Karnataka news paper

ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ವಿಧಿಸಿರುವ ನಿರ್ಬಂಧ ತೆಗೆದುಹಾಕಿ: ಸಿದ್ದರಾಮಯ್ಯ


ಬೆಂಗಳೂರು: ‘ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲು ವಿಧಿಸಿರುವ ನಿರ್ಬಂಧಗಳನ್ನು ತೆಗೆದು ಹಾಕಬೇಕು. ರಾಗಿ, ಭತ್ತ ಮುಂತಾದ ಉತ್ಪನ್ನಗಳಿಗೆ ನಿಗದಿಗೊಳಿಸಿರುವ ಬೆಲೆಯನ್ನು ಹೆಚ್ಚಿಸಬೇಕು’ ಎಂದು ರಾಜ್ಯ ಸರ್ಕಾರವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ‌ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.‌

‘ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ರೈತರ ಉತ್ಪನ್ನಗಳನ್ನು ಖರೀದಿಸದಿದ್ದರೆ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ರೈತರು ಎಷ್ಟು ಕ್ವಿಂಟಾಲ್ ಖರೀದಿ ಕೇಂದ್ರಗಳಿಗೆ ತರುತ್ತಾರೊ ಅಷ್ಟನ್ನೂ ಖರೀದಿಸಬೇಕು. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಕೇವಲ 2.10 ಲಕ್ಷ ಟನ್ ಖರೀದಿಸಲು ವಿಧಿಸಿರುವ ನಿರ್ಬಂಧವನ್ನು ತೆಗೆದು ಹಾಕುವಂತೆ ಒತ್ತಾಯಿಸಬೇಕು. ಸ್ಥಗಿತಗೊಳಿಸಿರುವ ನೋಂದಣಿ ಕೇಂದ್ರಗಳನ್ನು ಕೂಡಲೆ ಮತ್ತೆ ಆರಂಭಿಸಬೇಕು’ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ದಕ್ಷಿಣ ಕರ್ನಾಟಕದ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು, ಚಾಮರಾಜನಗರ, ಬೆಂಗಳೂರು ನಗರ ಜಿಲ್ಲೆಗಳ ಪ್ರಮುಖ ಬೆಳೆಯಾದ ರಾಗಿ ಬೆಳೆಯುತ್ತಾರೆ. ಇಡೀ ವರ್ಷ ಪದೇ ಪದೇ ಸುರಿದ ಮಳೆಯ ನಡುವೆಯೂ ರಾಗಿ, ಭತ್ತ ಮುಂತಾದ ಬೆಳೆಗಳನ್ನು ಕೊಯಿಲು ಮಾಡಿ ರೈತರು ಮಾರುಕಟ್ಟೆಗೆ ತರುತ್ತಿದ್ದಾರೆ. ಸರ್ಕಾರವು ಈ ವರ್ಷ ಜನವರಿ 1 ರಿಂದ ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ನೋಂದಣಿ ಪ್ರಕ್ರಿಯೆ ಆರಂಭಿಸಿದೆ.

ಕೃಷಿ ಇಲಾಖೆಯ ಅಂದಾಜಿನ ಪ್ರಕಾರ ರೈತರು ಈ ವರ್ಷ ಸುಮಾರು 17.50 ಲಕ್ಷ ಎಕರೆ ಪ್ರದೇಶದಲ್ಲಿ ರಾಗಿ ಬೆಳೆದಿದ್ದಾರೆ. ಕೃಷಿ ಇಲಾಖೆಯ ದಾಖಲೆಗಳ ಪ್ರಕಾರ ಈ ಬಾರಿ ಕನಿಷ್ಟ ಅಂದರೂ 14–15 ಲಕ್ಷ ಟನ್ ಇಳುವರಿಯ ನಿರೀಕ್ಷೆ ಮಾಡಲಾಗಿದೆ. ಆದರೆ, ಅತಿವೃಷ್ಟಿಯ ಕಾರಣದಿಂದ ದೊಡ್ಡ ಮಟ್ಟದ ಬೆಳೆ ನಷ್ಟವಾಗಿತ್ತು. ಆದರೂ ರೈತರು ಬೆಂಬಲ ಬೆಲೆಯಡಿ ರಾಗಿಯನ್ನು ಮಾರಾಟ ಮಾಡಲು ಉತ್ಸಾಹ ತೋರಿಸುತ್ತಿದ್ದಾರೆ.

‘ಮಾತೆತ್ತಿದರೆ ರೈತರ ಆದಾಯ ದ್ವಿಗುಣಗೊಳಿಸಲಾಗುವುದು ಎಂದು ಮಾತನಾಡುವ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ, ಈ ಬಾರಿ ರಾಜ್ಯದ ರೈತರಿಂದ ಕೇವಲ 2.10 ಲಕ್ಷ ಟನ್ ರಾಗಿಯನ್ನು ಮಾತ್ರ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಸೂಚನೆಯನ್ನು ಆಧರಿಸಿ ರಾಜ್ಯದ ಬಿಜೆಪಿ ಸರ್ಕಾರ ರೈತರಿಂದ ರಾಗಿ ಖರೀದಿಸಲು ವಿಪರೀತ ನಿಬಂಧನೆಗಳನ್ನು ವಿಧಿಸಿದೆ. ಅದರಲ್ಲಿ ಒಬ್ಬ ರೈತರಿಂದ ಕೇವಲ 20 ಕ್ವಿಂಟಾಲ್ ರಾಗಿ ಮಾತ್ರ ಖರೀದಿ ಮಾಡಲಾಗುವುದೆಂದು ತಿಳಿಸಿ ಆದೇಶ ಹೊರಡಿಸಿದೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

‘ಕಳೆದ ಎರಡು ವರ್ಷಗಳಿಂದ ಈಚೆಗೆ ತಮ್ಮ ಹೊಲಗಳಲ್ಲಿ ಬೆಳೆದಿದ್ದ ಯೂಕಲಿಪ್ಟಸ್ ಬೆಳೆಯನ್ನು ತೆಗೆದು ಹಾಕಿ ರಾಗಿ ಬೆಳೆಯಲಾರಂಭಿಸಿದ್ದಾರೆ. ಹೀಗಾಗಿ ಸಹಜವಾಗಿಯೆ ರಾಗಿಯ ಉತ್ಪಾದನೆ ಹೆಚ್ಚಾಗಿದೆ. ರಾಗಿಗೆ ನೀಡುತ್ತಿರುವ ಬೆಂಬಲ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಒಂದು ಕ್ವಿಂಟಾಲಿಗೆ ಕೇವಲ ₹ 82 ಮಾತ್ರ ಏರಿಕೆ ಮಾಡಲಾಗಿದೆ’ ಎಂದೂ ಹೇಳಿದ್ದಾರೆ.

‘ಡಾ.ಸ್ವಾಮಿನಾಥನ್ ಅವರ ವರದಿಯಲ್ಲಿನ ಸೂತ್ರಗಳನ್ನು ಪೂರ್ತಿಯಾಗಿ ಅಳವಡಿಸಿದರೆ ಒಂದು ಕ್ವಿಂಟಾಲ್ ರಾಗಿಗೆ ಈಗ ನಿಗದಿಪಡಿಸಿರುವ ಬೆಂಬಲ ಬೆಲೆಯ ಎರಡರಷ್ಟನ್ನು ರೈತರಿಗೆ ನೀಡಬೇಕಾಗುತ್ತದೆ. ದೊಡ್ಡಬಳ್ಳಾಪುರ ಮುಂತಾದ ಕಡೆ ರೈತರು, ರೈತ ಸಂಘದವರು ರಾಗಿ ಖರೀದಿಗೆ ವಿಧಿಸಿರುವ ನಿಬಂಧನೆಗಳನ್ನು ತೆಗೆದು ಹಾಕುವಂತೆ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಕಳೆದ ವರ್ಷ ಸುಮಾರು 4.7 ಲಕ್ಷ ಟನ್ ಗಳಷ್ಟು ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದರೆ ಈ ಬಾರಿ ರಾಜ್ಯದಿಂದ ಕೇವಲ 2.10  ಲಕ್ಷ ಟನ್ ರಾಗಿಯನ್ನು ಖರೀದಿಸಲು ಮಾತ್ರ ರಾಜ್ಯಕ್ಕೆ ಅನುಮತಿ ನೀಡಲಾಗಿದೆ’ ಎಂದೂ ಅವರು ಹೇಳಿದ್ದಾರೆ.



Read more from source

[wpas_products keywords=”deal of the day sale today kitchen”]