Karnataka news paper

ಶಹಾಬಾದ್‌ನಲ್ಲಿ 15 ವರ್ಷಗಳ ಹಿಂದೆ ನಾಪತ್ತೆಯಾದ ಬಾಲಕಿ ಇದೀಗ ಮಗುವಿನೊಂದಿಗೆ ವಾಪಸ್‌..!


ಹೈಲೈಟ್ಸ್‌:

  • ಶಹಾಬಾದ್‌ ನಗರ ಪೊಲೀಸ್‌ ಠಾಣೆಯಲ್ಲಿ 15 ವರ್ಷ ಹಿಂದೆ ನಾಪತ್ತೆ ದೂರು
  • ಮುಂಬೈ ಖಾಸಗಿ ಸಂಸ್ಥೆ ನೆರವಿನಿಂದ ಹೆತ್ತವರ ಮಡಿಲಿಗೆ
  • ಅಲ್ಪ ಪ್ರಮಾಣದ ಮಾನಸಿಕ ಅಸ್ವಸ್ಥತೆ ಹೊಂದಿದ್ದ ಮಹಿಳೆ

ಶಹಾಬಾದ್‌ (ಕಲಬುರಗಿ): 15 ವರ್ಷಗಳ ಹಿಂದೆ ಕಾಣೆಯಾಗಿದ್ದ ಶಹಾಬಾದ್ ನಗರದ ಹಳೆ ಶಹಾಬಾದ್‌ನ ಶಿಬಿರ ಕಟ್ಟಾ ಬಡಾವಣೆಯ ಬಾಲಕಿಯೊಬ್ಬಳು, ಈಗ ಮುಂಬೈ ಖಾಸಗಿ ಸಂಸ್ಥೆಯ ಸಹಕಾರದೊಂದಿಗೆ ಒಂದು ಗಂಡು ಮಗುವಿನೊಂದಿಗೆ ಮನೆಗೆ ವಾಪಸ್‌ ಆಗಿರುವ ವಿಶಿಷ್ಠ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸ್ವಲ್ಪ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಸಂಗೀತಾ ದಾನಪ್ಪ ದಾನಪ್ಪಗೋಳ ಎಂಬ ಮಹಿಳೆ ಇದೀಗ ಹೆತ್ತವರ ಮಡಿಲಿಗೆ ಸೇರಿದ್ದಾಳೆ. 8ನೇ ತರಗತಿಯಲ್ಲಿ ಓದುತ್ತಿದ್ದಾಗ ಕಾಣೆಯಾಗಿದ್ದ ಈ ಬಾಲಕಿಯ ಪತ್ತೆಗಾಗಿ ಪೋಷಕರು ಸಾಕಷ್ಟು ತಿರುಗಾಡಿದರೂ ಆಕೆಯ ಸುಳಿಯು ಸಿಕ್ಕಿರಲಿಲ್ಲ.

ನಿರಾಸೆಗೊಂಡ ಪಾಲಕರು ಹುಡುಕಾಟ ನಿಲ್ಲಿಸಿದ್ದರು. ನಂತರ ಬಾಲಕಿಯು ಶಹಾಬಾದ್‌ನಿಂದ ಹೊರಟು ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ತಲುಪಿದ್ದಳು. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಸಂಗೀತಾ, ಲಾರಿ ಚಾಲಕನೊಬ್ಬನನ್ನು ಮದುವೆಯಾಗಿದ್ದು, ಒಂದು ಗಂಡು ಮಗು ಸಹ ಜನಿಸಿದೆ.

ಶಿವಮೊಗ್ಗ: ಮನೆಯೊಳಗೆ ಆಟವಾಡುತ್ತಿದ್ದ ಮಗು ನಾಪತ್ತೆ, ಪೋಷಕರಿಗೆ ಟೆನ್ಷನ್‌; ಕೊನೆಗೆ ಎಲ್ಲಿತ್ತು ಗೊತ್ತಾ?
ಎರಡ್ಮೂರು ವರ್ಷ ಸುಖ ಸಂಸಾರ ನಡೆಸಿದ ಸಂಗೀತಾಳಿಗೆ ಲಾರಿ ಚಾಲಕ ಕೈ ಕೊಟ್ಟು ಕಣ್ಮರೆಯಾಗಿದ್ದ. ನಂತರ ಮಗುವಿನೊಂದಿಗೆ ಮುಂಬೈಗೆ ತೆರಳಿದ್ದ ಸಂಗೀತಾ, ರಸ್ತೆ ಪಕ್ಕದಲ್ಲೇ ಜೀವನ ಸಾಗಿಸುತ್ತಿದ್ದಳು. ಈ ಕುಟುಂಬ ಮುಂಬೈನ ಶ್ರದ್ಧಾ ರೇಗುಲೇಷನ್‌ ಫೌಂಡೇಶನ್‌ ಸದಸ್ಯರ ಕಣ್ಣಿಗೆ ಬಿದ್ದಿತ್ತು. ತಾಯಿ – ಮಗುವಿಗೆ ಸಂಸ್ಥೆಯ ನಿರ್ದೇಶಕ ಡಾ. ಭಾರತ ವಾಟವನಿ ತಮ್ಮ ಆಸ್ಪತ್ರೆಯಲ್ಲಿ ಮಾನಸಿಕ ಚಿಕಿತ್ಸೆ ನೀಡಿದ್ದರು.

ಸ್ವಲ್ಪ ಆರೋಗ್ಯ ಸುಧಾರಿಸಿದ ನಂತರ ಮಹಿಳೆಯ ಮಾಹಿತಿ ಅನುಸರಿಸಿ ಫೌಂಡೇಶನ್‌ ಸಹಾಯಕ ನಿರ್ದೇಶಕಿ ಸುಲೋಚನಾ ಆರಿ, ಸಾಮಾಜಿಕ ಕಾರ್ಯಕರ್ತೆ ಅದಿತಿ ಸೇಜರ್‌ ಅವರೊಂದಿಗೆ ತಾಯಿ – ಮಗುವನ್ನು ತಿರುಪತಿಗೆ ಕಳುಹಿಸಿದ್ದಾರೆ. ಅಲ್ಲಿ ಆಕೆಯ ಗಂಡನ ಮಾಹಿತಿ ಸಿಕ್ಕಿಲ್ಲ. ಬದಲಾಗಿ ಆಕೆಯು ಬಾಲಕಿಯಾಗಿದ್ದಾಗ ಶಹಾಬಾದ್‌ನಿಂದ ಬಂದಿರುವ ಮಾಹಿತಿ ದೊರೆಯಿತು.

ಕಡಬದ ಐತ್ತೂರಿನಿಂದ ನಾಪತ್ತೆಯಾಗಿದ್ದ ಬಾಲಕಿ ಬರೋಬ್ಬರಿ 2 ತಿಂಗಳ ಬಳಿಕ ತಮಿಳುನಾಡಿನಲ್ಲಿ ಪತ್ತೆ
ತಿರುಪತಿಯಿಂದ ಹೊರಟ ಮುಂಬೈ ತಂಡವು ಶಹಾಬಾದ್‌ ಪೊಲೀಸ್‌ ಠಾಣೆಗೆ ಆಗಮಿಸಿ ಸ್ಥಳೀಯರ ಸಹಾಯದೊಂದಿಗೆ ಮಹಿಳೆಯ ಮಾಹಿತಿ ಕಲೆ ಹಾಕಿದ್ದರು. ಈಕೆಯು ವೀರಶೈವ ಲಿಂಗಾಯತ ಸಮಾಜಕ್ಕೆ ಸೇರಿದ್ದನ್ನು ಅರಿತು ಸಮಾಜದ ಸ್ಥಳೀಯ ಅಧ್ಯಕ್ಷ ಸೂರ್ಯ ಕಾಂತ ಕೋಬಾಳ ಅವರನ್ನು ಸಂಪರ್ಕಿಸಿ ಅವರ ಪೋಷಕರ ಪತ್ತೆ ಹಚ್ಚಿದ್ದಾರೆ. ಮಹಿಳೆಯ ತಂದೆ ದಾನಪ್ಪ ಅವರ ಮೊದಲ ಪತ್ನಿಯ ಪುತ್ರಿ ಎಂದು ಗೊತ್ತಾಗಿದೆ. ಎರಡನೇ ಪತ್ನಿಗೆ ಇಬ್ಬರು ಮಕ್ಕಳಿದ್ದಾರೆ ಎನ್ನಲಾಗುತ್ತಿದೆ.

ಸಂಗೀತಾ ಮತ್ತು ಈಕೆಯ ಮಗುವನ್ನು ಸಹೋದರ ರವಿ ಕುಮಾರ ಎಂಬುವರ ಸುಪರ್ಧಿಗೆ ಒಪ್ಪಿಸಿದ ತಂಡವು, ಮಾನಸಿಕ ಅಸ್ವಸ್ಥ ಮಹಿಳೆಗೆ ತಮ್ಮ ಸಂಸ್ಥೆಯಿಂದ ಮುಂದಿನ ಎರಡು ವರ್ಷ ತಮ್ಮ ಖರ್ಚಿನಲ್ಲಿ ಚಿಕಿತ್ಸೆ ನೀಡುವುದಾಗಿ ಹೇಳಿದ್ದು, 8 – 9 ವರ್ಷದ ಮಗನಿಗೆ ಶಾಲೆಗೆ ಸೇರಿಸಲು ನಿರ್ದೇಶನ ನೀಡಿದೆ. ಪೊಲೀಸರಾದ ಹುಸೇನ್‌ ಪಾಶಾ, ಶಿವ ರಾಜ, ಹೇಮ ಲತಾ, ಶರಣಯ್ಯ ಸ್ವಾಮಿ ಎಂ. ಆರ್‌. ಸೇರಿದಂತೆ ಇತರರು ಇದ್ದರು.

ಮಗು ಆಟವಾಡುತ್ತಿದ್ದಾಗ ಕೋಣೆಯೊಳಗೆ ಬಂದಿತ್ತು ಹಾವು! : ದಿಗಿಲುಗೊಳಿಸುವ ದೃಶ್ಯವಿದು



Read more