ಹೈಲೈಟ್ಸ್:
- 5 ಲಕ್ಷ ರೂ. ಸಾಲದ ಹಣ ಲಪಟಾಯಿಸಿದ್ದ ಮೂವರ ಸೆರೆ
- ಮನೆಗೆ ಕರೆಸಿ ಕತ್ತುಹಿಸುಕಿ ಕೊಲೆ
- ಮಾಗಡಿ ಬಳಿಯ ಕೆರೆಗೆ ಶವ ಎಸೆದಿದ್ದ ಆರೋಪಿಗಳು
- ಎಳನೀರು ವ್ಯಾಪಾರದ ನಷ್ಟ ಭರಿಸಲು ಕುಕೃತ್ಯಕ್ಕೆ ಸ್ಕೆಚ್
ಬೆಂಗಳೂರು ಬನಶಂಕರಿ 2ನೇ ಹಂತದ ಸರಬಂಡೆಪಾಳ್ಯದ ದಿವಾಕರ್ (29) ಕೊಲೆಯಾದ ವ್ಯಕ್ತಿ. ಎಳನೀರು ವ್ಯಾಪಾರಿ ಕುಣಿಗಲ್ ತಾಲೂಕಿನ ಅರಕೆರೆ ಹೋಬಳಿ ಮೆಸನಹಳ್ಳಿ ಗ್ರಾಮದ ಮಂಜುನಾಥ್ (28), ಉತ್ತರಿ ಗ್ರಾಮದ ಮುನಿರಾಜು (24) ಮತ್ತು ರಕ್ಷಿತಾ ಬಂಧಿತ ಆರೋಪಿಗಳು.
ಏನಿದು ಪ್ರಕರಣ?
ಬನಶಂಕರಿ 2ನೇ ಹಂತದ ಸರಬಂಡೆಪಾಳ್ಯದ ನಿವಾಸಿ ದಿವಾಕರ್ ನಗರದ ಎಸ್‌ಎಸ್‌ಆರ್ ಗೋಲ್ಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಕಂಪನಿಯು ಚಿನ್ನ ಅಡಮಾನವಿಟ್ಟುಕೊಂಡು ಹಣ ನೀಡುತ್ತಿತ್ತು. ಅಷ್ಟೇ ಅಲ್ಲದೆ, ಚಿನ್ನ ಅಡ ಇಡುವವರು ಕರೆ ಮಾಡಿದರೆ ಅವರ ಮನೆಗೆ ತೆರಳಿ ಚಿನ್ನ ಪಡೆದು ಹಣ ನೀಡುತ್ತಿತ್ತು.
ಚಿನ್ನ ಗಿರವಿ ಇಟ್ಟು ಹಣ ಪಡೆದ ಮೇಲೆ ಕಳ್ಳತನದ ನಾಟಕ..! ಪೊಲೀಸರಿಗೇ ವಂಚಿಸುತ್ತಿದ್ದ ಐನಾತಿ ಫ್ಯಾಮಿಲಿ ಅಂದರ್..!
ಎಳನೀರು ವ್ಯಾಪಾರದಲ್ಲಿ ನಷ್ಟ ಹೊಂದಿದ್ದ ಮಂಜುನಾಥ್, ಸಹಚರ ಮುನಿರಾಜು ಮತ್ತು ರಕ್ಷಿತಾ ಈ ರೀತಿ ಸಾಲ ನೀಡುವ ಕಂಪನಿಗಳನ್ನು ಗುರುತಿಸಿದ್ದರು. ಗೂಗಲ್‌ನಲ್ಲಿ ಎಸ್‌ಎಸ್‌ಆರ್ ಗೋಲ್ಡ್ ಕಂಪನಿ ಹುಡುಕಿ ಬೆಂಗಳೂರು ಶಾಖೆಯ ನಂಬರ್ ತೆಗೆದುಕೊಂಡಿದ್ದರು. ಕಂಪನಿಯ ಉದ್ಯೋಗಿ ದಿವಾಕರ್‌ಗೆ ಜ.19ರಂದು ಕರೆ ಮಾಡಿದ್ದ ಆರೋಪಿಗಳು, ತಮ್ಮ ಬಳಿ 65 ರಿಂದ 70 ಗ್ರಾಂ ಚಿನ್ನವಿದೆ. ಹಣದ ಆವಶ್ಯಕತೆ ಇರುವುದರಿಂದ ನೀವು ಬಂದು ಹಣ ನೀಡಿ ಚಿನ್ನ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ. ಕೂಡಲೇ ಒಪ್ಪಿದ ದಿವಾಕರ್‌ಗೆ ಆರೋಪಿಗಳು ಸುಂಕದಕಟ್ಟೆ ಬಳಿಯ ತಮ್ಮ ಮನೆ ವಿಳಾಸ ನೀಡಿದ್ದರು.
ದಿವಾಕರ್ ಜ.20ರಂದು ಆರೋಪಿಗಳು ನೀಡಿದ್ದ ವಿಳಾಸಕ್ಕೆ ಹೋದಾಗ ಮನೆಯಲ್ಲಿ ಮುನಿರಾಜು, ಮಂಜುನಾಥ್ ಮತ್ತು ರಕ್ಷಿತಾ ಇದ್ದರು. ಈ ಮೂವರು ಸೇರಿಕೊಂಡು ದಿವಾಕರನ ಕತ್ತು ಹಿಸುಕಿ ಕೊಲೆಗೈದು ಅವರ ಬಳಿ ಇದ್ದ ಐದು ಲಕ್ಷ ರೂ. ತೆಗೆದುಕೊಂಡಿದ್ದರು. ನಂತರ ಎಳನೀರು ತುಂಬಲು ಇಟ್ಟಿದ್ದ ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹವನ್ನು ಕಟ್ಟಿದ್ದಾರೆ. ಬಳಿಕ ಆತನದೇ ದ್ವಿಚಕ್ರ ವಾಹನದಲ್ಲಿ ಶವ ಹೇರಿಕೊಂಡು ಮಾಗಡಿ ಬಳಿಯ ಹೊನ್ನಾಪುರ ಕೆರೆ ಬಳಿ ಸಾಗಿಸಿದ್ದಾರೆ. ಶವವನ್ನು ಕಲ್ಲುಕಟ್ಟಿ ಬಿಸಾಡಿ ಪರಾರಿಯಾಗಿದ್ದರು.
ಪತ್ನಿಯಿಂದ ನಾಪತ್ತೆ ದೂರು
ದಿವಾಕರ್ ಜ.20ರಂದು ಬೆಳಗ್ಗೆ 10 ಗಂಟೆಗೆ ಮನೆಯಿಂದ ಹೊರಟಿದ್ದರು. ಒಂದು ದಿನ ಕಳೆದರೂ ಪತಿ ಮನೆಗೆ ವಾಪಸ್ ಆಗದಿದ್ದಾಗ, ಶಿವಗಾಮಿ ಹಾಗೂ ದಿವಾಕರ್ ತಾಯಿ ಲಕ್ಷ್ಮೇ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದಿವಾಕರ್ ಅವರ ಮೊಬೈಲ್ ನಂಬರ್‌ಗೆ ಪರಿಶೀಲಿಸಿದಾಗ ಕೊನೆಯದಾಗಿ ಕಾಣೆಯಾದ ದಿನ ಬೆಳಗ್ಗೆ 11 ಗಂಟೆಗೆ ಬಂದಿದ್ದ ನಂಬರ್ ಪರಿಶೀಲಿಸಿದ್ದಾರೆ. ಅದೇ ಸಮಯದಲ್ಲಿ ಸುಂಕದಕಟ್ಟೆಯ ಹೊಯ್ಸಳ ನಗರದಲ್ಲಿ ದಿವಾಕರ್ ಮೊಬೈಲ್ ಸ್ವಿಚ್ ಆಫ್ ಆಗಿರುವುದು ಗೊತ್ತಾಗಿದೆ. ಕಡೆಯದಾಗಿ ಕರೆ ಬಂದಿದ್ದ ನಂಬರ್ ಪರಿಶೀಲಿಸಿದಾಗ ಈ ನಂಬರ್ ಎಳನೀರು ವ್ಯಾಪಾರಿ ಮುನಿರಾಜುನದು ಎಂದು ತಿಳಿದುಬಂದಿದೆ. ಮುನಿರಾಜು, ಮಂಜುನಾಥ್‌ನನ್ನು ಕರೆಸಿ ವಿಚಾರಣೆ ನಡೆಸಿದಾಗ ದಿವಾಕರ್ ಅವರನ್ನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಲ್ಲಿ ಹಾಫ್ ಹೆಲ್ಮೆಟ್ ಧರಿಸಿದರೆ ಬೀಳುತ್ತೆ ದಂಡ: ಬೈಕ್ ಸವಾರರೇ ಎಚ್ಚರ
ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಪುಟ್ಟೇನಹಳ್ಳಿ ಠಾಣೆ ಪೊಲೀಸರು, ರಾಮನಗರ ಪೊಲೀಸರ ಸಹಾಯ ಪಡೆದು ಕೆರೆ ಬಳಿ ಹೋಗಿ ಪರಿಶೀಲಿಸಿದಾಗ ದಿವಾಕರ್ ಶವ ಮತ್ತು ಅವರ ಬೈಕ್ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
ಗ್ರಾಹಕರ ಮನೆಗೆ ತೆರಳುವ ಮುನ್ನ ಎಚ್ಚರ
ಇತ್ತೀಚೆಗೆ ಚಿನ್ನ ಅಡಮಾನ ಇಟ್ಟುಕೊಂಡು ಸಾಲ ನೀಡಲು ಮನೆ ಮನೆಗೆ ತೆರಳುವ ಗೋಲ್ಡ್ ಕಂಪನಿಗಳು ಹೆಚ್ಚಾಗಿದ್ದು, ಗ್ರಾಹಕರ ಸೋಗಿನಲ್ಲಿಈ ರೀತಿಯ ವಂಚನೆ ಮಾಡಲಾಗುತ್ತಿದೆ. ಗ್ರಾಹಕರ ಮನೆಗಳಿಗೆ ತೆರಳುವ ಮುನ್ನ ಗೋಲ್ಡ್ ಕಂಪನಿಯ ಉದ್ಯೋಗಿಗಳು ಎಚ್ಚರಿಕೆಯಿಂದ ಪರಿಶೀಲನೆ ನಡೆಸಿ ವ್ಯವಹಾರ ನಡೆಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
Read more
[wpas_products keywords=”deal of the day sale today offer all”]