Karnataka news paper

ರೈಲ್ವೇ ಪರೀಕ್ಷೆ ವಿರುದ್ಧ ಬಿಹಾರದಲ್ಲಿ ಭಾರೀ ಪ್ರತಿಭಟನೆ, ಆಕಾಂಕ್ಷಿಗಳಿಂದ ರೈಲಿಗೆ ಬೆಂಕಿ; ಎಲ್ಲೆಡೆ ಉದ್ವಿಗ್ನ ಪರಿಸ್ಥಿತಿ


ಹೈಲೈಟ್ಸ್‌:

  • ರೈಲ್ವೇ ನೇಮಕಾತಿ ಮಂಡಳಿಯ ಎನ್‌ಟಿಪಿಸಿ ಪರೀಕ್ಷೆಯ ವಿರುದ್ಧ ಬಿಹಾರದಲ್ಲಿ ವಿದ್ಯಾರ್ಥಿಗಳಿಂದ ತೀವ್ರ ಪ್ರತಿಭಟನೆ
  • ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಹೋರಾಟ ಬುಧವಾರ ಹಿಂಸಾಚಾರಕ್ಕೆ ತಿರುಗಿದ್ದು, ಗಯಾದಲ್ಲಿ ಉದ್ರಿಕ್ತರಿಂದ ರೈಲಿಗೆ ಬೆಂಕಿ
  • ಜೆಹನಾಬಾದ್‌ನಲ್ಲಿ ಆಕ್ರೋಶಗೊಂಡಿರುವ ವಿದ್ಯಾರ್ಥಿಗಳಿಂದ ಪ್ರಧಾನಿ ಪ್ರತಿಕೃತಿ ದಹಿಸಿ ಆಕ್ರೋಶ
  • ಸಿತಾಮರ್ಹಿಯಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರಿಂದ ಗಾಳಿಯಲ್ಲಿ ಗುಂಡು ಹಾರಾಟ
  • ಪಾಟ್ನಾ, ನವಾಡ, ಮುಜಾಫರ್‌ಪುರ, ಸೀತಾಮರ್ಹಿ, ಬಕ್ಸರ್ ಮತ್ತು ಭೋಜ್‌ಪುರ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬೃಹತ್‌ ಪ್ರತಿಭಟನೆಗಳು

ಪಾಟ್ನಾ: ರೈಲ್ವೇ ನೇಮಕಾತಿ ಮಂಡಳಿಯ ನಾನ್‌ ಟೆಕ್ನಿಕಲ್‌ ಪಾಪ್ಯುಲರ್‌ ಕೆಟಗರೀಸ್‌ (ಆರ್‌ಆರ್‌ಬಿ-ಎನ್‌ಟಿಪಿಸಿ) ಪರೀಕ್ಷೆಯ ವಿರುದ್ಧ ಬಿಹಾರದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದು, ಹಿಂಸಾಚಾರಕ್ಕೆ ತಿರುಗಿದೆ.

ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು ಉದ್ರಿಕ್ತ ಉದ್ಯೋಗ ಆಕಾಂಕ್ಷಿಗಳು ಗಯಾದಲ್ಲಿ ನಿಂತಿದ್ದ ಪ್ಯಾಸೆಂಜರ್ ರೈಲಿಗೆ ಬೆಂಕಿ ಹಚ್ಚಿದ್ದಲ್ಲದೆ, ಚಲಿಸುತ್ತಿದ್ದ ರೈಲಿಗೂ ಕಲ್ಲು ತೂರಿದ್ದಾರೆ. ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದರೂ ಆಕ್ರೋಶಿತ ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಪ್ರತಿಭಟನಾಕಾರರು ರೈಲ್ವೆ ಹಳಿಗಳ ಮೇಲೆ ಕುಳಿತು ಪ್ರತಿಭಟಿಸುತ್ತಿದ್ದು, ರೈಲ್ವೆ ಆಸ್ತಿಯನ್ನು ಧ್ವಂಸಗೊಳಿಸಿದ್ದಾರಲ್ಲದೆ ಭದ್ರತಾ ಪಡೆಗಳೊಂದಿಗೆ ಘರ್ಷಣೆಗೆ ಇಳಿದಿದ್ದಾರೆ.

ಸೋಮವಾರ ಪೊಲೀಸರು ರಾಜ್ಯ ರಾಜಧಾನಿ ಪಾಟ್ನಾದಲ್ಲಿ ಪ್ರತಿಭಟನೆಗೆ ಇಳಿದಿದ್ದವರನ್ನು ಚದುರಿಸಿ ಕನಿಷ್ಠ ನಾಲ್ವರನ್ನು ಬಂಧಿಸಿದ್ದರು. ಹೀಗಿದ್ದೂ ಇದು ನಿಲ್ಲುವಂತೆ ಕಾಣುತ್ತಿಲ್ಲ. ಜೆಹನಾಬಾದ್‌ನಲ್ಲಿ ಆಕ್ರೋಶಗೊಂಡಿರುವ ವಿದ್ಯಾರ್ಥಿಗಳು ರೈಲ್ವೆ ಹಳಿ ಮೇಲೆಯೇ ಪ್ರಧಾನಿ ನರೇಂದ್ರ ಮೋದಿ ಪ್ರತಿಕೃತಿ ದಹಿಸಿ, ಕೇಂದ್ರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿತಾಮರ್ಹಿಯಲ್ಲಿ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಪಾಟ್ನಾ, ನವಾಡ, ಮುಜಾಫರ್‌ಪುರ, ಸೀತಾಮರ್ಹಿ, ಬಕ್ಸರ್ ಮತ್ತು ಭೋಜ್‌ಪುರ ಜಿಲ್ಲೆಗಳಲ್ಲಿ ಬೃಹತ್‌ ಪ್ರತಿಭಟನೆಗಳು ನಡೆಯುತ್ತಿರುವುದು ವರದಿಯಾಗಿದೆ.

Bihar Railway aspirants Protest

ಪರೀಕ್ಷೆಗಳನ್ನು ಎರಡು ಹಂತಗಳಲ್ಲಿ ನಡೆಸುವ ರೈಲ್ವೆ ಇಲಾಖೆಯ ನಿರ್ಧಾರವನ್ನು ಪ್ರತಿಭಟನಾಕಾರರು ವಿರೋಧಿಸುತ್ತಿದ್ದಾರೆ. ಅಂತಿಮ ಆಯ್ಕೆಗಾಗಿ ಎರಡನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ)ಯನ್ನು ಎದುರಿಸಬೇಕಿದ್ದು ಇದು ಆರ್‌ಆರ್‌ಬಿ-ಎನ್‌ಟಿಪಿಸಿಯು ಮೊದಲ ಹಂತದಲ್ಲಿ ಉತ್ತೀರ್ಣರಾದವರಿಗೆ ಎಸಗಿರುವ ವಂಚನೆ ಎಂದು ಆರೋಪಿಸಿದ್ದಾರೆ. 2019ರಲ್ಲಿ ಹೊರಡಿಸಲಾದ ಆರ್‌ಆರ್‌ಬಿ ಅಧಿಸೂಚನೆಯಲ್ಲಿ ಒಂದೇ ಪರೀಕ್ಷೆಯನ್ನು ಉಲ್ಲೇಖಿಸಲಾಗಿತ್ತು ಮತ್ತು ಸರ್ಕಾರವು ತಮ್ಮ ಭವಿಷ್ಯದ ಜೊತೆ ಆಟವಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶಿತರಾಗಿದ್ದಾರೆ.

ಜನವರಿ 15 ರಂದು ಮೊದಲ ಹಂತದ ಫಲಿತಾಂಶ ಪ್ರಕಟವಾದಾಗ ಈ ವಿಷಯ ಹೈಲೈಟ್ ಆಗಿದ್ದು, ಆ ವೇಳೆ ಸ್ಪಷ್ಟನೆ ನೀಡಿದ್ದ ರೈಲ್ವೆ ಸಚಿವಾಲಯ, ಅಧಿಸೂಚನೆಯಲ್ಲಿ ಎರಡನೇ ಹಂತದ ಪರೀಕ್ಷೆಯನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ ಎಂದು ಹೇಳಿತ್ತು.

ಆದರೆ ಇದನ್ನು ಪ್ರತಿಭಟನೆಕಾರರು ಒಪ್ಪುತ್ತಿಲ್ಲ. ಇದರಿಂದಾಗಿ ಮಂಗಳವಾರ ಹಲವಾರು ರೈಲುಗಳನ್ನು ರದ್ದುಗೊಳಿಸಲಾಗಿತ್ತು, ಹಲವು ರೈಲುಗಳ ಪ್ರಯಾಣ ಮಾರ್ಗಗಳನ್ನು ಬದಲಾಯಿಸಲಾಗಿತ್ತು. ಇದೀಗ ಬುಧವಾರ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ರೈಲ್ವೇ ಎನ್‌ಟಿಪಿಸಿ ಮತ್ತು ಹಂತ 1ರ ಪರೀಕ್ಷೆಗಳನ್ನು ಅಮಾನತುಗೊಳಿಸಲು ನಿರ್ಧರಿಸಿದೆ ಎಂದು ಭಾರತೀಯ ರೈಲ್ವೇ ವಕ್ತಾರರು ತಿಳಿಸಿದ್ದಾರೆ.

ಜತೆಗೆ ವಿವಿಧ ರೈಲ್ವೇ ನೇಮಕಾತಿ ಮಂಡಳಿಗಳ (ಆರ್‌ಆರ್‌ಬಿ) ಅಡಿಯಲ್ಲಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ಮತ್ತು ಅನುತ್ತೀರ್ಣರಾದವರ ಕುಂದುಕೊರತೆಗಳನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯನ್ನು ಸಹ ರಚಿಸಿದೆ.

“ಎನ್‌ಟಿಪಿಸಿ ಸಿಬಿಟಿ-1 ಫಲಿತಾಂಶದ ಬಗ್ಗೆ ಅಭ್ಯರ್ಥಿಗಳ ಕಾಳಜಿಯನ್ನು ಪರಿಶೀಲಿಸಲು ರೈಲ್ವೇ ಉನ್ನತಾಧಿಕಾರ ಸಮಿತಿಯನ್ನು ರಚಿಸುತ್ತಿದೆ. ಅಭ್ಯರ್ಥಿಗಳು ತಮ್ಮ ಕುಂದುಕೊರತೆಗಳನ್ನು 2022ರ ಫೆಬ್ರವರಿ 16ರ ಮೊದಲು ಸಮಿತಿಗೆ ಸಲ್ಲಿಸಬಹುದು,” ಎಂದು ರೈಲ್ವೆ ಸಚಿವಾಲಯ ಟ್ವೀಟ್ ಮಾಡಿದೆ.

ಈಸ್ಟ್ ಸೆಂಟ್ರಲ್ ರೈಲ್ವೇ (ಇಸಿಆರ್‌) ವಲಯದ ಹಲವಾರು ವಿಭಾಗಗಳ ಮೇಲೆ ಈ ಪ್ರತಿಭಟನೆ ಪರಿಣಾಮ ಬೀರಿದ್ದು, 25 ಕ್ಕೂ ಹೆಚ್ಚು ರೈಲುಗಳ ಓಡಾಟಕ್ಕೆ ಅಡ್ಡಿ ಉಂಟಾಗಿದ್ದು, ಪ್ರಯಾಣಿಕರಿಗೆ ತೊಂದರೆ ಎದುರಿಸುತ್ತಿದ್ದಾರೆ.

ಏತನ್ಮಧ್ಯೆ, ಹೆಚ್ಚುತ್ತಿರುವ ಪ್ರತಿಭಟನೆಗಳ ನಡುವೆ ರೈಲ್ವೇ ಸಚಿವಾಲಯ ಮಂಗಳವಾರ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳಿಗೆ ಜೀವಮಾನವಿಡೀ ಪರೀಕ್ಷೆ ಬರೆಯದಂತೆ ಡಿಬಾರ್‌ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದೆ.

“ಆರ್‌ಆರ್‌ಬಿ ಎನ್‌ಟಿಪಿಸಿ ಪ್ರತಿಭಟನೆಯ ವಿಡಿಯೋಗಳನ್ನು ವಿಶೇಷ ಏಜೆನ್ಸಿಗಳ ಸಹಾಯದಿಂದ ಸಚಿವಾಲಯವು ಪರಿಶೀಲಿಸಲಿದೆ. ಅಭ್ಯರ್ಥಿಗಳು ಪ್ರತಿಭಟನೆ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದರೆ, ಅದಕ್ಕೆ ಅನುಗುಣವಾಗಿ ದಂಡ ವಿಧಿಸಲಾಗುತ್ತದೆ. ಜತೆಗೆ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುವುದಲ್ಲದೆ, ಜೀವಿತಾವಧಿಯಲ್ಲಿ ರೈಲ್ವೇ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ,” ಎಂದು ಕಟುವಾದ ಎಚ್ಚರಿಕೆ ನೀಡಿದೆ.



Read more

[wpas_products keywords=”deal of the day sale today offer all”]