರೆ.
ಐಎಎಫ್ ಹೆಲಿಕಾಪ್ಟರ್‌ನ ಕೊನೆಯ ಕ್ಷಣಗಳನ್ನು ಕೊಯಮತ್ತೂರಿನ ಕುಟ್ಟಿ ಎಂಬ ವ್ಯಕ್ತಿ 19 ಸೆಕೆಂಡ್‌ಗಳ ವಿಡಿಯೋದಲ್ಲಿ ರೆಕಾರ್ಡ್ ಮಾಡಿದ್ದಾರೆ. ಕೊಯಮತ್ತೂರಿನ ಗಾಂಧಿಪುರಂನಲ್ಲಿ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿರುವ ನಾಸರ್ ಜೊತೆಗೆ ಕುಟ್ಟಿ ಮತ್ತು ಅವರ ಕುಟುಂಬ ಬುಧವಾರ ಕೂನೂರು ಬಳಿಯ ಕಾಟೇರಿಯಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತವನ್ನು ಗಮನಿಸಿದ್ದಾರೆ.
ದಟ್ಟ ಮಂಜಿನಲ್ಲಿ ಹೆಲಿಕಾಪ್ಟರ್ ಕಣ್ಮರೆಯಾದ ನಂತರ ಈ ಕುಟುಂಬವು ಕಾಟೇರಿ ಬಳಿ ರೈಲ್ವೆ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿರುವುದು ವೀಡಿಯೋದಲ್ಲಿ ಸೇರೆಯಾಗಿದೆ.