Karnataka news paper

ಕಾಂಗ್ರೆಸ್‌ನಿಂದ ಖರ್ಗೆ ಕಡೆಗಣನೆ: ಬಿಜೆಪಿ ಆರೋಪ


ಬೆಂಗಳೂರು: ಉತ್ತರ ಪ್ರದೇಶದ ಸ್ಟಾರ್‌ ಪ್ರಚಾರಕರ ಪಟ್ಟಿಯಿಂದ ಕೈಬಿಟ್ಟು ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್‌ ಕಡೆಗಣಿಸಿದೆ ಎಂದು ಬಿಜೆಪಿ ಆರೋಪಿಸಿದೆ.

ಈ ಬಗ್ಗೆ ಮಂಗಳವಾರ ಟ್ವೀಟ್‌ ಮಾಡಿರುವ ಬಿಜೆಪಿ, ‘ರಾಜ್ಯದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಉತ್ತರ ಪ್ರದೇಶ ಚುನಾವಣಾ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೈ ಬಿಡಲಾಗಿದೆ. ದಲಿತ ನಾಯಕ ಎಂದರೆ ಕಾಂಗ್ರೆಸ್ ಪಕ್ಷಕ್ಕೆ ಅಷ್ಟೊಂದು ಹಗುರವೇ?’ ಎಂದು ಪ್ರಶ್ನಿಸಿದೆ.

‘ಉತ್ತರ ಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್ ವರಿಷ್ಠರು ಖರ್ಗೆ ಅವರ ಹಿರಿತನ, ಅನುಭವವನ್ನು ಕಡೆಗಣನೆ ಮಾಡಿದ್ದಾರೆ. ನಕಲಿ ಗಾಂಧಿ‌ ಕುಟುಂಬಕ್ಕೆ ನಿಷ್ಠರಾಗಿದ್ದರೂ ಎಲ್ಲಿಂದಲೋ ಬಂದ ಹಾರ್ದಿಕ್‌, ಕನ್ಹಯ್ಯಗೆ ನೀಡಿದ ಗೌರವದಷ್ಟೂ ಖರ್ಗೆಯವರಿಗೆ ನೀಡಿಲ್ಲ. ಇದು ದಲಿತ ನಾಯಕನಿಗೆ ಅವಮಾನವಲ್ಲದೆ ಮತ್ತೇನು?’ ಎಂದು ಬಿಜೆಪಿ ಹೇಳಿದೆ.

‘ರಾಜ್ಯದಲ್ಲಿ ದಲಿತ ನಾಯಕರನ್ನು ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸುತ್ತೇವೆ ಎಂಬ ಭರವಸೆಯನ್ನು ಕಾಂಗ್ರೆಸ್ ವರಿಷ್ಠರು ಇದುವರೆಗೆ ನೀಡಿಲ್ಲ. ಪರಮೇಶ್ವರ್ ಅಥವಾ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಘೋಷಣೆಯ ನಿರೀಕ್ಷೆ ಮಾಡಲು ಸಾಧ್ಯವೇ? ದಲಿತ ವಿರೋಧಿ ಕಾಂಗ್ರೆಸ್ ಪಕ್ಷದಿಂದ ಇದು ಅಸಾಧ್ಯ’ ಎಂದು ಕಾಂಗ್ರೆಸ್‌ ಅನ್ನು ಬಿಜೆಪಿ ಮೂದಲಿಸಿದೆ.

ತನ್ನೆಲ್ಲ ಟ್ವೀಟ್‌ಗಳಿಗೆ ಬಿಜೆಪಿಯು ‘ದಲಿತ ವಿರೋಧಿ ಕಾಂಗ್ರೆಸ್‌’ ಎಂಬ ಹ್ಯಾಷ್‌ಟ್ಯಾಗ್‌ ಸೇರಿಸಿದೆ.

ಉತ್ತರ ಪ್ರದೇಶ ಚುನಾವಣೆಗೆ ಕಾಂಗ್ರೆಸ್‌ ಪಕ್ಷವು ಸೋಮವಾರ ಸ್ಟಾರ್‌ ಪ್ರಚಾರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಅದರಲ್ಲಿ ರಾಜ್ಯಸಭೆಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸ್ಥಾನ ಸಿಕ್ಕಿಲ್ಲ.



Read more from source

[wpas_products keywords=”deal of the day sale today kitchen”]