Karnataka news paper

ತಜ್ಞರ ವರದಿ ಮರೆತ ಬಿಬಿಎಂಪಿ; ಇಂಡಿಯನ್‌ ರೋಡ್‌ ಕಾಂಗ್ರೆಸ್‌ ಮಾನದಂಡದಂತೆ ರಸ್ತೆ ನಿರ್ಮಾಣ ಮಾಡದ ಪಾಲಿಕೆ!


ಶ್ರೀಕಾಂತ್‌ ಹುಣಸವಾಡಿ ಬೆಂಗಳೂರು
ಬೆಂಗಳೂರು: ನಗರದ ರಸ್ತೆಗಳಲ್ಲಿ ಪದೇಪದೆ ಬೀಳುವ ಗುಂಡಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ನಿಗದಿಪಡಿಸಿರುವ ಮಾನದಂಡದಂತೆ ಮುಚ್ಚಿ, ರಸ್ತೆಗಳನ್ನು ಸುಸ್ಥಿತಿಯಲ್ಲಿಡಬೇಕಾದ ಬಿಬಿಎಂಪಿ ಆ ಕುರಿತಂತೆ ತಜ್ಞರ ವರದಿಗಳನ್ನು ಮರೆತೇ ಬಿಟ್ಟಿದೆ.

ಅಷ್ಟೇ ಅಲ್ಲದೆ, ಮತ್ತೆ ಮತ್ತೆ ಗುಂಡಿಗಳು ಬೀಳುವುದು ಮಾಮೂಲಿಯಾಗಿದ್ದರೂ ಸಹ ಬಿಬಿಎಂಪಿ 2018 ಹಾಗೂ 2021ರಲ್ಲಿ ಸಲ್ಲಿಕೆಯಾಗಿರುವ ವರದಿಗಳ ಅಂಶಗಳತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ. ಯಥಾಪ್ರಕಾರ ಕಳಪೆ ಕಾಮಗಾರಿಯನ್ನು ಮುಂದುವರಿಸಿ ತೇಪೆ ಕೆಲಸವನ್ನೇ ಮಾಡಿಕೊಂಡು ಮುನ್ನಡೆಯುತ್ತಿದೆ. ಆ ರೀತಿ ಗುಂಡಿಗಳ ತೇಪೆ ಕಾಮಗಾರಿ ಶಾಶ್ವತವಾದುದಲ್ಲ, ಒಂದು ಸಣ್ಣ ಮಳೆಗೆ ಅಥವಾ ಒಂದು ಭಾರಿ ವಾಹನ ಓಡಾಡಿದರೆ ಕಿತ್ತು ಹೋಗುತ್ತದೆಂಬುದು ಪಾಲಿಕೆ ಎಂಜಿನಿಯರ್‌ಗಳಿಗೂ ಗೊತ್ತು. ಆದರೂ ಸಹ ಬಿಬಿಎಂಪಿ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಬೆಂಗಳೂರು: ಸಾರ್ವಜನಿಕರ ಓಡಾಟಕ್ಕೆ ಕಮರ್ಷಿಯಲ್‌ ಸ್ಟ್ರೀಟ್‌ ರಸ್ತೆ ಸಿದ್ಧ
ಹೈಕೋರ್ಟ್‌ ನಿರ್ದೇಶನದ ಮೇರೆಗೆ 2018ರಲ್ಲಿ ಮಿಲಿಟರಿ ಎಂಜಿನಿಯರಿಂಗ್‌ ಸರ್ವೀಸ್ ನ ಕಮಾಂಡರ್‌ ವರ್ಕ್ಸ್‌ ಎಂಜಿನಿಯರ್‌ ದಿನೇಶ್‌ ಅಗರವಾಲ್‌ ನೇತೃತ್ವದ ಕೋರ್ಟ್‌ ಕಮಿಷನರ್ಸ್ ಸಮಿತಿ ಬೆಂಗಳೂರಿನ ಮಲ್ಲೇಶ್ವರಂ, ಯಶವಂತಪುರ, ಯಲಹಂಕ, ಮಹಾಲಕ್ಷ್ಮೇ ಲೇಔಟ್‌ ಸೇರಿದಂತೆ ಹಲವು ಪ್ರದೇಶಗಳ ರಸ್ತೆ ಗುಂಡಿಗಳನ್ನು ಮುಚ್ಚಿದ್ದ ಪಾಲಿಕೆಯ ಕಾಮಗಾರಿಯನ್ನು ಸ್ವತಃ ಪರಿಶೀಲಿಸಿತ್ತು.

ಆಗ ಗುಂಡಿಗಳನ್ನು ಮುಚ್ಚಲು ಬಳಸಿದ್ದ ಡಾಂಬರು, ಜಲ್ಲಿ, ಅನುಸರಿಸಿರುವ ವಿಧಾನ ಎಲ್ಲವನ್ನೂ ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದ ಸಮಿತಿ ನ್ಯಾಯಾಲಯಕ್ಕೆ ಪಾಲಿಕೆ ಗುಂಡಿ ಮುಚ್ಚುವ ವಿಧಾನ ಎಷ್ಟು ಕಳಪೆಯಾಗಿದೆ, ಅದನ್ನು ಸುಧಾರಿಸಲು ಏನೆಲ್ಲಾ ಮಾಡಬೇಕು ಎಂಬ ತಾಂತ್ರಿಕ ಅಂಶಗಳ ಸಹಿತ ವಿವರವಾದ ವರದಿಯನ್ನು ಸಲ್ಲಿಸಿತ್ತು.

ಅದರಲ್ಲಿ ಮುಖ್ಯವಾಗಿ ರಸ್ತೆ ಗುಂಡಿಗಳನ್ನು ಮುಚ್ಚುವಾಗ ಪಾಲಿಕೆ, ಭಾರತೀಯ ರಸ್ತೆ ಕಾಂಗ್ರೆಸ್‌ (ಐಆರ್‌ಸಿ) ನಿಯಮ ಪಾಲನೆ ಮಾಡಬೇಕು, ಕಾಮಗಾರಿಯಲ್ಲಿ ಗುಣಮಟ್ಟದ ವಸ್ತುಗಳನ್ನು ಬಳಕೆ ಮಾಡಬೇಕು ಎಂದು ಶಿಫಾರಸು ಮಾಡಲಾಗಿತ್ತು. ಬಿಬಿಎಂಪಿ ಹೈಕೋರ್ಟ್‌ನಲ್ಲಿ ಆ ವರದಿಯ ಅಂಶಗಳನ್ನು ರಸ್ತೆ ಕಾಮಗಾರಿಯಲ್ಲಿ ಪಾಲನೆ ಮಾಡಲಾಗುವುದೆಂದು ಭರವಸೆ ನೀಡಿತ್ತು. ಆದರೆ ಅದು ಕೇವಲ ಕಾಗದದಲ್ಲಿ ಮಾತ್ರ ಉಳಿದಿರುವುದೇ ವಿಪರ್ಯಾಸ.
ರಸ್ತೆ ಗುಂಡಿಗಳಿಗೆ ಅಮಾಯಕರ ಬಲಿ, ಎಚ್ಚೆತ್ತುಕೊಳ್ಳದ ಬಿಬಿಎಂಪಿ; ಸರ್ವ ಋುತುವಿನಲ್ಲೂ ರಸ್ತೆಗಳು ಗುಂಡಿಮಯ!
ಆನಂತರ 2021ರಲ್ಲಿಯೂ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ ತಜ್ಞರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಪಾಲಿಸಬೇಕಾದ 15 ಅಂಶಗಳನ್ನು ಶಿಫಾರಸು ಮಾಡಿತ್ತು. ಆ ಅಂಶಗಳತ್ತಲೂ ಪಾಲಿಕೆ ಗಮನಹರಿಸಿಲ್ಲ.

”ಹೈಕೋರ್ಟ್‌ ನಿರ್ದೇಶನದ ಮೇರೆಗೆ ಬೆಂಗಳೂರಿನ ರಸ್ತೆ ದುರಸ್ತಿ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಬಿಬಿಎಂಪಿ ಯಾವ್ಯಾವ ಕ್ರಮಗಳನ್ನು ಅನುಸರಿಸಬೇಕೆಂದು ಪ್ರಾಧಿಕಾರ ವರದಿ ನೀಡಿದೆ. ಅವುಗಳನ್ನು ಪಾಲನೆ ಮಾಡುವುದು ಪಾಲಿಕೆಯ ಹೊಣೆಗಾರಿಕೆಯಾಗಿದೆ”
ಎಚ್‌.ಶಶಿಧರ್‌ ಶೆಟ್ಟಿ, ಸದಸ್ಯ ಕಾರ‍್ಯದರ್ಶಿ, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ

ವಾರ್ಡ್‌ ಸಮಿತಿಗೆ ಒಪ್ಪಿಸದೆ ನಿರ್ವಹಣೆ ಅಸಾಧ್ಯ

”ರಸ್ತೆಗಳ ದುರಸ್ತಿ ಹಾಗೂ ನಿರ್ವಹಣೆ ಹೊಣೆಯನ್ನು ಅಯಾ ವಾರ್ಡ್‌ ಸಮಿತಿಗಳಿಗೆ ಒಪ್ಪಿಸದಿದ್ದರೆ, ಅವುಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಅಸಾಧ್ಯ. ಈ ಕುರಿತು ಹೈಕೋರ್ಟ್‌ ಆದೇಶ ನೀಡಿದ್ದರೂ ಅದನ್ನು ಪಾಲಿಸುತ್ತಿಲ್ಲ”ಎಂದು ಕೋರಮಂಗಲದ ವಾಸಿ ವಿಜಯ್‌ ಮೆನನ್‌ ಹೇಳಿದ್ದಾರೆ. ರಸ್ತೆ ಗುಂಡಿಗಳ ಕುರಿತು ಪಿಐಎಲ್‌ ಹೂಡಿ 2015ರಿಂದ ನ್ಯಾಯಾಲಯದಲ್ಲಿ ಹೋರಾಡುತ್ತಿರುವ ಅವರು, ”ರಸ್ತೆಗಳ ನಿರ್ವಹಣೆ ಹೊಣೆ ವಿಕೇಂದ್ರೀಕರಣವಾಗಬೇಕು. ಸ್ಥಳೀಯ ವಾರ್ಡ್‌ ಮಟ್ಟದ ಸಹಾಯಕ ಎಂಜಿನಿಯರ್‌ಗಳಿಗೆ ಅಯಾ ವಾರ್ಡ್‌ನಲ್ಲಿನ ರಸ್ತೆಗಳ ಸಮಗ್ರ ಚಿತ್ರಣ ತಿಳಿದಿರುತ್ತದೆ, ಹಾಗಾಗಿ ಅವರಿಗೆ ಅವುಗಳ ನಿರ್ವಹಣೆಯನ್ನು ವಹಿಸಬೇಕು. ಆಗ ಮಾತ್ರ ರಸ್ತೆಗಳನ್ನು ಸುಸ್ಥಿತಿಯಲ್ಲಿಡಲು ಸಾಧ್ಯವಾಗಲಿದೆ” ಎಂದರು.

ಒಬ್ಬರಿಗೂ ಪರಿಹಾರ ನೀಡಿಲ್ಲ..!
ಹೈಕೋರ್ಟ್‌ 2019ರಲ್ಲಿಯೇ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದ ಆಗುವ ಸಾವು-ನೋವುಗಳಿಗೆ ಪಾಲಿಕೆಯೇ ಹೊಣೆ ಹೊರಬೇಕು, ಅದಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಆದೇಶಿಸಿತ್ತು. ಅದರಂತೆ ಪಾಲಿಕೆಯೇ ಆ ಕುರಿತು ಪರಿಹಾರಕ್ಕೆ ದೂರು ನೀಡಲು ವ್ಯವಸ್ಥೆಯನ್ನು ರೂಪಿಸಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದೆ. ಆದರೆ ಈವರೆಗೂ ರಸ್ತೆ ಗುಂಡಿಗಳಿಂದ ಸಾವನ್ನಪ್ಪಿದ, ಗಾಯಗೊಂಡವರಿಗೆ ಒಬ್ಬರಿಗೂ ಪರಿಹಾರ ನೀಡಿದ ಉದಾಹರಣೆ ಇಲ್ಲ.
ದಂಡಕ್ಕೆ ಆಸಕ್ತಿ, ಸೌಲಭ್ಯಕ್ಕೆ ನಿರಾಸಕ್ತಿ; ಬೆಂಗಳೂರು ಸಂಚಾರ ಪೊಲೀಸರ ನಡೆ ಬಗ್ಗೆ ಸಾರ್ವಜನಿಕರ ಅಸಮಾಧಾನ!
ಭಿಕ್ಷೆ ಆದರೂ ಬೇಡಿ ರಸ್ತೆ ಗುಂಡಿ ಮುಚ್ಚಿ..!
2015ರಲ್ಲಿ ಹೈಕೋರ್ಟ್‌ನಲ್ಲಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಕುರಿತ ಪಿಐಎಲ್‌ ವಿಚಾರಣೆಗೆ ಬಂದಾಗಿನಿಂದ ಈವರೆಗೆ ಎಲ್ಲ ಸಿಜೆಗಳು ಪ್ರತಿ ವಿಚಾರಣೆ ವೇಳೆ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಳ್ಳುವುದು, ಅದಕ್ಕೆ ಪಾಲಿಕೆ ಏನೋ ಒಂದು ಸಬೂಬು ಹೇಳುವುದು ನಡೆಯುತ್ತಲೇ ಇದೆ. ಹಿಂದಿನ ಸಿಜೆ ಎ.ಎಸ್‌. ಓಕ್‌ ಕೂಡ ಕಾನೂನು ಪ್ರಾಧಿಕಾರದಿಂದ ರಸ್ತೆಗಳ ಸಮೀಕ್ಷೆ ನಡೆಸಿ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಹಾಲಿ ಸಿಜೆ ರಿತುರಾಜ್‌ ಅವಸ್ಥಿ ಕೂಡ, ‘ಭಿಕ್ಷೆಯಾದರೂ ಬೇಡಿ ಮೊದಲು ಬೆಂಗಳೂರು ರಸ್ತೆ ಗುಂಡಿಗಳನ್ನು ಸರಿಪಡಿಸಿ’ ಎಂದು ಖಾರವಾಗಿ ನುಡಿದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ವರದಿ ಪ್ರಮುಖಾಂಶ

  • ರಸ್ತೆಗಳ ನಿರ್ವಹಣೆಯನ್ನು ನಿರಂತರವಾಗಿ ನೋಡಿಕೊಳ್ಳಲು ಪ್ರತ್ಯೇಕ ವ್ಯವಸ್ಥೆ ರೂಪಿಸಬೇಕು
  • ನಗರದ ಎಲ್ಲ ರಸ್ತೆಗಳ ಇತಿಹಾಸ, ಅವುಗಳ ದುರಸ್ತಿ ಕಾರ‍್ಯ ಕೈಗೊಂಡ ವಿವರ ಸೇರಿ ರಸ್ತೆ ಇತಿಹಾಸ ದಾಖಲಾತಿ ನಿರ್ವಹಿಸಬೇಕು
  • ರಸ್ತೆ ಕಾಮಗಾರಿಗಳ ದುರಸ್ತಿ ನಂತರ, ಅದರ ಗುಣಮಟ್ಟದ ಮೌಲ್ಯಮಾಪನ ಮಾಡಬೇಕು
  • ದುರಸ್ತಿ ನಂತರ ಮತ್ತೆ ರಸ್ತೆ ಹಾಳಾದರೆ ಅದಕ್ಕೆ ಗುತ್ತಿಗೆದಾರರನ್ನೇ ಹೊಣೆಗಾರರನ್ನಾಗಿ ಮಾಡಬೇಕು
  • ರಸ್ತೆ ದುರಸ್ತಿ ವಿವರ ಅಂದರೆ ಗುತ್ತಿಗೆದಾರರ ಹೆಸರು, ಖರ್ಚಾದ ಹಣ ಮತ್ತಿತರ ಪ್ರದರ್ಶನ ಕಡ್ಡಾಯ
  • ಬಿಬಿಎಂಪಿ ಸಹಾಯ ಮತ್ತು ಫಿಕ್ಸ್‌ ಮೈಸ್ಟ್ರೀಟ್‌ ಮೂಲಕ ಬರುವ ದೂರುಗಳಿಗೆ ತಕ್ಷಣ ಸ್ಪಂದನೆ
  • ದೂರು ಬಂದ 7 ದಿನಗಳಲ್ಲಿ ರಸ್ತೆಗಳ ದುರಸ್ತಿಗೆ ಕ್ರಮ
  • ರಸ್ತೆ ಸಂಬಂಧಿ ದೂರುಗಳ ವಿವರಗಳನ್ನು ಪಾಲಿಕೆಯ ವೆಬ್‌ಸೈಟ್‌ ನಲ್ಲಿ ಪ್ರಕಟಿಸಬೇಕು.
  • ರಸ್ತೆ ಕಾಮಗಾರಿ ವೇಳೆ ಎಲ್ಲ ಸ್ಥಳೀಯ ಆಡಳಿತ ಸಂಸ್ಥೆಗಳ ಜೊತೆ ಸಮನ್ವಯ ಅಗತ್ಯ



Read more

[wpas_products keywords=”deal of the day sale today offer all”]