Karnataka news paper

ಕುಮಟಾದಲ್ಲಿ ಹೆದ್ದಾರಿ ಅಕ್ಕಪಕ್ಕದ ನಿವಾಸಿಗಳಿಗೆ ಕಂಟಕವಾದ ಗ್ಯಾಸ್ ಟ್ಯಾಂಕರ್‌ಗಳು..!


ಹೈಲೈಟ್ಸ್‌:

  • ಕುಮಟಾ ಜನತೆಯ ನಿದ್ದೆಗೆಡಿಸಿದ ಗ್ಯಾಸ್ ಟ್ಯಾಂಕರ್ ಅವಘಡ
  • ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಜನರಿಗೆ ಆತಂಕ
  • ಅಗ್ನಿಶಾಮಕ ದಳ ಹಾಗೂ ಪೊಲೀಸರು ತುರ್ತು ಕಾರ್ಯಾಚರಣೆ

ಉತ್ತರ ಕನ್ನಡ: ಅದ್ಯಾಕೋ ಏನೋ, ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಜನತೆಗೆ ಟ್ಯಾಂಕರ್ ಗಂಡಾಂತರ ಕಾಡುತ್ತಿದೆ. ತಿಂಗಳಲ್ಲಿ ಒಂದಲ್ಲಾ ಒಂದು ಟ್ಯಾಂಕರ್ ಅವಘಡ ಈ ಭಾಗದಲ್ಲಿ ಸಂಭವಿಸುತ್ತಿರುವುದು ಇಲ್ಲಿನ ಜನತೆಯ ನಿದ್ರೆಗೆಡಿಸಿದೆ.

ಹೌದು, ಮಂಗಳವಾರ ಕೂಡ ಬೆಳ್ಳಂಬೆಳಗ್ಗೆ ಗ್ಯಾಸ್ ಟ್ಯಾಂಕರ್ ಒಂದು ಪಲ್ಟಿಯಾಗಿದೆ. ಮಂಗಳೂರಿನಿಂದ ಅಂಕೋಲಾ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳುತ್ತಿದ್ದ ಅನಿಲ ತುಂಬಿದ್ದ ಟ್ಯಾಂಕರ್, ಕುಮಟಾ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 66ರ ಹೊನ್ಮಾಂವ್ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಪಲ್ಟಿಯಾದ ರಭಸಕ್ಕೆ ಟ್ಯಾಂಕರ್‌ನಲ್ಲಿ ಗ್ಯಾಸ್ ಲೀಕೇಜ್ ಕಂಡು ಬಂದಿದ್ದು, ಇದರಿಂದಾಗಿ ಕುಮಟಾ ಪಟ್ಟಣದಲ್ಲಿ ಆತಂಕ ಮನೆ ಮಾಡಿತ್ತು. ವಿಷಯ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸುತ್ತಮುತ್ತಲಿನ ಮನೆಗಳಿಗೆ ತೆರಳಿ, ದೀಪ, ಲೈಟರ್‌ನಂಥ ಯಾವುದೇ ಬೆಂಕಿ ಹೊತ್ತಿಸುವಂಥ ವಸ್ತುಗಳನ್ನು ಬಳಸದಂತೆ ಎಚ್ಚರಿಕೆ ನೀಡಿದರು.

ಬಳಿಕ ಜಂಟಿಯಾಗಿ ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಎಂ. ಸೀಲ್ ಬಳಸಿ ಗ್ಯಾಸ್ ಲೀಕೇಜ್ ಅನ್ನು ತಡೆಯಲಾಗಿದೆ. ನಂತರ ಟ್ಯಾಂಕರ್ ಅನ್ನು ಕ್ರೇನ್ ಬಳಸಿ ಮೇಲಕ್ಕೆತ್ತುವ ಕಾರ್ಯ ನಡೆಸಲಾಯ್ತು.

ಭಟ್ಕಳದಲ್ಲಿ ಸುಳ್ಳು ಮರಣ ದಾಖಲೆ ಪತ್ರ ಸೃಷ್ಟಿಸಿ 5 ಕೋಟಿ ವಿಮೆ ಹಣ ಲಪಟಾಯಿಸಲು ಯತ್ನ
ಈ ರೀತಿ ತಿಂಗಳ ಅಂತರದಲ್ಲಿ ಕುಮಟಾ ಪಟ್ಟಣದಲ್ಲಿ ನಡೆದ ಎರಡನೇ ಟ್ಯಾಂಕರ್ ಪಲ್ಟಿ ಇದಾಗಿದೆ. ಟ್ಯಾಂಕರ್ ಕಂಪನಿಗಳಾಗಲಿ, ಚಾಲಕರಾಗಲಿ ಅನಿಲ ಸಾಗಾಟದ ವೇಳೆ ನಿಯಮಗಳನ್ನ ಪಾಲನೆ ಮಾಡುತ್ತಿಲ್ಲ. ರಾತ್ರಿಯ ವೇಳೆ ಹೆದ್ದಾರಿಗಳಲ್ಲಿ ಅನಿಲ ಸಾಗಾಟಕ್ಕೆ ನಿರ್ಬಂಧವಿದ್ದರೂ ಅದನ್ನು ಮೀರುತ್ತಿರುವುದು ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದಿರುವುದು ಈ ಎಲ್ಲಾ ಅವಘಡಗಳಿಗೆ ಕಾರಣವಾಗಿದೆ. ಎನ್ನುತ್ತಾರೆ, ಸ್ಥಳೀಯ ಮೋಹನ್ ಉಪ್ಪಾರ್.

ಕಾರವಾರ: ವಾರಾಂತ್ಯ ಕರ್ಫ್ಯೂ ತೆರವಾದರೂ ಮಾರುಕಟ್ಟೆ ಖಾಲಿ, ತರಕಾರಿ, ಮೀನು ಮಾರ್ಕೆಟ್‌ ವ್ಯಾಪಾರ ಡಲ್‌
2015ರಲ್ಲಿ ಇದೇ ರೀತಿ ಕುಮಟಾದಲ್ಲಿ ನಡೆದ ಬರ್ಗಿ ಟ್ಯಾಂಕರ್ ದುರಂತದಲ್ಲಿ 13 ಜನ ಮೃತಪಟ್ಟಿದ್ದರು. ಈ ಘಟನೆ ಇನ್ನೂ ಕಣ್ಣ ಮುಂದಿರುವಾಗ ಮತ್ತೆ ಮತ್ತೆ ಟ್ಯಾಂಕರ್ ಗಳು ಅಲ್ಲಲ್ಲಿ ಪದೇ ಪದೇ ಪಲ್ಟಿಯಾಗುತ್ತಿರುವುದು ಕುಮಟಿಗರ ನಿದ್ದೆಗೆಡಿಸಿರುವುದಂತೂ ಸುಳ್ಳಲ್ಲ.

ಉತ್ತರ ಕನ್ನಡ: ಕೊರೊನಾ ಸೋಂಕಿತರಾದವರಿಗಿಂತ ಗುಣಮುಖರಾದವರೇ ಹೆಚ್ಚು



Read more

[wpas_products keywords=”deal of the day sale today offer all”]