Karnataka news paper

ಪತ್ನಿ ಅನುಮತಿಯಿಲ್ಲದೆ ಆಕೆಯ ಫೋನ್ ಕರೆ ರೆಕಾರ್ಡ್ ಮಾಡುವುದು ಅಪರಾಧ: ಹೈಕೋರ್ಟ್


Source : Online Desk

ಚಂಡೀಗಢ: ಪತ್ನಿಯ ಅನುಮತಿಯಿಲ್ಲದೆ ಪತಿ ಆಕೆಯ ದೂರವಾಣಿ ಕರೆಗಳನ್ನು ರೆಕಾರ್ಡ್ ಮಾಡುವುದು ಆಕೆಯ ಖಾಸಗಿತನದ ಹಕ್ಕು ಉಲ್ಲಂಘಿಸಿದಂತೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಜನವರಿ 20, 2020ರ ಆದೇಶವನ್ನು ಪ್ರಶ್ನಿಸಿ, ಮಹಿಳೆಯೊಬ್ಬರು ಸಲ್ಲಿಸಿದ ಮೇಲ್ಮನವಿ ಸಂಬಂಧ ನ್ಯಾಯಮೂರ್ತಿ ಲಿಸಾ ಗಿಲಾ ಈ ತೀರ್ಪು ನೀಡಿದ್ದಾರೆ.

ಪಂಜಾಬಿನ ಬಂಟಿಡಾ ಮೂಲದ ವ್ಯಕ್ತಿಯೊಬ್ಬರು ಪತ್ನಿ ತನಗೆ ಕಿರುಕುಳ ನೀಡುತ್ತಿದ್ದಾಳೆ. ಹಾಗಾಗಿ ಆಕೆಯಿಂದ ವಿಚ್ಛೇದನ ಕೊಡಿಸುವಂತೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ತಮ್ಮ ಆರೋಪ ರುಜುವಾತುಪಡಿಸಲು ದೂರವಾಣಿ ಸಂಭಾಷಣೆಗಳನ್ನು ಸಾಕ್ಷ್ಯವಾಗಿ ಸಲ್ಲಿಸಿದರು. ಈ ಸಂಬಂಧ ನ್ಯಾಯಾಲಯ ಈ ಆದೇಶ ನೀಡಿದೆ.

ಸದರಿ ದಂಪತಿಗಳು 2007 ಫೆಬ್ರವರಿ 20 ರಂದು ವಿವಾಹವಾಗಿದ್ದರು. ಮೇ 2011ರಲ್ಲಿ ಅವರಿಗೆ ಮಗಳು ಕೂಡಾ ಜನಿಸಿದ್ದಾರೆ. ಆದರೆ, ವೈಮನಸ್ಸಿನಿಂದಾಗಿ ಪತ್ನಿಯಿಂದ ವಿಚ್ಛೇದನ ಕೋರಿ ಪತಿ 2017ರಲ್ಲಿ ಅರ್ಜಿ ಸಲ್ಲಿಸಿದ್ದರು. ಜುಲೈ 9, 2019 ರಂದು ಪಾಟಿ ಸವಾಲು ಸಮಯದಲ್ಲಿ ಪತ್ನಿ ಮತ್ತು ಪತಿ ನಡುವಣ ದೂರವಾಣಿ ಸಂಭಾಷಣೆಯ ಸಿಡಿ ಮತ್ತು ಸಿಮ್ ಕಾರ್ಡ್ ಗಳನ್ನು ಸಾಕ್ಷ್ಯವಾಗಿ ಹಾಜರುಪಡಿಸಿದ್ದರು. ಇದನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ತಮಗೆ ತಿಳಿಸದೆ ತನ್ನ ದೂರವಾಣಿ ಸಂಭಾಷಣೆ ರೆಕಾರ್ಡ್ ಮಾಡುವುದು ಗೌಪ್ಯತೆಯ ಉಲ್ಲಂಘನೆಯಾಗಿದೆ ಎಂದು ಅವರು ವಾದಿಸಿದ್ದರು. ಆದರೆ, ಪತ್ನಿಯ ಕಿರುಕುಳದ ಸಾಕ್ಷ್ಯವಾಗಿ ಮಾತ್ರ ಇವುಗಳನ್ನು ಪ್ರಸ್ತುತಪಡಿಸಲಾಗಿದ್ದು, ಆಕೆಯ ಖಾಸಗಿತನಕ್ಕೆ ಧಕ್ಕೆ ತರುವ ಉದ್ದೇಶವಲ್ಲ ಎಂದು ಪತಿಯ ಪರ ವಕೀಲರು ವಾದಿಸಿದ್ದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ದೂರವಾಣಿ ಸಂಭಾಷಣೆಯ ದಾಖಲೆಗಳನ್ನು ಸಾಕ್ಷ್ಯವಾಗಿ ಪರಿಗಣಿಸಲಾಗದು, ಪತ್ನಿಯ ಅನುಮತಿಯಿಲ್ಲದೆ, ಆಕೆಗೆ ಅರಿವಿಲ್ಲದಂತೆ ಫೋನ್ ಸಂಭಾಷಣೆಗಳನ್ನು ರೆಕಾರ್ಡ್ ಮಾಡುವುದು ಅಪರಾಧ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತೀರ್ಪು ನೀಡಿದೆ.

ಫೋನ್ ರೆಕಾರ್ಡಿಂಗ್ ಗಳನ್ನು ಸಾಕ್ಷ್ಯವಾಗಿ ಪರಿಗಣಿಸದೆ ವಿಚ್ಛೇದನ ಪ್ರಕರಣದ ಕುರಿತು ಆರು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಬಟಿಂಡಾ ಕೌಟುಂಬಿಕ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚಿಸಿದೆ.



Read more