Karnataka news paper

ಅಮೆರಿಕದ ಫೆಡರಲ್‌ ನೀತಿಯ ಭಯ, ಸತತ 5ನೇ ದಿನವೂ ಕುಸಿತ ಕಂಡ ಸೆನ್ಸೆಕ್ಸ್‌, ನಿಫ್ಟಿ!


ಮಂಗಳವಾರದಿಂದ ಪ್ರಾರಂಭವಾಗಲಿರುವ ಎರಡು ದಿನಗಳ ಅಮೆರಿಕ ಫೆಡರಲ್‌ ನೀತಿ ಸಭೆಯ ನಿರ್ಧಾರಗಳನ್ನು ಹೂಡಿಕೆದಾರರು ಎದುರುನೋಡುತ್ತಿದ್ದು, ಬಜೆಟ್ ಪೂರ್ವ ವಾರದಲ್ಲಿ ವಿಶ್ವಾಸ ಕಳೆದುಕೊಂಡು ವಹಿವಾಟು ನಡೆಸುತ್ತಿದ್ದಾರೆ. ಇದರ ಜತೆಗೆ ದೊಡ್ಡ ಪ್ರಮಾಣದ ಮಾಸಿಕ ಡಿರೈವೇಟಿವ್‌ ಒಪ್ಪಂದಗಳ ಅವಧಿಯೂ ಮುಕ್ತಾಯ ಹಂತದಲ್ಲಿದ್ದು ಷೇರುಪೇಟೆಯ ಕುಸಿತಕ್ಕೆ ಪ್ರಮುಖ ಕೊಡುಗೆ ನೀಡಿದೆ.

ವೊಡಾಫೋನ್ ಐಡಿಯಾದ ಷೇರುಗಳು ಶೇಕಡಾ 5ರಷ್ಟು ಕುಸಿದಿದ್ದರೆ, ಡಿಸೆಂಬರ್ ತ್ರೈಮಾಸಿಕ ಫಲಿತಾಂಶಗಳಿಗೆ ಪ್ರತಿಕ್ರಿಯೆಯಾಗಿ ಯೆಸ್ ಬ್ಯಾಂಕ್ ಷೇರುಗಳು ಶೇ. 3ರಷ್ಟು ಗಳಿಕೆ ದಾಖಲಿಸಿವೆ. ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ತಲಾ ಅರ್ಧ ಶೇಕಡಾ ಗಳಿಕೆ ಕಂಡಿವೆ.

ಮಧ್ಯಾಹ್ನ 12:15ಕ್ಕೆ, ಬಿಎಸ್‌ಇ ಸೆನ್ಸೆಕ್ಸ್ 1,070 ಅಂಕ ಅಥವಾ ಶೇ. 1.8 ರಷ್ಟು ಕುಸಿತ ಕಂಡು 57,967ರಲ್ಲಿ ವಹಿವಾಟು ನಡೆಸುತ್ತಿದ್ದರೆ, ಎನ್‌ಎಸ್‌ಇ ನಿಫ್ಟಿ 326 ಅಂಕ ಅಥವಾ ಶೇ. 1.85 ರಷ್ಟು ಕುಸಿತ ಕಂಡು 17,291ರಲ್ಲಿ ವಹಿವಾಟು ಮುಂದುವರೆಸಿತ್ತು. ಎರಡೂ ಸೂಚ್ಯಂಕಗಳು ಕಳೆದ ಐದು ವಹಿವಾಟಿನ ಅವಧಿಗಳಿಂದಲೂ ಕುಸಿಯುತ್ತಲೇ ಇದ್ದು, ಷೇರು ಹೂಡಿಕೆದಾರರು 17.38 ಲಕ್ಷ ಕೋಟಿ ರೂ.ಗಳಷ್ಟು ಸಂಪತ್ತನ್ನು ಕಳೆದುಕೊಂಡಿದ್ದಾರೆ.

“ಅಮೆರಿಕದ ಕೇಂದ್ರೀಯ ಬ್ಯಾಂಕ್‌ನ ಬಡ್ಡಿ ದರ ಏರಿಕೆಯ ಪ್ರಮಾಣದ ಸುತ್ತಲಿನ ಅನಿಶ್ಚಿತತೆಯು ಪ್ರಪಂಚದಾದ್ಯಂತ ಮಾರುಕಟ್ಟೆಗಳನ್ನು ಬೆಚ್ಚಿಬೀಳಿಸುತ್ತದೆ ಮತ್ತು ಹೂಡಿಕೆದಾರರು ಜನವರಿ 26 ರ ನಿಗದಿತ ಸಭೆಯ ಫಲಿತಾಂಶದ ಬಗ್ಗೆ ಸ್ಪಷ್ಟತೆಯನ್ನು ನಿರೀಕ್ಷಿಸುತ್ತಾರೆ. ಇವೆಲ್ಲದರ ನಡುವೆ, ಜನವರಿ ತಿಂಗಳ ಡಿರೈವೇಟಿವ್‌ ಒಪ್ಪಂದಗಳ ಮಾಸಿಕ ಮುಕ್ತಾಯದಿಂದಾಗಿಯೂ ಹೂಡಿಕೆದಾರರು ತುದಿಗಾಲಲ್ಲಿ ನಿಂತಿದ್ದಾರೆ,” ಎಂದು ರೆಲಿಗೇರ್ ಬ್ರೋಕಿಂಗ್‌ನ ವಿಪಿ ರಿಸರ್ಚ್ ಅಧಿಕಾರಿ ಅಜಿತ್ ಮಿಶ್ರಾ ಹೇಳಿದ್ದಾರೆ.

ಗಣರಾಜ್ಯೋತ್ಸವದ ನಿಮಿತ್ತ ಬುಧವಾರ ದೇಶೀಯ ಷೇರು ಮಾರುಕಟ್ಟೆ ಮುಚ್ಚಲಿರುವ ಕಾರಣ ಈ ವಾರ ವಹಿವಾಟಿನ ಅವಧಿ ಕೂಡ ಕಡಿಮೆ ಇರಲಿದೆ. ರಷ್ಯಾ-ಉಕ್ರೇನ್ ಗಡಿಯಲ್ಲಿ ಹೆಚ್ಚಿರುವ ಉದ್ವಿಗ್ನತೆಯು ಪ್ರಮುಖ ಭೌಗೋಳಿಕ ರಾಜಕೀಯ ಕಳವಳಕಾರಿ ಸಂಗತಿಯಾಗಿದ್ದು ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

“ಇವೆಲ್ಲದರ ನಡುವೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತೆ ದೊಡ್ಡ ಪ್ರಮಾಣದ ಮಾರಾಟಗಾರರಾಗಿ ಬದಲಾಗಿರುವುದು ಕೂಡ ತಲೆಬಿಸಿ ಸೃಷ್ಟಿಸಿದೆ,” ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿಕೆ ವಿಜಯಕುಮಾರ್ ಹೇಳಿದ್ದಾರೆ. ಹೂಡಿಕೆದಾರರು ಎಚ್ಚರಿಕೆಯಿಂದ ಮುಂದಡಿ ಇಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಸೆನ್ಸೆಕ್ಸ್‌ನ ಷೇರುಗಳಲ್ಲಿ ಏಷಿಯನ್‌ ಪೇಂಟ್ಸ್‌ ಶೇ. 2.16ರಷ್ಟು ಕುಸಿತ ಕಂಡು 3,203 ರೂ.ಗೆ ಇಳಿಕೆಯಾಗಿದ್ದರೆ, ಟೆಕ್‌ ಮಹೀಂದ್ರಾ ಶೇ. 1.9ರಷ್ಟು ನಷ್ಟ ಅನುಭವಿಸಿ 1,563 ರೂ.ಗೆ ಇಳಿದಿದೆ. ಬಜಾಜ್‌ ಫಿನ್‌ಸರ್ವ್‌, ವಿಪ್ರೋ, ಇನ್ಫೋಸಿಸ್‌, ಎಚ್‌ಸಿಎಲ್‌ ಟೆಕ್‌ ಮತ್ತು ಬಜಾಜ್‌ ಫೈನಾನ್ಸ್‌ ಷೇರುಗಳು ಶೇ. 1.8ರಷ್ಟು ನಷ್ಟ ಅನುಭವಿಸಿವೆ. ಇದರ ನಡುವೆ ಟೈಟಾನ್‌ ಕಂಪನಿ ಮತ್ತು ಆಕ್ಸಿಸ್‌ ಬ್ಯಾಂಕ್‌ ಷೇರುಗಳು ಶೇ. 1 ರಷ್ಟು ಗಳಿಕೆ ದಾಖಲಿಸಿವೆ. ಡಿಸೆಂಬರ್‌ ತ್ರೈಮಾಸಿಕದಲ್ಲಿ ಕಂಪನಿಯು ಶೇ. 150-200ರಷ್ಟು ಹೆಚ್ಚುವರಿ ಲಾಭವನ್ನು ವರದಿ ಮಾಡುವ ನಿರೀಕ್ಷೆ ಇದೆ.

ಮಾರುತಿ ಸುಜುಕಿ ಷೇರುಗಳು ಶೇ. 1.2ರಷ್ಟು ಗಳಿಕೆ ಕಂಡಿದ್ದು 8,287 ರೂ.ಗೆ ಏರಿಕೆಯಾಗಿದೆ. ಪವರ್‌ ಗ್ರಿಡ್‌, ಇಂಡಸ್‌ಇಂಡ್‌ ಬ್ಯಾಂಕ್‌, ಐಸಿಐಸಿಐ ಬ್ಯಾಕ್‌, ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಭಾರ್ತಿ ಏರ್‌ಟೆಲ್‌ ಕೂಡ ಶೇ. 1ರಷ್ಟು ಮೇಲೇರಿವೆ.

“ಆರ್‌ಐಎಲ್ ಮತ್ತು ಐಸಿಐಸಿಐ ಬ್ಯಾಂಕ್‌ನ ಫಲಿತಾಂಶಗಳು ಉತ್ತಮವಾಗಿವೆ. ಇದು ಭಾರತೀಯ ಬೃಹತ್‌ ಕಾರ್ಪೊರೇಟ್‌ ಕಂಪನಿಗಳ ಲಾಭದಾಯಕತೆಯ ಪ್ರಸ್ತುತ ಪ್ರವೃತ್ತಿಯನ್ನು ಬಲಪಡಿಸುತ್ತಿದೆ,” ಎಂದು ವಿಜಯಕುಮಾರ್ ಹೇಳಿದ್ದಾರೆ.

ವೊಡಾಫೋನ್‌ ಐಡಿಯಾ (ವಿ) ಶೇ. 2.94ರಷ್ಟು ಕುಸಿದು ರೂ.11.55ಕ್ಕೆ ತಲುಪಿದೆ. ವಿದೇಶಿ ಬ್ರೋಕರೇಜ್ ನೋಮುರಾ ಇಂಡಿಯಾ ವಿ ಷೇರಿಗೆ ನೀಡಿರುವ 8 ರೂ.ಗಳ ಗುರಿಯನ್ನು ಉಳಿಸಿಕೊಂಡಿದೆ. ಏಕೆಂದರೆ ಡಿಸೆಂಬರ್ ತ್ರೈಮಾಸಿಕದ ನಷ್ಟಗಳು ಅದರ ನಿರೀಕ್ಷೆಗಳಿಗೆ ಅನುಗುಣವಾಗಿ ಬಂದಿದ್ದವು.

ವಿಯ 9,700 ಕೋಟಿ ಆದಾಯವು ನೊಮುರಾ ಲೆಕ್ಕಾಚಾರಕ್ಕೆ ಅನುಗುಣವಾಗಿದೆ ಮತ್ತು ಬ್ಲೂಮ್‌ಬರ್ಗ್ ಒಮ್ಮತದ ಅಂದಾಜಿನಂತೆಯೇ ಇದೆ. ಸ್ವಲ್ಪ ಹೆಚ್ಚಿನ ಎಆರ್‌ಪಿಯು ಮತ್ತು ಚಂದಾದಾರರ ಸಂಖ್ಯೆಯ ಕುಸಿತದ ಪರಿಣಾಮವನ್ನೂ ಸರಿದೂಗಿಸಿದೆ. ಕಂಪನಿ ವರದಿ ಮಾಡಿರುವ 7,200 ಕೋಟಿ ರೂ. ನಷ್ಟವು ನೋಮುರಾ ಮುನ್ಸೂಚನೆಗೆ ಅನುಗುಣವಾಗಿದೆ. ಆದರೆ ಬ್ಲ್ಯೂಂಬರ್ಗ್‌ ಅಂದಾಜಿಸಿದ್ದ 6,800 ಕೋಟಿ ರೂ.ಗಿಂತ ಹೆಚ್ಚಿದೆ.

ಯೆಸ್‌ ಬ್ಯಾಂಕ್ ಷೇರುಗಳು ಶೇಕಡಾ 1.89 ರಷ್ಟು ಗಳಿಕೆ ಕಂಡಿದ್ದು 14 ರೂ.ಗೆ ತಲುಪಿದೆ. ಯೆಸ್‌ ಬ್ಯಾಂಕ್‌ನ ಡಿಸೆಂಬರ್ ತ್ರೈಮಾಸಿಕ ಲಾಭವು ವಿಶ್ಲೇಷಕರ ಅಂದಾಜಿಗಿಂತ ಹೆಚ್ಚಿನದಾಗಿದೆ. ಪ್ರಾವಿಷನ್‌ ಅಂದಾಜಿಗಿಂತ ಕಡಿಮೆ ಇದ್ದಿದ್ದೇ ಇದಕ್ಕೆ ಪ್ರಮುಖ ಕಾರಣ. ಆದರೆ ವಿಶ್ಲೇಷಕರು ಬ್ಯಾಂಕಿನ ಆಸ್ತಿ ಗುಣಮಟ್ಟ ಮತ್ತು ಇತರ ಅನುಪಾತಗಳ ಬಗ್ಗೆ ಗಮನ ಹರಿಸಿದ್ದು, ಷೇರಿಗೆ ರೂ. 10ರ ಬೆಲೆಯನ್ನು ಸೂಚಿಸಿದ್ದಾರೆ.

ವಾಣಿಜ್ಯ ಕ್ಷೇತ್ರದ 20 ಕ್ಕೂ ಹೆಚ್ಚು ವಲಯಗಳಿಗೆ ಸಂಬಂಧಿಸಿದ ಅತ್ಯುತ್ತಮ ಲೇಖನಗಳು ಮತ್ತು ಉದ್ಯಮಕ್ಕೆ ಸಂಬಂಧಿಸಿದ ಆಳವಾದ ಮಾಹಿತಿಗಾಗಿ ನೀವು ಎಕನಾಮಿಕ್ ಟೈಮ್ಸ್‌ ಓದಬಹುದು. ಮಾಹಿತಿಯುಕ್ತ ಲೇಖನಗಳನ್ನು ಓದಲು ಎಕನಾಮಿಕ್ ಟೈಮ್ಸ್ ಇಲ್ಲಿ ಕ್ಲಿಕ್ ಮಾಡಿ.



Read more

[wpas_products keywords=”deal of the day sale today offer all”]