ಟಗರು ಸಿನಿಮಾದಲ್ಲಿ ‘ಡಾಲಿ’ ಪಾತ್ರದ ಮುಖಾಂತರ ಮಿಂಚಿದ್ದ ಧನಂಜಯ್, ಆ್ಯಕ್ಷನ್, ಮಾಸ್ ಸಿನಿಮಾಗಳ ಜೊತೆಗೆ ಭಾವನಾತ್ಮಕ ಸಿನಿಮಾಗಳಲ್ಲೂ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಇದರಿಂದಲೇ ನಟರಾಕ್ಷಸ ಎಂಬ ಬಿರುದನ್ನೂ ಪಡೆದಿದ್ದಾರೆ.
ಧನಂಜಯ್ ನಟಿಸಿ, ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರ, ಶಂಕರ್ ಗುರು ನಿರ್ದೇಶನದ ‘ಬಡವ ರಾಸ್ಕಲ್’ ಡಿ.24ಕ್ಕೆ ತೆರೆಕಾಣುತ್ತಿದೆ. ಇದೊಂದು ಪಕ್ಕಾ ಮಿಡ್ಲ್ ಕ್ಲಾಸ್ ಎಂಟರ್‌ಟೈನರ್ ಎನ್ನುವ ಧನಂಜಯ್, ಶಂಕರ್ ಅದ್ಭುತವಾಗಿ ಇದಕ್ಕೆ ಕಥೆ ಹೆಣೆದಿದ್ದಾರೆ ಎಂದಿದ್ದಾರೆ.
‘ಶಿಕ್ಷಣ ಪೂರ್ಣಗೊಳಿಸಿ ಕೆಲಸಕ್ಕೆ ಸೇರಿಕೊಳ್ಳುವುದರ ನಡುವೆ ಇರುವ ಜೀವನದ ಹಂತದಲ್ಲಿ ನಡೆಯುವ ಘಟನೆಗಳನ್ನು ಇಟ್ಟುಕೊಂಡು ಶಂಕರ್ ಕಥೆ ಹೆಣೆದಿದ್ದಾರೆ. ಈ ಹಂತದಲ್ಲಿ ಒಂದಿಷ್ಟು ಗೊಂದಲಗಳು, ಒತ್ತಡ, ಕನಸುಗಳು ಇರುತ್ತವೆ. ಜೊತೆಗೆ ಅರಿವೂ ಮೂಡುತ್ತದೆ. ಆಗ ತೆಗೆದುಕೊಳ್ಳುವ ನಿರ್ಧಾರಗಳು ಇಡೀ ಬದುಕನ್ನು ನಿರ್ಧರಿಸುತ್ತವೆ. ಇದೊಂದು ಪ್ಯೂರ್ ಮಿಡ್ಲ್ ಕ್ಲಾಸ್ ಎಂಟರ್‌ಟೈನರ್. ಮಧ್ಯಮ ವರ್ಗದ ಪ್ರತಿ ಯುವಜನತೆಗೆ ಅವರ ತಂದೆ, ತಾಯಿಯೇ ಹೀರೊ ಹೀರೊಯಿನ್. ಮಕ್ಕಳ ಬದುಕಿಗಾಗಿ ಹಲವು ತ್ಯಾಗಗಳನ್ನು ಹೆತ್ತವರು ಮಾಡಿರುತ್ತಾರೆ. ಇದನ್ನೆಲ್ಲಾ ಚೆನ್ನಾಗಿ ಹೆಣೆದಿದ್ದಾರೆ ಶಂಕರ್’ ಎನ್ನುತ್ತಾರೆ ಧನಂಜಯ್.
‘ಶಂಕರ್ ಬದುಕನ್ನು ಹತ್ತಿರದಿಂದ ನೋಡಿದ್ದೇನೆ’ ಎನ್ನುವ ಅವರು, ‘ಶಂಕರ್, ಕೊರಿಯರ್ ಬಾಯ್ ಆಗಿ ಕೆಲಸ ಮಾಡಿಕೊಂಡು, ಸಂಜೆ ಕಾಲೇಜಿಗೆ ಹೋಗಿ ಸಿನಿಮಾ ಕೆಲಸ ಮಾಡುತ್ತಿದ್ದರು. ಈ ಅನುಭವ ಇದ್ದ ಕಾರಣವೇ ಈ ರೀತಿ ಕಥೆ ಕಟ್ಟಲು ಸಾಧ್ಯವಾಯಿತು. ಈ ಅನುಭವಕ್ಕೆ ಕೊಂಚ ಕಮರ್ಷಿಯಲ್ ಸ್ಪರ್ಶ ನೀಡಿದ್ದಾರೆ. ಇದೊಂದು ಸರಳ ಸಿನಿಮಾ. ಯಾವುದೇ ಮಧ್ಯಮ ವರ್ಗದ ಜೀವನ ಬದುಕಿರುವವರಿಗೆ ಈ ಸಿನಿಮಾ ಕನೆಕ್ಟ್ ಆಗುತ್ತದೆ. ದೊಡ್ಡ ಕನಸನ್ನು ಕಟ್ಟಿಕೊಂಡು ಬಂದಥ ದೊಡ್ಡ ಗ್ಯಾಂಗೇ ಇತ್ತು. ನನ್ನ ಬದುಕಿನಲ್ಲಿ ಅವರು ಮಾನಸಿಕವಾಗಿ ಬೆಂಬಲ ನೀಡುತ್ತಿದ್ದವರು. ಅವರ ಎಲ್ಲರ ಕನಸುಗಳಿಗೆ ಶಂಕರ್ ಕಥೆ ಪೂರಕವಾಗಿತ್ತು. ಇದನ್ನು ಅರ್ಥ ಮಾಡಿಕೊಳ್ಳದೇ ಇರುವ ನಿರ್ಮಾಪಕರು ಸಿಕ್ಕರೆ, ಇಡೀ ಸಿನಿಮಾವೇ ದಾರಿ ತಪ್ಪುವ ಸಾಧ್ಯತೆ ಇತ್ತು. ಹೀಗಾಗಿ ನಾನೇ ಇದನ್ನು ನಿರ್ಮಾಣ ಮಾಡುವ ನಿರ್ಧಾರ ತೆಗೆದುಕೊಂಡೆ’ ಎಂದರು.
‘ಅಮೃತ ಮೈಸೂರಿನ ಮಿಡ್ಲ್ ಕ್ಲಾಸ್ ಹುಡುಗಿ. ನೋಡಲು ಮಾತ್ರ ಶ್ರೀಮಂತರಾಗಿ ಕಾಣುತ್ತಾರೆ. ಅವರು ಒಬ್ಬ ಟೀಚರ್ ಮಗಳು. ಮಧ್ಯಮ ವರ್ಗದ ಜೀವನವನ್ನು ಅನುಭವಿಸಿದವರು. ಹೀಗಾಗಿ ಎಲ್ಲ ಬಡವ ರಾಸ್ಕಲ್‌ಗಳು ಸೇರಿಕೊಂಡು ಒಂದು ಸಿನಿಮಾ ಕಟ್ಟಿ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ’ ಎಂದರು.
ಗೆಳೆಯರಿಗೋಸ್ಕರ ಸಿನಿಮಾ
‘ಇದೊಂದು ಗೆಳೆಯನಿಂದ, ಗೆಳೆಯರಿಗಾಗಿ ಗೆಳೆಯರಿಗೋಸ್ಕರ ಮಾಡಿರುವ ಸಿನಿಮಾ. ಧನಂಜಯ್ ಅವರೊಂದಿಗೆ 10 ವರ್ಷದ ಸ್ನೇಹ. ಧನಂಜಯ್ ಅವರನ್ನು ಬಹಳ ಹತ್ತಿರದಿಂದ ನೋಡಿದ್ದ ಕಾರಣ, ಸಿನಿಮಾ ಮಾಡುವುದಿದ್ದರೆ ಅವರಿಗಾಗಿಯೇ ಎಂದು ನಿರ್ಧರಿಸಿದ್ದೆ. ತಂದೆ–ತಾಯಿ ಪಾತ್ರದಲ್ಲಿ ರಂಗಾಯಣ ರಘು ಹಾಗೂ ತಾರಾ ಅವರು ನನ್ನ ಬರವಣಿಗೆಗೆ ಮತ್ತಷ್ಟು ಶಕ್ತಿ ತುಂಬಿದ್ದಾರೆ. ಇದೊಂದು ಸರಳ ಕಥೆ. ಆದರೆ ಹೇಳಿರುವ ಸಂದೇಶ ತೂಕದಿಂದ ಕೂಡಿದೆ. ಸೂಕ್ಷ್ಮ ವಿಷಯಗಳು ಇಲ್ಲಿವೆ. ‘ಸ್ಪರ್ಶ’ ಖ್ಯಾತಿ ರೇಖಾ ಈ ಚಿತ್ರದಲ್ಲಿ ಭಿನ್ನವಾದ ವಿಶೇಷ ಪಾತ್ರವೊಂದನ್ನು ಮಾಡಿದ್ದಾರೆ’ ಎಂದರು ಶಂಕರ್ ಗುರು.