Karnataka news paper

ಕಾಂಗ್ರೆಸ್‌ಗೆ ಮರಳುವ ಪ್ರಶ್ನೆಯೇ ಇಲ್ಲ: ಕೃಷಿ ಸಚಿವ ಬಿ.ಸಿ.ಪಾಟೀಲ


ಚಿತ್ರದುರ್ಗ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್‌ ಕೊಟ್ಟ ಕಿರುಕುಳ ಇನ್ನೂ ನೆನಪಿದೆ. ಬಿಜೆಪಿ ಸೇರಿದ ಯಾರೊಬ್ಬರೂ ಕಾಂಗ್ರೆಸ್‌ಗೆ ಮರಳುವ ಪ್ರಶ್ನೆಯೇ ಇಲ್ಲ. ಆತ್ಮಗೌರವ ಇರುವವರು ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರತಿಯೊಬ್ಬರ ಬಗ್ಗೆ ಅನುಮಾನ ಹೊಂದಿರುವ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಉಳಿಯುತ್ತಾರಾ ಎಂಬ ಅನುಮಾನ ನಮಗೂ ಇದೆ. ಪಕ್ಷದ ಹೊರತಾಗಿ ವ್ಯವಹಾರ, ಸಂಬಂಧ ಹೊಂದಿದವರು ಹಲವರು ಇದ್ದಾರೆ. ಪರಸ್ಪರ ಭೇಟಿಯಾದ ತಕ್ಷಣ ಪಕ್ಷ ತೊರೆಯುತ್ತಾರೆ ಎಂಬುದು ತಪ್ಪುಕಲ್ಪನೆ’ ಎಂದು ಹೇಳಿದರು.

‘ಬಸವನಗೌಡ ಪಾಟೀಲ ಯತ್ನಾಳ ಮಾಡಿದ ಆರೋಪ ಸತ್ಯಕ್ಕೆ ದೂರವಾಗಿದೆ. ಯಾವ ಸಚಿವರು ಕಾಂಗ್ರೆಸ್‌ ಸಂಪರ್ಕದಲ್ಲಿ ಇದ್ದಾರೆ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು. ಕಂಡವರ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಅವರು ಮಾಡಬಾರದು. ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದವರು ಬಿ.ಎಸ್‌.ಯಡಿಯೂರಪ್ಪ ಮಾತ್ರ’ ಎಂದು ತಿರುಗೇಟು ನೀಡಿದರು.

‘ಗುಜರಾತ್‌ ಹಾಗೂ ಉತ್ತರಪ್ರದೇಶದ ಮಾದರಿಯಲ್ಲಿ ಜಿಲ್ಲಾ ಉಸ್ತುವಾರಿ ಹೊಣೆ ನೀಡಲಾಗಿದೆ. ಇದು ಹೈಕಮಾಂಡ್‌ ತೀರ್ಮಾನವಾಗಿದ್ದು, ಇದರಲ್ಲಿ ತಪ್ಪು ಕಾಣುತ್ತಿಲ್ಲ. ಸಚಿವರು ತವರು ಜಿಲ್ಲೆ, ಕ್ಷೇತ್ರಕ್ಕೆ ಸೀಮಿತವಲ್ಲ. ರಾಜ್ಯದ ಯಾವುದೇ ಜಿಲ್ಲೆಯ ಹೊಣೆ ನೀಡಿದರೂ ನಿರ್ವಹಿಸಬಲ್ಲರು’ ಎಂದರು.

‘ರಾಗಿ ಖರೀದಿಗೆ ಮರುಚಾಲನೆ’
ಬೆಂಬಲ ಬೆಲೆ ಯೋಜನೆಯಡಿ ಸ್ಥಗಿತಗೊಂಡಿರುವ ರಾಗಿ ಖರೀದಿ ಪ್ರಕ್ರಿಯೆಗೆ ಮರುಚಾಲನೆ ನೀಡಲು ಚರ್ಚಿಸಲಾಗಿದೆ. ಎರಡು ದಿನಗಳಲ್ಲಿ ಸರ್ಕಾರ ಆದೇಶ ಹೊರಡಿಸಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.

‘ರಾಗಿ ಖರೀದಿಗೆ ಕೇಂದ್ರ ಸರ್ಕಾರ ಮಿತಿ ವಿಧಿಸಿದ್ದರಿಂದ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ಇದರಿಂದ ರೈತರಿಗೆ ತೊಂದರೆ ಉಂಟಾಗಲಿದೆ ಎಂಬುದು ಸರ್ಕಾರಕ್ಕೆ ಮನವರಿಕೆಯಾಗಿದೆ. ಈ ಬಗ್ಗೆ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.



Read more from source

[wpas_products keywords=”deal of the day sale today kitchen”]