ಹೈಲೈಟ್ಸ್:
- 3ನೇ ಅಲೆಯ 25 ದಿನದಲ್ಲಿ 24 ಮೃತ್ಯು
- ದ.ಕ ಜಿಲ್ಲೆಯಲ್ಲಿ ಮುಂದುವರಿದ ಸಾವಿನ ಸರಣಿ
- ಜ.25ರ ತನಕ ಒಟ್ಟು 1727 ಮಂದಿ ಮಂದಿ ಬಲಿ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಮೂರನೇ ಅಲೆಯ ಸಾವಿನ ಸರಣಿ ಆರಂಭಗೊಂಡಿದ್ದು, ಜ.1ರಿಂದ 25 ದಿನಗಳಲ್ಲಿಒಟ್ಟು 24 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇದರಲ್ಲಿ ಏಳು ಮಂದಿ ಹೊರ ಜಿಲ್ಲೆಯವರಿದ್ದಾರೆ. ಕೋವಿಡ್ ಸೋಂಕು ಆರಂಭವಾದಂದಿನಿಂದ ಸುಮಾರು 21 ತಿಂಗಳಲ್ಲಿ ಮೊದಲ ಅಲೆ, ಎರಡನೇ ಅಲೆ ಮತ್ತು ಮೂರನೇ ಅಲೆಯ ಆರಂಭದಲ್ಲಿ ಜ.25ರ ತನಕ ಒಟ್ಟು 1727 ಮಂದಿ ಮಂದಿ ಬಲಿಯಾಗಿದ್ದು, ಹೊರ ಜಿಲ್ಲೆಗೆ ಸೇರಿದವರೂ ಇದ್ದಾರೆ.
ದಕ್ಷಿಣ ಕನ್ನಡದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟಿರುವವರ ಪೈಕಿ ಅತಿ ಹೆಚ್ಚು ಮಂಗಳೂರು ತಾಲೂಕಿನವರಿದ್ದು, ಅವರ ಸಂಖ್ಯೆ ಒಂದು ಸಾವಿರಕ್ಕಿಂತ ಹೆಚ್ಚಿದೆ. ಉಳಿದಂತೆ ವಿವಿಧ ತಾಲೂಕಿಗೆ ಸೇರಿದವರು. ಹೊರ ಜಿಲ್ಲೆಗಳ 500ರಷ್ಟು ಮಂದಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದಾರೆ. ವಿವಿಧ ಚಿಕಿತ್ಸೆಗೆ ಬಂದವರು ಕೋವಿಡ್ ಸೊಂಕು ತಗುಲಿ ಮೃತಪಟ್ಟವರಿದ್ದಾರೆ.
ಜಿಲ್ಲೆಯಲ್ಲಿ ಮೊದಲ ಅಲೆಯಲ್ಲಿ 740 ಮಂದಿ ಮೃತಪಟ್ಟಿದ್ದರೆ, ಎರಡನೇ ಅಲೆಯಲ್ಲಿ 2021ರ ಮಾರ್ಚ್ನಿಂದ ನವೆಂಬರ್ ತನಕ 963 ಮಂದಿ ಮೃತಪಟ್ಟಿದ್ದಾರೆ. ಎರಡೂ ಅಲೆಯಲ್ಲಿ ಒಟ್ಟು 1703 ಮಂದಿ ಅಸುನೀಗಿದ್ದಾರೆ. ಇದೀಗ 24 ಮಂದಿ ಸೇರಿದಂತೆ ಸಾವಿನ ಸಂಖ್ಯೆ 1727ಕ್ಕೇರಿದೆ. ಮೃತಪಟ್ಟವರ ಪೈಕಿ, ಮಹಿಳೆಯರಿಗಿಂತ ಪುರುಷರ ಸಂಖ್ಯೆಯೇ ಹೆಚ್ಚಿದೆ ಎನ್ನುತ್ತಾರೆ ಅಧಿಕಾರಿಗಳು.
ಕೋವಿಡ್ 3ನೇ ಅಲೆಯಲ್ಲಿ ಇದೇ ಮೊದಲ ಬಾರಿದೆ ಹೊಸ ಕೇಸ್‌ಗಳನ್ನು ಮೀರಿಸಿದ ಗುಣಮುಖರ ಸಂಖ್ಯೆ!
ಅತೀ ಹೆಚ್ಚು ಮೆಡಿಕಲ್ ಕಾಲೇಜು ಆಸ್ಪತ್ರೆಗಳು ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವುಗಳು ಹೆಚ್ಚುತ್ತಿರುವ ಬಗ್ಗೆ ಒಂದೆಡೆ ಆತಂಕ ವ್ಯಕ್ತವಾಗುತ್ತಿದ್ದರೆ, ಈ ಆಸ್ಪತ್ರೆಗಳು ಇರುವುದರಿಂದಲೇ ಸಾವಿನ ಸಂಖ್ಯೆ ಹೆಚ್ಚಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದಾರೆ.
ಜಿಲ್ಲೆಯಲ್ಲಿ 26,62,839 ಮಂದಿಯ ತಪಾಸಣೆ ನಡೆಸಿದ್ದು, 1,28,379 ಮಂದಿ ಪಾಸಿಟಿವ್ ಆಗಿದೆ. ಇದರಲ್ಲಿ ಒಟ್ಟು 1,21,201 ಮಂದಿ ಆಸ್ಪತ್ರೆಗಳಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಜ.25ರಂದು 5455 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಪ್ರತಿದಿನ ಒಂದೆರಡು ಮಂದಿ ಸಾವನ್ನಪ್ಪುತ್ತಿದ್ದಾರೆ. ಮಂಗಳವಾರ ಒಂದೇ ದಿನ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಪಾಸಿಟಿವಿಟಿ ಪ್ರಮಾಣ ಶೇ.10.91 ಇದೆ. ಹೆಚ್ಚಿನವರು ತಪಾಸಣೆಗೆ ಹೋಗುತ್ತಿಲ್ಲ. ಪಾಸಿಟಿವಿಟಿ ಪ್ರಮಾಣ ತಗ್ಗಿಸಲು ಮತ್ತು ವ್ಯಾಕ್ಸಿನ್ ಕೊಡಿಸಲು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಶ್ರಮಿಸುತ್ತಿದೆ.
ಜಿಲ್ಲೆಯಲ್ಲಿಉತ್ತಮ ಆರೋಗ್ಯ ಸೇವೆ ಲಭಿಸುತ್ತಿರುವ ಹಿನ್ನೆಲೆಯಲ್ಲಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ರೋಗಿಗಳು ಕೂಡಾ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಚಿಕಿತ್ಸೆಗೆ ಮೊದಲು ತಪಾಸಣೆ ನಡೆಸಿದಾಗ, ಹೆಚ್ಚಿನವರ ವರದಿ ಪಾಸಿಟಿವ್ ಇರುತ್ತದೆ. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದಾಗ ಅದು ದಕ್ಷಿಣ ಕನ್ನಡದ ಲೆಕ್ಕಕ್ಕೆ ಬರುತ್ತದೆ.
ಡಾ. ಅಶೋಕ್, ಕೋವಿಡ್ ನೋಡಲ್ ಅಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ.
Read more
[wpas_products keywords=”deal of the day sale today offer all”]