ಹೈಲೈಟ್ಸ್:
- ಪರಿಷತ್ ಚುನಾವಣೆ, ಬೆಳಗಾವಿ ದ್ವಿಸದಸ್ಯ ಕ್ಷೇತ್ರದಲ್ಲಿ ಹೊರಬಿದ್ದ ಅನಿರೀಕ್ಷಿತ ಫಲಿತಾಂಶ
- ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಡುವಿನ ಜಿದ್ದಾ ಜಿದ್ದಿನಲ್ಲಿ ಬಡವಾದ ಬಿಜೆಪಿ
- ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಗೇ ಹೀನಾಯ ಸೋಲು
- ಗೆಲುವಿನ ನಗೆ ಬೀರಿದ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೊಳಿ
- ರಮೇಶ್ ಸಹೋದರ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿಗೂ ಗೆಲುವು
ಇನ್ನೊಂದೆಡೆ ಲಖನ್ ಜಾರಕಿಹೊಳಿ – ಕವಟಗಿಮಠ ನಡುವಿನ ಸ್ಪರ್ಧೆಯಲ್ಲಿ ಕಾಂಗ್ರೆಸ್ ಅನಾಯಾಸವಾಗಿ ಗೆಲುವು ಸಾಧಿಸಿ ಬೀಗಿದೆ. ಪಕ್ಷದ ಅಭ್ಯರ್ಥಿ, ಹೆಬ್ಬಾಳ್ಕರ್ ಸೋದರ ಚನ್ನರಾಜ ಹಟ್ಟಿಹೊಳಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಆರಂಭದಲ್ಲೇ ಗೆದ್ದ ಕಾಂಗ್ರೆಸ್
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಮಂಗಳವಾರ ಆರಂಭವಾಗಿತ್ತು. ಗಡಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಧಿವೇಶನದ ಹಿನ್ನೆಲೆಯಲ್ಲಿ ಮಧ್ಯಾಹ್ನದ ಹೊತ್ತಿಗೆ ಚಿಕ್ಕೋಡಿಯಲ್ಲಿ ತಡವಾಗಿ ಆರಂಭಗೊಂಡ ಮತ ಎಣಿಕೆ ಆರಂಭದಿಂದಲೂ ಭಾರಿ ರೋಚಕತೆ ಉಳಿಸಿಕೊಂಡಿತ್ತು.
ಒಟ್ಟು ಚಲಾವಣೆಗೊಂಡಿದ್ದ 8,849 ಮತಗಳ ಪೈಕಿ 8,846 ಮತಗಳು ಚಲಾವಣೆಗೊಂಡಿದ್ದವು. 12.30 ಗಂಟೆಗೆ ಮತ ಎಣಿಕೆ ಆರಂಭಗೊಂಡಾಗ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಪ್ರಾರಂಭದಿಂದಲೇ ಮುನ್ನಡೆ ಕಾಯ್ದುಕೊಂಡಿದ್ದರು. ಇದರಿಂದ ರಮೇಶ್ ಜಾರಕೊಹೊಳಿ ಲೆಕ್ಕಾಚಾರ ಬುಡಮೇಲಾಗುವ ಲಕ್ಷಣ ಕಾಣಿಸಿಕೊಂಡಿತ್ತು.
ಕೊನೆಗೆ ಪ್ರಥಮ ಪ್ರಾಶಸ್ತ್ಯದ ಮತಗಳ ಲೆಕ್ಕ ಮುಗಿದಾಗ ಹಟ್ಟಿಹೊಳಿ ಗೆಲುವಿನ ನಗೆ ಬೀರಿದ್ದರು. ರಮೇಶ್ ಜಾರಕಿಹೊಳಿ ಲೆಕ್ಕಾಚಾರ ಅಲ್ಲಿಗೇ ಮಕಾಡೆ ಮಲಗಿತ್ತು. ಹೀಗೆ ಬಿಜೆಪಿ ಹಾಗೂ ಅದರ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಮೊದಲ ಆಘಾತ ಅನುಭವಿಸಿದರು. ಅವರಿಗೆ ಮತ್ತೊಂದು ಆಘಾತವೂ ಕಾದಿತ್ತು.

ಬೆಳಗಾವಿ ದ್ವಿಸದಸ್ಯ ಕ್ಷೇತ್ರದಲ್ಲಿ ಗೆಲುವು ಸಾಧಿಸಿದಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ (ಎಡ) ಹಾಗೂ ಕಾಂಗ್ರೆಸ್‌ನ ಚನ್ನರಾಜ ಹಟ್ಟಿಹೊಳಿ.
ಬಿಜೆಪಿ ಅಧಿಕೃತ ಅಭ್ಯರ್ಥಿಗೇ ಸೋಲು!
ಮೊದಲ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಎರಡನೇ ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಕಾಣಿಸಿಕೊಂಡಿದ್ದರು. ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಮೂರನೇ ಸ್ಥಾನಕ್ಕೆ ಜಾರಿದ್ದರು. ಎರಡನೇ ಪ್ರಾಶಸ್ತ್ಯದ ಮತಗಳಲ್ಲಾದರೂ ಗೆಲುವು ನಮ್ಮದಾಗಬಹುದು ಎಂದು ಬಿಜೆಪಿಗರು ಕಾಯುತ್ತಾ ಕುಳಿತಿದ್ದರು.
ಆದರೆ ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆ ಮುಗಿದಾಗ ರಮೇಶ್ ಸೋದರ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲುವು ಸಾಧಿಸಿದ್ದರು. ಈ ಮೂಲಕ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸೇಡು ತೀರಿಸಲು ಹೊರಟಿದ್ದ ರಮೇಶ್ ಜಾರಕಿಹೊಳಿ ಅದರಲ್ಲೂ ಯಶಸ್ವಿಯಾಗದೆ, ಇತ್ತ ಸ್ವಂತ ಪಕ್ಷದ ಅಭ್ಯರ್ಥಿಗೇ ಸೋಲು ಕಾಣಿಸಿದ್ದರು.
ಹೆಬ್ಬಾಳ್ಕರ್ – ಜಾರಕಿಹೊಳಿ ಬಡಿದಾಟದಲ್ಲಿ ಬಡವಾದ ಬಿಜೆಪಿ
ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಸ್ಥಳೀಯ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹೆಬ್ಬಾಳ್ಕರ್ ಬಣದ ಕೈಮೇಲಾಗಿದ್ದನ್ನೇ ಮುಂದೆ ಮಾಡಿಕೊಂಡು ಬಂಡಾಯ ಸಾರಿ ಆಪರೇಷನ್ ಕಮಲಕ್ಕೆ ನಾಂದಿ ಹಾಡಿದ್ದರು ಆಗ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ. ಆಪರೇಷನ್ ಸಕ್ಸಸ್ ಆಯ್ತು ಕೂಡ. ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೇರಿಸುವಲ್ಲಿಯೂ ಜಾರಕಿಹೊಳಿ ಯಶಸ್ವಿಯಾದರು.
ಅದೇ ರಭಸದಲ್ಲಿ ಈ ಬಾರಿಯೂ ಹೆಬ್ಬಾಳ್ಕರ್ ಸಹೋದರನಿಗೆ ಸೋಲುಣಿಸಬೇಕು ಎಂದು ರಮೇಶ್ ಹೊರಟಿದ್ದರು. ಹೀಗಾಗಿ ಬಿಜೆಪಿ ಅಧಿಕೃತ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಅವರ ಜತೆಗೆ ತಮ್ಮ ಸಹೋದರ ಲಖನ್ ಜಾರಕಿಹೊಳಿಯನ್ನೂ ರಮೇಶ್ ಪಕ್ಷೇತರರಾಗಿ ಕಣಕ್ಕಿಳಿಸಿದರು.
13 ಬಿಜೆಪಿ ಶಾಸಕರು; ಗೆಲುವಿನ ಲೆಕ್ಕಾಚಾರದಲ್ಲಿದ್ದ ರಮೇಶ್
ಜಿಲ್ಲೆಯಲ್ಲಿ ಬಿಜೆಪಿ 13 ಶಾಸಕರನ್ನು ಹೊಂದಿದೆ. ಜತೆಗೆ ಸಂಸದೆ, ರಾಜ್ಯ, ಕೇಂದ್ರದಲ್ಲಿ ಪಕ್ಷ ಅಧಿಕಾರದಲ್ಲಿರುವುದರ ಲಾಭ; ಹೀಗೆ ಎಲ್ಲವನ್ನೂ ಒಟ್ಟುಗೂಡಿಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ, ಲಖನ್ ಜಾರಕಿಹೊಳಿಯನ್ನೂ 2ನೇ ಅಭ್ಯರ್ಥಿಯಾಗಿ ಗೆಲ್ಲಿಸುವುದು ರಮೇಶ್ ಯೋಜನೆಯಾಗಿತ್ತು ಎಂಬುದು ಎಂಥ ದಡ್ಡರಿಗೂ ಅರ್ಥವಾಗುವಂಥಹದ್ದು.
ಜತೆಗೆ ಇನ್ನೋರ್ವ ಸಹೋದರ, ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿಯೂ ರಮೇಶ್ ಜತೆಗಿದ್ದರು. ಹೀಗೆ ಅಖಾಡಕ್ಕೆ ಧುಮುಕಿದ ರಮೇಶ್ ಜಾರಕಿಹೊಳಿ “ಮೊದಲ ಮತ ಮಹಾಂತೇಶ್ ಕವಟಗಿಮಠ ಅವರಿಗೆ ಹಾಕಬೇಕು” ಎಂದು ಘೋಷಿಸಿದ್ದರು. ಅಷ್ಟೇ ಅಲ್ಲ ‘ಎಲ್ಲರಿಗೂ ಸೊಕ್ಕು ಬಂದಾಗ ಯಾರೋ ಒಬ್ಬರು ತಯಾರಾಗ್ತಾರೆ. ನನಗೆ ಸೊಕ್ಕು ಬಂದ್ರೆ ಮತ್ತೊಬ್ಬ ತಯಾರಾಗ್ತಾನೆ’ ಎಂದು ಪರೋಕ್ಷವಾಗಿ ಲಖನ್ ಗೆಲುವಿನ ತುಂಬು ವಿಶ್ವಾಸದಲ್ಲಿದ್ದರು.
ಮುನ್ನುಗ್ಗುತ್ತಿದ್ದ ಕುದುರೆಗೆ ಮೂಗುದಾರ ಹಾಕುವ ಯತ್ನಕ್ಕೂ ರಾಜ್ಯ ಬಿಜೆಪಿ ಕೈ ಹಾಕಲಿಲ್ಲ. “ಲಖನ್ ಸ್ಪರ್ಧೆಯಿಂದ ನಮ್ಮ ಅಭ್ಯರ್ಥಿಗೆ ತೊಂದರೆ ಆಗಲ್ಲ. ರಮೇಶ್, ಬಾಲಚಂದ್ರ ಜಾರಕಿಹೊಳಿ ಜತೆ ಚರ್ಚೆ ಮಾಡ್ತಿದ್ದೇನೆ. ಇಬ್ಬರೂ ನಮ್ಮ ಪಕ್ಷದ ಅಭ್ಯರ್ಥಿ ಪರ ಗಟ್ಟಿಯಾಗಿ ನಿಂತಿದ್ದಾರೆ,” ಎಂದು ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು. ಕವಟಗಿಮಠ ಜತೆ ಪಕ್ಷೇತರ ಅಭ್ಯರ್ಥಿ ರೂಪದಲ್ಲಿ ಇನ್ನೊಂದು ಸೀಟು ಹೆಚ್ಚಿಗೆ ಬಂದರೆ ಬೇಡ ಎನ್ನುವುದು ಯಾಕೆ ಎನ್ನುವುದು ಅವರ ಮಾತಿನ ಒಳಾರ್ಥದಂತೆ ಕಾಣಿಸುತ್ತಿತ್ತು.
ಕಾಂಗ್ರೆಸ್ ಒಗ್ಗಟ್ಟಿನ ಮಂತ್ರ, ಜಾಣ ತಂತ್ರ
ಚುನಾವಣೆ ಹಿನ್ನೆಲೆಯಲ್ಲಿ ಲಖನ್ ಸ್ಪರ್ಧೆಯಿಂದ ಬಿಜೆಪಿ ಗೊಂದಲದ ಗೂಡಾದರೆ, ಕಾಂಗ್ರೆಸ್ ಮಾತ್ರ ಸ್ಪಷ್ಟವಾಗಿ ಮುನ್ನಡೆದಿತ್ತು. ಅದರಲ್ಲೂ ಸ್ವತಃ ಲಕ್ಷ್ಮೀ ಹೆಬ್ಬಾಳ್ಕರ್ ಎಲ್ಲ ಭಾರವನ್ನೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೆಗಲಿಗೆ ಹಾಕಿದ್ದರು.
“ಈ ಚುನಾವಣೆಯನ್ನು ನಾವು ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿಯೇ ಎದುರಿಸುತ್ತಿದ್ದೇವೆ,” ಎಂದು ಬಹಿರಂಗವಾಗಿಯೇ ಘೋಷಿಸಿದರು. ಸತೀಶ್ ಸಹೋದರನ ಬಗ್ಗೆ ಮೃಧು ಧೋರಣೆ ತಳೆಯಬಹುದು ಎಂಬ ಮಾತುಗಳು ಕೇಳಿ ಬಂದರೂ ಅವರು ಅದಕ್ಕೆ ಕಿವಿಗೊಡಲಿಲ್ಲ.
ಸತೀಶ್ ಜಾರಕಿಹೊಳಿಯೂ ಅಷ್ಟೇ, ಪಕ್ಷ ನಿಷ್ಠೆ ತೋರಿ ಆಕ್ರಮಣಕಾರಿ ಪ್ರಚಾರಕ್ಕೆ ಒತ್ತು ನೀಡಿದರು. ತಾನೇ ಸ್ವತಃ ಮತಗಟ್ಟೆ ಏಜೆಂಟ್ ಆಗುತ್ತೇನೆ ಎಂದು ಮುಂಚೂಣಿಯಲ್ಲಿ ನಿಂತು ಚುನಾವಣಾ ಪ್ರಚಾರವನ್ನು ಮುನ್ನಡೆಸಿದರು. ಪರಿಣಾಮ ಈಗ ಕಣ್ಣ ಮುಂದಿದೆ.