Karnataka news paper

ಡಿಕೆಶಿ ಜೊತೆ ಮ್ಯಾಚ್‌ ಫಿಕ್ಸಿಂಗ್‌ನಿಂದ ಕವಟಗಿಮಠ ಸೋತರು: ಲಖನ್ ಜಾರಕಿಹೊಳಿ


ಬೆಳಗಾವಿ: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದರಿಂದಾಗಿ, ಜಿಲ್ಲೆಯ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಸೋತರು’ ಎಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಲಖನ್ ಜಾರಕಿಹೊಳಿ ಆರೋಪಿಸಿದರು.

ಜಿಲ್ಲೆಯ ಚಿಕ್ಕೋಡಿಯ ಮತ ಎಣಿಕೆ ಕೇಂದ್ರದಲ್ಲಿ ಪ‍್ರಮಾಣ‍ಪತ್ರ ಪಡೆದುಕೊಳ್ಳುವುದಕ್ಕಾಗಿ ಬಂದಿದ್ದ ಅವರು ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದರು.

‘ಈ ಚುನಾವಣೆಯಲ್ಲಿ ಬಿಜೆಪಿ ಸೋಲಲು ಆ ಪಕ್ಷದ ಅಭ್ಯರ್ಥಿಯೇ ಕಾರಣ. ಅವರು ಡಿ.ಕೆ. ಶಿವಕುಮಾರ್‌ ಜೊತೆ ಹೊಂದಾಣಿಕೆ ಸೋತಿದ್ದಾರೆ. ಕಾಂಗ್ರೆಸ್‌ನವರೇ ಮೋಸ ಮಾಡಿದ್ದಾರೆ. ಇಲ್ಲದಿದ್ದರೆ ನನ್ನೊಂದಿಗೆ ಕವಟಗಿಮಠ ಅವರೂ ಗೆಲ್ಲುತ್ತಿದ್ದರು. ಬಿಜೆಪಿಯಲ್ಲಿ ಹಲವು ಮಂದಿ ಜನಪ್ರತಿನಿಧಿಗಳಿದ್ದರೂ ಬೇರೆಯವರತ್ತ ಕೈತೋರಿಸುತ್ತಿದ್ದಾರೆ’ ಎಂದರು.

‘ಬಿಜೆಪಿ ಸೋಲನ್ನು ಅಣ್ಣ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರ ತಲೆಗೆ ಕಟ್ಟಲು ನೋಡುತ್ತಿದ್ದಾರೆ. ಆದರೆ, ಇದೇ ರಮೇಶ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿದ್ದರು. ಆಗೇಕೆ ಇವರೆಲ್ಲರೂ ಮಾತನಾಡಲಿಲ್ಲ?’ ಎಂದು ಕೇಳಿದರು.

‘ಬಿಜೆಪಿ ಗೆಲ್ಲಿಸಲು ಸಹೋದರರಾದ ರಮೇಶ ಹಾಗೂ ಬಾಲಚಂದ್ರ ಜಾರಕಿಹೊಳಿ ಬಹಳಷ್ಟು ಪ್ರಯತ್ನ ಮಾಡಿದ್ದಾರೆ. ಅವರು ನನಗೆ ಬೆಂಬಲ ನೀಡಿದ್ದರೆ ಇನ್ನೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತಿದೆ. ನಾನು ನನ್ನ ಅಭಿಮಾನಿಗಳು ಮತ್ತು ಕಾರ್ಯಕರ್ತರಿಂದ ಗೆದ್ದಿದ್ದೇನೆ’ ಎಂದು ತಿಳಿಸಿದರು.

‘ಜಾರಕಿಹೊಳಿ ಸಹೋದರರಿಗೆ ಕೆಟ್ಟ ಹೆಸರು ತರಲು ಒಪ್ಪಂದ ಮಾಡಿಕೊಂಡು, ಬಿಜೆಪಿ ಸೋಲಿಸಲಾಗಿದೆ. ಈ ಕುರಿತು ಸಹೋದರರು ಬಿಜೆಪಿ ಹೈಕಮಾಂಡ್ ಗಮನಕ್ಕೆ ತರಲಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

‘ಬಿಜೆಪಿ ಸೇರುವಿರಾ’ ಎಂಬ ಪ್ರಶ್ನೆಗೆ, ‘ಮುಂದಿನ ದಿನಗಳಲ್ಲಿ ವಿಚಾರಿಸಿ ಹೇಳುವೆ’ ಎಂದಷ್ಟೆ ಹೇಳಿದರು. ಇದಕ್ಕೂ ಮುನ್ನ ಅವರು ಬೆಂಬಲಿಗರೊಂದಿಗೆ ವಿಜಯೋತ್ಸವದಲ್ಲಿ ಭಾಗಿಯಾದರು.



Read more from source