ಬೆಂಗಳೂರು: ಸ್ನೇಹಿತನ ಜತೆ ಬೈಕ್‌ನಲ್ಲಿ ಹೋಗುವಾಗ ಆಯ ತಪ್ಪಿ ಬಿದ್ದ ಪರಿಣಾಮ ಹಿಂದಿನಿಂದ ಬರುತ್ತಿದ್ದ ಗೂಡ್ಸ್ ವಾಹನ ಹರಿದು ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿರುವ ಘಟನೆ ಹೆಬ್ಬಾಳ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ವಿದ್ಯಾರಣ್ಯಪುರ ನಿವಾಸಿ ಮಹಶ್ರೀ(20) ಮೃತ ವಿದ್ಯಾರ್ಥಿನಿ. ನಗರದ ಕಾಲೇಜ್‌ವೊಂದರಲ್ಲಿ ದ್ವಿತೀಯ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದರು. ಟೆಕ್ಸ್‌ಟೈಲ್ಸ್ ಅಂಗಡಿಯಲ್ಲಿ ಪಾರ್ಟ್‌ಟೈಮ್ ಕೆಲಸ ಮಾಡುತ್ತಿದ್ದರು. ಶುಕ್ರವಾರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮನೆಯಲ್ಲೇ ಇರುವಂತೆ ಪೋಷಕರು ಹೇಳಿದ್ದರು. ಆದರೂ ಸಹ ಪೋಷಕರ ಮಾತು ಕೇಳದೆ ಸ್ನೇಹಿತ ನರಸಿಂಗ ಪೆರುಮಾಳ್ ಜತೆ ಬಿಇಎಲ್‌ನಿಂದ ನಾಗವಾರ ಕಡೆ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಭದ್ರಪ್ಪ ಲೇಔಟ್ ಮೇಲು ಸೇತುವೆ ಬಳಿ ಬೈಕ್‌ನ ಚಕ್ರಕ್ಕೆ ಮರದ ಪಟ್ಟಿಯೊಂದು ಸಿಕ್ಕಿದ್ದು, ಒಂದು ಕಡೆ ವಾಲಿದೆ. ಅದೇ ವೇಳೆ ಗೂಡ್ಸ್ ವಾಹನ ಬಂದಿದ್ದು, ಬೈಕ್‌ಗೆ ತಾಗಿದಾಗ ಮಹಶ್ರೀ ಬೈಕ್‌ನಿಂದ ಕೆಳಗೆ ಬಿದ್ದಿದ್ದರು. ಬಿದ್ದ ಮಹಶ್ರೀ ಮೇಲೆ ಗೂಡ್ಸ್ ವಾಹನದ ಹಿಂಬದಿ ಚಕ್ರ ಹರಿದಿದೆ. ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಸಂಚಾರ ಪೊಲೀಸರು ಹೇಳಿದರು. ಬೆಂಗಳೂರು ಏರ್‌ಪೋರ್ಟ್ ರಸ್ತೆಯಲ್ಲಿ ಅತಿ ವೇಗವೇ ಅಪಘಾತಗಳಿಗೆ ರಹದಾರಿ..! ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದ ಹೆಬ್ಬಾಳ ಸಂಚಾರ ಪೊಲೀಸರು ಪರಿಶೀಲಿಸಿ ಮೃತದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಘಟನೆ ಸಂಬಂಧ ಗೂಡ್ಸ್ ವಾಹನ ಚಾಲಕನನ್ನು ಬಂಧಿಸಿದ್ದು, ಹಾಗೂ ವಿದ್ಯಾರ್ಥಿನಿ ಸ್ನೇಹಿತನಿಂದ ಹೇಳಿಕೆ ಪಡೆಯಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು. ಹೆಬ್ಬಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಸವಾರ ಸಾವು ಮತ್ತೊಂದು ಪ್ರಕರಣದಲ್ಲಿ ಟಿಪ್ಪರ್ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿರುವ ಘಟನೆ ಕೆ.ಆರ್.ಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬನಶಂಕರಿ ನಿವಾಸಿ ಬಿಲಾಲ್ ಖಾನ್(28) ಮೃತ ಸವಾರ. ಕಟ್ಟಡ ನಿರ್ಮಾಣ ಕಂಪನಿಯಲ್ಲಿಕೆಲಸ ಮಾಡುತ್ತಿದ್ದ ಬಿಲಾಲ್ ಶುಕ್ರವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಕೆ.ಆರ್.ಪುರ ರೈಲ್ವೆ ನಿಲ್ದಾಣ ಸಮೀಪ ಹೋಗುತ್ತಿದ್ದರು. ಇದೇ ಮಾರ್ಗವಾಗಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಟಿಪ್ಪರ್ ಲಾರಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಿಲಾಲ್ ಖಾನ್ ಮೇಲೆ ಲಾರಿ ಹರಿದು ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು. ಕೆ.ಆರ್.ಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.