Online Desk
ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಇಂಡಿಯಾ ಗೇಟ್‌ನಲ್ಲಿ ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಘೋಷಿಸಿದ್ದಾರೆ. ಪ್ರಧಾನಿ ಮೋದಿ ಟ್ವೀಟ್ ಮೂಲಕ ಈ ಮಾಹಿತಿ ನೀಡಿದ್ದಾರೆ.
ಇನೂ ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದ ಜ್ವಾಲೆಯೊಂದಿಗೆ ವಿಲೀನಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರಕ್ಕೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ.
ಇದನ್ನು ಓದಿ: ವಿಶ್ವದ ಜನಪ್ರಿಯ ನಾಯಕರಲ್ಲಿ ಪ್ರಧಾನಿ ಮೋದಿಯೇ ನಂಬರ್ 1: ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆ
“ಇಡೀ ರಾಷ್ಟ್ರವೇ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನಾಚರಣೆಯನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಇಂಡಿಯಾ ಗೇಟ್‌ನಲ್ಲಿ ನೇತಾಜಿಯವರ ಭವ್ಯವಾದ ಗ್ರಾನೈಟ್ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ತಿಳಿಸಲು ನನಗೆ ಸಂತೋಷವಾಗಿದೆ. ಇದು ಅವರಿಗೆ ಭಾರತದ ಕೃತಜ್ಞತೆಯ ಸಂಕೇತವಾಗಿದೆ. ಜನವರಿ 23 ರಂದು ನೇತಾಜಿ ಅವರ ಜನ್ಮದಿನದಂದು ಹೊಲೊಗ್ರಾಮ್ ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದು” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಇಂಡಿಯಾ ಗೇಟ್ ನಲ್ಲಿ ನಿರ್ಮಾಣವಾಗಲಿರುವ ನೇತಾಜಿಯವರ ಭವ್ಯ ಮೂರ್ತಿ 28 ಅಡಿ ಎತ್ತರ ಮತ್ತು 6 ಅಡಿ ಅಗಲ ಇರಲಿದೆ ಎಂದು ಮೂಲಗಳು ತಿಳಿಸಿವೆ.
ಅಮರ್ ಜವಾನ್ ಜ್ಯೋತಿ ಸ್ಥಳಾಂತರ
1972ರಲ್ಲಿ ಇಂಡಿಯಾ ಗೇಟ್‌ನಲ್ಲಿ ನಿರ್ಮಿಸಲಾದ ಅಮರ್ ಜವಾನ್ ಜ್ಯೋತಿಯನ್ನು ಸ್ಥಳಾಂತರಿಸಲು ಸರ್ಕಾರ ನಿರ್ಧರಿಸಿದ್ದು, ಅದನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವಿಲೀನಗೊಳಿಸುತ್ತಿದೆ. 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಅತ್ಯುನ್ನತ ತ್ಯಾಗ ಮಾಡಿದ ಸೈನಿಕರ ನೆನಪಿಗಾಗಿ ಇದನ್ನು ನಿರ್ಮಿಸಲಾಗಿದೆ. ಈ ಯುದ್ಧವು 50 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಈ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿ ಗಣರಾಜ್ಯೋತ್ಸವದ ಮೊದಲು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಪ್ರಜ್ವಲಿಸಲಿದೆ.
ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ವಿರೋಧ
ಅಮರ್ ಜವಾನ್ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವಿಲೀನಗೊಳಿಸುವ ನಿರ್ಧಾರವನ್ನು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ನಮ್ಮ ವೀರ ಸೈನಿಕರ ಸ್ಮರಣೆಗಾಗಿ ಇರುವ ಅಮರ ಜ್ಯೋತಿಯನ್ನು ಇಂದು ನಂದಿಸುವುದು ತುಂಬಾ ದುಃಖಕರವಾಗಿದೆ. ಕೆಲವರಿಗೆ ದೇಶಭಕ್ತಿ ಮತ್ತು ತ್ಯಾಗ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಸಮಸ್ಯೆ ಇಲ್ಲ. ನಮ್ಮ ಸೈನಿಕರಿಗಾಗಿ ಮತ್ತೊಮ್ಮೆ ಅಮರ್ ಜವಾನ್ ಜ್ಯೋತಿಯನ್ನು ಬೆಳಗಿಸುತ್ತೇವೆ ಎಂದು ರಾಹುಲ್ ಟ್ವೀಟ್ ನಲ್ಲಿ ಕೇಂದ್ರ ಸರ್ಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Read more
[wpas_products keywords=”deal of the day”]