Karnataka news paper

ಕೇಂದ್ರದಿಂದ ನಾರಾಯಣ ಗುರು ಟ್ಯಾಬ್ಲೋ ನಿರಾಕರಣೆ: 26ರಂದು ಜನಾರ್ದನ ಪೂಜಾರಿ ನೇತೃತ್ವದಲ್ಲಿ ಜಾಥಾ


ಮಂಗಳೂರು: ಹೊಸದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಾರಾಯಣ ಗುರುಗಳ ಪ್ರತಿಕೃತಿ ನಿರಾಕರಣೆ ಮಾಡಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಜ.26ರಂದು ಕಾಂಗ್ರೆಸ್ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ಜಾಥಾ ನಡೆಯಲಿದೆ.

ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರ ನಿರಾಕರಣೆ ಬಗ್ಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಪಕ್ಷಾತೀತವಾಗಿ ಭಾಗವಹಿಸಿದ ನಾಗರಿಕರು ಜಾಥಾಕ್ಕೆ ಬೆಂಬಲ ಸೂಚಿಸಿದರು. ಜನಾರ್ದನ ಪೂಜಾರಿ ಮಾರ್ಗದರ್ಶನದಂತೆ ಸಭೆಯಲ್ಲಿ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

ಪ್ರಮುಖ ನಿರ್ಣಯಗಳು: ಹಳದಿ ವಸ್ತ್ರಧಾರಣೆ ಮಾಡಿ ಪ್ರತಿ ಶ್ರೀ ನಾರಾಯಣ ಗುರು ಸಂಘದಲ್ಲಿ ಗುರುದೇವರಿಗೆ ಪ್ರಾರ್ಥನೆ ಸಲ್ಲಿಸಿ ವಿಶೇಷ ಪೂಜೆ ಮಾಡಿ ಗುರುಚಿಂತನೆಗಳನ್ನು ಹೇಳುವುದು. ಪ್ರತಿ ತಾಲೂಕಿನಲ್ಲಿ ಹಳದಿ ವಸ್ತ್ರ ಧಾರಣೆ ಮಾಡಿ ಬ್ರಹ್ಮ ಶ್ರೀ ನಾರಾಯಣ ಗುರು ಟ್ಯಾಬ್ಲೋದಲ್ಲಿ ಗುರುದೇವರ ಸ್ತಬ್ಧ ಚಿತ್ರ ಮೆರವಣಿಗೆ, ತಮ್ಮ ತಮ್ಮ ವಾಹನಗಳಲ್ಲಿ ಹಳದಿ ಧ್ವಜ ಹಾಕುವುದು, ಎಲ್ಲ ತಾಲೂಕುಗಳಿಂದ ಹೊರಡುವ ಗುರುದೇವರ ಟ್ಯಾಬ್ಲೋ ಕುದ್ರೋಳಿ ಕ್ಷೇತ್ರಕ್ಕೆ ಸಂಜೆ 6 ಗಂಟೆಗೆ ಆಗಮಿಸುವುದು. ಶ್ರೀ ಕ್ಷೇತ್ರದಲ್ಲಿ ಜನಾರ್ದನ ಪೂಜಾರಿ ಗುರುಭಕ್ತರನ್ನು ಸ್ವಾಗತಿಸಲಿದ್ದಾರೆ.
ನಾರಾಯಣ ಗುರು ಸ್ತಬ್ದಚಿತ್ರ ನಿರಾಕರಣೆ: ಕರಾವಳಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ
ಉಡುಪಿ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಕಟಪಾಡಿ ವಿಶ್ವನಾಥ ಕ್ಷೇತ್ರಕ್ಕೆ ಟ್ಯಾಬ್ಲೋಗಳ ಮೂಲಕ ಬಂದು ಸೇರಲಿದೆ. ಬಿಲ್ಲವ ಸಂಘ ಮತ್ತು ಶ್ರೀ ನಾರಾಯಣ ಗುರು ಸಂಘಗಳ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.

ಮನಸ್ಸಿಗೆ ತುಂಬಾ ನೋವಾಗಿದೆ: ಪೂಜಾರಿ
ನಾರಾಯಣ ಗುರುಗಳ ಸ್ತಬ್ಧಚಿತ್ರ ನಿರಾಕರಣೆ ನನ್ನ ಮನಸ್ಸಿಗೆ ತುಂಬಾ ನೋವು ತಂದಿದೆ. ಒಂದೇ ಜಾತಿ, ಒಂದೇ ಮತ ಒಂದೇ ದೇವರು ಎಂದು ಜಗತ್ತಿಗೆ ಸಾರಿದ ಮಹಾಸಂತನ ಬಗ್ಗೆ ತಾತ್ಸಾರ ಧೋರಣೆ ಖಂಡನೀಯ ಎಂದು ಕೇಂದ್ರದ ಮಾಜಿ ಸಚಿವ, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ. ಜನಾರ್ದನ ಪೂಜಾರಿ ಹೇಳಿದರು.

ಗುರುಗಳ ವಿಷಯದಲ್ಲಿ ರಾಜಕೀಯ ಸಲ್ಲದು. ಈ ಬಗ್ಗೆ ಗುರುಗಳ ಅನುಯಾಯಿಗಳು ಕೇಂದ್ರದ ನಿರ್ಧಾರವನ್ನು ಖಂಡಿಸಬೇಕು. ಜ.26ರಂದು ನಡೆಯುವ ಜಾಥಾವನ್ನು ಜಾತಿ, ಮತ, ಪಂಥ ಮರೆತು ಬೆಂಬಲಿಸೋಣ. ಗುರುಗಳ ತತ್ತ್ವದಂತೆ ಸಂಘರ್ಷ ರಹಿತವಾಗಿ ನಾವು ನಮ್ಮ ಹಕ್ಕು ಮಂಡಿಸೋಣ. ಇದು ಯಾರ ವಿರುದ್ಧವೂ ಪ್ರತಿಭಟನೆಯಲ್ಲ, ಗುರುದೇವರ ಭಕ್ತರಿಗೆ ಸ್ವಾಭಿಮಾನ ದಿನವಾಗಲಿ ಎಂದು ತಿಳಿಸಿದ್ದಾರೆ.



Read more

[wpas_products keywords=”deal of the day sale today offer all”]