ಹೈಲೈಟ್ಸ್:
- ಟಗರು-ಸಲಗ ಚಿತ್ರಗಳ ಸಂಕಲನಕಾರ, ಸಂಭಾಷಣೆಕಾರ, ಸಂಗೀತ ನಿರ್ದೇಶಕರಿಂದ ಹೊಸ ಸಾಹಸ
- ಹೊಸ ಸಿನಿಮಾಗೆ ಒಂದಾದ ಟಗರು-ಸಲಗ ಚಿತ್ರಗಳ ತಂತ್ರಜ್ಞರು
- ಹೊಸ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ ಅಭಿ
ಶಿವರಾಜ್‌ಕುಮಾರ್ ನಟಿಸಿದ್ದ ‘ಟಗರು’ ಸಿನಿಮಾ ಹಾಗೂ ದುನಿಯಾ ವಿಜಯ್ ಅವರ ‘ಸಲಗ’ ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್. ಬಾಕ್ಸ್ ಆಫೀಸ್ ಮಾತ್ರವಲ್ಲದೆ ಇನ್ನೂ ಹಲವು ವಿಚಾರಗಳಿಗೆ ಸದ್ದು, ಸುದ್ದಿ ಎರಡನ್ನೂ ಈ ಎರಡೂ ಸಿನಿಮಾಗಳು ಮಾಡಿದ್ದವು. ಸ್ಯಾಂಡಲ್‌ವುಡ್‌ನಲ್ಲಿ ಕೆಲವರು ‘ಟಗರು’ ಬಾಕ್ಸ್ ಆಫೀಸ್‌ಗೆ ಗುದ್ದಿತು ಎಂದರೆ ಮತ್ತೆ ಕೆಲವರು ಸಲಗ ಭರ್ಜರಿ ದಾಳಿ ಮಾಡಿತು ಎಂದರು. ಈ ಸಿನಿಮಾಗಳ ಸಕ್ಸಸ್‌ಗೆ ತಂತ್ರಜ್ಞರ ತಂಡ ಪ್ರಮುಖ ಕಾರಣ ಎಂಬುದನ್ನು ನಿರ್ದೇಶಕ ಸೂರಿ ಮತ್ತು ದುನಿಯಾ ವಿಜಯ್ ಹೇಳಿದ್ದರು. ಈಗ ಆ ತಂತ್ರಜ್ಞರೆಲ್ಲರೂ ಮತ್ತೊಂದು ಸಿನಿಮಾಗಾಗಿ ಜತೆಯಾಗಿದ್ದಾರೆ.
ಸೂರಿ ನಿರ್ದೇಶನ ಮಾಡಿದ್ದ ‘ಟಗರು’ ಸಿನಿಮಾದ ನಂತರ ಅದೇ ತಂತ್ರಜ್ಞರ ತಂಡ ‘ಸಲಗ’ ಮಾಡಿತು. ಆದರೆ ಅಲ್ಲಿ ನಿರ್ದೇಶಕರು ಮಾತ್ರ ಬದಲಾಗಿದ್ದರು. ಇದೀಗ ಇವರೆಲ್ಲ ಸೇರಿ ಮಾಡುತ್ತಿರುವ ಹೊಸ ಸಿನಿಮಾಗೂ ನಿರ್ದೇಶಕರು ಬದಲಾಗಿದ್ದಾರೆ. ಟಗರು ಮತ್ತು ಸಲಗ ಎರಡೂ ಸಿನಿಮಾಗಳಿಗೆ ಸಹನಿರ್ದೇಶಕರಾಗಿ ಕೆಲಸ ಮಾಡಿದ ಅಭಿ ಅವರೇ ಇಲ್ಲಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಅಭಿ ಕಳೆದ ಹತ್ತು ವರ್ಷಗಳಿಂದ ಸೂರಿ ಗರಡಿಯಲ್ಲಿ ಪಳಗಿದ್ದಾರೆ. ‘ಸಲಗ’ ಸಿನಿಮಾ ಬಿಡುಗಡೆಯಾದ ಮೇಲೆ ಅದನ್ನು ನಿರ್ದೇಶನ ಮಾಡಿದ್ದ ದುನಿಯಾ ವಿಜಯ್ ಸಹ, ‘ನನಗೆ ಅಭಿ ತುಂಬಾ ಚೆನ್ನಾಗಿ ಸಾಥ್ ಕೊಟ್ಟರು, ಅವರೊಬ್ಬ ಅದ್ಬುತ ತಂತ್ರಜ್ಞರಾಗುತ್ತಾರೆ’ ಎಂದಿದ್ದರು. ಅದರಂತೆ ಅಭಿ ತಮ್ಮ ಮೊದಲ ಸಿನಿಮಾವನ್ನು ನಿರ್ದೇಶನ ಮಾಡಲು ರೆಡಿಯಾಗಿದ್ದಾರೆ.
ಮೇಲಿನ ಎರಡೂ ಸಿನಿಮಾಗಳಿಗೆ ಸಂಕಲನದ ಕೆಲಸ ಮಾಡಿದ್ದ ದೀಪು ಎಸ್. ಕುಮಾರ್, ಸಾಹಸ ನಿರ್ದೇಶನ ಮಾಡಿದ್ದ ವಿನೋದ್ ಮಾಸ್ಟರ್ ಮತ್ತು ಜಾಲಿ ಬಾಸ್ಟಿನ್, ಸಂಗೀತ ಸಂಯೋಜನೆ ಮಾಡಿದ್ದ ಚರಣ್ ರಾಜ್, ಮಾಸ್ ಡೈಲಾಗ್‌ಗಳ ಮೂಲಕ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದ್ದ ಸಂಭಾಷಣೆಕಾರ ಮಾಸ್ತಿ, ಸ್ಪೆಷಲ್ ಎಫೆಕ್ಟ್ ಕೆಲಸ ಮಾಡಿದ್ದ ರಾಜನ್ ಮೊದಲಾದ ಸಮರ್ಥರು ಅಭಿ ನಿರ್ದೇಶನ ಮಾಡುತ್ತಿರುವ ಈ ಮೊದಲ ಸಿನಿಮಾಗೆ ಕೆಲಸ ಮಾಡುತ್ತಿದ್ದಾರೆ.
‘ನಾನು ಕಳೆದ ಹತ್ತು ವರ್ಷಗಳಿಂದ ಸೂರಿಯವರ ಬಳಿ ಕೆಲಸ ಮಾಡುತ್ತಿದ್ದೇನೆ. ನನ್ನದೇ ಕಥೆ ಮಾಡಿಕೊಂಡು ಅದಕ್ಕೊಂದು ರೂಪ ಕೊಟ್ಟು ಈಗ ಸಿನಿಮಾ ಮಾಡಲು ಹೊರಟಿದ್ದೇನೆ. ಸಿನಿಮಾದ ಟೈಟಲ್ ಇಂದು ಸಂಜೆ ರಿವೀಲ್ ಆಗಲಿದೆ. ‘ಸಲಗ’, ‘ಟಗರು’ ಸಿನಿಮಾಗಳ ತಂತ್ರಜ್ಞರೆಲ್ಲರೂ ಈ ಸಿನಿಮಾಗಾಗಿ ನನ್ನ ಕೈಜೋಡಿಸಿದ್ದಾರೆ. ಇದೊಂದು ಮಾಸ್ ಹಾಗೂ ಎಂಟರ್‌ಟೇನರ್ ಸಿನಿಮಾ. ಜತೆಗೆ ಫ್ಯಾಮಿಲಿ ಡ್ರಾಮಾ ಕೂಡಾ ಇರುತ್ತದೆ. ಸಂಬಂಧಗಳನ್ನು ಇಟ್ಟುಕೊಂಡು ಕಥೆ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ’ ಎಂದಿದ್ದಾರೆ ಅಭಿ.
ಸೂರಿ ಬರೆದ ಟೈಟಲ್
ಈ ಸಿನಿಮಾದ ಟೈಟಲ್ ಇಂದು ಸಂಜೆ ಆರು ಗಂಟೆಗೆ ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಆಗಲಿದೆ. ವಿಶೇಷ ಎಂದರೆ ತನ್ನ ಶಿಷ್ಯನ ಸಿನಿಮಾದ ಟೈಟಲ್ ಅನ್ನು ಸ್ವತಃ ಸೂರಿ ಕಲಾತ್ಮಕವಾಗಿ ಬರೆದುಕೊಟ್ಟಿದ್ದಾರೆ. ಮೂಲತಃ ಕುಂಚ ಕಲಾವಿದರಾಗಿರುವ ಸೂರಿ ಹಿಂದೆಯೂ ಒಂದಷ್ಟು ಸಿನಿಮಾಗಳ ಟೈಟಲ್ ಬರೆದುಕೊಟ್ಟಿದ್ದರು. ಈ ಸಿನಿಮಾದ ಕಥೆ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಟೈಟಲ್ ಬರೆದು ಕೊಡುವ ಮೂಲಕ ತನ್ನ ಶಿಷ್ಯನ ಸಿನಿಮಾಗೆ ಶುಭ ಹಾರೈಸಿದ್ದಾರೆ.
ಇಡೀ ಸಿನಿಮಾದ ಕಥೆ ಉತ್ತರ ಕರ್ನಾಟಕ ಭಾಗದಲ್ಲಿ ನಡೆಯಲಿದ್ದು, ಚಿತ್ರೀಕರಣವನ್ನು ಸಹ ಕೂಡಲ ಸಂಗಮ ಮತ್ತು ಗಂಜಿಹಾಳದಲ್ಲಿ ಮಾಡಲು ಅಭಿ ಪ್ಲಾನ್ ಮಾಡಿಕೊಂಡಿದ್ದಾರೆ. ಫೆಬ್ರವರಿ ತಿಂಗಳಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ.
‘ನನ್ನ ಸಿನಿಮಾದಲ್ಲಿ ಸಂಬಂಧಗಳ ಸುತ್ತ ನಡೆಯುವ ಕಥೆ ಇದೆ. ಸಲಗ, ಟಗರು ಸಿನಿಮಾಗಳಿಗೆ ಸಹಕಾರ ನೀಡಿದ್ದ ತಂತ್ರಜ್ಞರೆಲ್ಲರೂ ನನ್ನ ಜತೆ ಕೈ ಜೋಡಿಸಿದ್ದಾರೆ. ಪ್ರೇಕ್ಷಕರಿಗೆ ಇಷ್ಟವಾಗುವಂತಹ ಸಿನಿಮಾ ಮಾಡುವ ಪ್ರಯತ್ನ ಮಾಡುತ್ತೇವೆ’ ಎಂದಿದ್ದಾರೆ ಅಭಿ.
Read more
[wpas_products keywords=”deal of the day party wear dress for women stylish indian”]