Karnataka news paper

ಹಲವು ಬಿಜೆಪಿ, ಜೆಡಿಎಸ್ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿರುವುದು ನಿಜ; ಸ್ಪರ್ಧಿಸುವಂತೆ ಹಲವು ಕ್ಷೇತ್ರಗಳಿಂದ ನನಗೆ ಆಹ್ವಾನ: ಸಿದ್ದರಾಮಯ್ಯ


Online Desk

ಬಾಗಲಕೋಟೆ: ಇನ್ನೆರಡು ವಾರಗಳಲ್ಲಿ ಸಚಿವ ಸಂಪುಟ ಪುನರ್ರಚನೆಯಾಗದಿದ್ದರೆ ಸಚಿವಾಕಾಂಕ್ಷಿಗಳು ಬಿಜೆಪಿ ಬಿಟ್ಟು ಹೋಗುವುದು ಗ್ಯಾರಂಟಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಬಾಗಲಕೋಟೆಯಲ್ಲಿಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಅತೃಪ್ತ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಕಾಂಗ್ರೆಸ್ ಮತ್ತು ನನ್ನ ಸಂಪರ್ಕದಲ್ಲಿರುವುದು ನಿಜ.ಎಷ್ಟು ಜನ ಇದ್ದಾರೆ, ಯಾರ್ಯಾರು ಇದ್ದಾರೆ ಎಂದು ಹೇಳುವುದಿಲ್ಲ. ನಮ್ಮ ಪಕ್ಷದ ಸಿದ್ಧಾಂತವನ್ನು, ನಾಯಕತ್ವವನ್ನು ಒಪ್ಪಿಕೊಂಡು ಬರುವುದಾದರೆ ಬರಲಿ, ಸ್ವಾಗತ ಎಂದರು.

ಯಾರ್ಯಾರಿಗೆ ಯಾವ್ಯಾವಾಗ ಕೋಪ ಬರುತ್ತದೋ, ಯಾವಾಗ ಇಳಿಯುತ್ತದೋ ಯಾರಿಗೊತ್ತು, ನನಗಂತೂ ಕೋಪ ಬರುವುದಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆಗಳನ್ನು ಸಹಿಸಬೇಕು ಎಂದು ಹಾಸ್ಯಚಟಾಕಿ ಹಾರಿಸಿದರು.

ಹಲವು ಕ್ಷೇತ್ರಗಳಿಂದ ಕರೆಯುತ್ತಿದ್ದಾರೆ: ಇನ್ನು ತಾವು 2023ರ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದಲೋ ಅಥವಾ ಬೇರೆ ಕ್ಷೇತ್ರದಿಂದ ಸ್ಪರ್ಧಿಸುತ್ತೀರಾ ಎಂದು ಕೇಳಿದ್ದಕ್ಕೆ ಹಲವು ಕ್ಷೇತ್ರಗಳಿಂದ ನನಗೆ ಕರೆಯುತ್ತಿದ್ದಾರೆ. ಬಾದಾಮಿಯಲ್ಲಿ, ಚಾಮರಾಜಪೇಟೆಯಲ್ಲಿ, ಕೋಲಾರ, ಹುಣಸೂರು, ಚಿಕ್ಕನಾಯಕನಹಳ್ಳಿಯಲ್ಲಿ ಕರೆಯುತ್ತಾರೆ, ಅಂತಿಮವಾಗಿ ಹೈಕಮಾಂಡ್ ಎಲ್ಲಿ ನಿಲ್ಲಬೇಕು ಎಂದು ಸೂಚನೆ ನೀಡುತ್ತಾರೋ ಅಲ್ಲಿಂದ ಸ್ಪರ್ಧಿಸುತ್ತೇನೆ ಎಂದರು.

ಇದನ್ನೂ ಓದಿ: ಬಿಜೆಪಿ, ಜೆಡಿಎಸ್‌ನಿಂದ ಹೆಚ್ಚಿನ ನಾಯಕರು ಕಾಂಗ್ರೆಸ್ ಸೇರಲು ಕಾಯುತ್ತಿದ್ದಾರೆ: ಸಿದ್ದರಾಮಯ್ಯ

ಸಿದ್ದರಾಮಯ್ಯನವರು ಇಂದು ಬಾದಾಮಿ ಚಾಲುಕ್ಯರ ಪ್ರಸಿದ್ಧ ದೊರೆ ಇಮ್ಮಡಿ ಪುಲಿಕೇಶಿ ಮತ್ತು ಹನ್ನೆರಡನೆ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ ಜಗಜ್ಯೋತಿ ಬಸವೇಶ್ವರರ ಪ್ರತಿಮೆ ಬಾದಾಮಿ ಪಟ್ಟಣದಲ್ಲಿ ಶೀಘ್ರವೇ ಸ್ಥಾಪನೆಯಾಗಲಿದ್ದು, ಈ ಸಂಬಂಧ ಪ್ರತಿಮೆಗಳ ಕೆತ್ತನೆ ಕೆಲಸ ನಡೆಯುತ್ತಿರುವ ಸ್ಥಳಕ್ಕೆ ಭೇಟಿನೀಡಿ ಕೆತ್ತನೆ ಕಾರ್ಯ ವೀಕ್ಷಿಸಿದರು. ನಂತರ ಬಾದಾಮಿಯಲ್ಲಿ ಇಂದು ಎಸ್.ಸಿ.ಪಿ / ಟಿ.ಎಸ್.ಪಿ ಯೋಜನೆಯಡಿ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಹ ಚಾಲನೆ ನೀಡಿದರು.



Read more

[wpas_products keywords=”deal of the day”]