ಇನ್ನು ಬಿಜೆಪಿ ನಾಯಕರಿಗೆ ಇದ್ದ ಮತ್ತೊಂದು ಕೊರಗು ಬಹುಮತದ ಕೊರತೆ.. ಹೌದು, ವಿಧಾನಸಭೆಯಲ್ಲಿ ಬಹುಮತ ಹೊಂದಿರುವ ಬಿಜೆಪಿಗೆ ವಿಧಾನ ಪರಿಷತ್‌ನಲ್ಲಿ ಬಹುಮತದ ಕೊರತೆ ಕಾಡುತ್ತಿತ್ತು. ಹೀಗಾಗಿ, ವಿಧಾನಸಭೆಯಲ್ಲಿ ಪಾಸ್ ಆದ ಬಹುತೇಕ ಮಸೂದೆಗಳಿಗೆ ವಿಧಾನ ಪರಿಷತ್‌ನಲ್ಲೂ ಗ್ರೀನ್ ಸಿಗ್ನಲ್ ಕೊಡಿಸಲು ಜೆಡಿಎಸ್‌ನ ನೆರವು ಬೇಡಬೇಕಾಗುತ್ತಿತ್ತು. ಬಿಜೆಪಿಗೆ ಪರಿಷತ್‌ನಲ್ಲಿ ಬಹುಮತ ಸಾಧಿಸಲು 11 ಸ್ಥಾನಗಳ ಕೊರತೆ ಕಾಡುತ್ತಿತ್ತು. ಆದ್ರೆ, ಇದೀಗ 12 ಸ್ಥಾನಗಳನ್ನು ಗೆಲ್ಲುವ ಮೂಲಕ, ಬಿಜೆಪಿ ಮೇಲ್ಮನೆಯಲ್ಲೂ ಬಹುಮತ ಸಾಧಿಸಿದಂತಾಗಿದೆ.
ಇನ್ನು ಕಾಂಗ್ರೆಸ್ ಪಕ್ಷ ತಾನು ಈ ಹಿಂದೆ ಗೆದ್ದಿದ್ದ 14 ಸ್ಥಾನಗಳ ಪೈಕಿ, ಇದೀಗ ಕೇವಲ 11 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಬಿಜೆಪಿ ಹಾಗೂ ಜೆಡಿಎಸ್‌ನ ಮೈತ್ರಿ ಅಥವಾ ಒಳ ಒಪ್ಪಂದದಿಂದ ಕಾಂಗ್ರೆಸ್‌ಗೆ ಮುಳುವಾಗಿದೆ ಎಂದು ಎಲ್ಲಿಯೂ ಕಂಡುಬರ್ತಿಲ್ಲವಾದ್ರೂ, ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಏಟು ಬಿದ್ದಿರೋದು ಹಲವೆಡೆ ಕಾಣಸಿಗುತ್ತಿದೆ.
ಇದಕ್ಕೆ ಸಾಕ್ಷಿ, ಜೆಡಿಎಸ್ ಕಳೆದುಕೊಂಡಿರುವ ಕ್ಷೇತ್ರಗಳು. ಹಾಸನದಲ್ಲಿ ರೇವಣ್ಣ & ಫ್ಯಾಮಿಲಿಯ ಸಾಂಘಿಕ, ಕೌಟುಂಬಿಕ ಪ್ರಯತ್ನದಿಂದಾಗಿ ಸೂರಜ್ ಗೆದ್ದಿರೋದು ಬಿಟ್ಟರೆ, ಇನ್ನೆಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿಲ್ಲ. ಚುನಾವಣೆ ನಡೆದ 25 ಸ್ಥಾನಗಳ ಪೈಕಿ 4ರಲ್ಲಿ ಜೆಡಿಎಸ್ ಸದಸ್ಯರಿದ್ದರು. ಆದ್ರೆ, ಇದೀಗ ಆ ಸಂಖ್ಯೆ ಕೇವಲ 1ಕ್ಕೆ ಬಂದು ನಿಂತಿದೆ. ಇನ್ನು ಬೆಳಗಾವಿಯಲ್ಲಿ ಕಾಂಗ್ರೆಸ್ – ಬಿಜೆಪಿ ಎರಡಕ್ಕೂ ಜಾರಕಿಹೊಳಿ ಫ್ಯಾಮಿಲಿ ಮಾರಕವಾಗಿ ಪರಿಣಮಿಸಿದ್ದು, ಪಕ್ಷೇತರರಾಗಿ ಲಖನ್ ಜಾರಕಿಹೊಳಿ ಲಕ ಲಕ ಎನ್ನುತ್ತಿದ್ದಾರೆ. ಹಾಗಾದರೆ, ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಅವರ ತಂತ್ರ ಏನಾಗಿತ್ತು ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳುವಂತಾಗಿದೆ.
ಹಾಗೆ ನೋಡಿದ್ರೆ ಈ ಚುನಾವಣೆಯಲ್ಲಿ ಪಕ್ಷ, ಜಾತಿ-ಧರ್ಮ, ಪ್ರಾಂತ್ಯ ಹಾಗೂ ಅಭಿವೃದ್ಧಿ ವಿಷಯಗಳಿಗಿಂತಾ ಹೆಚ್ಚಾಗಿ ಪಂಚಾಯ್ತಿ ಸದಸ್ಯರನ್ನು ಯಾರು ಹೇಗೆ ‘ನಡೆಸಿಕೊಂಡರು’ ಅನ್ನೋದು ಮುಖ್ಯವಾಗಿರೋದು ಸುಳ್ಳಲ್ಲ. ಮತದಾನದ ಕಡೆ ಹಂತದಲ್ಲಿ ನಡೆದ ಕಾಂಚಾಣದ ಆಟದಲ್ಲಿ ಯಾವ ಪಕ್ಷ ಹೇಗೆ ಬ್ಯಾಟಿಂಗ್ ಮಾಡಿತು ಅನ್ನೋದು ಎಲ್ಲವನ್ನೂ ನಿರ್ಧರಿಸಿದೆ ಎಂಬ ಗುಸು ಗುಸು ಓಪನ್ ಸೀಕ್ರೆಟ್..!
ವಿಧಾನ ಪರಿಷತ್‌ನಲ್ಲಿ ಬಹುಮತ ಬಂದರೆ ಅನುಕೂಲ ಎಂಬುದು ಬಿಜೆಪಿ ಅಭಿಲಾಷೆಯಾದರೆ, ಆಡಳಿತಾರೂಢ ಸರ್ಕಾರದ ಪ್ರತಿನಿಧಿಯೇ ನಮ್ಮ ಕ್ಷೇತ್ರದಲ್ಲಿ ಇದ್ದರೆ ನಮಗೂ ಲಾಭ ಅನ್ನೋದು ಪಂಚಾಯ್ತಿ ಸದಸ್ಯರ ಪ್ಲಾನ್ ಇರಬಹುದು. ಹೀಗಾಗಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪ್ರಾಬಲ್ಯದ ನಡುವೆಯೂ ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವಲ್ಲಿ ಸಹಕಾರಿ ಆಯ್ತು ಎಂದರೆ ಸುಳ್ಳಲ್ಲ.