Karnataka news paper

ಕೋವಿಡ್ ತಗ್ಗಿಸುವಲ್ಲಿ ಸರ್ಕಾರ ಯಶಸ್ವಿ: ರಾಜ್ಯಪಾಲ ಥಾವರಚಂದ್ ಗೆಹಲೋತ್


ಬೆಂಗಳೂರು: ಕೋವಿಡ್‌ ಪ್ರಕರಣ ತಗ್ಗಿಸಲು ಹಗಲಿರುಳು ಶ್ರಮಿಸಿ ಯಶಸ್ವಿಯಾಗಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ರಾಜ್ಯ ಸರ್ಕಾರವನ್ನು ಕೊಂಡಾಡಿದರು.

ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು,‘ ಸಾಂಕ್ರಾಮಿಕ ರೋಗದ ಈ ಬಿಕ್ಕಟ್ಟು ನಮ್ಮ ಸಾಮರ್ಥ್ಯ ವೃದ್ಧಿಸುವ ಮತ್ತು ಹೆಚ್ಚುವರಿ ಆರೋಗ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಳ್ಳಲು ಸಹಕಾರಿಯಾಗಿದೆ. ಆಮ್ಲಜನಕ ಸಿಲಿಂಡರ್ ಮತ್ತು ವೆಂಟಿಲೇಟರ್‌ಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಈ ಅವಕಾಶವನ್ನು ಬಳಕೆ ಮಾಡಿಕೊಳ್ಳಲಾಗಿದೆ’ ಎಂದರು.

ವೈದ್ಯಕೀಯ ಸಿಬ್ಬಂದಿ, ‍ಪೊಲೀಸ್ ಸಿಬ್ಬಂದಿಯ ಶ್ರಮ ಮತ್ತು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡಿದ್ದರಿಂದ ರಾಜ್ಯದಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದರು.

ಕೋವಿಡ್ ಎರಡನೇ ಅಲೆಯ ಲಾಕ್‌ಡೌನ್ ಸಂದರ್ಭದಲ್ಲಿ 11,82,307 ಲಕ್ಷ ಕಾರ್ಮಿಕರಿಗೆ ತಲಾ ₹2 ಸಾವಿರದಂತೆ ₹236.46 ಕೋಟಿ ಪಾವತಿಸಲಾಗಿದೆ. ಕಾರ್ಮಿಕ ಕಲ್ಯಾಣ ಮಂಡಳಿಯು 14,527 ಸಂಘಟಿತ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ₹628.16 ಕೋಟಿ ವಿತರಿಸಲಾಗಿದೆ ಎಂದು ಹೇಳಿದರು.

ಜಲಾನಯನ ಅಭಿವೃದ್ದಿಗೆ ಸರ್ಕಾರ ಗಮನ ಹರಿಸಿದೆ. ಮೊಬೈಲ್ ತಂತ್ರಜ್ಞಾನ ಆಧಾರಿತ ಬೆಳೆ ಸಮೀಕ್ಷೆಗೆ  ಒತ್ತು ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿನ ರೈತರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ರಾಜ್ಯ ಸರ್ಕಾರದಿಂದ 14 ಅಮೃತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕರ್ನಾಟಕವು ಸಹಕಾರಿ ಕ್ಷೇತ್ರದಲ್ಲಿ ಹಾಲು ಉತ್ಪಾದನೆಯಲ್ಲಿ ಭಾರತದಲ್ಲಿಯೇ 2ನೇ ಸ್ಥಾನ, ಮೊಟ್ಟೆ ಉತ್ಪಾದನೆಯಲ್ಲಿ 6ನೇ ಸ್ಥಾನ ಹಾಗೂ ಮಾಂಸ ಉತ್ಪಾದನೆಯಲ್ಲಿ 10ನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಡಿ 158.27 ಕಿಲೋ ಮೀಟರ್ ರಸ್ತೆಯನ್ನು ವೈಟ್‌ ಟಾಪಿಂಗ್ ಕಾಮಗಾರಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಪೈಕಿ 83.91 ಕಿ.ಮೀ ಕಾಮಗಾರಿ ಪೂರ್ಣಗೊಡಿದೆ ಎಂದು ಹೇಳಿದರು.

‘ಹಕ್ಕು, ಕರ್ತವ್ಯ ಜೊತೆಯಾಗಿ ಹೋಗಬೇಕು’

‘ಸಂವಿಧಾನದತ್ತವಾಗಿ ಲಭ್ಯವಾಗಿರುವ ಹಕ್ಕು ಮತ್ತು ಕರ್ತವ್ಯಗಳು ಜೊತೆ ಜೊತೆಯಾಗಿ ಹೋಗಬೇಕು. ಇಂದಿನ ಯುವ ಪೀಳಿಗೆಗೆ ನೆನಪು ಮಾಡಿಕೊಡುವ ದಿನವಿದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

‘ನಮಗೆ ಬಹಳಷ್ಟು ಹಕ್ಕುಗಳನ್ನು ಸಂವಿಧಾನ ನೀಡಿದೆ. ಆ ಹಕ್ಕುಗಳನ್ನು ಪಡೆಯುವ ಅರ್ಹತೆ  ಸಂಪಾದಿಸುವ ರೀತಿಯಲ್ಲಿ ಕರ್ತವ್ಯಗಳನ್ನು ನಾವು ನಿಭಾಯಿಸಬೇಕು. ಪ್ರತಿಯೊಂದು ರಾಜ್ಯವೂ ರಾಷ್ಟ್ರ ನಿರ್ಮಾಣದಲ್ಲಿ ಮುಂದಿರಬೇಕು. ಜನತೆಯೂ ರಾಷ್ಟ್ರ ನಿರ್ಮಾಣದತ್ತ ಗಮನ ಹರಿಸಬೇಕು. ದೇಶ ಮೊದಲು ಎನ್ನುವ ಭಾವನೆ ಇರಬೇಕು’ ಎಂದರು.



Read more from source

[wpas_products keywords=”deal of the day sale today kitchen”]