Karnataka news paper

ಪ್ರಜ್ವಲ್ ರೇವಣ್ಣ ವಿರುದ್ಧದ ಎ. ಮಂಜು ಅರ್ಜಿ: ಹೈಕೋರ್ಟ್ ಆದೇಶ ಅಸಿಂಧು ಎಂದ ಸುಪ್ರೀಂಕೋರ್ಟ್!


ಹೈಲೈಟ್ಸ್‌:

  • ಕರ್ನಾಟಕ ಹೈಕೋರ್ಟ್ ತೀರ್ಪನ್ನು ಅಸಿಂಧು ಎಂದ ಸುಪ್ರೀಂಕೋರ್ಟ್ ನ್ಯಾಯಪೀಠ
  • ಪ್ರಕರಣವನ್ನು ಹೊಸದಾಗಿ ಗಣನೆಗೆ ತೆಗೆದುಕೊಳ್ಳಲು ಹೈಕೋರ್ಟ್‌ಗೆ ಸುಪ್ರೀಂ ಸೂಚನೆ
  • ಹದಿನೈದು ದಿನಗಳಲ್ಲಿ ಹೊಸ ಅಫಿಡವಿಟ್ ಸಲ್ಲಿಸಲು ಎ. ಮಂಜುಗೆ ಕೋರ್ಟ್ ಅನುಮತಿ
  • ಪ್ರಜ್ವಲ್ ರೇವಣ್ಣ ತಮ್ಮ ಸಂಪೂರ್ಣ ಆಸ್ತಿ ವಿವರ ನೀಡಿಲ್ಲ ಎಂದು ಆರೋಪಿಸಿದ್ದ ಮಂಜು

ಹೊಸದಿಲ್ಲಿ: ಹಾಸನ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಆಯ್ಕೆಯನ್ನು ಪ್ರಶ್ನಿಸಿ ಬಿಜೆಪಿ ಅಭ್ಯರ್ಥಿ ಎ ಮಂಜು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಸೋಮವಾರ ಅಸಿಂಧುಗೊಳಿಸಿದೆ. ಜತೆಗೆ ಹೊಸದಾಗಿ ಅಫಿಡವಿಟ್ ಸಲ್ಲಿಸಲು ಎ ಮಂಜು ಅವರಿಗೆ ಅನುಮತಿ ನೀಡಿದೆ.

2019ರ ಸಂಸತ್ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಅವರು ತಮ್ಮ ಆಸ್ತಿ ವಿವರಗಳನ್ನು ತಪ್ಪಾಗಿ ನೀಡಿದ್ದಾರೆ. ಅವರು ಪೂರ್ಣ ಪ್ರಮಾಣದಲ್ಲಿ ಆಸ್ತಿ ವಿವರ ಘೋಷಣೆ ಮಾಡಿಲ್ಲ ಎಂದು ಎ ಮಂಜು ಆರೋಪಿಸಿದ್ದರು. ಹೀಗಾಗಿ ಅವರ ಲೋಕಸಭೆ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಮಂಜು ಅವರು ಸಲ್ಲಿಸಿದ್ದ ಅರ್ಜಿ ಚುನಾವಣಾ ನಡವಳಿಕೆ ನಿಯಮಗಳು, 1961ರ ನಿಯಮ 94ಎ ಅಲ್ಲಿ ವಿವರಿಸಿರುವಂತೆ ಫಾರ್ಮ್ 25 ಅನ್ನು ಅರ್ಜಿಯೊಂದಿಗೆ ಸಲ್ಲಿಸಿಲ್ಲ ಎಂದಿದ್ದ ಕರ್ನಾಟಕ ಹೈಕೋರ್ಟ್, 2020ರ ಜನವರಿಯಲ್ಲಿ ಅರ್ಜಿಯನ್ನು ವಜಾಗೊಳಿಸಿತ್ತು.
ಪ್ರಜ್ವಲ್‌ ರೇವಣ್ಣಗೆ ಹೈಕೋರ್ಟ್‌ನಿಂದ ರಿಲೀಫ್‌, ಮಂಜು ಸಲ್ಲಿಸಿದ್ದ ಅರ್ಜಿ ವಜಾ
ಇದನ್ನು ಪ್ರಶ್ನಿಸಿ ಎ ಮಂಜು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂಎಂ ಸುಂದರೇಶ್ ಅವರನ್ನು ಒಳಗೊಂಡ ನ್ಯಾಯಪೀಠ, ಮುಖ್ಯವಾಗಿ ಚುನಾವಣಾ ಅರ್ಜಿಗೆ ಬೆಂಬಲವಾಗಿ ಪರಿಶೀಲನಾ ಅಫಿಡವಿಟ್ ಇರುವಾಗ ಫಾರ್ಮ್ 25ರ ಸಲ್ಲಿಕೆ ಮಾಡದೆ ಇರುವುದು ಚುನಾವಣಾ ಅರ್ಜಿಯನ್ನು ವಜಾಗೊಳಿಸಲು ಕಾರಣ ಎಂದು ಹೈಕೋರ್ಟ್ ತೆಗೆದುಕೊಂಡ ನಿರ್ಣಯವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿತು.

ಚುನಾವಣೆ ನಡೆದು ಈಗಾಗಲೇ ಎರಡು ವರ್ಷಗಳಾಗಿವೆ. ಹೀಗಾಗಿ ಪ್ರಕರಣವನ್ನು ಹೊಸದಾಗಿ ಪರಿಗಣಿಸಬೇಕು ಎಂದು ಹೈಕೋರ್ಟ್‌ಗೆ ನ್ಯಾಯಪೀಠ ಸೂಚಿಸಿದೆ. ಹದಿನೈದು ದಿನಗಳಲ್ಲಿ ಹೊಸದಾಗಿ ಅಫಿಡವಿಟ್ ಸಲ್ಲಿಸಲು ಎ ಮಂಜು ಅವರಿಗೆ ಅನುಮತಿ ನೀಡಿತು.
ಹಾಸನ ಸಂಸದ ಪ್ರಜ್ವಲ್‌ ರೇವಣ್ಣಗೆ ಸಮನ್ಸ್‌ ಜಾರಿ
ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರ ಮೊಮ್ಮಗನಾಗಿರುವ ಪ್ರಜ್ವಲ್ ರೇವಣ್ಣ ಅವರು ಲೋಕಸಭೆ ಚುನಾವಣೆಯ ನಾಮಪತ್ರ ಸಲ್ಲಿಸುವ ವೇಳೆ ಬಹಿರಂಗಪಡಿಸಿದ ಆಸ್ತಿ ವಿವರಗಳಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಎ ಮಂಜು ಆರೋಪಿಸಿದ್ದರು. ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ 6,76,606 ಮತಗಳನ್ನು ಪಡೆದಿದ್ದರೆ, ಅವರ ಎದುರಾಳಿ ಎ ಮಂಜು 5,35,282 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು.



Read more