Karnataka news paper

ಬಿಜೆಪಿಯಿಂದ ಯಾರೂ ಹೋಗಲ್ಲ, ಕಾಂಗ್ರೆಸ್‌ನಿಂದಲೇ ಹಲವರು ಬರುತ್ತಾರೆ: ಕಟೀಲ್


ಬೆಂಗಳೂರು: ‘ನಮ್ಮ ಪಕ್ಷದಿಂದ ಯಾರೂ ಕಾಂಗ್ರೆಸ್‌ಗೆ ಹೋಗುವುದಿಲ್ಲ, ಆ ಪಕ್ಷದವರೇ ಕೆಲವರು ನಮ್ಮ ಪಕ್ಷಕ್ಕೆ ಬರಲು ಸಿದ್ಧರಾಗಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಹೇಳಿದ್ದಾರೆ.

ಬಿಬಿಎಂಪಿ ಚುನಾವಣೆಯ ಪೂರ್ವಭಾವಿ ತಯಾರಿ ಬಗ್ಗೆ ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಚರ್ಚೆ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಕಾಂಗ್ರೆಸ್‌ ಪಕ್ಷಕ್ಕೆ ಭವಿಷ್ಯವಿಲ್ಲ. ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿದ್ದಾರೆ. ಹೀಗಾಗಿ ಜನರ ಗಮನ ಬೇರೆಡೆ ಸೆಳೆಯಲು ಕುತಂತ್ರ ರಾಜಕಾರಣಕ್ಕೆ ಕೈಹಾಕಿದ್ದಾರೆ. ಪಕ್ಷಕ್ಕೆ ವಲಸೆ ಬಂದವರು ಸೇರಿ ಯಾರೂ ಕಾಂಗ್ರೆಸ್‌ಗೆ ಹೋಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಪಕ್ಷದ ಯಾವುದೇ ಶಾಸಕರು ಬಹಿರಂಗವಾಗಿ ಹೇಳಿಕೆಗಳನ್ನು ನೀಡಬಾರದು. ಯಾವುದೇ ಸಮಸ್ಯೆ ಇದ್ದರೆ ಕರೆಸಿ  ಮಾತನಾಡುತ್ತೇವೆ. ಅದನ್ನೂ ಮೀರಿದರೆ ನೋಟಿಸ್‌ ಕೊಡುತ್ತೇವೆ, ಆ ಬಳಿಕ ರಾಷ್ಟ್ರೀಯ ಶಿಸ್ತು ಸಮಿತಿಯ ಗಮನಕ್ಕೆ ತರುತ್ತೇವೆ ಎಂದು ಅವರು ಹೇಳಿದರು.

ಸಚಿವ ಸಂಪುಟ ವಿಸ್ತರಣೆಯನ್ನು ಯಾವಾಗ ಮಾಡಬೇಕು ಎಂಬುದನ್ನು ಪಕ್ಷದ ವರಿಷ್ಠರೇ ತೀರ್ಮಾನಿಸುತ್ತಾರೆ. ಈ ವಿಷಯ ವರಿಷ್ಠರಿಗೆ ಬಿಟ್ಟಿದ್ದು. ವಿಸ್ತರಣೆ ಮಾಡುವ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಜತೆಗೆ ವರಿಷ್ಠರು ಚರ್ಚಿಸುತ್ತಾರೆ. ನಿಗಮ–ಮಂಡಳಿಗೆ ನೇಮಕಕ್ಕೆ ಪಟ್ಟಿ ಮಾಡಿದ್ದೇವೆ. ಇನ್ನು ಒಂದು ವಾರದೊಳಗೆ ಮುಖ್ಯಮಂತ್ರಿಯವರಿಗೆ ಆ ಪಟ್ಟಿ ನೀಡುತ್ತೇವೆ ಎಂದರು.

ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಇಲ್ಲ. ಬೊಮ್ಮಾಯಿ ಅವರು ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನದ ಅವಧಿ ಮೂರು ವರ್ಷಗಳು, ಅದು ಮುಗಿದ ತಕ್ಷಣ ಚುನಾವಣೆ ಮೂಲಕ ಹೊಸ ಅಧ್ಯಕ್ಷರ ನೇಮಕ ಮಾಡುವುದು ಪಕ್ಷದ ನಿಯಮ. ಅಲ್ಲಿಯವರೆಗೆ ಯಾವುದೇ ಬದಲಾವಣೆ ಇಲ್ಲ ಎಂದೂ ನಳಿನ್‌ ಹೇಳಿದರು.

ಕಾಂಗ್ರೆಸ್‌ ಪಕ್ಷ ಮತ ಬ್ಯಾಂಕ್‌ ತುಷ್ಟಿಕರಣಕ್ಕಾಗಿ ರಾಷ್ಟ್ರದ ಹಿತವನ್ನು ಕಡೆಗಣಿಸಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಪಂಜಾಬ್‌ನ ಹಿಂದಿನ ಮುಖ್ಯಮಂತ್ರಿ ಅಮರೇಂದ್ರ ಸಿಂಗ್‌ ಅವರಿಗೆ ದೂರವಾಣಿ ಕರೆ ಮಾಡಿ ಸಿಧು ಅವರನ್ನು ಮಂತ್ರಿ ಮಾಡಿ ಎಂದು ಹೇಳಿದ್ದರು. ಇದರಿಂದ ಕಾಂಗ್ರೆಸ್‌ ಬಣ್ಣ ಬಯಲಾಗಿದೆ. ಆ ಪಕ್ಷ ಶತ್ರು ದೇಶ ಪಾಕಿಸ್ತಾನದ ಜತೆ ಸಂಬಂಧ ಹೊಂದಿದೆ ಎಂದು ಟೀಕಿಸಿದರು.



Read more from source

[wpas_products keywords=”deal of the day sale today kitchen”]