Karnataka news paper

ನಾಗರಹೊಳೆ ಅರಣ್ಯಕ್ಕೆ ಫೈರ್‌ಲೈನ್‌ ರಕ್ಷಣೆ: ಕಾಡ್ಗಿಚ್ಚು ತಡೆಯುವ ಉದ್ದೇಶ, ತಿಂಗಳಾಂತ್ಯಕ್ಕೆ ಬೆಂಕಿರೇಖೆ ನಿರ್ಮಾಣ ಪೂರ್ಣ!


ಹೈಲೈಟ್ಸ್‌:

  • 8 ವಲಯಗಳಲ್ಲಿ 2537 ಕಿ.ಮೀ.ಯಷ್ಟು ಫೈರ್‌ಲೈನ್‌ ನಿರ್ಮಿಸಬೇಕಿದ್ದು, ಈಗಾಗಲೇ ಬೆಂಕಿರೇಖೆ ನಿರ್ಮಿಸುವ ಸಲುವಾಗಿ ಗಿಡಗಂಟಿ ತೆರವುಗೊಳಿಸಲಾಗಿದೆ
  • ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಇನ್ನೂ ಅಲ್ಲಲ್ಲಿ ಹಸಿರಿರುವುದರಿಂದ ಲೈನ್‌ ಸುಡಲು ತಡವಾಗುತ್ತಿದೆ
  • ಉದ್ಯಾನದ ಹಲವೆಡೆ ಇರುವ ದೊಡ್ಡದಾದ 31 ವಾಚ್‌ ಟವರ್‌ ಮೂಲಕ ಹಾಗೂ ಉದ್ಯಾನದಂಚಿನ ಪ್ರದೇಶದ ಅಲ್ಲಲ್ಲಿ ಮರದ ಮೇಲೆ ಅಟ್ಟಣೆ ನಿರ್ಮಿಸಲಾಗಿದೆ
  • ಹಗಲು-ರಾತ್ರಿ ವೇಳೆ ಛಾಯಾಚಿತ್ರ ತೆಗೆಯುವ 3 ಡ್ರೋಣ್‌ ಕ್ಯಾಮೆರಾ ಅಳವಡಿಸಲಾಗಿದೆ

ಹನಗೋಡು ನಟರಾಜ್‌ ಹುಣಸೂರು
ಮೈಸೂರು: ಈ ಬಾರಿ ಮಳೆಯಿಂದಾಗಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಬೆಂಕಿರೇಖೆ (ಫೈರ್‌ಲೈನ್‌) ನಿರ್ಮಾಣ ಕಾರ್ಯ ತಿಂಗಳ ಕಾಲ ತಡವಾಗಿದೆ.

ಸಾಮಾನ್ಯವಾಗಿ ಪ್ರತಿ ವರ್ಷ ಡಿಸೆಂಬರ್‌ ಅಂತ್ಯದೊಳಗೆ ಫೈರ್‌ಲೈನ್‌ ಮುಗಿಯುತ್ತಿತ್ತು. ಈ ಬಾರಿ ಜನವರಿ ಅಂತ್ಯದೊಳಗೆ ಬಹುತೇಕ ಮುಗಿಯಬಹುದೆಂದು ನಿರೀಕ್ಷಿಸಲಾಗಿದೆ. ಒಂದೆಡೆ ಶೂನ್ಯ ಬೆಂಕಿ ಅರಣ್ಯವಾಗಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಫೈರ್‌ಲೈನ್‌ ನಿರ್ಮಾಣದಲ್ಲಿ ತೊಡಗಿದ್ದರೆ, ಮತ್ತೊಂದೆಡೆ ಹುಲಿ ಗಣತಿ ಕಾರ್ಯಕ್ಕೆ ಸನ್ನದ್ಧರಾಗುತ್ತಿದ್ದಾರೆ.

2537 ಕಿ.ಮೀ. ಫೈರ್‌ಲೈನ್‌ ನಿರ್ವಹಣೆ
ಉದ್ಯಾನದ ವೀರನಹೊಸಹಳ್ಳಿ, ಹುಣಸೂರು, ಮತ್ತಿಗೋಡು, ನಾಗರಹೊಳೆ, ಕಲ್ಲಳ್ಳ, ಅಂತರಸಂತೆ, ಮೇಟಿಕುಪ್ಪೆ, ಡಿ.ಬಿ.ಕುಪ್ಪೆ ವಲಯಗಳು ಸೇರಿದಂತೆ 8 ವಲಯಗಳಲ್ಲಿ 2537 ಕಿ.ಮೀ.ಯಷ್ಟು ಫೈರ್‌ಲೈನ್‌ ನಿರ್ಮಿಸಬೇಕಿದ್ದು, ಈಗಾಗಲೇ ಬೆಂಕಿರೇಖೆ ನಿರ್ಮಿಸುವ ಸಲುವಾಗಿ ಗಿಡಗಂಟಿ ತೆರವುಗೊಳಿಸಲಾಗಿದೆ. ಬಹುತೇಕ ಕಡೆಗಳಲ್ಲಿ ಲೈನ್‌ ನಿರ್ಮಿಸಲಾಗಿದೆ. ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಇನ್ನೂ ಅಲ್ಲಲ್ಲಿ ಹಸಿರಿರುವುದರಿಂದ ಲೈನ್‌ ಸುಡಲು ತಡವಾಗುತ್ತಿದೆ.
Tumakuru: ರಾಮದೇವರ ಬೆಟ್ಟದಲ್ಲಿ ಬೆಂಕಿ, ಪರಿಸರ ಪ್ರೇಮಿಗಳಲ್ಲಿ ಆತಂಕ
ಬೆಂಕಿ ತಡೆಗೆ 400 ಸಿಬ್ಬಂದಿ

ಪ್ರತಿವಲಯದಲ್ಲೂ ಅಗತ್ಯಕ್ಕೆ ತಕ್ಕಂತೆ ಬೆಂಕಿ ನಂದಿಸುವ ಕಾರ್ಯದಲ್ಲಿ ನುರಿತ ಸುಮಾರು 400 ಮಂದಿ ಕಾಡಂಚಿನ ಆದಿವಾಸಿಗಳನ್ನು ಪ್ರತಿ ವಲಯಕ್ಕೆ 40-65ಮಂದಿಯಂತೆ ಫೆಬ್ರವರಿ ಒಂದರಿಂದಲೇ ನೇಮಿಸಿಕೊಳ್ಳಲಾಗುವುದು. ಇವರಿಗೆ ನಿತ್ಯ ಮಧ್ಯಾಹ್ನ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ, ಅಗತ್ಯ ಪರಿಕರಗಳ ಸೌಲಭ್ಯ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆರೆ-ಕಟ್ಟೆಗಳಲ್ಲಿ ಸಮೃದ್ಧ ನೀರು
ಈ ಬಾರಿ ಮಳೆಗಾಲ ಉತ್ತಮವಾಗಿದ್ದು, ಉದ್ಯಾನದೊಳಗಿನ ಕೆರೆ-ಕಟ್ಟೆಗಳಲ್ಲಿ ಸಮೃದ್ಧ ನೀರಿದ್ದು, ಇನ್ನೂ ಹಸಿರು ನಳನಳಿಸುತ್ತಿದೆ. ಇದು ಬೆಂಕಿ ನಿಯಂತ್ರಣಕ್ಕೆ ಪೂರಕವಾಗಿದೆ. ಅಲ್ಲದೇ ಅರಣ್ಯದೊಳಗಿನ ಸೋಲಾರ್‌ ಪಂಪ್‌ನಿಂದಾಗಿ ಕೆರೆ-ಕಟ್ಟೆಗಳಿಗೆ ನಿರಂತರವಾಗಿ ನೀರು ತುಂಬುತ್ತಿರುವುದು ಹಾಗೂ ಉದ್ಯಾನದೊಳಗೆ ಹರಿಯುವ ನಾಗರಹೊಳೆ, ಸಾರಥಿ, ಲಕ್ಷ್ಮಣತೀರ್ಥ ನದಿಗಳಲ್ಲಿ ನೀರಿನ ಹರಿವಿರುವುದರ ಪರಿಣಾಮ ಅರಣ್ಯ ಬೆಂಕಿ ರಕ್ಷಣೆಗೆ ಹಾಗೂ ವನ್ಯಜೀವಿಗಳ ನೀರಿನ ದಾಹ ನೀಗಿಸಲು ವರದಾನವಾಗಿದೆ.

31 ವಾಚ್‌ ಟವರ್‌, ಡ್ರೋಣ್‌-ಕ್ಯಾಮೆರಾ ಕಣ್ಗಾವಲು
ಉದ್ಯಾನದ ಹಲವೆಡೆ ಇರುವ ದೊಡ್ಡದಾದ 31 ವಾಚ್‌ ಟವರ್‌ ಮೂಲಕ ಹಾಗೂ ಉದ್ಯಾನದಂಚಿನ ಪ್ರದೇಶದ ಅಲ್ಲಲ್ಲಿ ಮರದ ಮೇಲೆ ಅಟ್ಟಣೆ ನಿರ್ಮಿಸಲಾಗಿದೆ. ಹಗಲು-ರಾತ್ರಿ ವೇಳೆ ಛಾಯಾಚಿತ್ರ ತೆಗೆಯುವ 3 ಡ್ರೋಣ್‌ ಕ್ಯಾಮೆರಾ ಹಾಗೂ ಅರಣ್ಯದಂಚಿನ ಪ್ರದೇಶಗಳಲ್ಲಿ ಅಕ್ರಮವಾಗಿ ಒಳನುಸುಳುವವರ ಪತ್ತೆಗಾಗಿ ಅಲ್ಲಲ್ಲಿ ಕ್ಯಾಮೆರ ಅಳವಡಿಸಲಾಗಿದೆ.

ಜೀಪ್‌ ಮೌಂಟೆಡ್‌ ಟ್ಯಾಂಕರ್‌
ಪ್ರತಿ ವಲಯಕ್ಕೆ ಒಂದರಂತೆ ಜೀಪ್‌ ಮೌಂಟೆಡ್‌ ಟ್ಯಾಂಕರ್‌ ಇದೆ. ಬೆಂಕಿ ನಿಯಂತ್ರಣಕ್ಕಾಗಿ ಮುನ್ನೆಚ್ಚರಿಕೆಯಾಗಿ ಒಟ್ಟಾರೆ 80 ಸ್ಪ್ರೇಯರ್‌, 15 ಪವರ್‌ ಮರಕಟ್ಟಿಂಗ್‌ ಯಂತ್ರ, 11 ಬ್ಲೋಯರ್ಸ್ಗಳು ಹಾಗೂ 3 ಅಗ್ನಿಶಾಮಕ ದಳದ ವಾಹನ ಮತ್ತು ಕ್ಯೂ.ಆರ್‌.ಟಿ.ವಾಹನಗಳನ್ನು ಸನ್ನದ್ಧವಾಗಿಡಲಾಗುವುದು. ಹುಣಸೂರು, ಡಿ.ಬಿ.ಕುಪ್ಪೆ ವಲಯಕ್ಕೆ 2, ನಾಗರಹೊಳೆ, ವೀರನಹೊಸಹಳ್ಳಿ, ಆನೆಚೌಕೂರು, ಕಲ್ಲಹಳ್ಳ, ಮೇಟಿಕುಪ್ಪೆ, ಅಂತರಸಂತೆ ವಲಯಗಳಿಗೆ ಇಲಾಖಾ ವಾಹನಗಳ ಜೊತೆಗೆ ತಲಾ ಒಂದರಂತೆ 11 ಬಾಡಿಗೆ ವಾಹನಗಳನ್ನು ನೇಮಿಸಿಕೊಳ್ಳಲಾಗಿದೆ ಎಂದು ಡಿ.ಸಿ.ಎಫ್‌.ಮಹೇಶ್‌ಕುಮಾರ್‌ ತಿಳಿಸಿದ್ದಾರೆ.
ಬಂಡೀಪುರ ಉದ್ಯಾನದಲ್ಲಿ ಪ್ರಭಾರ ಕಾರ್ಯ ಭಾರ; ಹಲವು ದಿನ ಕಳೆದರೂ ಪೂರ್ಣಾವಧಿ ಅಧಿಕಾರಿಗಳ ನೇಮಕವಿಲ್ಲ!
ಫೆ.3-5ರವರೆಗೆ ಬೆಂಕಿ ತಡೆ ಕುರಿತ ತರಬೇತಿ

ಬೆಂಕಿತಡೆ ಕುರಿತು ಅಗ್ನಿಶಾಮಕ ದಳದ ವತಿಯಿಂದ ಫೆ.3 ದಮ್ಮನಕಟ್ಟೆ, ಫೆ.4.ವೀರನಹೊಸಹಳ್ಳಿ, ಫೆ.5ಕ್ಕೆ ನಾಗರಹೊಳೆಯಲ್ಲಿ 8 ವಲಯಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿ ನೀಡಲಾಗುವುದು ಎಂದು ಎಸಿಎಫ್‌ ಸತೀಶ್‌ ತಿಳಿಸಿದರು.
ಬಂಡೀಪುರದಲ್ಲಿ ಹುಲಿ ಗಣತಿ ಶುರು; 300 ಸಿಬ್ಬಂದಿ ನಿಯೋಜನೆ
ಕಳೆದ ಬಾರಿಯಿಂದ ಹವಾಮಾನ ಕುರಿತ ಮಾಹಿತಿ ನೀಡುವ ಕಿಗ್ಸ್‌ ಕಾರ್‌ಸಾಕ್‌ ಅಪ್ಲಿಕೇಷನ್‌ ಮೂಲಕ ಬೆಂಕಿ ಬೀಳುವ ಪ್ರದೇಶದ ಮಾಹಿತಿಯನ್ನು ಎಸ್‌.ಎಂ.ಎಸ್‌. ಮೂಲಕ ಪಡೆದು ಸಿಬ್ಬಂದಿ ತ್ವರಿತಗತಿಯಲ್ಲಿ ತೆರಳುವ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಅಗತ್ಯಬಿದ್ದಲ್ಲಿ ಹೆಲಿಕ್ಯಾಪ್ಟರ್‌ ಬಳಕೆಗೂ ಕ್ರಮವಹಿಸಲಾಗುವುದು. ಬೆಂಕಿಯಿಂದ ಅರಣ್ಯ ಸಂರಕ್ಷಣೆಗೆ ಎಲ್ಲರ ಸಹಕಾರ ಅಗತ್ಯ.
ಡಿ.ಮಹೇಶ್‌ಕುಮಾರ್‌, ಮುಖ್ಯಸ್ಥರು, ನಾಗರಹೊಳೆ ರಾಷ್ಟ್ರೀಯ ಉದ್ಯಾನ



Read more

[wpas_products keywords=”deal of the day sale today offer all”]