Karnataka news paper

ಆಪತ್ತಿನಲ್ಲಿದೆ ಸರಕಾರಿ ಶಾಲಾ ಮಕ್ಕಳ ಜೀವ; ರಾಮನಗರದಲ್ಲಿ ಶಿಥಿಲಗೊಂಡಿವೆ ಬಹುತೇಕ ಗ್ರಾಮೀಣ ಶಾಲೆಗಳು!


ಹೈಲೈಟ್ಸ್‌:

  • ದಾಖಲೆ ಮಟ್ಟದಲ್ಲಿ ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗಳಿಗೆ ದಾಖಲಾತಿ ಮಾಡಲಾಗುತ್ತಿದೆ
  • ಏಕೋಪಾಧ್ಯಾಯ, ಗ್ರಾಮೀಣ ಶಾಲೆಗಳು ಸಂಪೂರ್ಣ ಶಿಥಿಲಗೊಂಡಿದ್ದು, ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿವೆ
  • ಪ್ರಾಥಮಿಕ ಶಾಲೆಯನ್ನು ಪ್ರೌಢಶಾಲಾ ವ್ಯಾಪ್ತಿಗೆ ವರ್ಗಾವಣೆ ಮಾಡಲಾಗಿದೆ

ರವಿಕಿರಣ್‌ ವಿ. ರಾಮನಗರ
ರಾಮನಗರ: ಕೊರೊನಾದಿಂದಾಗಿ ಸರಕಾರಿ ಶಾಲೆಗಳಿಗೆ ಶುಕ್ರದೆಸೆ ಬಂದಿದ್ದು, ಖಾಸಗಿ ಶಾಲೆಗಳಂತೆಯೇ ಬೇಡಿಕೆ ಬಂದಿದೆ. ದಾಖಲೆ ಮಟ್ಟದಲ್ಲಿ ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗಳಿಗೆ ದಾಖಲಾತಿ ಮಾಡಲಾಗುತ್ತಿದೆ. ಆದರೆ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಾಲೆಯ ಕಟ್ಟಡಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

ಜಿಲೆಯಲ್ಲಿನ ಬಹಳಷ್ಟು ಏಕೋಪಾಧ್ಯಾಯ, ಗ್ರಾಮೀಣ ಶಾಲೆಗಳು ಸಂಪೂರ್ಣ ಶಿಥಿಲಗೊಂಡಿದ್ದು, ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿವೆ. ಶತಮಾನ ಕಂಡ ಸರಕಾರಿ ಶಾಲೆಗಳೂ ಇದಕ್ಕೆ ಹೊರತಾಗಿಲ್ಲ. ಆಂಗ್ಲ ಹಾಗೂ ಕನ್ನಡ ಎರಡು ಮಾಧ್ಯಮದಲ್ಲಿ ಬೋಧನೆ ಮಾಡಲಾಗುತ್ತಿರುವ ಈ ಶಾಲೆಯಲ್ಲಿ ಕಟ್ಟಡಗಳಲ್ಲೇ ಸಮಸ್ಯೆಯಾಗಿದ್ದು, ಬಿದ್ದು ಹೋಗುವ ಭೀತಿಯಿಂದಾಗಿ ಪ್ರಾಥಮಿಕ ಶಾಲೆಯನ್ನು ಪ್ರೌಢಶಾಲಾ ವ್ಯಾಪ್ತಿಗೆ ವರ್ಗಾವಣೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಏನಾಗಿದೆ?
ರಾಮನಗರ ತಾಲೂಕಿನ ಹರೀಸಂದ್ರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯು ಶತಮಾನದಷ್ಟು ಹಳೆಯದಾಗಿದೆ. ಈ ಶಾಲಾ ಕಟ್ಟಡ ಕುಸಿದು ಬೀಳುವ ಹಂತ ತಲುಪಿದೆ. 1920ರಲ್ಲಿ ಅಂದಿನ ಬ್ರಿಟಿಷ್‌ ಭಾರತದಲ್ಲಿ ಈ ಕನ್ನಡ ಶಾಲೆ ಕಟ್ಟಡ ನಿರ್ಮಿಸಲಾಗಿತ್ತು. ಮೊದಲು 1ರಿಂದ 4 ನೇ ತರಗತಿವರೆಗೆ ಶಾಲೆ ನಡೆಯುತ್ತಿತ್ತು. 1935ರಲ್ಲಿ ಶಾಲಾ ವ್ಯಾಪ್ತಿಯನ್ನು , 5ರಿಂದ 7ನೇ ತರಗತಿ ತನಕ ವಿಸ್ತರಣೆ ಮಾಡಲಾಯಿತು.

ಈ ಶತಮಾನದಷ್ಟು ಹಳೆಯದಾದ ಈ ಸರಕಾರಿ ಶಾಲೆಯಲ್ಲಿ ಈತನಕ ಸಾವಿರಾರು ಮಂದಿ ವಿದ್ಯಾರ್ಥಿಗಳು ಅಕ್ಷಾರಭ್ಯಾಸ ಮಾಡುವುದರ ಜತೆಗೆ, ಉನ್ನತ ಜೀವನನ್ನು ಕಟ್ಟಿಕೊಂಡಿದ್ದಾರೆ. ಇಂತಹ ಭವ್ಯ ಐತಿಹಾಸಿಕ ಘನತೆ ಹೊಂದಿರುವ ಶಾಲೆ ಈಗ ಅಳಿವಿನ ಅಂಚಿಗೆ ತಲುಪಿದೆ.

ಕುಸಿದು ಬೀಳುತ್ತಿದೆ ಚಾವಣಿ

ಶಾಲೆಯ ಮಾಡು ಸಂಪೂರ್ಣ ಶಿಥಿಲಗೊಂಡಿದೆ. ಮಾಡಿಗೆ ಹಾಕಿದ ಮರದ ಪಕಾಸು- ರೀಪುಗಳು ಸಂಪೂರ್ಣ ದುರ್ಬಲಗೊಂಡಿದ್ದು, ಹೆಂಚುಗಳು ಕೆಳಗೆ ಬಿದ್ದು ಒಡೆದು ಹೋಗುತ್ತಿವೆ. ಮಳೆ ಬಂದರಂತೂ ಅಷ್ಟೂ ನೀರು ತರಗತಿಗಳ ಒಳಗೆ ಮಡುಗಟ್ಟಿ ನಿಲ್ಲುತ್ತಿದೆ. ನೀರನ್ನು ಶುಚಿಗೊಳಿಸುವುದರಲ್ಲೇ ಕಾಲ ಕಳೆದು ಹೋಗುತ್ತಿದೆ. ಈ ಶಾಲೆಯನ್ನು ಜೀರ್ಣೋದ್ಧಾರಗೊಳಿಸಿ ಮಕ್ಕಳಿಗೆ ಉತ್ತಮ ಸೌಲಭ್ಯ ಕಲ್ಪಿಸಿಕೊಡಬೇಕಾದ ಶಿಕ್ಷಣ ಇಲಾಖೆ ಅಧಿಕಾರಿಗಳು ಮೈಮರೆತು ಕುಳಿತಿದ್ದಾರೆ.
ಶಿಕ್ಷಣ ಕ್ಷೇತ್ರ ಸಂಪೂರ್ಣ ವೃತ್ತಿಪರವಾಗಬೇಕಾಗಿದ್ದು, ತಂತ್ರಜ್ಞಾನ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು: ಅಶ್ವತ್ಥನಾರಾಯಣ
ದಾಖಲಾತಿ ಕಡಿಮೆಯಾಗಿತ್ತು
ಸರಕಾರಿ ಶಾಲೆಯ ದುಸ್ಥಿತಿಯನ್ನು ಕಂಡಿದ್ದ ಸ್ಥಳೀಯರು ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸಿ ಖಾಸಗಿ ಶಾಲೆಗಳಲ್ಲಿ ದಾಖಲು ಮಾಡಿದ್ದರು. ಆದರೆ ಕೊರೊನಾದಿಂದಾಗಿ ಮತ್ತೇ ಶಾಲೆಗೆ ದಾಖಲಾತಿ ಹೆಚ್ಚಾಗಿದೆ. ಅದರಲ್ಲೂ ಆಂಗ್ಲಮಾಧ್ಯಮ ನೀಡಿದ ಬಳಿಕ ಇಲ್ಲಿನ ದಾಖಲಾತಿಯು ಗಣನೀಯವಾಗಿ ಏರಿಕೆಯಾಗಿದೆ. ಶಾಲೆಯ ಒಟ್ಟು ಎಂಟು ಕೊಠಡಿಗಳಲ್ಲಿ ಏಳು ಸಂಪೂರ್ಣ ಶಿಥಿಲಗೊಂಡಿವೆ.ಉಳಿದಿರುವ ಒಂದು ಕೊಠಡಿಯಲ್ಲಿ 1ರಿಂದ 7ರ ತನಕ ತರಗತಿ ನಡೆಸುವುದು ಕಷ್ಟ. ಹಾಳಾಗಿರುವ ಕೊಠಡಿಗಳನ್ನು ದುರಸ್ಥಿ ಮಾಡಿಸಿ, ವಿದ್ಯಾರ್ಥಿಗಳಿಗೆ ಉತ್ತಮ ತರಗತಿ ನೀಡಬೇಕೆಂಬುದು ಸ್ಥಳೀಯ ನಿವಾಸಿಗಳ ಆಗ್ರಹ.

ಪಕ್ಕದ ಶಾಲೆಗಳಿಗೆ ಮಕ್ಕಳ ಸ್ಥಳಾಂತರ
ಶಾಲೆಯ ಕಟ್ಟಡಗಳಿಂದಾಗಿ ಮಕ್ಕಳಿಗೆ ಹೊರೆಯಾಗುವುದನ್ನು ತಪ್ಪಿಸುವ ಸಲುವಾಗಿ ಪ್ರೌಢಶಾಲೆಯಲಿ ತರಗತಿ ನಡೆಸಲಾಗುತ್ತಿದೆ. ಆದರೆ, ಆಂಗ್ಲ ಹಾಗೂ ಕನ್ನಡ ಮಾಧ್ಯಮ ಇರುವುದರಿಂದ ಹೆಚ್ಚಿನ ಕೊಠಡಿಗಳು ಬೇಕಾಗುತ್ತದೆ. ಈ ಸಮಸ್ಯೆಯನ್ನು ಅರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ಈಗಲಾದರೂ, ಶತಮಾನದಷ್ಟು ಹಳೆಯದಾದ ಶಾಲೆಗಳನ್ನು ಉಳಿಸಿಕೊಡಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.

ಶಾಲೆಯ ಕಟ್ಟಡಗಳು ದುರಸ್ಥಿಯಾಗಿರುವ ಕಾರಣ, ಪಕ್ಕದ ಪ್ರೌಢಶಾಲೆಯಲ್ಲಿ ತರಗತಿ ಮಾಡುತ್ತಿದ್ದೇವೆ. ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿದೆ.
ರುದ್ರಾಣಿ, ಶಿಕ್ಷಕಿ, ಹರಿಸಂದ್ರ ಸರಕಾರಿ ಪ್ರಾಥಮಿಕ ಶಾಲೆ, ರಾಮನಗರ
ರಾಮನಗರ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು ಕಾಮಗಾರಿ ಪೂರ್ಣಕ್ಕೆ ಜೂನ್‌ ಗಡುವು ನೀಡಿದ ಅಶ್ವತ್ಥನಾರಾಯಣ
ಶತಮಾದಷ್ಟು ಹಳೆಯ ಶಾಲೆಯು ಸಂಪೂರ್ಣ ಶಿಥಿಲಗೊಂಡಿದೆ. ಕೊರೊನಾ ಬಿಕ್ಕಟ್ಟಿನಿಂದ ಪೋಷಕರು ಮಕ್ಕಳ ಶಿಕ್ಷಣಕ್ಕಾಗಿ ಸರಕಾರಿ ಶಾಲೆಗಳತ್ತ ಮುಖ ಮಾಡಿದ್ದರು. ಸರಕಾರಿ ಶಾಲೆಗಳ ದುಸ್ಥಿತಿ ನೋಡಿದರೆ, ಮರಳಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವುದು ಅನಿವಾರ‍್ಯ ಎನಿಸುತ್ತಿದೆ.
ಮಧುಸೂಧನ್‌, ನಿವಾಸಿ, ಹನುಮಂತೇಗೌಡನ ದೊಡ್ಡಿ, ರಾಮನಗರ

ಸಮಸ್ಯೆ ಗಮನಕ್ಕೆ ಬಂದಿದೆ. ಶಾಲೆಯ ಸಮಸ್ಯೆ ಬಗೆಹರಿಸಿಕೊಡಲಾಗುತ್ತದೆ. ಶೀಘ್ರದಲ್ಲಿಯೇ ಶಾಲೆಗೆ ಭೇಟಿ ನೀಡಲಾಗುತ್ತದೆ.
ಗಂಗಣ್ಣ ಸ್ವಾಮಿ, ಡಿಡಿಪಿಐ, ರಾಮನಗರ



Read more

[wpas_products keywords=”deal of the day sale today offer all”]