ಬೆಂಗಳೂರು: ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಆಸ್ಪತ್ರೆಗಳ ಮೇಲಿನ ಅತಿಯಾದ ಒತ್ತಡವನ್ನು ಕಂಡು ಕಂಗಾಲಾಗಿದ್ದ ಕೇಂದ್ರ ಸರ್ಕಾರ, ದೇಶದಾದ್ಯಂತ ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಪಿಎಚ್‌ಸಿ) ಮತ್ತು ಸಮುದಾಯ ಆರೋಗ್ಯ ಕೇಂದ್ರಗಳನ್ನು (ಸಿಎಚ್‌ಸಿ) ಮೇಲ್ದರ್ಜೆಗೇರಿಸಲು ನಿರ್ದೇಶನ ನೀಡಿತ್ತು. ಎಂಟು ತಿಂಗಳ ಬಳಿಕವೂ ರಾಜ್ಯದ ಈ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ತಾಂಡವವಾಡುತ್ತಿದ್ದು, ಯಾವ ಬದಲಾವಣೆಯೂ ಕಣ್ಣಿಗೆ ಗೋಚರಿಸುತ್ತಿಲ್ಲ.
ರಾಜ್ಯದಲ್ಲಿ 2,359 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು 204 ಸಮುದಾಯ ಆರೋಗ್ಯ ಕೇಂದ್ರ
ಗಳಿವೆ. ರಾಜ್ಯದ ಬಹುಸಂಖ್ಯೆಯ ಜನರು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಕೆಳಹಂತದ ಈ ಆಸ್ಪತ್ರೆಗಳನ್ನೇ ನೆಚ್ಚಿಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಂತೂ ಪಿಎಚ್‌ಸಿ, ಸಿಎಚ್‌ಸಿಗಳೇ ಆರೋಗ್ಯ ವ್ಯವಸ್ಥೆಯ ಜೀವಾಳವಾಗಿವೆ. ಕೋವಿಡ್ ಬಳಿಕ ಈ ಆಸ್ಪತ್ರೆಗಳ ಮೇಲೆ ಮತ್ತಷ್ಟು ಒತ್ತಡ ಹೆಚ್ಚಾಗಿದೆ. ಸಿಬ್ಬಂದಿ ಕೊರತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಗ್ರಾಮೀಣ ಆರೋಗ್ಯ ಸೇವೆ ಕುಸಿಯುವ ಭೀತಿಯಲ್ಲಿದೆ.
ವರ್ಷದ ಹಿಂದೆ ಪಿಎಚ್‌ಸಿ ಮತ್ತು ಸಿಎಚ್‌ಸಿಗಳಲ್ಲಿ ವೈದ್ಯರ ಕೊರತೆಯೂ ವ್ಯಾಪಕವಾಗಿತ್ತು. 2021ರ ಮೇ ತಿಂಗ
ಳಲ್ಲಿ ಆರೋಗ್ಯ ಇಲಾಖೆಯು 1,763 ವೈದ್ಯರನ್ನು ನೇಮಕಾತಿ ಮಾಡಿಕೊಂಡಿತ್ತು. ಅವರಲ್ಲಿ 1,048 ಮಂದಿ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳೇ ಇದ್ದರು. ಅವರನ್ನು ರಾಜ್ಯದಾದ್ಯಂತ ಪಿಎಚ್‌ಸಿ ಮತ್ತು ಸಿಎಚ್‌ಸಿಗಳಿಗೆ ನಿಯೋಜನೆ ಮಾಡಿದ್ದು, ವೈದ್ಯರ ಕೊರತೆಯ ಸಮಸ್ಯೆ ಬಹುತೇಕ ಪರಿಹಾರವಾದಂತಾಗಿದೆ.
ಸಿಬ್ಬಂದಿಯೇ ಇಲ್ಲ: ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಬ್ಬ ವೈದ್ಯರ ಜತೆಗೆ ಒಬ್ಬ ಸ್ಟಾಫ್ ನರ್ಸ್, ಒಬ್ಬ ಪ್ರಯೋಗಾಲಯ ತಂತ್ರಜ್ಞ, ಒಬ್ಬ ಫಾರ್ಮಸಿಸ್ಟ್, ಒಬ್ಬ ಗುಮಾಸ್ತ, ಒಬ್ಬ ಡೇಟಾ ಎಂಟ್ರಿ ಆಪರೇಟರ್, ಕನಿಷ್ಠ ಇಬ್ಬರು ‘ಡಿ’ ದರ್ಜೆ ನೌಕರರು ಮತ್ತು ಆಯಾ ಆರೋಗ್ಯ ಕೇಂದ್ರಗಳ ವ್ಯಾಪ್ತಿಗೆ ಅನುಸಾರವಾಗಿ ಆರೋಗ್ಯ ಸಹಾಯಕರು ಇರಬೇಕು.
‘ಪಿಎಚ್‌ಸಿ ಮತ್ತು ಸಿಎಚ್‌ಸಿಗಳಲ್ಲಿ ಹಿಂದೆ ವೈದ್ಯರ ಕೊರತೆ ತೀವ್ರವಾಗಿತ್ತು. ಕೆಲವು ತಿಂಗಳಿಂದ ವೈದ್ಯರ ಕೊರತೆ ಕಡಿಮೆ ಇದೆ. ಆದರೆ, ಸಿಬ್ಬಂದಿ ಕೊರತೆ ತೀವ್ರವಾಗಿದೆ. ಶುಶ್ರೂಷಕರು, ಪ್ರಯೋಗಾಲಯ ತಂತ್ರಜ್ಞರು, ಫಾರ್ಮಸಿಸ್ಟ್, ಗುಮಾಸ್ತ, ಡೇಟಾ ಎಂಟ್ರಿ ಆಪರೇಟರ್‌ಗಳಲ್ಲಿ ಕೆಲವು ಹುದ್ದೆಗಳು ದೀರ್ಘಕಾಲದಿಂದ ಖಾಲಿ ಉಳಿದಿರುವುದನ್ನು ನೋಡಬಹುದು.
ಸಮಸ್ಯೆಗಳಲ್ಲೇ ಮುಳುಗಿವೆ ಇಎಸ್‌ಐ ಆಸ್ಪತ್ರೆಗಳು
ಕಾರ್ಮಿಕರಿಗೆ ರಿಯಾಯ್ತಿ ದರದಲ್ಲಿ ಚಿಕಿತ್ಸೆ ನೀಡುವುದಕ್ಕಾಗಿಯೇ ಪ್ರಾರಂಭಿಸಲಾದ ರಾಜ್ಯ ಕಾರ್ಮಿಕ ವಿಮಾ ನಿಗಮದ (ಇಎಸ್‌ಐಸಿ) ಆಸ್ಪತ್ರೆಗಳು ರಾಜ್ಯದಲ್ಲಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿವೆ. ರಾಜ್ಯದ ಬಹುತೇಕ ಇಎಸ್‌ಐ ಆಸ್ಪತ್ರೆಗಳು ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದ ನಲುಗುತ್ತಿವೆ.
ಕಲಬುರಗಿ ಮತ್ತು ಬೆಂಗಳೂರಿನ ರಾಜಾಜಿನಗರದಲ್ಲಿರುವ ಇಎಸ್‌ಐ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳು ಹಾಗೂ ಪೀಣ್ಯದಲ್ಲಿರುವ ಇಎಸ್‌ಐ ಆಸ್ಪತ್ರೆಗಳನ್ನು ನೇರವಾಗಿ ಕೇಂದ್ರ ಸರ್ಕಾರದ ಇಎಸ್‌ಐ ನಿಗಮವೇ ನಿರ್ವಹಿಸುತ್ತಿದೆ. ಕೆಲವು ವರ್ಷಗಳಿಂದ ಈಚೆಗೆ ಈ ಸಂಸ್ಥೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಕೇಂದ್ರ ಸರ್ಕಾರ ಆಸಕ್ತಿ ತೋರದೇ ಇರುವುದರಿಂದ ಸಿಬ್ಬಂದಿ ಕೊರತೆ ಹೊರಲಾರದ ಭಾರವಾಗಿ ಪರಿಣಮಿಸುತ್ತಿದೆ.
ಬೆಳಗಾವಿ, ದಾಂಡೇಲಿ, ದಾವಣಗೆರೆ, ಹುಬ್ಬಳ್ಳಿ, ಇಂದಿರಾನಗರ (ಬೆಂಗಳೂರು), ಮಂಗಳೂರು ಮತ್ತು ಮೈಸೂರಿನ ಇಎಸ್‌ಐ ಆಸ್ಪತ್ರೆಗಳನ್ನು ರಾಜ್ಯ ಸರ್ಕಾರವೇ ನಿರ್ವಹಿಸುತ್ತಿದೆ. ಆದರೆ, ಇಎಸ್‌ಐ ನಿಗಮವೇ ವೆಚ್ಚ ಭರಿಸಬೇಕಿದೆ. ಸಕಾಲಕ್ಕೆ ಅನುದಾನ ಬರುತ್ತಿಲ್ಲ ಮತ್ತು ಖಾಲಿ ಹುದ್ದೆಗಳ ಭರ್ತಿಗೆ ನಿಗಮ ಆಸಕ್ತಿ ತೋರುತ್ತಿಲ್ಲ. ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಪಡೆಯುವುದಕ್ಕೂ ಕಾರ್ಮಿಕರು ಈ ಆಸ್ಪತ್ರೆಗಳಲ್ಲಿ ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ.
‘ದಾಖಲೆ ಪ್ರಮಾಣದಲ್ಲಿ ಹುದ್ದೆ ಭರ್ತಿ’
‘ಒಂದೂವರೆ ವರ್ಷದಲ್ಲಿ ರಾಜ್ಯದ ಆರೋಗ್ಯ ಇಲಾಖೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಕಾಯಂ ಅಲ್ಲದಿದ್ದರೂ ಬೇರೆ ಬೇರೆ ಸ್ವರೂಪದಲ್ಲಿ ತುಂಬಲಾಗಿದೆ. ಆದರೂ, ಕೆಲವು ಹುದ್ದೆಗಳು ಖಾಲಿ ಉಳಿದಿವೆ. ಅವುಗಳನ್ನು ಭರ್ತಿ ಮಾಡುವ ಪ್ರಯತ್ನ ಜಾರಿಯಲ್ಲಿದೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
Read more from source
[wpas_products keywords=”deal of the day sale today kitchen”]