Online Desk
ಮಂಗಳೂರು: ‘ಕರಾವಳಿ ಭಾಗದ ಭಗೀರಥ’ ಎಂದೇ ಖ್ಯಾತಿ ಗಳಿಸಿರುವ ಬಂಟ್ವಾಳ ತಾಲ್ಲೂಕಿನ ಅಡ್ಯನಡ್ಕ ಸಮೀಪದ ಅಮೈ ಮಹಾಲಿಂಗ ನಾಯ್ಕ (76 ವರ್ಷ) ಅವರು ಕೃಷಿ ಕ್ಷೇತ್ರದ ಸಾಧನೆಗಾಗಿ 2022ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೃಷಿಗೆ ನೀರು ಹಾಯಿಸಲು ಪಂಪ್ ಸೆಟ್‌ಗಳ ಸೌಲಭ್ಯಗಳೇ ಇಲ್ಲದ ಕಾಲದಲ್ಲಿ ಹಿಂದಿನ ತಲೆಮಾರಿನವರು ಅವಲಂಬಿಸಿದ್ದ ಸುರಂಗ ನೀರಿನ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು, ಇದೇ ವ್ಯವಸ್ಥೆಯಲ್ಲಿ ವಿದ್ಯುತ್ ರಹಿತವಾಗಿ ಗುರುತ್ವಾಕರ್ಷಣೆಯ ನೆರವಿನಲ್ಲಿ ಕೃಷಿಗೆ ತುಂತುರು ನೀರಾವರಿ, ಹನಿ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿರುವ ಅವರು, ಏಕಾಂಗಿಯಾಗಿ ಏಳು ಸುರಂಗಗಳನ್ನು ಕೊರೆದು ‘ಆಧುನಿಕ ಭಗೀರಥ’ ಎನಿಸಿಕೊಂಡಿದ್ದಾರೆ.
ಸ್ವತಃ ಸುರಂಗ ಕೊರೆದು ತನ್ನ ಕೃಷಿ ಭೂಮಿಗೆ ನೀರು ತರಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ್ ಅವರಿಗೆ ಪದ್ಮ ಪ್ರಶಸ್ತಿ ಲಭಿಸಿದ್ದು ಅವರಿಗೆ ಅಭಿನಂದನೆಗಳು.#PadmaAwards pic.twitter.com/vtLy0Cc9VW
— Basavaraj S Bommai (@BSBommai) January 25, 2022
ಅಡಿಕೆ, ತೆಂಗಿನ ಮರ ಏರುವುದರಲ್ಲಿ ಪರಿಣತಿ ಹೊಂದಿದ್ದ ಕೃಷಿ ಕೂಲಿ ಕಾರ್ಮಿಕರಾಗಿದ್ದ ಮಹಾಲಿಂಗ ನಾಯ್ಕ ಅವರು 40 ವರ್ಷಗಳ ಹಿಂದೆ ಕೃಷಿಕರ ತೋಟಗಳಲ್ಲಿ ದುಡಿಯುವಾಗ ಸ್ವಂತ ತೋಟ ಮಾಡುವ ಸ್ವಾವಲಂಬಿ ಜೀವನದ ಕನಸು ಕಂಡಿದ್ದರು. ಆದರೆ, ಅದಕ್ಕಾಗಿ ಅವರಲ್ಲಿ ಜಮೀನು ಇರಲಿಲ್ಲ. ಭೂಮಾಲೀಕ ಅಮೈ ಮಹಾಬಲ ಭಟ್ಟರ ತೋಟಕ್ಕೆ ದಿನಗೂಲಿ ಕೆಲಸಕ್ಕೆ ಹೋಗುತ್ತಿದ್ದರು. ಮುಂದೊಂದು ದಿನ ಅವರ ಮಾಲೀಕ ಮಹಾಬಲ ಭಟ್ ಅವರು ಮಹಾಲಿಂಗ ನಾಯ್ಕರಿಗೆ ಎರಡು ಎಕರೆ ಜಮೀನು ನೀಡಲು ಒಪ್ಪಿಕೊಂಡರು. 1978ರಲ್ಲಿ ಮಹಾಬಲ ಭಟ್ಟರ ಬೆಂಬಲದಿಂದಾಗಿ ಎರಡು ಎಕರೆ ಗುಡ್ಡ ‘ದರ್ಖಾಸ್ತು’ ರೂಪದಲ್ಲಿ ಮಹಾಲಿಂಗ ನಾಯ್ಕರಿಗೆ ಪ್ರಾಪ್ತವಾಯಿತು.
ಒಂದು ಎಕರೆಯಲ್ಲಿ ಅಡಿಕೆ, ತೆಂಗು, ಬಾಳೆ, ಕಾಳುಮೆಣಸಿನ ಕೃಷಿ ಕೈಗೊಂಡರು. ಇನ್ನೊಂದು ಎಕರೆಯಲ್ಲಿ ಕಾಡು ಬೆಳೆಸಿದ್ದು, ಇದೇ ಭೂಮಿಯಲ್ಲಿ ಗೇರು ಕೃಷಿಯನ್ನೂ ಮಾಡಿದ್ದರು. ಮಣ್ಣಿನ ಟ್ಯಾಂಕಿಯಿಂದ ವಿದ್ಯುತ್‌ನ ಖರ್ಚಿಲ್ಲದೆ ಗುರುತ್ವ ಶಕ್ತಿಯೊಂದಿಗೆ ಅಡಿಕೆ, ತೆಂಗು ಮತ್ತು ಬಾಳೆ ಗಿಡಗಳಿಗೆ ನೀರು ಉಣಿಸುತ್ತಿದ್ದಾರೆ. ಅವರ ತೋಟದಲ್ಲಿ 300 ಅಡಿಕೆ, 75 ತೆಂಗು, 200 ಬಾಳೆ ಗಿಡಗಳಿದ್ದು, ಅವುಗಳಿಗೆ ಹಟ್ಟಿಗೊಬ್ಬರ, ಕಾಂಪೋಸ್ಟ್ ಹೊರತು ಬೇರೆ ಯಾವುದೇ ಗೊಬ್ಬರ ಅವರು ಬಳಕೆ ಮಾಡುವುದಿಲ್ಲ. ಬೇರೆ ಗೊಬ್ಬರಗಳ ಬಗ್ಗೆ ಅವರಿಗೆ ಗೊತ್ತಿಲ್ಲ.
ಜಮೀನಿನಲ್ಲಿ ಇಂಗು ಗುಂಡಿಗಳ ಮೂಲಕ ನೀರು ಸಂಗ್ರಹ ಮಾಡುತ್ತಾರೆ. ಸುರಂಗ ಕೊರೆದು ನೀರು ತರಿಸುವ ಅವರ ಐದು ಪ್ರಯತ್ನಗಳೂ ವಿಫಲವಾದಾಗ ಧೃತಿಗೆಡದೆ 6ನೇ ಸುರಂಗ ಕೊರೆದು ನೀರು ಗಳಿಸಿದ ಭಗೀರಥ ಅವರು. ಸುರಂಗದ ನೀರನ್ನು ಸಂಗ್ರಹಿಸಲು ಮಣ್ಣಿನ ಟ್ಯಾಂಕ್ ನಿರ್ಮಿಸಿ, ಗುಡ್ಡವನ್ನು ಸಮತಟ್ಟು ಮಾಡಿ ಕೃಷಿ ಮಾಡಿದ ಸಾಹಸಿ ಮಹಾಲಿಂಗ. ಅವರ ಏಕಾಂಗಿ ಸಾಧನೆಯ ವರದಿಯನ್ನು ದೂರದರ್ಶನ ವಾಹಿನಿಯು ತನ್ನ ‘ವಾಟರ್ ವಾರಿಯರ್’ ಸರಣಿಯಲ್ಲಿ ಬಿತ್ತರಿಸಿದೆ.
ಮಹಾಲಿಂಗ ನಾಯ್ಕರ ಸಾಧನೆಯನ್ನು ಗುರುತಿಸಿ ಮಂಗಳೂರು ಪ್ರೆಸ್ ಕ್ಲಬ್‍ನಿಂದ ‘ವರ್ಷದ ಪ್ರಶಸ್ತಿ’ಯನ್ನು 2018ರಲ್ಲಿ ನೀಡಲಾಗಿದೆ. ಅಲ್ಲದೆ, ಮರಾಠಿ ಸೇವಾ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿನಿಂದ ಸನ್ಮಾನಿಸಲಾಗಿದೆ. ವಾರಾಣಾಸಿ ಪ್ರತಿಷ್ಠಾನದ ವತಿಯಿಂದ ‘ವರ್ಷದ ವ್ಯಕ್ತಿ’ ಪ್ರಶಸ್ತಿ ಬಂದಿದೆ. ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ‘ಕೃಷಿ ಪಂಡಿತ ಪ್ರಶಸ್ತಿ’ ಲಭಿಸಿದೆ.
ಅವರಿಗೆ ಪತ್ನಿ ಲಲಿತಾ ಮತ್ತು ಮೂವರು ಮಕ್ಕಳಿದ್ದಾರೆ.
Karnataka’s ‘Single Man Army’ who dug tunnels to source water – Shri Amai Mahalinga Naik gets Padma Shri in the field of agriculture. Kudos to son of the soil!#PadmaAwards
— Basavaraj S Bommai (@BSBommai) January 25, 2022
ಸಿಎಂ ಬೊಮ್ಮಾಯಿ ಅಭಿನಂದನೆ
ಇನ್ನು ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದ ಅಮೈ ಮಹಾಲಿಂಗ ನಾಯ್ಕ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ‘ಸ್ವತಃ ಸುರಂಗ ಕೊರೆದು ತನ್ನ ಕೃಷಿ ಭೂಮಿಗೆ ನೀರು ತರಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ್ ಅವರಿಗೆ ಪದ್ಮ ಪ್ರಶಸ್ತಿ ಲಭಿಸಿದ್ದು ಅವರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.
Read more
[wpas_products keywords=”deal of the day”]