Karnataka news paper

ರ‍್ಯಾಲಿಗಳಿಗೆ ಚುನಾವಣಾ ಆಯೋಗ ನಿಷೇಧ, ಖಾಸಗಿ ವಿಮಾನ, ಹೆಲಿಕಾಪ್ಟರ್‌ಗಳಿಗೆ ಬೇಡಿಕೆ ಕುಸಿತ!


ಮುಂಬಯಿ: ಉತ್ತರ ಪ್ರದೇಶ, ಪಂಜಾಬ್‌ ಸೇರಿ ಐದು ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾದರೂ ಕೊರೊನಾ ಭೀತಿಯಿಂದಾಗಿ ಚುನಾವಣೆ ಆಯೋಗವು ಭೌತಿಕ ರ‍್ಯಾಲಿಗಳನ್ನು ಜನವರಿ 31ರವರೆಗೆ ನಿಷೇಧಿಸಿದೆ. ಹೀಗಾಗಿ ಖಾಸಗಿ ವಿಮಾನಗಳಿಗೆ ಬೇಡಿಕೆಯೇ ಇಲ್ಲವಾಗಿದೆ.

ಸಾಮಾನ್ಯವಾಗಿ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗಳಲ್ಲಿ ರಾಜಕೀಯ ನಾಯಕರ ಹಾರಾಟಕ್ಕಾಗಿ ಖಾಸಗಿ ವಿಮಾನ, ಹೆಲಿಕಾಪ್ಟರ್‌ಗಳಿಗೆ ಭಾರೀ ಬೇಡಿಕೆ ಇರುತ್ತದೆ. ಈ ಸಲ ಉತ್ತರ ಪ್ರದೇಶದ ಬಗ್ಗೆ ಪ್ರಮುಖ ಪಕ್ಷಗಳು ವಿಶೇಷ ಗಮನ ಹರಿಸಿದ್ದರಿಂದ ಡಿಸೆಂಬರ್‌ನಲ್ಲಿ ಖಾಸಗಿ ವಿಮಾನ, ಹೆಲಿಕಾಪ್ಟರ್‌ಗಳಿಗೆ ಕೊಂಚ ಬೇಡಿಕೆ ಕಂಡು ಬಂದಿತ್ತು. ಆದರೆ ಚುನಾವಣಾ ಆಯೋಗವು ವೇಳಾಪಟ್ಟಿ ಪ್ರಕಟಿಸಿ, ಭೌತಿಕ ರ‍್ಯಾಲಿಗಳಿಗೆ ನಿರ್ಬಂಧ ವಿಧಿಸಿದ ಬಳಿಕ ಮುಂಗಡ ಬುಕ್ಕಿಂಗ್‌ಗಳೂ ರದ್ದಾಗಿವೆ ಎಂದು ಖಾಸಗಿ ವಿಮಾನಗಳನ್ನು ನಿರ್ವಹಿಸುವ ಕಂಪನಿಗಳು ಅಳಲು ತೋಡಿಕೊಂಡಿವೆ. ಚುನಾವಣೆ ಸಂದರ್ಭದಲ್ಲಿ ಪ್ರತಿ ತಿಂಗಳು ಖಾಸಗಿ ವಿಮಾನ ಹಾಗೂ ಕಾಪ್ಟರ್‌ಗಳು 350-400 ಗಂಟೆ ಹಾರಾಟ ನಡೆಸುತ್ತವೆ. ಆದರೆ ಸದ್ಯದ ಹಾರಾಟ ಅದರ ಶೇ. 10 ರಿಂದ 15ರಷ್ಟು ಸಹ ಇಲ್ಲ ಎಂದು ಆಪರೇಟರ್‌ಗಳು ಹೇಳಿದ್ದಾರೆ.

“ಚುನಾವಣಾ ಪ್ರಯಾಣವು ಚುರುಕುಗೊಂಡಿಲ್ಲ. ಆರಂಭದಲ್ಲಿ, ಡಿಸೆಂಬರ್‌ ಮಧ್ಯ ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಬೇಡಿಕೆ ಪ್ರಾರಂಭವಾಗಲು ಶುರುವಾಯಿತು. ಆದರೆ ನಂತರ ಚುನಾವಣಾ ಆಯೋಗ ರ‍್ಯಾಲಿಗಳ ಮೇಲೆ ನಿಷೇಧವನ್ನು ಘೋಷಿಸಿತು. ಇದರಿಂದಾಗಿ ಹೆಚ್ಚಿನ (ಚುನಾವಣೆ ಸಂಬಂಧಿತ) ಪ್ರಯಾಣ ಸಂಪೂರ್ಣವಾಗಿ ನಿಂತಿತು,” ಎಂದು ಕ್ಲಬ್ ಒನ್ ಏರ್ ಸಿಇಒ ರಾಜನ್ ಮೆಹ್ರಾ ತಿಳಿಸಿದ್ದಾರೆ.

ಚುನಾವಣಾ ಪ್ರಯಾಣವು ತುಂಬಾ ಸೀಮಿತವಾಗಿದೆ ಎಂದು ಕತಾರ್ ಏರ್‌ವೇಸ್‌ನ ಭಾರತೀಯ ಮುಖ್ಯಸ್ಥರೂ ಆಗಿದ್ದ ಮೆಹ್ರಾ ಹೇಳಿದ್ದಾರೆ.

“ಚುನಾವಣೆ ಘೋಷಣೆಗೆ ಕೊಂಚ ಮುನ್ನ ಖಾಸಗಿ ವಿಮಾನಗಳ ಬುಕ್ಕಿಂಗ್‌ಗೆ ಸಂಬಂಧಿಸಿ ನಿತ್ಯ ಸುಮಾರು 70 ವಿಚಾರಣಾ ಕರೆಗಳು ಬರುತ್ತಿದ್ದವು. ಆದರೆ ಆ ಪೈಕಿ ಒಂದೇ ಒಂದು ಬುಕ್ಕಿಂಗ್‌ ಸಹ ಆಗಿಲ್ಲ,” ಎಂದು ಜೆಟ್‌ಸೆಟ್‌ಗೋ ಏವಿಯೇಷನ್‌ ಸಿಇಒ ಕನ್ನಿಕಾ ಟೇಕ್ರಿವಾಲ್‌ ಹೇಳಿದ್ದಾರೆ.

“ಭೌತಿಕ ರ‍್ಯಾಲಿಗಳ ಮೇಲಿನ ನಿಷೇಧವನ್ನು ವಿಸ್ತರಿಸಿರುವುದರಿಂದ, ಈ ಬಾರಿ ಚುನಾವಣಾ ರ‍್ಯಾಲಿಗಳಿಗಾಗಿ ಹೆಚ್ಚು ವಿಮಾನಗಳು ಓಡಾಡುವುದನ್ನು ನಾವು ನೋಡುತ್ತಿಲ್ಲ” ಎಂದು ಟೇಕ್ರಿವಾಲ್‌ ತಿಳಿಸಿದ್ದಾರೆ.

ಜೆಟ್‌ಸೆಟ್‌ಗೋ 18, ಕ್ಲಬ್‌ ಒನ್‌ 10 ಖಾಸಗಿ ವಿಮಾನಗಳನ್ನು ನಿರ್ವಹಿಸುತ್ತಿವೆ.

ಜನವರಿ 8 ರಂದು ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್ ಮತ್ತು ಮಣಿಪುರ ವಿಧಾನಸಭಾ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದ ಚುನಾವಣಾ ಆಯೋಗವು ಜನವರಿ 15ರವರೆಗೆ ಭೌತಿಕ ರ‍್ಯಾಲಿಗಳು, ರೋಡ್‌ಶೋಗಳು ಮತ್ತು ಬೈಕ್ ರ‍್ಯಾಲಿಗಳಂಥ ಪ್ರಚಾರ ಕಾರ್ಯಕ್ರಮಗಳಿಗೆ ನಿಷೇಧ ಹೇರಿತ್ತು. ಜನವರಿ 15 ರಂದು ಆಯೋಗವು ಜನವರಿ 22ರವರೆಗೆ ನಿಷೇಧವನ್ನು ವಿಸ್ತರಿಸಿತು. ಶನಿವಾರ ಇದನ್ನು ಜನವರಿ 31 ರವರೆಗೆ ವಿಸ್ತರಿಸಿದೆ.

ಚುನಾವಣಾ ಸಂಬಂಧಿತ ಪ್ರಯಾಣವು ಚಾರ್ಟರ್ ಕಂಪನಿಗಳಿಗೆ ವರದಾನವಾಗುತ್ತಿಲ್ಲವಾದರೂ, ಚಾರ್ಟರ್ ಫ್ಲೈಟ್ ಕಾರ್ಯಾಚರಣೆಗಳ ಒಟ್ಟಾರೆ ಸನ್ನಿವೇಶವು ತುಂಬಾ ಉತ್ತಮವಾಗಿದೆ ಎಂದು ಮೆಹ್ರಾ ವಿವರ ನೀಡಿದ್ದಾರೆ.

ಮೊದಲ ಕೊರೊನಾ ಅಲೆಯ ನಂತರ ಸುರಕ್ಷತೆಯು ಐಷಾರಾಮಿ ಅಥವಾ ಇತರ ಎಲ್ಲಾ ವಿಷಯಗಳನ್ನು ಮೀರಿದ ಪ್ರಾಮುಖ್ಯತೆಯ ವಿಷಯವಾಗಿರುವುದು ನಮಗೆ ವರದಾನವಾಗಿ ಎಂದವರು ಹೇಳಿದ್ದಾರೆ.

“ಖಾಸಗಿ ಜೆಟ್‌ಗಳಲ್ಲಿ ಪ್ರಯಾಣ ಹೆಚ್ಚಾಗಿದೆ. ಕೊರೊನಾಕ್ಕಿಂತ ಮೊದಲು ನಾವು ತಿಂಗಳಿಗೆ ಸರಾಸರಿ 150 – 200 ಹಾರಾಟದ ಗಂಟೆಗಳನ್ನು ನೋಡುತ್ತಿದ್ದರೆ, ಅದೀಗ ತಿಂಗಳಿಗೆ 350 – 400 ಹಾರಾಟದ ಗಂಟೆಗಳವರೆಗೆ ಹೋಗಿದೆ,” ಎಂದು ಅವರು ಅಂಕಿ-ಅಂಶ ನೀಡಿದ್ದಾರೆ.

“ಚುನಾವಣಾ ಆಯೋಗವು ರ‍್ಯಾಲಿಗಳಿಗೆ ಹೇರಿರುವ ನಿಷೇಧವನ್ನು ತೆಗೆದುಹಾಕುತ್ತಿದ್ದಂತೆ ಇದು ಮತ್ತೆ ಹೆಚ್ಚಾಗಬಹುದು. ಆದರೆ ಸದ್ಯಕ್ಕೆ ಹೆಚ್ಚಿನ ನಿರ್ವಾಹಕರಿಗೆ ಚುನಾವಣಾ ರ‍್ಯಾಲಿ ಸಂಬಂಧಿತ ಪ್ರಯಾಣ ಶೇ. 10-15 ರಷ್ಟು ಅಷ್ಟೇ ಇದೆ,” ಎಂದು ಅವರು ಉಲ್ಲೇಖಿಸಿದ್ದಾರೆ. ಕಳೆದ ವರ್ಷ, ಚುನಾವಣಾ ಋತುವಿನಲ್ಲಿ, ಸರಿಸುಮಾರು ಶೇ. 30-40ರಷ್ಟು ಪ್ರಯಾಣವು ಚುನಾವಣಾ ರ‍್ಯಾಲಿಗಳಿಗೆ ಸಂಬಂಧಿಸಿದವೇ ಆಗಿತ್ತು ಎಂದಿದ್ದಾರೆ ಅವರು.

ಸಾಂಕ್ರಾಮಿಕ ರೋಗಕ್ಕೂ ಮೊದಲು ವಾಣಿಜ್ಯ ಸಂಬಂಧಿತ ಪ್ರಯಾಣವೇ ಪ್ರಮುಖವಾಗಿತ್ತು ಎಂದು ಟೇಕ್ರಿವಾಲ್ ಹೇಳಿದ್ದು, ಇದೀಗ ಆರಾಮದಾಯಕ ಪ್ರಯಾಣವು ವ್ಯಾಪಾರದ ಪ್ರಮುಖ ಪಾಲನ್ನು ತಂದುಕೊಡುತ್ತಿದೆ ಎಂದು ವಿವರಿಸಿದ್ದಾರೆ.

ವಾಣಿಜ್ಯ ಕ್ಷೇತ್ರದ 20 ಕ್ಕೂ ಹೆಚ್ಚು ವಲಯಗಳಿಗೆ ಸಂಬಂಧಿಸಿದ ಅತ್ಯುತ್ತಮ ಲೇಖನಗಳು ಮತ್ತು ಉದ್ಯಮಕ್ಕೆ ಸಂಬಂಧಿಸಿದ ಆಳವಾದ ಮಾಹಿತಿಗಾಗಿ ನೀವು ಎಕನಾಮಿಕ್ ಟೈಮ್ಸ್‌ ಓದಬಹುದು. ಮಾಹಿತಿಯುಕ್ತ ಲೇಖನಗಳನ್ನು ಓದಲು ಎಕನಾಮಿಕ್ ಟೈಮ್ಸ್ ಇಲ್ಲಿ ಕ್ಲಿಕ್ ಮಾಡಿ.



Read more…

[wpas_products keywords=”deal of the day”]