ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂವನ್ನು ಹಿಂಪಡೆದಿರುವ ಕಾರಣ ಸ್ಯಾಂಡಲ್‌ವುಡ್ ಕೊಂಚ ಉಸಿರಾಡುವಂತಾಗಿದೆ. ಚಿತ್ರಮಂದಿರದಲ್ಲಿ ಶೇ. 50 ಸೀಟಿಂಗ್‌ನಲ್ಲೂ ಸಿನಿಮಾ ಬಿಡುಗಡೆ ಮಾಡಲು ಕೆಲವು ಚಿತ್ರತಂಡಗಳು ಸಿದ್ಧತೆ ಮಾಡುತ್ತಿವೆ.
ಚಿತ್ರರಂಗದ ಚೇತರಿಕೆಗೆ ಬೇಕಾದ ಸೂಕ್ತ ಅವಕಾಶವನ್ನು ಕೊರೊನಾ ಕೊಡುತ್ತಲೇ ಇಲ್ಲ. ಸಿನಿಮಾಗಳು ಉತ್ತಮ ಕಲೆಕ್ಷನ್ ಮಾಡುತ್ತಿವೆ, ಜನರು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ, ಎಲ್ಲವೂ ಸರಿಯಾಗುತ್ತಿದೆ ಎನ್ನುವ ಹೊತ್ತಿಗೆಯೇ ಕೊರೊನಾ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿವೆ. ಹೀಗಾದಾಗ ಸರ್ಕಾರ ಜಾರಿಗೊಳಿಸುವ ಸುರಕ್ಷಾ ನಿಯಮಗಳಿಂದಾಗಿ ಸಿನಿಮಾ ಬಿಡುಗಡೆಗೆ ತೊಂದರೆಯಾಗುತ್ತದೆ. ಇತ್ತೀಚೆಗೆ ಹೇರಲಾಗಿದ್ದ ವೀಕೆಂಡ್ ಕರ್ಫ್ಯೂನಿಂದಾಗಿಯೂ ಕೆಲವು ಸಿನಿಮಾಗಳ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟು, ಸ್ಯಾಂಡಲ್‌ವುಡ್ ಮಂಕಾಗಿತ್ತು. ಈಗ ಕರ್ಫ್ಯೂವನ್ನು ಹಿಂಪಡೆದಿರುವ ಕಾರಣ ಚಿತ್ರಮಂದಿರದಲ್ಲಿ ಶೇ. 50 ಸೀಟಿಂಗ್‌ನಲ್ಲಿಯೇ ಸಿನಿಮಾ ಬಿಡುಗಡೆ ಮಾಡಲು ಕೆಲವು ಚಿತ್ರತಂಡಗಳು ಮುಂದಾಗಿವೆ. ಇನ್ನು ಕೆಲವು ಚಿತ್ರತಂಡಗಳು ಇನ್ನೂ ಕಾಯೋಣ ಎಂದಿದ್ದಾರೆ.
ಬಿಡುಗಡೆ ಭಾಗ್ಯ
ಕೋವಿಡ್‌ನ ಮೂರನೇ ಅಲೆಯಲ್ಲಿಯೂ ಚಿತ್ರರಂಗದ ಪರಿಸ್ಥಿತಿ ಬಹಳ ಹದಗೆಟ್ಟಿದೆ. ಈ ಸಮಯದಲ್ಲಿ ನಿರ್ಮಾಪಕರು ದೊಡ್ಡ ಬಜೆಟ್‌ನ ಸಿನಿಮಾ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಮೊದಲ ಅಲೆಯ ನಂತರ ಬಿಡುಗಡೆಯಾಗಬೇಕಿದ್ದ, ಅಂದರೆ ಎರಡು ವರ್ಷಗಳ ಹಿಂದೆ ತಯಾರಾದ ಸಿನಿಮಾಗಳು ಬಿಡುಗಡೆಯಾಗದೆ ಬಹುತೇಕ ಹಾಗೆಯೇ ಇವೆ. ಅವೆಲ್ಲ ಯಾವಾಗ ಬಿಡುಗಡೆಯ ಭಾಗ್ಯ ಕಾಣುತ್ತವೆ ಎಂಬುದು ಹಲವರ ಪ್ರಶ್ನೆಯಾಗಿದೆ. ಚಿತ್ರಮಂದಿರದಲ್ಲಿ ಶೇ. 50 ಸೀಟಿಂಗ್ ಪದ್ಧತಿಯನ್ನು ಸರ್ಕಾರ ಸದ್ಯಕ್ಕೆ ತೆಗೆಯುವ ಹಾಗೆ ಕಾಣುತ್ತಿಲ್ಲ. ಏನಿಲ್ಲವೆಂದರೂ ಫೆಬ್ರವರಿ ಕೊನೆಯವರೆಗೂ ಈ ನಿಯಮ ಜಾರಿಯಲ್ಲಿರುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಸುಮ್ಮನಿರುವ ಬದಲು ಸಿನಿಮಾಗಳನ್ನು ಬಿಡುಗಡೆ ಮಾಡೋಣ ಎಂದು ಕೆಲವು ಚಿತ್ರತಂಡಗಳು ತೀರ್ಮಾನಿಸಿದ್ದು, ಇದರಂತೆ ಈ ವಾರ ಎರಡು ಸಿನಿಮಾ ಬಿಡುಗಡೆಯಾಗುತ್ತಿವೆ. ಈ ಸಿನಿಮಾಗಳಿಗೆ ಜನರು ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂದು ರಿಲೀಸ್‌ಗೆ ರೆಡಿ ಇರುವ ಕೆಲವು ಸಿನಿಮಾ ತಂಡಗಳು ಕಾದು ನೋಡುತ್ತಿದ್ದು, ಆ ನಂತರ ಮುಂದಿನ ನಿರ್ಧಾರಕ್ಕೆ ಬರಲಿವೆ.
ಚಿಕ್ಕ ಬಜೆಟ್ ಚಿತ್ರಕ್ಕೆ ಅನುಕೂಲ

ಥಿಯೇಟರ್‌ನಲ್ಲಿ ಶೇ. 50 ಸೀಟಿಂಗ್ ಪದ್ಧತಿ ಚಿಕ್ಕ ಬಜೆಟ್‌ನ ಸಿನಿಮಾಗಳಿಗೆ ಒಂದು ರೀತಿಯಲ್ಲಿ ಅನುಕೂಲಕರ ವಾತಾವರಣ ಸೃಷ್ಟಿಸುತ್ತದೆ. ಯಾಕೆಂದರೆ ಈ ಸಮಯದಲ್ಲಿ ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆಯಾಗುವುದಿಲ್ಲ. ಶೇ.50 ಸೀಟು ಪೂರ್ತಿ ತುಂಬಿದರೆ ಒಳ್ಳೆಯ ಕಲೆಕ್ಷನ್ ಸಹ ಆಗುತ್ತದೆ. ಮಾಸ್ ಕ್ರೌಡ್‌ಗಿಂತಲೂ ಡೀಸೆಂಟ್ ಕ್ರೌಡ್ ಸಿನಿಮಾ ನೋಡುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಮೊದಲ ಅಲೆಯ ನಂತರ ಬಿಡುಗಡೆಯಾದ ಮಂಸೋರೆ ನಿರ್ದೇಶನದ ‘ಆಕ್ಟ್ 1978’ ಸಿನಿಮಾ ಶೇ.50 ಸೀಟಿಂಗ್‌ನಲ್ಲಿಯೂ ಯಶಸ್ವಿಯಾಯಿತು. ಇದೇ ತಂತ್ರವನ್ನು ಈ ಬಾರಿಯೂ ಕೆಲವು ಸಿನಿಮಾಗಳು ಅನುಕರಿಸುವ ಸಾಧ್ಯತೆ ಇದೆ. ಇನ್ನು ಕೆಲವರು ಕೊರೊನಾ ಕೇಸುಗಳು ಹೆಚ್ಚಾಗಿದ್ದರೆ ಜನರು ಚಿತ್ರಮಂದಿರಕ್ಕೆ ಬರುವುದಿಲ್ಲ ಮತ್ತು ನೈಟ್ ಕರ್ಫ್ಯೂದಿಂದಲೂ ಕಲೆಕ್ಷನ್ ಮೇಲೆ ಹೊಡೆತ ಬೀಳುತ್ತದೆ ಎಂಬ ಕಾರಣಕ್ಕೆ, ಕೊರೊನಾ ಕೇಸುಗಳ ಸಂಖ್ಯೆ ಕಡಿಮೆಯಾದ ತಕ್ಷಣ ಶೇ. 50 ಸೀಟಿಂಗ್ ಪದ್ಧತಿಯಲ್ಲಿ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.
ಶೇ. 100ಕ್ಕೆ ಕಾಯುವಿಕೆ

ಚಿತ್ರಮಂದಿರದಲ್ಲಿ ಶೇ. 50 ಸೀಟಿಂಗ್‌ನಲ್ಲಿ ಸಿನಿಮಾ ಬಿಡುಗಡೆ ಮಾಡದಿದ್ದರೆ ಏಕಪರದೆಯ ಚಿತ್ರಮಂದಿರಗಳಿಗೆ ಹೊಡೆತ ಬೀಳುತ್ತದೆ. ಹಳೆಯ ಸಿನಿಮಾಗಳನ್ನೇ ಹೆಚ್ಚು ದಿನಗಳ ಕಾಲ ಪ್ರದರ್ಶನ ಮಾಡಲು ಸಾಧ್ಯವಿಲ್ಲ. ಶೇ.100 ಸೀಟಿಂಗ್ ಬರುವವರೆಗೂ ಸಿನಿಮಾ ಮಂದಿರಗಳು ಮುಚ್ಚಿರುತ್ತವೆ. ಈಗಾಗಲೇ ಮೈಸೂರು ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರಮಂದಿರಗಳನ್ನು ಮುಚ್ಚಲಾಗಿದೆ. ಇನ್ನು ಕೆಲವು ಸಿನಿಮಾ ತಂಡಗಳು ಶೇ. 100 ಸೀಟಿಂಗ್ ಪದ್ಧತಿಗೆ ಕಾಯುತ್ತಿವೆ. ‘ಪೆಟ್ರೋಮ್ಯಾಕ್ಸ್’ ಮತ್ತು ‘ತೋತಾಪುರಿ’ ಸೇರಿದಂತೆ ಕೆಲವು ಸಿನಿಮಾಗಳು ಶೇ. 100 ಸೀಟಿಂಗ್ ಪದ್ಧತಿ ಬಂದ ನಂತರವೇ ಸಿನಿಮಾ ಬಿಡುಗಡೆ ಮಾಡುತ್ತೇವೆ ಎನ್ನುತ್ತಿದ್ದಾರೆ.
ಒಟಿಟಿಗಿಂತ ಸಿನಿಮಾ ರಂಗಕ್ಕೆ ಚಿತ್ರಮಂದಿರವೇ ಆಧಾರ: ಥಿಯೇಟರ್ ಯಾವತ್ತಿದ್ದರೂ ಕಿಂಗ್!
ನಿರ್ದೇಶಕ ಶ್ರೀನಿ ಏನಂತಾರೆ?

‘ಶೇ. 50 ಸೀಟಿಂಗ್ ಪದ್ಧತಿ ನಮ್ಮ ‘ಓಲ್ಡ್ ಮಾಂಕ್’ ಸಿನಿಮಾಗೆ ಸಮಸ್ಯೆ ಆಗಲ್ಲ. ಆದರೆ ಈಗ ಕೊರೊನಾ ಕೇಸುಗಳು ಜಾಸ್ತಿ ಇರುವುದರಿಂದ ಕುಟುಂಬಗಳು ಚಿತ್ರಮಂದಿರಕ್ಕೆ ಬರುವುದಿಲ್ಲ. ನಾನು ಕೋವಿಡ್ ಪ್ರಕರಣಗಳು ಕಡಿಮೆಯಾಗುವುದನ್ನು ಕಾಯುತ್ತಿದ್ದು, ಅದು ಕಡಿಮೆಯಾದ ತಕ್ಷಣ ಸಿನಿಮಾ ಬಿಡುಗಡೆ ಮಾಡುತ್ತೇನೆ’ ಎಂದಿದ್ದಾರೆ ನಿರ್ದೇಶಕ, ನಟ ಶ್ರೀನಿ
ನಿರ್ಮಾಪಕ ಸುಧೀರ್ ಹೇಳಿದ್ದೇನು?

ಶೇ.100 ಸೀಟಿಂಗ್ ಪದ್ದತಿ ಬರದೆ ನಮ್ಮ ‘ಪೆಟ್ರೋಮ್ಯಾಕ್ಸ್’ ಸಿನಿಮಾ ಬಿಡುಗಡೆ ಮಾಡುವುದಿಲ್ಲ. ಫೆಬ್ರವರಿಯಲ್ಲಿ ಇದಕ್ಕೆ ಅನುಮತಿ ಸಿಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಮಾರ್ಚ್ ಕೊನೆಯ ವಾರ ನಮ್ಮ ಸಿನಿಮಾವನ್ನು ಬಿಡುಗಡೆ ಮಾಡುತ್ತೇವೆ” ಎಂದಿದ್ದಾರೆ ನಿರ್ಮಾಪಕ ಕೆ.ಎಂ.ಸುಧೀರ್.
Read more
[wpas_products keywords=”deal of the day party wear dress for women stylish indian”]