ಹೈಲೈಟ್ಸ್:
- ತಮಗೆ ಘೋಷಣೆ ಮಾಡಲಾದ ಪದ್ಮ ಭೂಷಣ ಪ್ರಶಸ್ತಿ ತಿರಸ್ಕರಿಸಿದ ಬುದ್ಧದೇವ್ ಭಟ್ಟಾಚಾರ್ಯ
- ಪ್ರಶಸ್ತಿ ಘೋಷಣೆ ಮಾಡುವ ಬಗ್ಗೆ ನನಗೆ ಯಾವುದೇ ಮಾಹಿತಿ ನೀಡಿಲ್ಲ ಎಂದ ಕಮ್ಯುನಿಷ್ಟ್ ನಾಯಕ
- ಘೋಷಣೆಯಾದ ಸರ್ವೋಚ್ಛ ನಾಗರಿಕ ಪ್ರಶಸ್ತಿಯನ್ನು ತಿರಸ್ಕರಿಸಿದ ಅಪರೂಪದ ಘಟನೆ
ಪದ್ಮ ಭೂಷಣ ಪ್ರಶಸ್ತಿಗೆ ಆಯ್ಕೆ ಮಾಡುವ ವಿಷಯ ತನಗೆ ಗೊತ್ತಿಲ್ಲ. ಹೀಗಾಗಿ ಪ್ರಶಸ್ತಿಯನ್ನು ತಿರಸ್ಕರಿಸುವುದಾಗಿ ಅವರು ಹೇಳಿದ್ದಾರೆ. ದೇಶದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯನ್ನು ತಿರಸ್ಕರಿಸುವ ಇಂಥ ಘಟನೆಗಳು ನಡೆಯುವುದು ಅಪರೂಪ. ಭಟ್ಟಾಚಾರ್ಯ ಅವರ ಈ ನಿರ್ಧಾರ ನರೇಂದ್ರ ಮೋದಿ ಸರ್ಕಾರಕ್ಕೆ ಇರುಸು ಮುರುಸು ಉಂಟು ಮಾಡಿದೆ.
‘ಪದ್ಮ ಭೂಷಣ ಪ್ರಶಸ್ತಿ ನೀಡುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ನನಗೆ ಯಾರೂ ಮಾಹಿತಿ ನೀಡಿಲ್ಲ. ಇದಾಗ್ಯೂ ಅವರು ನನಗೆ ಪ್ರಶಸ್ತಿ ನೀಡುವುದಾದರೆ ನಾನು ಅದನ್ನು ತಿರಸ್ಕರಿಸುತ್ತೇನೆ’ ಎಂದು ಅವರು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಆದರೆ ಕೇಂದ್ರ ಸರ್ಕಾರದ ಮೂಲಗಳ ಮಾಹಿತಿ ಪ್ರಕಾರ, ಭಟ್ಟಾಚಾರ್ಯ ಅವರಿಗೆ ಪ್ರಶಸ್ತಿ ಘೋಷಣೆ ಮಾಡುವ ಬಗ್ಗೆ ಮಾಹಿತಿ ನೀಡಲಾಗಿದೆ. ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿ ಭಟ್ಟಾಚಾರ್ಯ ಅವರ ಪತ್ನಿಯವರೊಂದಿಗೆ ಮಾತನಾಡಿ, ಭಟ್ಟಾಚಾರ್ಯ ಅವರಿಗೆ ಪ್ರಶಸ್ತಿ ಘೋಷಣೆ ಮಾಡುವ ಬಗ್ಗೆ ತಿಳಿಸಿದ್ದರು. ಪತ್ನಿ ಅದನ್ನು ಸ್ವೀಕರಿಸಿ, ಧನ್ಯವಾದ ಕೂಡ ಸಮರ್ಪಿಸಿದ್ದರು ಎಂದು ಗೃಹ ಮಂತ್ರಾಲಯದ ಮೂಲಗಳು ತಿಳಿಸಿವೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತೀಕ್ಷ್ಣ ಟೀಕೆಗಾರರಲ್ಲಿ ಓರ್ವವಾಗಿರುವ 77 ವರ್ಷದ ಬುದ್ಧದೇವ್ ಭಟ್ಟಾಚಾರ್ಯ ಅವರು, ಸದ್ಯ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಶ್ವಾಸಕೋಸ ಹಾಗೂ ಹೃದಯ ಸಂಬಂಧಿ ತೊಂದರೆಗಳಿಂದ ಬಳಲುತ್ತಿರುವ ಅವರು ಚಿಕಿತ್ಸೆ ಪಡೆಯುತ್ತಿದ್ದು, ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ.
ಪದ್ಮ ದಂತಹ ಪ್ರಶಸ್ತಿಯನ್ನು ತಿರಸ್ಕರಿಸುವ ಅಪರೂಪದ ಘಟನೆ ಇದಾಗಿದ್ದು, ಪ್ರಶಸ್ತಿ ಘೋಷಣೆಗೂ ಮುನ್ನ ಪ್ರಶಸ್ತಿ ನೀಡಲು ಇಚ್ಛಿಸಿದವರನ್ನು ಸಂಪರ್ಕಿಸಿ ಪ್ರಶಸ್ತಿ ಸ್ವೀಕರಿಸುವ ಬಗ್ಗೆ ಅನುಮತಿ ಕೇಳಲಾಗುತ್ತದೆ. ಅದಾದ್ಯೂ ಬುದ್ಧದೇವ್ ಭಟ್ಟಾಚಾರ್ಯ ಅವರು ಪದ್ಮ ಭೂಷಣ ತಿರಸ್ಕಾರ ಮಾಡಿದ್ದು, ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ.
ಅಂದಹಾಗೆ ಈ ಹಿಂದೆ ಕೂಡ ಬೆರಳೆಣಿಕೆಯ ಗಣ್ಯರು ಪದ್ಮ ಪ್ರಶಸ್ತಿಗಳನ್ನು ತಿರಸ್ಕಾರ ಮಾಡಿದ್ದಾರೆ. ಇನ್ನು ಕೆಲವರು ಸ್ವೀಕಾರ ಮಾಡಿದ ಪ್ರಶಸ್ತಿಯನ್ನು ಪ್ರತಿಭಟನಾರ್ಥವಾಗಿ ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ.
2005 ರಲ್ಲಿ ಖ್ಯಾತ ಇತಿಹಾಸ ತಜ್ಞೆ ರೊಮಿಳಾ ಥಾಪರ್ ಅವರು ಪದ್ಮಭೂಷಣ ಹಾಗೂ 2015ರಲ್ಲಿ ಸಿನಿಮಾ ಬರಹಗಾರ ಸಲೀಮ್ ಖಾನ್ ಪದ್ಮಶ್ರೀ ಪ್ರಶಸ್ತಿ ತಿರಸ್ಕರಿಸಿದ್ದರು.
1974ರಲ್ಲಿ ತಮಗೆ ಸಿಕ್ಕಿದ ಪದ್ಮ ಭೂಷಣ ಪ್ರಶಸ್ತಿಯನ್ನು ಲೇಖಕ ಖುಷ್ವಂತ್ ಸಿಂಗ್ ಅವರು 1984 ರಲ್ಲಿ ಸರ್ಕಾರಕ್ಕೆ ಹಿಂದಿರುಗಿಸಿದ್ದರು. ಸ್ವರ್ಣ ಮಂದಿರವನ್ನು ಭಾರತೀಯ ಸೇನೆ ವಶಪಡಿಕೊಂಡಿದ್ದ ಪ್ರಕರಣದ ಪ್ರತಿಭಟನಾರ್ಥವಾಗಿ ಪ್ರಶಸ್ತಿ ಹಿಂದಿರುಗಿಸಿದ್ದರು.
ದಲಿತ ಕವಿ ದಿವಂಗತ ಸಿದ್ದಲಿಂಗಯ್ಯ ಸೇರಿದಂತೆ ರಾಜ್ಯದ ಒಟ್ಟು ಐವರು ಗಣ್ಯರು ಪದ್ಮ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜನರಲ್ ಬಿಪಿನ್ ರಾವತ್, ಕಾಂಗ್ರೆಸ್ ನಾಯಕ ಗುಲಾಮ್ ನಬಿ ಅಜಾದ್‌ಗೂ ಪದ್ಮ ಪ್ರಶಸ್ತಿ ಘೋಷಣೆಯಾಗಿದೆ.
Read more
[wpas_products keywords=”deal of the day sale today offer all”]