ರಾಮನಗರ: ಮಂಗಳವಾರ ಮಧ್ಯಾಹ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕನಕಪುರದ ಮರಳೇಗವಿ ಮಠಕ್ಕೆ ಭೇಟಿ ನೀಡಿದ್ದು, ಈ ಸಂದರ್ಭ ಕಾಂಗ್ರೆಸ್ ನಾಯಕರ ನಡುವೆ ನಡೆದ ಮಾತುಕತೆಗೆ ಸ್ವಾಮೀಜಿ ಸಹ ಧ್ವನಿಗೂಡಿಸಿದ್ದಾರೆ.
ಶಿವಕುಮಾರ್ ತಮ್ಮ ಬೆಂಬಲಿಗರೊಂದಿಗೆ ಮರಳೇಗವಿ ಮಠದಲ್ಲಿ ಮಧ್ಯಾಹ್ನದ ಊಟ ಮಾಡಿದರು. ಅವರೊಂದಿಗೆ ವಿಧಾನ ಪರಿಷತ್ ಸದಸ್ಯ ಎಸ್.ರವಿ, ಮಾಜಿ ಸಚಿವ ನರೇಂದ್ರ ಸ್ವಾಮಿ ಇದ್ದರು. ಈ ವೇಳೆ ಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ ಡಿಕೆಶಿ ಅವರನ್ನು ಹೊಗಳಿದ್ದಾರೆ.
ಊಟದ ನಡುವೆ ರವಿ ಮಾತು ಆರಂಭಿಸುತ್ತಾರೆ. ‘ಸರ್ಕಾರದ ವಿರೋಧದ ನಡುವೆಯೂ ಪಾದಯಾತ್ರೆ ಯಶಸ್ವಿಯಾಗಿದೆ. ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ಆಗಿದೆ. ಹೈಕೋರ್ಟ್ ಆದೇಶವು ನಮಗೆ ಪ್ಲಸ್ ಆಯ್ತು. ಕರ್ಫ್ಯೂ ಆದೇಶದ ನಡುವೆಯೂ ಜನ ಪಾದಯಾತ್ರೆಯನ್ನು ಸವಾಲಾಗಿ ಸ್ವೀಕರಿಸಿದ್ದರು’ ಎನ್ನುತ್ತಾರೆ.
ಇದಕ್ಕೆ ನರೇಂದ್ರ ಸ್ವಾಮಿ ಧ್ವನಿಗೂಡಿಸಿ ‘ನಾವು ಬೆಳಿಗ್ಗೆಯೇ ರಾಮನಗರಕ್ಕೆ ಹೊರಡಲೆಂದು ಬಂದೆವು. ಆದರೆ ಮಳವಳ್ಳಿಯಲ್ಲೇ ತಡೆದರು. ಮುಂದಿನ ಪಾದಯಾತ್ರೆಯಲ್ಲಿ ಇದಕ್ಕಿಂತ ಹೆಚ್ಚಿನ ಜನ ಸೇರುತ್ತಾರೆ’ ಎಂದು ಹೇಳುತ್ತಾರೆ.
ಮುಮ್ಮಡಿ ಶಿವರುದ್ರ ಸ್ವಾಮೀಜಿ ಡಿಕೆಶಿಗೆ ಊಟ ಬಡಿಸಿದ್ದು, ಈ ವೇಳೆ ಹೊಗಳಿಕೆ ಆರಂಭಿಸುತ್ತಾರೆ. ‘ಪಾದಯಾತ್ರೆಯನ್ನು ಈ ರೀತಿ ಕರ್ನಾಟಕದಲ್ಲಿ ಯಾರೂ ಮಾಡಿಲ್ಲ. ಮುಂದೆ ಯಾರು ಮಾಡೋದು ಇಲ್ಲ. ನೀವು ಎಲ್ಲರ ನಿದ್ದೆಗೆಡಿಸಿದ್ದೀರಿ! ಎಲ್ಲ ನಾಯಕರು ನಿಮ್ಮ ನೆನಪು ಮಾಡಿಕೊಂಡಿದ್ದರು. ಇದು ನಿಮ್ಮ ಶಕ್ತಿ. ನಿಮ್ಮ ದೈವ ಶಕ್ತಿಯು ಸಹ ಕೆಲಸ ಮಾಡುತ್ತಿದೆ. ನಾನು ವೇದಿಕೆ ಮೇಲೆ ಇದ್ದಾಗ ಸಿದ್ದರಾಮಯ್ಯ ಮಾತನಾಡುತ್ತಿದ್ದರು . ಡಿಕೆಶಿ ಹಠವಾದಿ. ಯಾವುದೇ ಕಾರಣಕ್ಕೂ ಪಾದಯಾತ್ರೆ ಕೈ ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ನನಗೆ ಹೇಳಿದ್ದರು’ ಎನ್ನುತ್ತಾರೆ.
ಇದಕ್ಕೆ ಮುಗುಳುನಗೆಯಲ್ಲೇ ಉತ್ತರಿಸುವ ಶಿವಕುಮಾರ್ ‘ ರಾಮನಗರದಿಂದ ಬೆಂಗಳೂರಿಗೆ ಪಾದಯಾತ್ರೆ ಶುರುವಾದರೆ ಹಿಂದಿಗಿಂತ ಹೆಚ್ಚು ಜನ ಮಂಡ್ಯದಿಂದಲೇ ಬರುತ್ತಾರೆ. ನದಿಯೊಳಗೆ ವೇದಿಕೆ ನಿರ್ಮಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ, ನಾನು ಮಾಡಿದ್ದೇನೆ. ಎಲ್ಲ ನಾಯಕರು ನನ್ನ ಕ್ಷೇತ್ರಕ್ಕೆ ಬಂದಿದ್ದು ನನ್ನ ಪುಣ್ಯ. ಬೇರೆ ನಾಯಕರಿಗೆ ಈ ರೀತಿ ಸಾಥ್ ಸಿಗುತ್ತಿರಲಿಲ್ಲ’ ಎನ್ನುತ್ತಾರೆ.
ಸ್ವಾಮೀಜಿ ಮಾತಿನ ಮಧ್ಯೆ, ‘ಮುಂದೆ ನೀವು ಅಧಿಕಾರಕ್ಕೆ ಬರುತ್ತೀರಾ’ ಎಂದು ಡಿಕೆಶಿಯನ್ನು ಪ್ರಶ್ನಿಸಿದಾಗ, ಹೌದು ಎಂದು ಡಿಕೆಶಿ ತಲೆಯಾಡಿಸುತ್ತಾರೆ. ಇದೀಗ ಈ ಸಂಭಾಷಣೆಯ ವಿಡಿಯೊಗಳು ಜಾಲತಾಣಗಳಲ್ಲಿ ಪ್ರಸಾರ ಆಗುತ್ತಿವೆ.
Read more from source
[wpas_products keywords=”deal of the day sale today kitchen”]