Karnataka news paper

ಕೇರಳ: ಗಣರಾಜ್ಯೋತ್ಸವ ವೇಳೆ ತಲೆಕೆಳಗಾಗಿ ರಾಷ್ಟ್ರಧ್ವಜ ಹಾರಿಸಿದ ಜಿಲ್ಲಾ ಉಸ್ತುವಾರಿ ಸಚಿವ


Online Desk

ಕಾಸರಗೋಡು: ಈ ಬಾರಿಯ ೭೩ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಕಾಸರಗೋಡು ಜಿಲ್ಲಾ ಉಸ್ತುವಾರಿ ಸಚಿವ ಅಹಮ್ಮದ್ ದೇವರಕೋವಿಲ್ ಅವರು ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿ, ಮುಜುಗರಕ್ಕೀಡಾದ ಘಟನೆ ಕಾಸರಗೋಡು ಮುನ್ಸಿಪಲ್ ಸ್ಟೇಡಿಯಂನಲ್ಲಿ ನಡೆದಿದೆ.

ಕಾಸರಗೋಡು ಮುನ್ಸಿಪಲ್ ಸ್ಟೇಡಿಯಂನಲ್ಲಿ ಕಾಸರಗೋಡು ಜಿಲ್ಲಾ ಉಸ್ತುವಾರಿ ಸಚಿವ ಅಹಮ್ಮದ್ ದೇವರಕೋವಿಲ್ ಧ್ವಜಾರೋಹಣ ಮಾಡಿದ ತಕ್ಷಣ, ಬಂದರು ಮತ್ತು ಜಿಲ್ಲಾ ಪೊಲೀಸ್ ಮುಖ್ಯಸ್ಥ ವೈಭವ್ ಸಕ್ಸೇನಾ, ಪ್ರಭಾರಿ ಜಿಲ್ಲಾಧಿಕಾರಿ ಎಡಿಎಂ ಎ ಕೆ ರಾಮೇಂದ್ರನ್ ಮತ್ತು ಇತರ ಉನ್ನತ ಪೊಲೀಸ್ ಅಧಿಕಾರಿಗಳು ಗೌರವ ವಂದನೆ ಸಲ್ಲಿಸಿದರು. ಕರ್ತವ್ಯ ನಿರತ ಪತ್ರಕರ್ತರು ತಪ್ಪನ್ನು ಗಮನಿಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇದನ್ನು ಓದಿ: 73ನೇ ಗಣರಾಜ್ಯೋತ್ಸವ: ಪರೇಡ್’ನಲ್ಲಿ ದೇಶದ ಗಮನ ಸೆಳೆದ ಕರ್ನಾಟಕದ ಸ್ತಬ್ದಚಿತ್ರ

ಬಳಿಕ ಜಿಲ್ಲಾ ಪೊಲೀಸ್ ವರಿಷ್ಠರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ರಾಷ್ಟ್ರಧ್ವಜವನ್ನು ಸರಿಯಾಗಿ ಹಾರಿಸುವವರೆಗೂ ಕಾರ್ಯಕ್ರಮ ಸ್ಥಗಿತಗೊಳಿಸಿದರು. 10 ನಿಮಿಷಗಳಲ್ಲಿ ಧ್ವಜವನ್ನು ಇಳಿಸಿ ಸರಿಯಾಗಿ ಪುನಃ ಹಾರಿಸಲಾಯಿತು ಮತ್ತು ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಜಿಲ್ಲಾ ಪೊಲೀಸ್ ಮುಖ್ಯಸ್ಥ ಸಕ್ಸೇನಾ ಅವರು ಕಣ್ಣೂರು ರೇಂಜ್ ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ರಾಹುಲ್ ಆರ್ ನಾಯರ್ ಅವರಿಗೆ ಘಟನೆಯ ಬಗ್ಗೆ ವರದಿ ಸಲ್ಲಿಸಲಿದ್ದಾರೆ.

ಸಮಾರಂಭದಲ್ಲಿ ಕಾಸರಗೋಡು ಸಂಸದ ರಾಜಮೋಹನ್ ಉನ್ನಿತಾನ್, ಶಾಸಕರಾದ ಎ ಕೆ ಎಂ ಅಶ್ರಫ್, ಎನ್ ಎ ನೆಲ್ಲಿಕ್ಕುನ್ನು, ಸಿ ಎಚ್ ಕುಂಞಂಬು, ಎಂ ರಾಜಗೋಪಾಲನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉಪಸ್ಥಿತರಿದ್ದರು. ಚಂದೇರ ಪೊಲೀಸ್ ಇನ್ಸ್ ಪೆಕ್ಟರ್ ನಾರಾಯಣನ್ ನೇತೃತ್ವದಲ್ಲಿ ವನಿತಾ ಪೊಲೀಸ್, ಸಶಸ್ತ್ರ ಪೊಲೀಸ್, ಅಬಕಾರಿ ಇಲಾಖೆ ಪರೇಡ್ ನಡೆಯಿತು.

ನವೆಂಬರ್ 1, 2021 ರಂದು ಮಂಗಳೂರಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಬಂದರು ಸಚಿವರು ಮತ್ತು ನೆರೆಯ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಅವರು ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿದ್ದರು. ಅಂಗಾರ ಅವರು ಮತ್ತೆ ವೇದಿಕೆಗೆ ತೆರಳುವಷ್ಟರಲ್ಲಿ ಅಧಿಕಾರಿಗಳು ತಪ್ಪನ್ನು ಸರಿಪಡಿಸಿಕೊಂಡರು.



Read more

[wpas_products keywords=”deal of the day”]