ಹೈಲೈಟ್ಸ್:
- ಒಂದು ಜಮೀನಿನ ಎಲ್ಲ ಮಾಹಿತಿಗಳು ಒಂದು ನಂಬರ್‌ನಡಿ ಸಿಗುವುದರಿಂದ ಭೂಮಾಲೀಕರಿಗೆ ಬೇರೆ ಬೇರೆ ಕಡೆ ಹುಡುಕಾಡುವುದೂ ತಪ್ಪುತ್ತದೆ
- ಭೂಸಂಬಂಧಿತ ಪ್ರಕರಣಗಳಲ್ಲಿ ಸಾರ್ವಜನಿಕರು ಮೋಸಕ್ಕೆ ಒಳಗಾಗುವುದನ್ನು ತಡೆಯುವ ಈ ವ್ಯವಸ್ಥೆಯನ್ನು ಜಾರಿಗೊಳಿಸುವ ದೇಶದ ಮೊದಲ ರಾಜ್ಯ ಕರ್ನಾಟಕವಾಗಲಿದೆ
- ಪ್ರತಿಯೊಂದು ಜಮೀನಿಗೂ ಒಂದು ವಿಶಿಷ್ಟ ಗುರುತಿನ ಸಂಖ್ಯೆ ಒದಗಿಸಿ ಅದೇ ಸಂಖ್ಯೆಯ ಅಡಿಯಲ್ಲೇ ಅದೇ ಭೂಮಿಗೆ ಸಂಬಂಧಿತ ಭೂ-ಪ್ರಕ್ರಿಯೆ ಜರುಗಿಸುವುದು ಈ ವ್ಯವಸ್ಥೆಯ ಮುಖ್ಯ ಉದ್ದೇಶ
ಬೆಂಗಳೂರು: ರಾಜ್ಯದಲ್ಲಿ ಭೂದಾಖಲೆಗಳ ಸುಗಮ ನಿರ್ವಹಣೆ, ಅಕ್ರಮಗಳನ್ನು ಕೊನೆಗಾಣಿಸಲು ಏಕೀಕೃತ ಭೂ-ನಿರ್ವಹಣಾ ವ್ಯವಸ್ಥೆ (ಯುಎಲ್‌ಎಂಎಸ್) ಜಾರಿಗೆ ತರಲು ಕಂದಾಯ ಇಲಾಖೆ ತಯಾರಿ ನಡೆಸಿದೆ.
ಪ್ರತಿಯೊಂದು ಜಮೀನಿಗೂ ಆಧಾರ್ ಮಾದರಿಯಲ್ಲಿ ಒಂದು ವಿಶಿಷ್ಟ ಗುರುತಿನ ಸಂಖ್ಯೆ (ಯುನಿಕ್ ಲ್ಯಾಂಡ್ ಪಾರ್ಸಲ್ ಐಡೆಂಟಿಫಿಕೇಷನ್/ಯುಎಲ್‌ಪಿನ್) ಒದಗಿಸಿ ಅದರ ಅಡಿಯಲ್ಲಿ ಜಮೀನಿಗೆ ಸಂಬಂಧಿಸಿ ಎಲ್ಲ ದಾಖಲೆಗಳನ್ನು ನಮೂದಿಸುವ ಕೆಲಸ ನಡೆಯುತ್ತಿದೆ. ಒಂದು ಜಮೀನಿನ ಎಲ್ಲ ಮಾಹಿತಿಗಳು ಒಂದು ನಂಬರ್‌ನಡಿ ಸಿಗುವುದರಿಂದ ಭೂಮಾಲೀಕರಿಗೆ ಬೇರೆ ಬೇರೆ ಕಡೆ ಹುಡುಕಾಡುವುದೂ ತಪ್ಪುತ್ತದೆ. ಮತ್ತು ಭೂ ಒತ್ತುವರಿ, ನಕಲಿ ದಾಖಲೆ ಸೃಷ್ಟಿಸಿ ಮಾರಾಟದಂಥ ಅಕ್ರಮಗಳನ್ನು ತಡೆಯಲು ಸಾಧ್ಯವಾಗುತ್ತದೆ.
ಒಂದೇ ಜಮೀನಿಗೆ ಸಂಬಂಧಿಸಿದ ನಾನಾ ಪ್ರಕ್ರಿಯೆಗಳನ್ನು ನಾನಾ ಇಲಾಖೆಗಳು ನಿರ್ವಹಿಸಬೇಕಾಗುತ್ತದೆ. ಇದರಲ್ಲಿ ಗೊಂದಲ ಮತ್ತು ಅಕ್ರಮಕ್ಕೆ ಎಡೆ ಮಾಡುವ ಅವಕಾಶಗಳೇ ಹೆಚ್ಚು. ಇದಕ್ಕೆ ತಡೆ ಹಾಕುವ ಏಕೀಕೃತ ವ್ಯವಸ್ಥೆ ಇದಾಗಲಿದೆ.
ಮೊದಲ ರಾಜ್ಯ
ಭೂಸಂಬಂಧಿತ ಪ್ರಕರಣಗಳಲ್ಲಿ ಸಾರ್ವಜನಿಕರು ಮೋಸಕ್ಕೆ ಒಳಗಾಗುವುದನ್ನು ತಡೆಯುವ ಈ ವ್ಯವಸ್ಥೆಯನ್ನು ಜಾರಿಗೊಳಿಸುವ ದೇಶದ ಮೊದಲ ರಾಜ್ಯ ಕರ್ನಾಟಕವಾಗಲಿದೆ.
ಹಲವು ಇಲಾಖೆಗಳ ಸಮನ್ವಯ
ಕಂದಾಯ, ಅರಣ್ಯ, ಕೃಷಿ ಮತ್ತು ಕೃಷಿಯೇತರ ಲಕ್ಷಾಂತರ ಎಕರೆ ಜಮೀನು ಒತ್ತುವರಿ ಆಗಿರುವ ಬಗ್ಗೆ ಸರಕಾರದ ಬಳಿ ದಾಖಲೆ ಇದೆ. ಹಾಗೂ ಖಾಸಗಿ ಮಾಲೀಕತ್ವದ ಜಮೀನಿಗೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿ ಹಲವರಿಗೆ ಮಾರಾಟ, ಅಡಮಾನವಿಟ್ಟು ಸಾಲ ಪಡೆದ ಪ್ರಕರಣಗಳು ನಿತ್ಯ ಬೆಳಕಿಗೆ ಬರುತ್ತಿವೆ. ಬೆಂಗಳೂರು ಸೇರಿದಂತೆ ನಗರ ವ್ಯಾಪ್ತಿಯಲ್ಲೇ ಇಂತಹ ಅಕ್ರಮಗಳು ಹೆಚ್ಚು. ಈ ಬಗ್ಗೆ ಸದನದ ಒಳಗೂ/ಹೊರಗೂ ಅನೇಕ ಬಾರಿ ಚರ್ಚೆ ಗಂಭೀರ ಚರ್ಚೆ ನಡೆದಿತ್ತು. ಸಮಸ್ಯೆಗಳ ಪರಿಹಾರಕ್ಕೆ ಯುಎಲ್‌ಎಂಎಸ್ ಜಾರಿಗೆ ಸರಕಾರ ಕಳೆದೊಂದು ವರ್ಷದಿಂದ ಸಿದ್ಧತೆ ನಡೆಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ(ಇ-ಆಡಳಿತ) ಇಲಾಖೆ ಈ ವ್ಯವಸ್ಥೆಯ ಪೂರ್ಣ ಜವಾಬ್ದಾರಿ ಹೊತ್ತಿದ್ದು, ಭೂಸಂಬಂಧಿತ ಕಾರ್ಯ ನಿರ್ವಹಿಸುವ 14 ಇಲಾಖೆಗಳ ತಂತ್ರಾಂಶಗಳನ್ನು ಸಂಯೋಜಿಸಿ ಒಂದೇ ವೇದಿಕೆಗೆ ತರಲಾಗುತ್ತಿದೆ. ಕಂದಾಯ, ವಸತಿ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಸ್ಥಳೀಯ ಸಂಸ್ಥೆಗಳು, ಬಿಬಿಎಂಪಿ, ಬಿಡಿಎ ಸೇರಿದಂತೆ ಪ್ರಮುಖ ಇಲಾಖೆಗಳ ಭೂಸಂಬಂಧಿತ ತಂತ್ರಾಂಶಗಳ ಸಂಯೋಜನೆ ನಡೆಯುತ್ತಿದೆ.
ಪ್ರಮುಖ ಉದ್ದೇಶ
ಪ್ರತಿಯೊಂದು ಜಮೀನಿಗೂ ಒಂದು ವಿಶಿಷ್ಟ ಗುರುತಿನ ಸಂಖ್ಯೆ ಒದಗಿಸಿ ಅದೇ ಸಂಖ್ಯೆಯ ಅಡಿಯಲ್ಲೇ ಅದೇ ಭೂಮಿಗೆ ಸಂಬಂಧಿತ ಭೂ-ಪ್ರಕ್ರಿಯೆ ಜರುಗಿಸುವುದು ಈ ವ್ಯವಸ್ಥೆಯ ಮುಖ್ಯ ಉದ್ದೇಶ. ಯುಎಲ್‌ಪಿನ್ ಮೂಲಕ ಭೂ ಖರೀದಿ/ಮಾರಾಟ ಮತ್ತು ಸ್ಥಿತಿಗತಿಗಳನ್ನು ಪೋರ್ಟಲ್ ಮೂಲಕ ತಿಳಿಯಲು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುತ್ತಿದೆ.
ಅಧಿಕಾರ ಮೊಟಕು ಇಲ್ಲ
ಭೂ ಸಂಬಂಧಿಸಿದಂತೆ ಆಯಾ ಇಲಾಖೆಗಳು ಕಾರ್ಯನಿರ್ವಹಿಸುತ್ತಿರುವ ಶಾಸನಬದ್ಧ ಅಧಿಕಾರನ್ನು ಏಕೀಕೃತ ಭೂನಿರ್ವಹಣಾ ವ್ಯವಸ್ಥೆ ಮೂಲಕ ಅವರ ಅಧಿಕಾರವನ್ನು ಮೊಟಕು ಗೊಳಿಸುವುದಿಲ್ಲ. ಆಯಾ ಇಲಾಖೆಯಿಂದ ಶಾಸನಬದ್ಧ ಅಧಿಕಾರವನ್ನು ಅವರೇ ಚಲಾಯಿಸುತ್ತಾರೆ. ವ್ಯವಸ್ಥೆ ಸುಧಾರಣೆಗೆ ಈ ವ್ಯವಸ್ಥೆ ಜಾರಿ ತರಲಾಗುತ್ತಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಕಾರಿಗಳು ವಿಕಗೆ ತಿಳಿಸಿದ್ದಾರೆ.
ಒಂದೇ ನಂಬರ್ ಅನುಕೂಲ
- ಜಮೀನು ವಿಚಾರವಾಗಿ ಕಾರ್ಯ ನಿರ್ವಹಿಸುವ ಎಲ್ಲ ಇಲಾಖೆಗಳ ಮಾಹಿತಿಗಳು ಒಂದೇ ತಂತ್ರಾಂಶದಲ್ಲಿ ಲಭ್ಯತೆಯಿಂದ ವ್ಯವಸ್ಥೆ ಪಾರದರ್ಶಕ ಆಗಿರುತ್ತದೆ.
- ಆಸ್ತಿಯನ್ನು ಖರೀದಿ/ಮಾರಾಟ/ಗೃಹ ಸಾಲ/ಆಸ್ತಿಯ ಮೇಲಿನ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ನಿರ್ದಿಷ್ಟ ಆಸ್ತಿಯು ಯಾವುದೇ ಆರ್ಥಿಕ ಅಥವಾ ಕಾನೂನು ಬಾಧ್ಯತೆಗಳಿಂದ ಮುಕ್ತವಾಗಿದೆ(ಎನ್ಕಂಬರೆನ್ಸ್ ಸರ್ಟಿಫಿಕೇಟ್/ಇಸಿ) ಎಂದು ಖಚಿತಪಡಿಸಲು ಅನುಕೂಲ.
- ಮಾಲೀಕತ್ವದ ಜಮೀನು/ನಿವೇಶನದ ಮೇಲೆ ನಕಲಿ ದಾಖಲೆ/ಆಸ್ತಿ ಸಂಖ್ಯೆ ಸೃಷ್ಟಿಯನ್ನು ತಡೆಹಿಡಿಯಬಹುದು.
- ಯುಎಲ್‌ಪಿನ್ ಸಂಖ್ಯೆ ಮೂಲಕ ಉಪನೋಂದಣಿ ಕಚೇರಿಯಲ್ಲಿ ಒಂದು ಆಸ್ತಿಗೆ ಸಂಬಂಧಿಸಿದ ದಾಖಲೆ ಸೃಷ್ಟಿ. ಅದೇ ದಾಖಲೆ ಮೇಲೆ ಎನ್ಕಂಬರೆನ್ಸ್ ಸರ್ಟಿಫಿಕೇಟ್/ಇಸಿ ಹೊಂದುವುದು.
- ಖರೀದಿಸುವ ನಿವೇಶನ/ಕಟ್ಟಡ/ಜಮೀನು ಯಾರ ಮಾಲೀಕತ್ವದಲ್ಲಿದೆ. ನಗರ ಪಾಲಿಕೆ ವ್ಯಾಪ್ತಿ/ಗ್ರಾಮ ವ್ಯಾಪ್ತಿ/ ಕೃಷಿ ಭೂಮಿ ಅಥವಾ ಪರಿವರ್ತಿತ ಭೂಮಿಯೋ ಎಂದು ತಿಳಿಯಬಹುದು.
- ದತ್ತಾಂಶಗಳ ವರ್ಗಾವಣೆಗೆ ಸಹಕಾರಿ, ಭೂವ್ಯಾಜ್ಯಗಳನ್ನು ಕಡಿಮೆಗೊಳಿಸುವುದು ಮತ್ತು ಸರಳೀಕೃತ ಪ್ರಕ್ರಿಯೆ.
- ನಕಲಿ ದಾಖಲೆ ಸೃಷ್ಟಿಗೆ ತಡೆ
ಭವಿಷ್ಯದಲ್ಲಿ ಭೂ ವಾಜ್ಯಗಳನ್ನು ಕಡಿಮೆಗೊಳಿಸುವುದು, ಜನ ಸಾಮಾನ್ಯರಿಗೆ ಭೂ ಮಾಹಿತಿ ಲಭ್ಯಗೊಳಿಸುವ ಮತ್ತು ಭೂ ಪ್ರಕ್ರಿಯೆಗಳನ್ನು ಪಾರದರ್ಶಕಗೊಳಿಸುವ ಸಂಬಂಧ ಇದೊಂದು ಪರಿಪೂರ್ಣ ವ್ಯವಸ್ಥೆ ಆಗಿರಲಿದೆ.
ರಾಜೀವ್ ಚಾವ್ಲಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ,ಇ-ಆಡಳಿತ ಇಲಾಖೆ.
ಅಕ್ರಮಗಳೇನು?
- ಎರಡು ಎಕರೆ ಕೃಷಿ ಭೂಮಿಯಲ್ಲಿ ಒಂದು ಎಕರೆ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತಿಸಿದ ನಂತರ ‘ಭೂಮಿ’ ತಂತ್ರಾಂಶದಲ್ಲಿ(ಕಂದಾಯ ಇಲಾಖೆ) ಪರಿವರ್ತಿತ ಭೂಮಿಯನ್ನು ಅಳವಡಿಸಬೇಕಾಗುತ್ತದೆ. ಹಲವು ಸಂದರ್ಭದಲ್ಲಿ ಕೃಷಿ ಮತ್ತು ಕೃಷಿಯೇತರ ಎಂದು ಪ್ರತ್ಯೇಕಿಸದ ಕಾರಣ ಪರಿವರ್ತಿತ ಭೂಮಿಯನ್ನು ಲೇಔಟ್ ಮಾಡಲಾಗುತ್ತದೆ ಹಾಗೂ ಅದೇ ಬೂಮಿಯನ್ನು ಕೃಷಿ ಭೂಮಿ ಎಂದು ದಾಖಲೆ ಸೃಷ್ಟಿಸಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಕೃಷಿಯೇತರ ಭೂಮಿಯಾಗಿ ಪರಿವರ್ತನೆ ಆದ ನಂತರ ಸಮರ್ಪಕ ನಿರ್ವಹಣೆ ವ್ಯವಸ್ಥೆ ಜಾರಿ ಇಲ್ಲ.
- ಒಂದೇ ಜಮೀನಿಗೆ ಸಂಬಂಧಿಸಿದಂತೆ ಆರ್‌ಡಿಪಿಆರ್, ಬಿಡಿಎ, ಬಿಬಿಎಂಪಿ, ನಗರಾಭಿವೃದ್ಧಿ(ನಗರ ಪಾಲಿಕೆ, ಮಹಾನಗರ ಪಾಲಿಕೆ), ಯೋಜನಾ ಪ್ರಾಧಿಕಾರ, ಕಂದಾಯ ಇಲಾಖೆ (ಭೂಮಿ, ಸಮೀಕ್ಷೆ, ಉಪ ನೋಂದಣಿ) ಕಚೇರಿಗೆ ಭೂಪ್ರಕ್ರಿಯೆ ವರ್ಗಾವಣೆಗೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ಒಂದೊಂದು ಇಲಾಖೆ ಒಂದೊಂದು ಪ್ರತ್ಯೇಕ ಸಂಖ್ಯೆ ನೀಡುವುದರಿಂದ ಭೂವ್ಯಾಜ್ಯಗಳು ಅಧಿಕಗೊಳ್ಳುತ್ತಿವೆ. ಮತ್ತು ಭೂ-ದತ್ತಾಂಶಗಳ ವರ್ಗಾವಣೆ ಸಾಧ್ಯವಾಗುತ್ತಿಲ್ಲ.
- ಪ್ರತಿಯೊಂದು ಇಲಾಖೆಯಲ್ಲಿ ಒಂದೊಂದು ತಂತ್ರಾಂಶ ಬಳಸಲಾಗುತ್ತಿದೆ. ಮತ್ತು ತಂತ್ರಾಂಶಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಲಾಗಿದೆ. ಅವಧಿ ಮೀರಿದ ತಂತ್ರಾಂಶ ಬಳಕೆಯಿಂದ ಭೂದತ್ತಾಂಶಗಳ ಅಳವಡಿಕೆ ಸಾಧ್ಯವಾಗುತ್ತಿಲ್ಲ. ಭೂದತ್ತಾಂಶ ಅಳವಡಿಕೆ ಮತ್ತು ಬದಲಾವಣೆ, ವರ್ಗಾವಣೆಗೆ ಖಾಸಗಿ ಸಂಸ್ಥೆಗಳು ಲಕ್ಷ/ಕೋಟಿ ಪಾವತಿಗೆ ಸರಕಾರವನ್ನು ಒತ್ತಾಯಿಸುತ್ತವೆ. ಸರಕಾರದ ಬೊಕ್ಕಸಕ್ಕೆ ಅನಗತ್ಯ ಕೋಟ್ಯಂತರ ರೂ. ನಷ್ಟ.
Read more
[wpas_products keywords=”deal of the day sale today offer all”]