Karnataka news paper

ಮಧ್ಯರಾತ್ರಿ ಮಹಿಳೆ ಜತೆ ಅಸಭ್ಯ ವರ್ತನೆ: ಬೆಂಗಳೂರಿನಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ ಬಂಧನ


ಹೈಲೈಟ್ಸ್‌:

  • ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆಮಾಡಿದ್ದ ಮಹಿಳೆ
  • ಮಹಿಳೆ ಪೊಲೀಸರೊಂದಿಗೆ ಸಂಭಾಷಿಸುವ ದೃಶ್ಯ ವೈರಲ್
  • ಮಹಿಳೆ ಇದ್ದ ಕಾರನ್ನು ಹಿಂಬಾಲಿಸುತ್ತಿದ್ದ ಆರೋಪಿ

ಬೆಂಗಳೂರು: ರಾತ್ರಿ ವೇಳೆ ಓಡಾಡುವ ಮಹಿಳೆಯರು, ಪ್ರೇಮಿಗಳು, ಯುವತಿಯರನ್ನೇ ಗುರಿಯಾಗಿಸಿಕೊಂಡು ಅವರನ್ನು ಹಿಂಬಾಲಿಸಿ ಅಸಭ್ಯವಾಗಿ ವರ್ತಿಸಿ ಅವರಲ್ಲಿ ಭಯ ಮೂಡಿಸಿ ವಿಕೃತ ಸಂತೋಷ ಪಡುತ್ತಿದ್ದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯೊಬ್ಬನನ್ನು ಬೆಂಗಳೂರಿನ ಅಮೃತ ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಿಹಾರ ಮೂಲದಿಂದ ಬಂದು ಎಂಎಸ್‌ ವ್ಯಾಸಂಗ ಮಾಡುತ್ತಿರುವ ವಿಜಯ್‌ ಭಾರದ್ವಾಜ್‌ ಬಂಧಿತ ಆರೋಪಿ. ಜಯ ನಗರದಲ್ಲಿ ವಾಸವಾಗಿರುವ ವಿಜಯ್‌, ಎಂಬಿಬಿಎಸ್‌ ವ್ಯಾಸಂಗ ಮುಗಿಸಿ ಕೆಂಪೇಗೌಡ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಸಂದರ್ಶನ ವೇಳೆ ಮಹಿಳಾ ಅಧಿಕಾರಿಗೆ ಖಾಸಗಿ ಅಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ ಐಟಿ ಉದ್ಯೋಗಾಕಾಂಕ್ಷಿ..!
ಏನಿದು ಘಟನೆ?

ಬನಶಂಕರಿ ನಿವಾಸಿ ದೀಪಾ ಎಂಬುವರು ಡಿಸೆಂಬರ್ 11 ರಂದು ತಮ್ಮ ಮಕ್ಕಳ ಜತೆ ಹೊಸ ಕೋಟೆಯ ಸಂಬಂಧಿಕರ ಮನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ಮುಗಿದ ಬಳಿಕ ತಡ ರಾತ್ರಿ ಬನಶಂಕರಿಯಲ್ಲಿರುವ ತಮ್ಮ ಮನೆಗೆ ವಾಪಸ್‌ ಆಗುತ್ತಿದ್ದರು. ಮಾರ್ಗಮಧ್ಯೆ ಹೆಬ್ಬಾಳದ ಬಳಿ ಅವರ ಕಾರಿನ ಟೈರ್‌ ಪಂಕ್ಚರ್‌ ಆಗಿತ್ತು. ಹಾಗಾಗಿ, ದೀಪಾ ಕಾರಿನಿಂದ ಇಳಿದು ಟೈರ್‌ ಬದಲಿಸುತ್ತಿದ್ದಾಗ ಅಪರಿಚಿತ ಕಾರೊಂದು ಇವರ ಪಕ್ಕ ಬಂದು ನಿಂತಿತ್ತು. ಆ ಕಾರಿನಲ್ಲಿದ್ದ ವ್ಯಕ್ತಿ, ದೀಪಾ ಅವರ ಪುತ್ರಿಗೆ ಅಸಭ್ಯವಾಗಿ ಪ್ರಶ್ನಿಸಿದ್ದ. ಅಲ್ಲದೇ, ದೀಪಾ ಅವರನ್ನು ಅಡ್ಡಗಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ.

ಈ ವೇಳೆ ಗಾಬರಿಗೊಂಡ ಸಂತ್ರಸ್ತೆ ಚೀರಾಡಿ ಆತನನ್ನು ಪಕ್ಕಕ್ಕೆ ತಳ್ಳಿ, ತಮ್ಮ ಕಾರು ಏರಿ ಹೊರ ವರ್ತುಲ ರಸ್ತೆ ಮೂಲಕ ಗೊರಗುಂಟೆಪಾಳ್ಯ ವೃತ್ತಕ್ಕೆ ಬಂದಿದ್ದರು. ಆರೋಪಿ ಅವರ ಕಾರು ಹಿಂಬಾಲಿಸಿಕೊಂಡೇ ಬರುತ್ತಿದ್ದ. ಗೊರಗುಂಟೆಪಾಳ್ಯದ ಬಳಿ ಮತ್ತೊಮ್ಮೆ ಕಾರು ಅಡ್ಡಗಟ್ಟಲು ಯತ್ನಿಸಿದ್ದ. ಇದರಿಂದ ಹೆದರಿದ ಮಹಿಳೆ, ಪೊಲೀಸ್‌ ನಿಯಂತ್ರಣ ಕೊಠಡಿ (112)ಗೆ ಕರೆ ಮಾಡಿ ಸಹಾಯ ಕೋರಿದ್ದರು. ಕೆಲ ನಿಮಿಷಗಳಲ್ಲೇ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದರು. ಪೊಲೀಸರನ್ನು ನೋಡಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದರು.

ನಟಿ ಸಂಯುಕ್ತಾ ಹೆಗಡೆ ಅಸಭ್ಯ ವರ್ತನೆ ಬಗ್ಗೆ ಸಾರ್ವಜನಿಕರ ಆರೋಪ: ಅಸಲಿ ಸತ್ಯವೇನು?
ಠಾಣೆಯಲ್ಲೇ ರಕ್ಷಣೆ ಪಡೆದ ಮಹಿಳೆ, ಮಕ್ಕಳು

ನಸುಕಿನ ಜಾವ 4 ಗಂಟೆಯಾಗಿದ್ದರಿಂದ ಮಹಿಳೆ ಹಾಗೂ ಮಕ್ಕಳನ್ನು ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ, ಆರ್‌ಎಂಸಿ ಯಾರ್ಡ್‌ ಠಾಣೆಗೆ ಕರೆದೊಯ್ದು ಮುಂಜಾನೆವರೆಗೂ ತಾಯಿ – ಮಕ್ಕಳಿಗೆ ಆಶ್ರಯ ನೀಡಿದ್ದರು. ಮರು ದಿನ ಅವರನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ. ಘಟನೆ ನಡೆದ ಸ್ಥಳ ಹಾಗೂ ಆ ಕಾರಿನ ನಂಬರ್‌ ನೀಡಿ ಅಮೃತಹಳ್ಳಿ ಠಾಣೆಗೆ ಮಹಿಳೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರಿನ ಸಂಖ್ಯೆ ಪರಿಶೀಲಿಸಿ ಹಾಗೂ ಸಿಗ್ನಲ್‌ಗಳಲ್ಲಿನ ಸಿಸಿ ಕ್ಯಾಮೆರಾ ವೀಕ್ಷಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.

ವಿಡಿಯೊ ವೈರಲ್‌

ಮಹಿಳೆ ಕಾರಿನಲ್ಲಿ ತೆರಳುತ್ತಿದ್ದಾಗ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಕರೆ ಮಾಡಿ ಸಂಭಾಷಣೆ ನಡೆಸುತ್ತಿರುವುದನ್ನು ಜತೆಗಿದ್ದವರು ವಿಡಿಯೋ ಮಾಡಿದ್ದರು. ಎದುರು ಕಾರಿನಲ್ಲಿದ್ದ ವ್ಯಕ್ತಿ ಇವರ ಕಾರಿನ ಸಮೀಪಕ್ಕೆ ಆಗಮಿಸುತ್ತಿರುವುದು, ಮಹಿಳೆ ಆತಂಕಗೊಂಡಿರುವುದು ಇದರಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಅಸಭ್ಯ ವರ್ತನೆ ಆರೋಪ: ಪ್ರಿಯಾಂಕಾ ಗಾಂಧಿ ಕ್ಷಮೆ ಕೇಳಿದ ಯುಪಿ ಪೊಲೀಸ್!



Read more