Karnataka news paper

ಪಿಜಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಹಾಸನ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರೊಫೆಸರ್ ಅಮಾನತು


The New Indian Express

ಹಾಸನ: ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇರೆಗೆ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಾಯಕ ಪ್ರೊಫೆಸರ್ ಒಬ್ಬರನ್ನು ಅಮಾನತು ಮಾಡಲಾಗಿದೆ. ಇತ್ತೀಚಿಗೆ ಲಿಫ್ಟ್ ನಲ್ಲಿ ಹೋಗುತ್ತಿರುವಾಗ ಪಿಜಿ ವಿದ್ಯಾರ್ಥಿನಿಯೊಬ್ಬರಿಗೆ ಡಾ. ಹೆಚ್ .ಸಿ. ಲೋಕೇಶ್ ಲೈಂಗಿಕ  ಕಿರುಕುಳ ನೀಡಿದ್ದಲ್ಲದೇ, ಈ ವಿಚಾರವನ್ನು ಯಾರೊಂದಿಗೂ ಹೇಳಿಕೊಳ್ಳದಂತೆ ಬೆದರಿಕೆ ಹಾಕಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಈ ವಿಚಾರವನ್ನು ವಿದ್ಯಾರ್ಥಿನಿ ವಿಭಾಗದ ಮುಖ್ಯಸ್ಥರು ಹಾಗೂ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರ ಗಮನಕ್ಕೆ ತಂದಿದ್ದಾರೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಅಮಾನತು ಆದೇಶ ಹೊರಡಿಸಿದ್ದು, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಮತ್ತು ಹಿಮ್ಸ್ ಆಡಳಿತಾಧಿಕಾರಿ ಗಿರೀಶ್ ನಂದನ್ ಅವರು ಮೂರು ವಾರಗಳಲ್ಲಿ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಘಟನೆಯ ದಿನವಾದ ಜನವರಿ 12 ರಂದು ವಿದ್ಯಾರ್ಥಿನಿ ದೂರು ನೀಡಿದ್ದರೂ ಡಾ.ಲೋಕೇಶ್ ವಿರುದ್ಧ ಕ್ರಮ ಕೈಗೊಳ್ಳಲು ಹಿಮ್ಸ್  ನಿರ್ದೇಶಕ ಡಾ.ರವಿಕುಮಾರ್ ವಿಫಲರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಿಮ್ಸ್  ಉಪಾಧ್ಯಕ್ಷರು ಆಗಿರುವ ನವೀನ್ ರಾಜ್ ಸಿಂಗ್, ಡಾ. ಲೋಕೇಶ್ ಅವರನ್ನು ಅಮಾನತುಗೊಳಿಸಿದ್ದು, ಈ ಸಂಬಂಧ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ. 

ಹಿಮ್ಸ್ ನಿರ್ದೇಶಕರ ಅನುಮತಿ ಪಡೆಯದೆ ಕೇಂದ್ರ ಕಚೇರಿಯಿಂದ ಹೊರಹೋಗದಂತೆ ಡಾ.ಲೋಕೇಶ್ ಅವರಿಗೆ ಅಮಾನತು ಆದೇಶದಲ್ಲಿ ಸೂಚಿಸಲಾಗಿದೆ. ಮಂಗಳವಾರ ಆದೇಶದ ಪ್ರತಿ ಸಿಕ್ಕಿದ್ದು, ನಿಗದಿತ ಸಮಯದಲ್ಲಿ ತನಿಖಾ ವರದಿ ಸಲ್ಲಿಸುವುದಾಗಿ ವಿಚಾರಣಾಧಿಕಾರಿಯಾಗಿ ನೇಮಕಗೊಂಡ ಎಡಿಸಿ ಕವಿತಾ ರಾಜಾರಾಂ ತಿಳಿಸಿದ್ದಾರೆ.

ಲೋಕೇಶ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಎಬಿವಿಪಿ ಸಂಘಟನೆಯಡಿ ವಿದ್ಯಾರ್ಥಿಗಳು ಮಂಗಳವಾರ ಹಾಸನದಲ್ಲಿ ಪ್ರತಿಭಟನೆ ನಡೆಸಿದರು.



Read more

[wpas_products keywords=”deal of the day”]