Karnataka news paper

ನಿಯೋಟರ್ಮ್ಸ್ ವಿರಕ್ತಮತಿ: ಪಶ್ಚಿಮಘಟ್ಟದಲ್ಲಿ ಹೊಸ ಪ್ರಭೇದ ಗೆದ್ದಲು ಪತ್ತೆ


ಬೆಂಗಳೂರು: ‌ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧಕರು ಪಶ್ಚಿಮ ಘಟ್ಟದಲ್ಲಿ ಹೊಸ ಪ್ರಭೇದದ ಗೆದ್ದಲನ್ನು ಗುರುತಿಸಿದ್ದಾರೆ.

ಡೆಹರಾಡೂನ್‌ನ ಅರಣ್ಯ ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ಗೆದ್ದಲನ್ನು ಪತ್ತೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಉಡುಪಿ ಜಿಲ್ಲೆಯ ಹೆಬ್ರಿ ಬಳಿಯ ಮರದ ಸತ್ತ ಕೊಂಬೆಯಿಂದ ಈ ಹೊಸ ಜಾತಿಯ ಹುಳಗಳನ್ನು ಸಂಗ್ರಹಿಸಲಾಗಿದೆ.  ಗೆದ್ದಲುಗಳು ಸಾಮಾನ್ಯವಾಗಿ ಬೆಳೆಗಳಿಗೆ ಮತ್ತು ಮನೆಗಳಲ್ಲಿ ಮರದಿಂದ ಮಾಡಿದ ಪೀಠೋಪಕರಣಗಳಿಗೆ ಹಾನಿ ಮಾಡುವ ಸ್ವಭಾವ ಹೊಂದಿವೆ. ಇವು ಮರಗಳಲ್ಲಿ ಹೇರಳವಾಗಿರುವ  ’ಸೆಲ್ಯುಲೋಸ್‘  ಸೇವಿಸಿ ಜೀವಿಸುತ್ತವೆ. 

ಶಿವಮೊಗ್ಗದ ಕೃಷಿ ಕಾಲೇಜಿನ ಕೀಟಶಾಸ್ತ್ರ ವಿಭಾಗದ ಸಂಶೋಧನಾ ತಂಡದ ಕೀಟ ವರ್ಗೀಕರಣ ತಜ್ಞ  ಡಾ.ಸಿ.ಎಂ. ಕಲ್ಲೇಶ್ವರ ಸ್ವಾಮಿ  ಮತ್ತು ಅವರ ಸಂಶೋಧನಾ ವಿದ್ಯಾರ್ಥಿ ಡಾ.ರಂಜಿತ್ ಅವರು ಮಾದರಿಯನ್ನು ಸಂಗ್ರಹಿಸಿದ್ದರು.  ಈ ಹಿಂದೆ ವರದಿ ಮಾಡಲಾದ ’ನಿಯೋಟರ್ಮ್ಸ್‘ ಜಾತಿಯ ಗೆದ್ದಲುಗಳೊಂದಿಗೆ ವ್ಯತ್ಯಾಸವನ್ನು ಹೋಲಿಸಿ  ಈ ಹೊಸ ಜಾತಿ  ಗೆದ್ದಲನ್ನು ವೈಜ್ಞಾನಿಕ ಪ್ರಪಂಚಕ್ಕೆ ಪರಿಚಯಿಸಿದ್ದಾರೆ ಎಂದು ಪ್ರಕಟಣೆ ಹೇಳಿದೆ.
 
ಈ ಹೊಸ ಕೀಟಕ್ಕೆ ’ನಿಯೋಟರ್ಮ್ಸ್ ವಿರಕ್ತಮತಿ‘ ಎಂದು ಹೆಸರಿಡಲಾಗಿದೆ. ರಾಜ್ಯದ ಖ್ಯಾತ ಕೀಟ ತಜ್ಞ ಡಾ. ಸಿ.ಎ. ವಿರಕ್ತಮಠ ಅವರ ಹೆಸರನ್ನು ಇದಕ್ಕೆ ಇರಿಸಲಾಗಿದೆ.

ಈ ಅಧ್ಯಯನವನ್ನು ಅಂತಾರಾಷ್ಟ್ರೀಯ ಜರ್ನಲ್ ‘ಓರಿಯಂಟಲ್ ಇನ್ಸೆಕ್ಟ್ಸ್’ನಲ್ಲಿ ಪ್ರಕಟಿಸಲಾಗಿದೆ. ಸಂಶೋಧನೆಗೆ ಧನ ಸಹಾಯವನ್ನು ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ನೀಡಿದೆ.



Read more from source

[wpas_products keywords=”deal of the day sale today kitchen”]