Karnataka news paper

ಅಮಾನವೀಯ ಘಟನೆ: ಸರ್ಕಾರಿ ಬಸ್‌ನಿಂದ ‘ನರಿಕ್ಕುರವ’ ಕುಟುಂಬವನ್ನು ಬಲವಂತವಾಗಿ ಕೆಳಗಿಳಿಸಿದ ಸಿಬ್ಬಂದಿ, ವಿಡಿಯೋ ವೈರಲ್!


Source : The New Indian Express

ಚೆನ್ನೈ: ನರಿಕ್ಕುರವ ಸಮುದಾಯದವರೆಂಬ ಕಾರಣಕ್ಕೆ ತಮಿಳುನಾಡಿನಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ನಿಂದ ಮಗು ಸೇರಿದಂತೆ ಕುಟುಂಬವನ್ನು ಕೆಳಗಿಳಿಸಿರುವ ಅಮಾನವೀಯ ಘಟನೆ ನಾಗರಕೋಯಿಲ್ ನಲ್ಲಿ ನಡೆದಿದೆ. 

ಸಂತ್ರಸ್ತರನ್ನು ನರಿಕ್ಕುರವ ಸಮುದಾಯದವರು ಎಂದು ತಿಳಿದುಬಂದಿದ್ದು ಬಸ್ ನಿರ್ವಾಹಕನ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ತಕ್ಷಣ ಆ ಬಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ನಾಗರಕೋಯಿಲ್ ನಲ್ಲಿ ಈ ಘಟನೆ ನಡೆದಿದೆ. ವಲ್ಲಿಯೂರು ಮಾರ್ಗವಾಗಿ ತಿರುನಲ್ವೇಲಿಗೆ ತೆರಳುತ್ತಿದ್ದ ಬಸ್‌ ಹತ್ತಲು ಯತ್ನಿಸಿದ ಕುಟುಂಬವೊಂದು ಅವಮಾನಕ್ಕೀಡಾಗಿದೆ. ವಡಸ್ಸೆರಿ ಬಸ್ ನಿಲ್ದಾಣದಲ್ಲಿ ಅವರು ಬಸ್‌ನಿಂದ ಇಳಿಯುತ್ತಿರುವ ದೃಶ್ಯಾವಳಿಗಳು ವೈರಲ್ ಆಗಿದ್ದವು.

ಬಸ್ ನಿಲ್ದಾಣದಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಬಸ್ ನಿಲ್ಲಿಸಿ ಮಗು ಸೇರಿದಂತೆ ಕುಟುಂಬದವರನ್ನು ಕೆಳಗಿಳಿಸಲಾಯಿತು. ಅಲ್ಲದೇ ಅವರ ಸಾಮಾನುಗಳನ್ನು ಬಸ್ಸಿನಿಂದ ಹೊರಗೆ ಎಸೆದಿದ್ದಾರೆ. ಇದನ್ನು ನೋಡಿ ಮಗು ಅಳುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ.

ಘಟನೆ ಸಂಬಂಧ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ. ವಿಡಿಯೋ ಆಧರಿಸಿ ಬಸ್ ಚಾಲಕ ಮತ್ತು ಕಂಡಕ್ಟರ್ ನನ್ನು ಅಮಾನತು ಮಾಡಲು ನಿರ್ಧರಿಸಲಾಗಿದೆ ಎಂದು ಟಿಎನ್ ಎಸ್ ಟಿಸಿ ನಾಗರಕೋಯಿಲ್ ವಲಯ ಪ್ರಧಾನ ವ್ಯವಸ್ಥಾಪಕ ಅರವಿಂದ್ ತಿಳಿಸಿದ್ದಾರೆ.

ಇನ್ನು ಇತ್ತೀಚೆಗಷ್ಟೇ ವೃದ್ಧೆಯನ್ನು ಬಸ್ಸಿನಿಂದ ಬಲವಂತವಾಗಿ ಕೆಳಗಿಳಿಸಿದ ಬಸ್ ಚಾಲಕ ಸೇರಿ ಮೂವರನ್ನು ಅಮಾನತು ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. 





Read more

Leave a Reply

Your email address will not be published. Required fields are marked *