The New Indian Express
ಬೆಂಗಳೂರು: ನಿರ್ವಹಣಾ ವೆಚ್ಚ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಶೀಘ್ರದಲ್ಲೇ ವಿದ್ಯುತ್ ದರ ಪರಿಷ್ಕರಿಸಲು ಮುಂದಾಗಿದ್ದು, ಸದ್ಯದಲ್ಲೇ ವಿದ್ಯುತ್ ದರ ಹೆಚ್ಚಳವಾಗುವುದು ಬಹುತೇಕ ಖಚಿತವಾಗಿದೆ.
ಈ ಕುರಿತು ಸುಳಿವು ನೀಡಿರುವ ಇಂಧನ ಸಚಿವ ವಿ.ಸುನಿಲ್ ಕುಮಾರ್, ವಿದ್ಯುತ್ ದರ ಹೆಚ್ಚಳ ಮಾಡುವುದು ಅನಿವಾರ್ಯ. ವಿದ್ಯುತ್ ಮಾರ್ಗ ಬದಲಾವಣೆ, ಹೊಸ ಉಪ ವಿಭಾಗ ನಿರ್ಮಾಣ ಸೇರಿದಂತೆ ಅಭಿವೃದ್ದಿ ಕಾಮಗಾರಿಗಳ ಹೊರೆಯನ್ನು ಗ್ರಾಹಕರ ಮೇಲೆ ಹಾಕುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಒಪ್ಪಿಗೆ ಕೊಟ್ಟ ನಂತರ ವಿದ್ಯುತ್ ವಿತರಣಾ ಕಂಪೆನಿಗಳು ದರ ಪರಿಷ್ಕರಣೆ ಮಾಡಲಿವೆ ಎಂದು ತಿಳಿಸಿದರು. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ನಾಲ್ಕು ಸಾವಿರ ಕೋಟಿ ರೂ. ಸೇರಿದಂತೆ ಬೆಂಗಳೂರು ಜಲ ಮಂಡಳಿ, ನಗರಾಭಿವೃದ್ಧಿ ಇಲಾಖೆ, ಜಲಸಂಪನ್ಮೂಲ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ 12 ಸಾವಿರ ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಇದೆ. ಇಲಾಖಾವಾರು ಸಭೆ ನಡೆಸಲಾಗಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ವಿದ್ಯುತ್ ಬಾಕಿ ಪಾವತಿಗೆ ಪ್ರಯತ್ನಿಸಲಾಗುವುದು ಎಂದರು.
ಸದ್ಯಕ್ಕೆ ರಾಜ್ಯದಲ್ಲಿ ಕಲ್ಲಿದ್ದಲು ಸಮಸ್ಯೆ ಇಲ್ಲ. ವಿದ್ಯುತ್ ಬಳಕೆ ಪ್ರಮಾಣ 15,000 ಮೆಗಾವ್ಯಾಟ್‍ನಷ್ಟಿದ್ದು, ಈ ಬಾರಿ ಮಳೆ ಚೆನ್ನಾಗಿ ಆಗಿರುವುದರಿಂದ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುವುದಿಲ್ಲ ಎಂದು ಹೇಳಿದರು. ಟಿಸಿ ಸುಟ್ಟು ಹೋದ 24 ಗಂಟೆಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಅದೇ ರೀತಿ ಟಿಸಿ ಸುಡದಂತೆ ಎಚ್ಚರಿಕೆ ವಹಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
Read more
[wpas_products keywords=”deal of the day”]