Karnataka news paper

ಜೇಮ್ಸ್‌ ಸಿನಿಮಾದಲ್ಲಿ ನಟನೆ ಪ್ರಚಾರದ ಗಿಮಿಕ್‌ ಅಲ್ಲ: ರಾಘವೇಂದ್ರ ರಾಜ್‌ಕುಮಾರ್‌


ಬೆಂಗಳೂರು: ಚೇತನ್‌ ಕುಮಾರ್‌ ನಿರ್ದೇಶನದ, ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ನಟನೆಯ ಕೊನೆಯ ಚಿತ್ರ ‘ಜೇಮ್ಸ್‌’ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರ ಬಿಡುಗಡೆಗೆ ಪ್ರೇಕ್ಷಕರು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ ಅವರನ್ನು ಒಂದೇ ಸಿನಿಮಾದಲ್ಲಿ ನೋಡುವ ಅಭಿಮಾನಿಗಳ ಆಸೆ ‘ಜೇಮ್ಸ್‌’ ಮೂಲಕ ಈಡೇರಲಿದೆ. 

ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಸುದ್ದಿಗಾರರ ಜೊತೆ ಮಾತನಾಡಿರುವ ರಾಘವೇಂದ್ರ ರಾಜ್‌ಕುಮಾರ್‌, ‘ನಾನು ಹಾಗೂ ಶಿವರಾಜ್‌ಕುಮಾರ್‌ ಅವರು ಜೇಮ್ಸ್‌ನಲ್ಲಿ ನಟಿಸಿದ್ದು ಖಂಡಿತವಾಗಿಯೂ ಪ್ರಚಾರದ ಗಿಮಿಕ್‌ ಅಲ್ಲ. ಅಪ್ಪು ಸಿನಿಮಾವನ್ನು ಪ್ರಚಾರ ಮಾಡುವ ಯೋಗ್ಯತೆ ಯಾರಿಗೆ ಇದೆ ಇಂದು. ಅಪ್ಪು ತಾನಾಗೇ ಬೆಳೆದಿದ್ದ. ಅವನಿಂದ ನಾವು ಪ್ರಚಾರ ಪಡೆಯಬೇಕಿತ್ತು’ ಎಂದಿದ್ದಾರೆ.   

‘ಜೇಮ್ಸ್‌ನಲ್ಲಿ ನಟನೆ ಮಾಡಿರುವುದಕ್ಕೆ ಖುಷಿಯೂ ಇದೆ, ಬೇಜಾರೂ ಇದೆ. ಪುನೀತ್‌ ಇಲ್ಲದೇ ನಾನು, ಶಿವರಾಜ್‌ಕುಮಾರ್‌ ಅವರು ನಟನೆ ಮಾಡಬೇಕಾಯಿತಲ್ಲವೇ ಹಾಗೂ ಪುನೀತ್‌ ಜೊತೆಗೆ ಯಾವುದೇ ದೃಶ್ಯಗಳಿಲ್ಲ ಎನ್ನುವ ಬೇಸರವಿದೆ’ ಎಂದರು. 

‘ಅಮ್ಮನ ಆಸೆ’

‘ಹಿಂದೊಮ್ಮೆ ಕೆ.ಜಿ. ರಸ್ತೆಯಲ್ಲಿ ಹೋಗುವಾಗ ನಾವು ನಾಲ್ಕು ಜನರ ಕಟೌಟ್‌ ನೋಡಿ, ‘ನೋಡಿ ನಾಲ್ಕು ಜನರ ಕಟೌಟ್‌ ಇದೆ. ನೀವು ನಾಲ್ಕೂ ಜನರು ಇರುವ ಸಿನಿಮಾ ಮಾಡಬೇಕು’ ಎಂದು ಅಮ್ಮ ಅಪ್ಪಾಜಿ ಬಳಿ ಹೇಳಿದ್ದರಂತೆ. ಆಗ ಅಪ್ಪಾಜಿ ‘ದೇವರು ಎಲ್ಲವುದನ್ನೂ ಕೊಡುವುದಿಲ್ಲ. ಕೊಟ್ಟಿರುವುದನ್ನು ಮಾತ್ರ ಪ್ರೀತಿಸಬೇಕು’ ಎಂದಿದ್ದರಂತೆ. ಅದು ಹಾಗೆಯೇ ಆಯಿತು. ಅಪ್ಪಾಜಿ ನಿಧನ ಬಳಿಕ ಅಮ್ಮ ಮತ್ತೊಮ್ಮೆ ನೀವು ಮೂರು ಜನರು ಒಟ್ಟಿಗೆ ಸಿನಿಮಾ ಮಾಡಿ ಎಂದಿದ್ದರು. ಆದರೆ ನಮಗೆ ಬಲವಾದ, ಇಷ್ಟವಾದ ಕಥೆ ಸಿಗಲಿಲ್ಲ. ನಾವು ಈ ಬಗ್ಗೆ ಪ್ರಯತ್ನವೂ ಪಡಲಿಲ್ಲ. ಮೂರು ಜನ ಇದ್ದೇವೆ ಎಂಬಂತೆ ಸಿನಿಮಾ ಇರಬಾರದು. ಆ ಪಾತ್ರಗಳು ನಮ್ಮನ್ನು ಕೇಳಬೇಕು. ನೀವು ಮೂರು ಜನರೇ ಈ ಪಾತ್ರಕ್ಕೆ ಸೂಕ್ತ ಎಂಬಂತಿರಬೇಕು ಎಂಬ ಅಭಿಲಾಷೆ ಇತ್ತು. ಇಂಥ ಸಿನಿಮಾ ಬರಲಿಲ್ಲ. ಈ ಸಂದರ್ಭದಲ್ಲಿ ಪುನೀತ್‌ ಇಲ್ಲದೇ ನಾವು ಈ ಸಿನಿಮಾದಲ್ಲಿ ಮಾಡಬೇಕಲ್ಲವೇ ಎಂದು ನಾನು, ಅಣ್ಣ ನೊಂದುಕೊಂಡೆವು. ಆದರೆ ಒಂದು ಖುಷಿ ಎಂದರೆ, ಇವತ್ತು ಆಗದೇ ಇದ್ದಿದ್ದರೆ ಮುಂದೆಂದೂ ಆಗುತ್ತಿರಲಿಲ್ಲ’ ಎಂದರು.

‘ಅಪ್ಪು ನಿಧನವಾದ ಬಳಿಕ ‘ಜೇಮ್ಸ್‌’ ಸಿನಿಮಾದಲ್ಲಿ ನಮ್ಮ ಪಾತ್ರಗಳನ್ನು ಸೃಷ್ಟಿಸಿದ್ದಲ್ಲ. ಈ ಪಾತ್ರಗಳು ಮೊದಲೇ ಇದ್ದವು. ಈ ಪಾತ್ರಗಳನ್ನು ಯಾರು ಮಾಡಬೇಕು ಎನ್ನುವುದು ನಿರ್ಧಾರವಾಗಿರಲಿಲ್ಲ. ಪುನೀತ್‌ ಪಾತ್ರದ ಚಿತ್ರೀಕರಣವೆಲ್ಲವೂ ಮುಗಿದಿತ್ತು. ಕಾರಣಾಂತರಗಳಿಂದ ಎರಡು ಮೂರು ದೃಶ್ಯಗಳಷ್ಟೇ ಅಲ್ಲವೇ ಎಂದು ನಮ್ಮ ಪಾತ್ರಗಳ ಚಿತ್ರೀಕರಣ ಬಾಕಿ ಉಳಿಸಿಕೊಂಡಿದ್ದರು. ಈ ಪಾತ್ರಕ್ಕೆ ಬೇರೆ ಯಾರನ್ನಾದರೂ ಆಯ್ಕೆ ಮಾಡಿದ್ದಿದ್ದರೆ ನಾವು ಖಂಡಿತವಾಗಿಯೂ ದಾರಿ ಬಿಟ್ಟುಕೊಡುತ್ತಿದ್ದೆವು. ನಿರ್ದೇಶಕರು ಬಂದು ನಮ್ಮಲ್ಲಿ ಈ ಪಾತ್ರವನ್ನು ಮಾಡುವಂತೆ ಕೇಳಿಕೊಂಡರು. ಅಪ್ಪು ಕೊನೆಯ ಸಿನಿಮಾದಲ್ಲಿ ಬಣ್ಣಹಚ್ಚಿಕೊಂಡು ಪ್ರೇಕ್ಷಕರ ಎದುರಿಗೆ ನಿಲ್ಲುವ ಭಾಗ್ಯ ದೊರಕಿತು. ಪ್ರೇಕ್ಷಕರು ಸಿನಿಮಾ ನೋಡಿ ಹೊರಬಂದ ಸಂದರ್ಭದಲ್ಲಿ ಇಬ್ಬರು ಅಣ್ಣಂದಿರಿಗೂ ತಕ್ಕ ಪಾತ್ರ ಸಿಕ್ಕಿದೆ ಎಂದು ಹೇಳುತ್ತಾರೆ. ಈ ಭರವಸೆ ನನಗಿದೆ’ ಎನ್ನುತ್ತಾರೆ ರಾಘವೇಂದ್ರ ರಾಜ್‌ಕುಮಾರ್‌.



Read More…Source link

[wpas_products keywords=”deal of the day party wear for men wedding shirt”]