The New Indian Express
ಉಡುಪಿ: ಸೋಮವಾರ ನಿರೀಕ್ಷೆಗಿಂತ ಕಡಲು ಹೆಚ್ಚು ಪ್ರಕ್ಷುಬ್ಧವಾಗಿದ್ದರೂ ಅಬ್ಬರದ ಅಲೆಗಳಿಗೆ ಎದೆಯೊಡಿದ್ದ 66 ವರ್ಷದ ಈಜುಪಟು ಗಂಗಾಧರ್ ಜಿ ಕಡೆಕರ್ ಅವರು ಕೈಗೆ ಕೋಳ, ಕಾಲಿಗೆ ಸರಪಳಿ ಬಿಗಿದುಕೊಂಡು ಐದುವರೆ ಗಂಟೆಯಲ್ಲಿ 3.5 ಕಿ.ಮೀ ಈಜಿ ಹೊಸ ದಾಖಲೆ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತಮ್ಮ ಹೆಸರು ಸೇರಿಸಿದ್ದಾರೆ.
ಗಂಗಾಧರ್ ಅವರು ಪಡುಕೆರೆಯಿಂದ 3.5 ಕಿಲೋಮೀಟರ್ ದೂರವನ್ನು ಐದು ಗಂಟೆ 35 ನಿಮಿಷಗಳಲ್ಲಿ ಕ್ರಮಿಸಿದರು. ಕೈಗೆ ಕೋಳ ಹಾಕಿಕೊಂಡು, ಕಾಲಿಗೆ ಸರಪಳಿ ಬಿಗಿದುಕೊಂಡು ಈಜುವ ಮೂಲಕ ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂದು ಸಾಬೀತು ಮಾಡಿದ್ದಾರೆ.
ಇದನ್ನು ಓದಿ: 7 ವರ್ಷದ ಬಾಲಕಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ: ಪ್ರವಾಹ ಸಂದರ್ಭದಲ್ಲಿ ಜೀವ ಉಳಿಸುವ ಮನೆ ಸಂಶೋಧನೆ
ಸಾರಿಗೆ ಇಲಾಖೆಯ ಮಾಜಿ ಉದ್ಯೋಗಿಯಾಗಿದ್ದ ಗಂಗಾಧರ್ ಅವರು 50 ವರ್ಷ ವಯಸ್ಸಿನವರಾಗಿದ್ದಾಗ ಈಜಲು ಕಲಿತರು. ಸೋಮವಾರ ಗಂಗಾಧರ್ ಅವರ ಈ ಸಾಧನೆಗೆ ಅನೇಕ ಉತ್ಸಾಹಿಗಳು ಬೆಂಬಲಿಸಿದರು.
ಗಂಗಾಧರ್ ಅವರು ಬೆಳಗ್ಗೆ 7.50ಕ್ಕೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನ ವೀಕ್ಷಕರು ಮತ್ತು ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರ ಸಮ್ಮುಖದಲ್ಲಿ ಕೈಗೆ ಕೋಳ, ಕಾಲಿಗೆ ಸರಪಳಿ ಬಿಗಿದು ಸಮುದ್ರಕ್ಕೆ ಧುಮುಕಿದರು. 1,775 ಮೀಟರ್ ದೂರ ಹೋಗಿ ಅದೇ ರೀತಿ ಹಿಂದಕ್ಕೆ ಮಧ್ಯಾಹ್ನ ಸುಡುಬಿಸಿಲಿನ 1.25ಕ್ಕೆ ದಡ ಸೇರಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗಂಗಾಧರ್ ಕಡೆಕರ್ ಅವರು, ಎರಡೂ ಕೈ ಕಾಲುಗಳಿಗೆ ಸಂಕೋಲೆ ಹಾಕಿದ್ದರಿಂದ ಡಾಲ್ಫಿನ್ ನಂತೆ ಈಜುತ್ತಿದ್ದೆ. ”ನಿರೀಕ್ಷೆಗಿಂತ ಕಡಲು ಹೆಚ್ಚು ಪ್ರಕ್ಷುಬ್ಧವಾಗಿದ್ದರಿಂದ ಈಜಲು ಸಾಕಷ್ಟು ಹರಸಾಹಸ ಪಡಬೇಕಾಯಿತು. ಆದರೆ ನನ್ನ ಆತ್ಮಸ್ಥೈರ್ಯ ನನ್ನ ನೆರವಿಗೆ ಬಂತು. ಹಲವು ಮಕ್ಕಳಿಗೆ ಈಜು ತರಬೇತಿ ನೀಡುತ್ತಿರುವುದರಿಂದ ಮಕ್ಕಳಿಗೆ ಸ್ಫೂರ್ತಿಯಾಗುವಂತೆ ಈ ದಾಖಲೆ ನಿರ್ಮಿಸಿದ್ದೇನೆ. ಮಕ್ಕಳಿಗೆ ಈಜು ಬಲು ಸವಾಲಿನ ಸಂಗತಿ’’ ಎಂದು ಹೇಳಿದರು.
ಗಂಗಾಧರ್ ಅವರು ಕಳೆದ ವರ್ಷ ಜನವರಿ 24 ರಂದು ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು 1.40 ಕಿ.ಮಿ. ಬ್ರೆಸ್ವ್ ಸ್ಟ್ರೋಕ್ ಶೈಲಿಯಲ್ಲಿ ಸಮುದ್ರದಲ್ಲಿ ಈಜಿ ಇಂಡಿಯನ್ ಬುಕ್ ಆಫ್ ರೆಕಾಡ್ಸ್‌ನಲ್ಲಿ ತಮ್ಮ ಹೆಸರು ದಾಖಲಿಸಿದ್ದರು.
Read more
[wpas_products keywords=”deal of the day”]