Karnataka news paper

ಕೇಂದ್ರ & ರಾಜ್ಯದಲ್ಲಿ ಬಿಜೆಪಿ ಡಬಲ್ ದೋಖಾ ಸರ್ಕಾರ ನಡೆಸುತ್ತಿವೆ..! ಸಿದ್ದರಾಮಯ್ಯ ಕಿಡಿ


ಹೈಲೈಟ್ಸ್‌:

  • ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮಗಳು 2015ರಲ್ಲಿ ಕಡೇ ಬಾರಿ ಪರಿಷ್ಕರಣೆಗೊಂಡಿವೆ
  • ಈ ನಿಯಮಗಳಲ್ಲಿ ಕೆಲವು ಲೋಪ ದೋಷಗಳಿವೆ
  • ಇನ್ನಾದರೂ ಹಳೆಯ ನಿಯಮಗಳಿಗೆ ಬದಲಾವಣೆ ತಂದು ನಷ್ಟದಲ್ಲಿರುವ ಎಲ್ಲ ರೈತರಿಗೆ ಪರಿಹಾರ ನೀಡಿ: ಸಿದ್ದರಾಮಯ್ಯ

ಬೆಳಗಾವಿ: ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳು ಸೇರಿ ಡಬಲ್ ದೋಖಾ ಸರ್ಕಾರ ನಡೆಸುತ್ತಿವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ನಿಯಮ 69 ಅಡಿಯಲ್ಲಿ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮಗಳು 2015ರಲ್ಲಿ ಕಡೇ ಬಾರಿ ಪರಿಷ್ಕರಣೆಗೊಂಡಿದ್ದು, ನಿಯಮಗಳಲ್ಲಿ ಕೆಲವು ಲೋಪ ದೋಷಗಳಿವೆ. ಇನ್ನಾದರೂ ಹಳೆಯ ನಿಯಮಗಳಿಗೆ ಬದಲಾವಣೆ ತಂದು ನಷ್ಟದಲ್ಲಿರುವ ಎಲ್ಲ ರೈತರಿಗೆ ಪರಿಹಾರ ನೀಡುವಂತೆ ಪರಿಷ್ಕರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಸಿದ್ದರಾಮಯ್ಯ ಒತ್ತಾಯಿಸಿದರು.

ಕೊಬ್ಬರಿಯ ಪ್ರೋತ್ಸಾಹ ಧನವನ್ನು ರೂ. 700 ರಿಂದ ರೂ. 1000ಕ್ಕೆ ಹೆಚ್ಚು ಮಾಡಿದ್ದು ನಮ್ಮ ಸರ್ಕಾರ. ನಾವು 2017-18 ರಲ್ಲಿ 2 ಲಕ್ಷದ 96 ಸಾವಿರ ಕ್ವಿಂಟಾಲ್ ಕೊಬ್ಬರಿ ಖರೀದಿ ಮಾಡಿದ್ದೆವು. ತಾವು ರೈತ ಪರ ಎಂದು ಹೇಳಿಕೊಳ್ಳುವ ಬಿಜೆಪಿ ಸರ್ಕಾರ, ಖರೀದಿ ಮಾಡಿದ್ದು ಕೇವಲ 50,400 ಕ್ವಿಂಟಾಲ್ ಮಾತ್ರ ಎಂದರು.

ನಮ್ಮ ಸರ್ಕಾರ ತೊಗರಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಮೇಲೆ ಮೊದಲು ರೂ. 450, ನಂತರ ರೂ. 550 ಅನ್ನು ಹೆಚ್ಚುವರಿಯಾಗಿ ನೀಡಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದನ್ನು ರೂ. 300ಕ್ಕೆ ಇಳಿಸಿತು. ಇದೇನಾ ರೈತ ಪರ ಸರ್ಕಾರದ ಧೋರಣೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

2014ರ ಮಾರ್ಚ್ ತಿಂಗಳಲ್ಲಿ ರಾಯಚೂರು, ಸಿಂಧಗಿ, ಕೊಪ್ಪಳ, ಗಂಗಾವತಿ ಮುಂತಾದೆಡೆ ಆಲಿಕಲ್ಲು ಮಳೆ ಸುರಿದ ಪರಿಣಾಮ ಭತ್ತದ ಬೆಳೆ ನಾಶವಾಗಿತ್ತು. ಆಗ ನಮ್ಮ ಸರ್ಕಾರ ಪ್ರತಿ ಹೆಕ್ಟೇರ್ ಗೆ ರೂ. 25,000 ಪರಿಹಾರ ಧನ ನೀಡಿತ್ತು. ರೈತರಿಗೆ ನ್ಯಾಯ ಸಮ್ಮತ ಪರಿಹಾರ ನೀಡಲು ರಾಜ್ಯ ಸರ್ಕಾರ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮಗಳಿಗೆ ಅಂಟಿಕೊಂಡಿರಬೇಕಾದ ಅಗತ್ಯವಿಲ್ಲ. ಸರ್ಕಾರಕ್ಕೆ ರೈತರ ಬಗ್ಗೆ ಬದ್ಧತೆಯಿದ್ದರೆ ನಿಯಮಗಳಿಗಿಂತ ಹೆಚ್ಚು ಪರಿಹಾರ ನೀಡಲು ಸಾಧ್ಯ ಎಂಬುದಕ್ಕೆ ನಮ್ಮ ಸರ್ಕಾರವೇ ಸಾಕ್ಷಿ‌ ಎಂದರು.

ಎನ್.ಡಿ.ಆರ್.ಎಫ್ ನಿಯಮದ ಪ್ರಕಾರ ಖುಷ್ಕಿ ಜಮೀನಿಗೆ ರೂ. 6,800 ಮತ್ತು ತರಿ ಜಮೀನಿಗೆ ರೂ. 13,500 ಮತ್ತು ತೋಟಗಾರಿಕಾ ಬೆಳೆಗಳಿಗೆ ರೂ. 18,000 ಪರಿಹಾರ ನೀಡಬೇಕು ಮತ್ತು ಗರಿಷ್ಠ ಎರಡು ಹೆಕ್ಟೇರ್ ಬೆಳೆ ಹಾನಿಗೆ ಮಾತ್ರ ಪರಿಹಾರ ನೀಡಬೇಕೆಂದಿದೆ. ಈಗ ನೀಡುತ್ತಿರುವ ಪರಿಹಾರದ ಹಣ, ರೈತರು ಬಿತ್ತನೆ ಬೀಜ ಖರೀದಿ ಮಾಡಲು ಹೂಡುವ ಹಣಕ್ಕಿಂತ ಕಡಿಮೆಯಿದ್ದು, ಇದನ್ನು ಕನಿಷ್ಠ ಮೂರು ಪಟ್ಟು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಈ ಬಾರಿ ರಾಜ್ಯದಲ್ಲಿ 6.9 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ರಾಗಿ ಬಿತ್ತನೆ ಮಾಡಿದ್ದು, 13 ಲಕ್ಷ ಟನ್ ಬೆಳೆ ನಿರೀಕ್ಷೆ ಮಾಡಲಾಗಿತ್ತು. 10 ಲಕ್ಷದ 21 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೀಜ ಬಿತ್ತನೆ ಮಾಡಲಾಗಿತ್ತು. ಸುಮಾರು 25 – 30 ಲಕ್ಷ ಟನ್ ಬೆಳೆ ನಿರೀಕ್ಷೆಯಿತ್ತು. ಇದರಲ್ಲಿ ಶೇ. 75 ಬೆಳೆ ನಾಶವಾಗಿದೆ.

14 ಲಕ್ಷ ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬಿತ್ತನೆಯಾಗಿದ್ದು, ಸುಮಾರು 51 ಲಕ್ಷ ಟನ್ ಬೆಳೆ ನಿರೀಕ್ಷೆ ಇತ್ತು. 4.9 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಆಗಿತ್ತು. ಹೀಗೆ ಹತ್ತಿ, ರಾಗಿ, ಮೆಕ್ಕೆ ಜೋಳ, ಈರುಳ್ಳಿ, ಅಡಿಕೆ, ತೆಂಗು ಮುಂತಾದ ಬೆಳೆಗಳ ಫಸಲು ಕೈಗೆ ಬರುವ ವೇಳೆ ಮಳೆಗೆ ಸಿಲುಕಿ ನಷ್ಟವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಪ್ರಸಕ್ತ ವರ್ಷ 39,000 ಮನೆಗಳು ಮಳೆಯಿಂದಾಗಿ ಹಾನಿಗೀಡಾಗಿದೆ. ಈವರೆಗೆ ಒಂದೇ ಒಂದು ಮನೆಗೆ ಪರಿಹಾರದ ಹಣ ನೀಡಿಲ್ಲ. 12 ಲಕ್ಷ ಎಕರೆ ಪ್ರದೇಶಕ್ಕೆ ರೂ. 782 ಕೋಟಿ ಬೆಳೆ ಪರಿಹಾರದ ಹಣ ಮಾತ್ರ ನೀಡಲಾಗಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ರಾಜ್ಯಕ್ಕೆ ಅತಿ ಹೆಚ್ಚು ಪರಿಹಾರದ ರೂಪದಲ್ಲಿ ಹಣ ನೀಡಿದ್ದಾರೆ ಎಂಬ ಬಿಜೆಪಿಯವರ ಹೇಳಿಕೆ ಶುದ್ಧ ಸುಳ್ಳು. ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರಗಳ ನಡುವಿನ ಬಜೆಟ್ ಗಾತ್ರದ ವ್ಯತ್ಯಾಸಕ್ಕೆ ಹೋಲಿಸಿದರೆ ಅವರು ನೀಡಿರುವ ಹಣ ಯಾವ ಲೆಕ್ಕವೂ ಅಲ್ಲ.

ನರೇಂದ್ರ ಮೋದಿ ಅವರು ಜಾಸ್ತಿ ಪರಿಹಾರ ಕೊಟ್ಟಿದ್ದಾರೆ ಎಂದು ಸುಳ್ಳು ಹೇಳುವ ಬದಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವ ಪರಿಹಾರವನ್ನಾದರೂ ತರಲು ರಾಜ್ಯ ಸರ್ಕಾರ ಪ್ರಯತ್ನ ಮಾಡಬೇಕಿತ್ತು ಎಂದರು.

ಸಮಸ್ಯೆಗಳಿಗೆ ಉತ್ತರವಾಗಲಿ ಅಧಿವೇಶನ; ಮುಂದಿನ ಸಾಲಿನ ನಾಯಕರೆಲ್ಲರೂ ಕಿತ್ತೂರು-ಕಲ್ಯಾಣ ಕರ್ನಾಟಕದವರೇ!
15 ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ ರೂ. 5,495 ಕೋಟಿ ಹಣವನ್ನು ತರಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ರಾಜ್ಯದಿಂದ ಆಯ್ಕೆಯಾದ 25 ಬಿಜೆಪಿ ಸಂಸದರು, ರಾಜ್ಯ ಸರ್ಕಾರ ಒಂದು ದಿನವಾದರೂ ಪ್ರಧಾನಿಯವರ ಮುಂದೆ ಇದನ್ನು ಕೇಳಿದ್ದಾರಾ? ಪ್ರತಿಭಟಿಸಿದ್ದಾರಾ? ಇದು ರಾಜ್ಯಕ್ಕಾದ ಅನ್ಯಾಯವಲ್ಲವೇ ಎಂದು ಸಿದ್ದು ಪ್ರಶ್ನಿಸಿದರು.

ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕಕ್ಕೆ ಸಿಗುತ್ತಿರುವ ಎನ್.ಡಿ.ಆರ್.ಎಫ್ ಹಣ, ತೆರಿಗೆ ಪಾಲು, ಅನುದಾನದ ಪ್ರಮಾಣ ಅತ್ಯಂತ ಕಡಿಮೆಯಿದೆ. ನಮಗೆ ಈ ಅನ್ಯಾಯ ಏಕೆ? ‌ಯು.ಪಿ.ಎ ಸರ್ಕಾರದ ಅವಧಿಯಲ್ಲಿ ರಾಜ್ಯದಿಂದ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ 3 ರಿಂದ 4 ಸಾವಿರ ಕೋಟಿ ರೂಪಾಯಿ ಸಂಗ್ರಹವಾಗುತ್ತಿತ್ತು. ಇಂದು ಅದು ರೂ. 35,000 ಗೆ ಏರಿಕೆಯಾಗಿದೆ.

ಕೇಂದ್ರ ಸರ್ಕಾರದ ಸಹಭಾಗಿತ್ವ ಯೋಜನೆಗಳಲ್ಲಿ 2013-14 ರಲ್ಲಿ ರಾಜ್ಯದ ಪಾಲು 25%, ಕೇಂದ್ರದ ಪಾಲು 75% ಇತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ 2014-15 ರಲ್ಲಿ ರಾಜ್ಯದ ಪಾಲು 40% ಗೆ ಏರಿಕೆಯಾಗಿ, ಕೇಂದ್ರದ ಪಾಲು 60% ಗೆ ಇಳಿಯಿತು. 2020-21 ರಲ್ಲಿ ಈಗ ಕೇಂದ್ರ ಪಾಲು 45%, ರಾಜ್ಯದ ಪಾಲು 55% ಆಗಿದೆ.

ಬೆನ್ನಿಗಿರಿದ ‘ಬ್ರೂಟಸ್‌’ ಯಾರು? ಸಿದ್ದರಾಮಯ್ಯ ವಿರುದ್ಧ ಎಚ್‌ಡಿ ಕುಮಾರಸ್ವಾಮಿ ಕಿಡಿ
2012-13 ರಲ್ಲಿ ನಮ್ಮ ತೆರಿಗೆ ಪಾಲು ರೂ. 12,647 ಕೋಟಿ ಇತ್ತು. 2013-14 ರೂ. 13,809 ಕೋಟಿಗೆ ಏರಿಕೆಯಾಗಿತ್ತು. 2019-20 ರಲ್ಲಿ ರಾಜ್ಯಕ್ಕೆ ರೂ. 39,000 ಕೋಟಿ ಬರಬೇಕಿತ್ತು, ಆದರೆ ಬಂದಿದ್ದು ಮಾತ್ರ ರೂ. 30,990 ಕೋಟಿ. ಕಳೆದ ಸಾಲಿನಲ್ಲಿ ರೂ. 21,495 ಕೋಟಿ ಮಾತ್ರ ಬಂದಿದೆ.

ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಬೇಕು. ಆಗ ಡಬ್ಬಲ್ ಇಂಜಿನ್ ಸರ್ಕಾರ ವೇಗವಾಗಿ ಕೆಲಸ ಮಾಡುತ್ತೆ ಎಂದು ನರೇಂದ್ರ ಮೋದಿ ಅವರು ಹೇಳಿದ್ದರು. ಈಗ ಎರಡೂ ಬಿಜೆಪಿ ಸರ್ಕಾರಗಳು ಸೇರಿ ಡಬಲ್ ದೋಖಾ ಸರ್ಕಾರ ನಡೆಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹವಾಮಾನ ಬದಲಾವಣೆ ಬಗ್ಗೆ ವಿಜ್ಞಾನಿಗಳ ವರದಿ ಹಿನ್ನೆಲೆಯಲ್ಲಿ ‌ಎಚ್ಚೆತ್ತುಕೊಳ್ಳಿ

ಹವಾಮಾನ ಬದಲಾವಣೆಯು ಮುಂದಿನ ದಿನಗಳಲ್ಲಿ ನಮ್ಮ ಕೃಷಿ ಪದ್ಧತಿಯನ್ನು ತೀವ್ರವಾಗಿ ಬಾಧಿಸಲಿದೆ ಎಂದು ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆಯ ಸ್ವಾಯತ್ತ ಸಂಸ್ಥೆಯಾದ ಎನ್ವಿರಾನ್ಮೆಂಟಲ್ ಮ್ಯಾನೇಜ್ಮೆಂಟ್ ಎಂಡ್ ಪಾಲಿಸಿ ರೀಸರ್ಚ್ ಇನ್ಸ್ಟಿಟ್ಯೂಟ್ ನ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಸರ್ಕಾರ ಅವರ ವರದಿಯನ್ನು ಗಂಭೀರವಾಗಿ ಪರಿಗಣಿಸಿ, ಈಗಿನಿಂದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಬಿಪಿನ್ ರಾವತ್ ನಿಧನದ ಬಗ್ಗೆ ತನಿಖೆ ಆಗಬೇಕು; ಸಿದ್ದರಾಮಯ್ಯ ಆಗ್ರಹಕ್ಕೆ ಈಶ್ವರಪ್ಪ ಸಹಮತ



Read more