ಇನ್ನು ಚಿಕ್ಕಮಗಳೂರಿನಲ್ಲಿ ಗಾಯತ್ರಿ ಗೆಲ್ಲುವ ನಿರೀಕ್ಷೆ ಇಟ್ಟಿದ್ದೆವು. ಆದರೆ ಕೇವಲ ನಾಲ್ಕು ಮತಗಳ ಅಂತರದಿಂದ ಸೋಲಾಗಿದೆ ಎಂದ ಸಿದ್ದರಾಮಯ್ಯ, ಫಲಿತಾಂಶ ನಮ್ಮ ನಿರೀಕ್ಷೆಯಂತೆ ಆಗಿದೆ. ಗೆದ್ದ ಅಭ್ಯರ್ಥಿಗಳಿಗೂ ಅಭಿನಂದನೆ, ಸೋತ ಅಭ್ಯರ್ಥಿಗಳು ನಿರಾಶರಾಗಬೇಕಿಲ್ಲ ಎಂದರು. ಅಲ್ಲದೇ ಚಿಕ್ಕಮಗಳೂರು ಚುನಾವಣಾ ಗೊಂದಲದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಅವರಿಗೆ ವಕೀಲರ ಜೊತೆ ಮಾತನಾಡಿ ಎಂದು ಹೇಳಿದ್ದೇನೆ ಎಂದರು. ಚುನಾವಣಾ ಫಲಿತಾಂಶ ಜನರ ಅಭಿಪ್ರಾಯ ಅಲ್ಲ ಎಂದ ಸಿದ್ದರಾಮಯ್ಯ ಇದು, ಚುನಾಯಿತ ಪ್ರತಿನಿಧಿಗಳು ಕೊಟ್ಟ ತೀರ್ಪು. ಅದು ನಮ್ಮ ಪರವಾಗಿದೆ, ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆಯಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಹೆಚ್ಚು ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಭರ್ಜರಿ ಗೆಲುವು ದಾಖಲಿಸಿದ್ದರು. ಎರಡನೇ ಸ್ಥಾನದಲ್ಲಿ ರಮೇಶ್ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿ ಸ್ಥಾನ ಪಡೆದುಕೊಂಡರೆ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಚುನಾವಣಾ ಪ್ರಚಾರದ ವೇಳೆ ಸಹೋದರ ಲಖನ್ ಜಾರಕಿಹೊಳಿ ಮತ್ತು ಬಿಜೆಪಿ ಅಭ್ಯರ್ಥಿಯ ಗೆಲುವು ಖಂಡಿತಾ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದರು. ಇದೀಗ ಬಿಜೆಪಿ ಲೆಕ್ಕಾಚಾರ ಉಲ್ಟಾವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಮೊದಲ ಪ್ರಾಶಸ್ತ್ಯದಲ್ಲಿ ಗೆದ್ದರೆ ಪಕ್ಷೇತರ ಅಭ್ಯರ್ಥಿ ಲಖನ್ ಎರಡನೇ ಸ್ಥಾನ ಮತ್ತು ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿದೆ.