ಹೈಲೈಟ್ಸ್:
- ಮಾವು ಹಣ್ಣುಗಳ ರಾಜ ಎಂದೇ ಪರಿಗಣಿಸಲ್ಪಟ್ಟಿದೆ
- ದೇಶದಲ್ಲಿ ಒಟ್ಟು 2,309 ಸಾವಿರ ಹೆಕ್ಟೇರ್ ಭೂಪ್ರದೇಶದಲ್ಲಿ ಬೆಳೆಯಲಾಗುತ್ತೆ
- ವಾರ್ಷಿಕ 12,750 ಸಾವಿರ ಮೆಟ್ರಿಕ್ ಟನ್ ಮಾವು ಉತ್ಪಾದನೆ ಆಗುತ್ತೆ
ಕುಂದಾಪುರ (ಉಡುಪಿ): ಮುಂಗಾರು ನಂತರವೂ ಮಳೆ ಮುಂದುವರಿಕೆ ಹಲವು ವಾಣಿಜ್ಯ ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿರುವ ಬೆನ್ನಲ್ಲೇ, ಇದೀಗ ಮಾವು ಆತಂಕಕ್ಕೆ ಸಿಲುಕಿದೆ. ಹೂವು ಬಿಡುವ ಹೊತ್ತಲ್ಲಿ ಅಕಾಲಿಕ ಮಳೆಯಾಗಿದ್ದು ಫಸಲಿಗೆ ಕೊಕ್ಕೆ ಬೀಳುವ ಭೀತಿ ವಕ್ಕರಿಸಿದೆ.
ಕಳೆದ ಭಾನುವಾರ ರಾತ್ರಿ ಕುಂದಾಪುರದ ಹಲವೆಡೆ ಅಕಾಲಿಕ ಮಳೆಯಾಗಿದೆ. ಅರ್ಧ ತಾಸಿಗೂ ಮಿಕ್ಕಿ ಮಳೆ ಸುರಿದಿದ್ದು ಚಿಗುರೊಡೆಯುತ್ತಿರುವ ಮತ್ತು ಬಲಿಯುತ್ತಿರುವ ಹೂವುಗಳು ಆಪತ್ತಿಗೆ ಸಿಲುಕುವಂತಾಗಿದೆ. ವಿಪರೀತ ಹಿಮ, ಮೋಡ ಕವಿದ ವಾತಾವರಣ ನೆಲೆಗೊಂಡಿರುವುದರಿಂದ ಮಾವು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಮಳೆ ಹಾನಿಕಾರಕ: ಉಷ್ಣ ವಲಯದ ಹಣ್ಣು ಎಂದು ಖ್ಯಾತಿವೆತ್ತಿರುವ ಮಾವು ಉಪೋಷ್ಣ ವಲಯದಲ್ಲಿಯೂ ಯಶಸ್ವಿಯಾಗಿದೆ. ಹಿತಮಿತವಾದ ವಾತಾವರಣ ಮಾವು ಬೆಳವಣಿಗೆಗೆ ಪೂರಕ. ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಹೂವು ಅರಳುವ ಪ್ರಕ್ರಿಯೆ ಸಹಜವಾಗಿ ಆರಂಭಗೊಳ್ಳುವಂತಿದ್ದರೂ ಈ ಬಾರಿ ಎಲ್ಲೆಡೆ ಜನವರಿ ಮಾಸದಲ್ಲೇ ಮಾವಿನ ಹೂವು ಅರಳುವಿಕೆ ಕಂಡುಬಂದಿದೆ. ಮೂರು ತಿಂಗಳಲ್ಲೇ ಫಸಲು ಕೈ ಸೇರುವ ಮಾವಿನ ಹೂವಿಗೆ ವಿಪರೀತ ಚಳಿ ಮತ್ತು ಮಳೆ ಹಾನಿಕಾರಕ ಎಂದು ಪರಿಗಣಿಸಲಾಗಿದೆ. ಮಳೆಯಿಂದಾಗಿ ಹೂವು ಉದುರುವ ಅಥವಾ ಸತ್ವಹೀನವಾಗುವ ಸಂಭವ ಹೆಚ್ಚು. ಆಹಾರ, ಔಷಧ, ಪಾನೀಯ ಸಹಿತ ಹಲವು ಬಗೆಯ ಖಾದ್ಯಗಳಿಗೆ ಸಲ್ಲುವ ಮಾವಿಗೆ ಅಕಾಲಿಕ ಮಳೆ ಕಂಟಕವಾಗುವ ಆತಂಕ ಮೂಡಿದ್ದು ಬೆಳೆಗಾರರು ಚಿಂತೆಗೊಳಗಾಗಿದ್ದಾರೆ.
ಕಂಟಕ: ತಾಲೂಕಿನ ಹಲವೆಡೆ ಭಾನುವಾರ ರಾತ್ರಿ ಮಳೆಯಾಗಿದೆ. ಕೆಲವು ಕಡೆಗಳಲ್ಲಿ ಲಘು ಮಳೆಯಾದರೆ ಇನ್ನೂ ಹಲವೆಡೆ ಅರ್ಧ ತಾಸು ಉತ್ತಮ ಮಳೆಯಾಗಿದೆ. ಅಕಾಲಿಕ ಮಳೆ ಮಾವಿಗೆ ಕಂಟಕ. ಈ ಬಾರಿ ಉತ್ತಮ ಹೂವು ಅರಳುವಿಕೆ ಎಲ್ಲೆಡೆ ಕಂಡು ಬಂದಿದೆ. ಮಳೆ, ಮೋಡ ಹೂವಿಗೆ ಹಾನಿಕಾರಕ ಜತೆಯಲ್ಲಿ ಗೇರಿಗೂ ಕಂಟಕಪ್ರಾಯವೆನಿಸಿದೆ ಎನ್ನುತ್ತಾರೆ, ಕೃಷಿಕ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ.
ಆಪತ್ತು ನಿವಾರಣೆಯಾಗಲಿ: ಈ ಬಾರಿ ವಾಣಿಜ್ಯ ಬೆಳೆಗಳಿಗೆ ಹವಾಮಾನ ವೈಪರೀತ್ಯ ಸವಾಲೊಡ್ಡಿದೆ. ಅಕಾಲಿಕ ಮಳೆ, ಮೋಡ, ವಿಪರೀತ ಚಳಿ ಮಾವು ಫಸಲಿನ ಮೇಲೂ ದುಷ್ಪರಿಣಾಮ ಬೀರಿದೆ. ಈ ಬಾರಿ ಅವಧಿಗೂ ಮೊದಲೇ ನಿರೀಕ್ಷೆಗೂ ಮೀರಿ ಮಾವು ಉತ್ತಮ ಹೂವು ಬಿಟ್ಟಿದೆ. ಕುಂದಾಪುರ ಮತ್ತು ಬೈಂದೂರು ವ್ಯಾಪ್ತಿಯಲ್ಲಿ ಒಟ್ಟು 85 ಹೆಕ್ಟೇರ್‌ನಷ್ಟು ಮಾವು ವಿಸ್ತರಿಸಿದೆ. ಎದುರಾಗಿರುವ ಆಪತ್ತು ನಿವಾರಣೆಯಾಗಲಿ ಎಂಬ ಆಶಯ ನಮ್ಮದು ಎನ್ನುತ್ತಾರೆ, ಕುಂದಾಪುರದ ತೋಟಗಾರಿಕೆ ಇಲಾಖಾಧಿಕಾರಿ ಮಧುಕರ.
ಹಣ್ಣುಗಳ ರಾಜ ಮಾವು..!
ಮಾವು ಹಣ್ಣುಗಳ ರಾಜ ಎಂದೇ ಪರಿಗಣಿಸಲ್ಪಟ್ಟಿದೆ. ದೇಶದ ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ಕೇರಳ, ಬಿಹಾರ, ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ಮಹಾರಾಷ್ಟ್ರ ಮತ್ತು ಗುಜರಾತ್‌ನ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ದೇಶದಲ್ಲಿ ಒಟ್ಟು 2,309 ಸಾವಿರ ಹೆಕ್ಟೇರ್ ಭೂಪ್ರದೇಶದಲ್ಲಿ ವಾರ್ಷಿಕ 12,750 ಸಾವಿರ ಮೆಟ್ರಿಕ್ ಟನ್ ಉತ್ಪಾದನೆ ಆಗುತ್ತಿದೆ. ಭಾರತ ಗುಣಮಟ್ಟದ ಮಾವು ಉತ್ಪಾದನೆಗೆ ಹೆಸರಾಗಿದೆ. ಉಷ್ಣ ವಲಯದ ಹಣ್ಣು ಇದಾದರೂ ಸಹ ಉಪೋಷ್ಣವಲಯದಲ್ಲಿಯೂ ಯಶಸ್ವಿಯಾಗಿದೆ. ಹೂಬಿಡುವ ಸಮಯದಲ್ಲಿ ಹಿಮ, ಮಳೆ ಹಾನಿಕಾರಕ. ತಾಪಮಾನ 22 – 27 ಡಿಗ್ರಿ ಸೆಲ್ಸಿಯಸ್ ಇದ್ದಾಗ ಗುಣಮಟ್ಟದ ಬೆಳವಣಿಗೆ ಕಾಣುತ್ತದೆ.
Read more
[wpas_products keywords=”deal of the day sale today offer all”]