Karnataka news paper

ಐದು ವರ್ಷಗಳಿಂದ ರಾಜ್ಯ ಪ್ರಶಸ್ತಿ ಪ್ರದಾನ ಬಾಕಿ: ಪ್ರಶಸ್ತಿಯತ್ತ ಏಕೆ ನಿರಾಸಕ್ತಿ?


ಹರೀಶ್‌ ಬಸವರಾಜ್‌
ರಾಜ್ಯ ಸರ್ಕಾರ ಸಿನಿಮಾಗೆ ನೀಡುವ ಪ್ರಶಸ್ತಿಗಳ ವಿತರಣೆಯಾಗಿ ಐದು ವರ್ಷಗಳಾಗಿವೆ. ಸರಕಾರ ಈ ರೀತಿ ಅವಜ್ಞೆ ತೋರಿಸುವಲ್ಲಿ ಚಿತ್ರರಂಗವನ್ನು ಪ್ರತಿನಿಧಿಸುವ ಸಂಘ ಸಂಸ್ಥೆಗಳ ನಿರಾಸಕ್ತಿಯೂ ಸೇರಿರುವುದು ಗಮನಾರ್ಹ.

ರಾಜ್ಯ ಸರ್ಕಾರ ಸಿನಿಮಾಗಳನ್ನು ಪ್ರೋತ್ಸಾಹಿಸಲು ಕೊಡುವ ಪ್ರಶಸ್ತಿಗೆ ಮಂಕು ಕವಿದಿದೆ. 2021ರ ಪ್ರಶಸ್ತಿಯೂ ಸೇರಿ ಐದು ವರ್ಷಗಳ ಪ್ರಶಸ್ತಿಯನ್ನು ಸರಕಾರವೇನೋ ಬಾಕಿ ಉಳಿಸಿಕೊಂಡಿದೆ. ಆದರೆ, ಸರಕಾರವನ್ನು ಎಚ್ಚರಿಸಿ ಈ ಕಾರ್ಯವಾಗುವಂತೆ ಪ್ರೇರೇಪಿಸಬಹುದಾದ ಚಿತ್ರರಂಗವನ್ನು ಪ್ರತಿನಿಧಿಸುವಂತಹ ಸಂಸ್ಥೆಗಳು ಈ ನಿಟ್ಟಿನಲ್ಲಿ ಏನು ಮಾಡುತ್ತಿವೆ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಕನ್ನಡ ಚಿತ್ರರಂಗ ಎಂದಾಕ್ಷಣ ಎಲ್ಲರೂ ವಾಣಿಜ್ಯ ಮಂಡಳಿ, ಕಲಾವಿದರ ಸಂಘ, ಚಲನಚಿತ್ರ ಅಕಾಡೆಮಿಯ ಕಡೆಗೆ ನೋಡುತ್ತಾರೆ. ಈ ಮೂರೂ ಸಂಸ್ಥೆಗಳು ಇದುವರೆಗೂ ಪ್ರಶಸ್ತಿಯ ಬಗ್ಗೆ ಚಿಂತಿಸುವ ಗೋಜಿಗೂ ಹೋಗಿಲ್ಲ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ.

ವಾಣಿಜ್ಯ ಮಂಡಳಿ
ನಿರ್ಮಾಣ ಸಂಸ್ಥೆ, ಟೈಟಲ್‌ ರಿಜಿಸ್ಪ್ರೇಶನ್‌ ಸೇರಿದಂತೆ ಹಲವು ಕೆಲಸಗಳನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಾಡಬೇಕು. ಒಂದರ್ಥದಲ್ಲಿ ವಾಣಿಜ್ಯ ಮಂಡಳಿಯನ್ನು ಚಿತ್ರರಂಗದ ಮಾತೃಸಂಸ್ಥೆ ಎಂದು ಹಲವರು ತಿಳಿದುಕೊಂಡಿದ್ದಾರೆ. ಅದರಂತೆ ವಾಣಿಜ್ಯ ಮಂಡಳಿ ಸಹ ಐದು ವರ್ಷಗಳಿಂದ ಪ್ರಶಸ್ತಿ ಬಾಕಿ ಇರುವುದನ್ನು ಅಷ್ಟು ಗಂಭೀರವಾಗಿ ತೆಗೆದುಕೊಂಡಂತಿಲ್ಲ.

‘ನಾವು ಈಗಾಗಲೇ ಸರ್ಕಾರಕ್ಕೆ ಪ್ರಶಸ್ತಿ ಪ್ರದಾನ ಮಾಡುವ ಬಗ್ಗೆ ಮನವಿ ಮಾಡಿದ್ದೇವೆ. ಇದನ್ನು ಸರ್ಕಾರವೇ ಮಾಡಬೇಕು. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದಾಗಲೆಲ್ಲ ಈ ಬಗ್ಗೆ ಗಮನ ಕೊಡುವಂತೆ ಹೇಳಿದ್ದೆವು. ಸಿ. ಸಿ. ಪಾಟೀಲ್‌ ವಾರ್ತಾ ಇಲಾಖೆ ಮಂತ್ರಿಯಾಗಿದ್ದಾಗ ಅವರಿಗೂ ಪ್ರಶಸ್ತಿಯ ಬಗ್ಗೆ ಗಮನ ಹರಿಸಿ ಎಂದು ಹೇಳಿದ್ದೆವು. ಈಗ ಮತ್ತೊಮ್ಮೆ ಅದರ ಬಗ್ಗೆ ಮಾತನಾಡುತ್ತೇವೆ’ ಎಂದು ಹೇಳುತ್ತಾರೆ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌.

ಮಾಧ್ಯಮ ಪ್ರತಿನಿಧಿ ಪ್ರಶ್ನೆ ಕೇಳಿದಾಗಲಷ್ಟೇ ಈ ಬಗ್ಗೆ ಎಚ್ಚೆತ್ತುಕೊಳ್ಳುವ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ತಾವಾಗಿಯೇ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಪಟ್ಟಿದ್ದರೆ ಇಷ್ಟರಲ್ಲಿ ಪ್ರಶಸ್ತಿ ವಿತರಣೆಯೇ ಆಗಿಹೋಗಿರುತ್ತಿತ್ತು. ಸಿಎಂ ಭೇಟಿ ಮಾಡಿದಾಗ ಈ ಬಗ್ಗೆ ಮಾತನಾಡುತ್ತೇವೆ ಎನ್ನುವ ಉತ್ತರಕ್ಕಿಂತಲೂ ವಾಣಿಜ್ಯ ಮಂಡಳಿ ಕೊಂಚ ಜವಾಬ್ದಾರಿ ಹೊತ್ತುಕೊಂಡರೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಬಹುದು.

ನಾವು ಮನವಿ ಮಾಡಬಹುದು

ಕರ್ನಾಟಕ ಚಲನಚಿತ್ರ ಅಕಾಡೆಮಿ ಸರ್ಕಾರದ ಒಂದು ಅಂಗಸಂಸ್ಥೆ. ಸಿನಿಮಾ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಸಲುವಾಗಿಯೇ ಸರ್ಕಾರ ಇದನ್ನು ಆರಂಭಿಸಿದೆ. ಈ ಸಂಸ್ಥೆಯ ಅಧ್ಯಕ್ಷರಾದ ಸುನಿಲ್‌ ಪುರಾಣಿಕ್‌ ಮಾತನಾಡಿ, ‘ಪ್ರಶಸ್ತಿ ವಿತರಣೆ ಮತ್ತು ಘೋಷಣೆ ತಡ ಆಗಿರುವುದು ನಿಜ. 2017, 2018ರ ಸಮಯದಲ್ಲಿ ರಾಜಕೀಯ ಅಸ್ಥಿರತೆ ಇತ್ತು. ಆಗ ಇದರ ಕಡೆ ಗಮನ ಕೊಡಲು ಆಗಿರಲಿಲ್ಲ ಎನಿಸುತ್ತದೆ. ಅದಾದ ಮೇಲೆ ಮಾಡಬೇಕು ಎನ್ನುವ ಹೊತ್ತಿಗೆ ಕೋವಿಡ್‌ ಬಂದಿದೆ. ಅಕಾಡೆಮಿ ವತಿಯಿಂದ ನಾನು ಮನವಿ ಮಾಡಿಕೊಳ್ಳಬಹುದಷ್ಟೇ. ಈಗಾಗಲೇ ಭೇಟಿ ಮಾಡಿದಾಗ ಮೂರು ಬಾರಿ ಅಕಾಡೆಮಿಯಿಂದ ಲೆಟರ್‌ ಕೊಟ್ಟಿದ್ದೇನೆ. ಸರ್ಕಾರ ಮತ್ತು ವಾರ್ತಾ ಇಲಾಖೆಗೆ ಈ ಬಗ್ಗೆ ಹೆಚ್ಚಿನ ಅಧಿಕಾರವಿದೆ. ಅಕಾಡೆಮಿಗೆ ಇಲ್ಲ’ ಎಂದಿದ್ದಾರೆ.

ಕರ್ನಾಟಕ ರಾಜ್ಯ ಪ್ರಶಸ್ತಿಗೆ ಸೋಂಕಿನ ಕಾಟ: ಐದು ವರ್ಷಗಳ ಪ್ರಶಸ್ತಿ ಪ್ರದಾನ ಬಾಕಿ

ನಿರ್ಲಕ್ಷ್ಯಕ್ಕೊಳಗಾಗಿದ್ದೇವೆ

ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಕಾರ್ಯದರ್ಶಿಗಳಾದ ರಾಕ್‌ಲೈನ್‌ ವೆಂಕಟೇಶ್‌ ಸರಕಾರ, ಅಧಿಕಾರಿಗಳು ಎಲ್ಲರೂ ಚಿತ್ರರಂಗವನ್ನು ನಿರ್ಲಕ್ಷ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ‘ಪ್ರಶಸ್ತಿ ನೀಡಿಲ್ಲ, ಸಿನಿಮಾ ನೋಡಲು ಕಮಿಟಿ ಮಾಡಿಲ್ಲ, ಜತೆಗೆ ಚಿತ್ರರಂಗ ಯಾವುದಕ್ಕೂ ಪ್ರಯೋಜನವಿಲ್ಲದ ಕ್ಷೇತ್ರದಂತೆ ಎಲ್ಲರೂ ನಮ್ಮನ್ನು ನಿರ್ಲಕ್ಷ ಮಾಡಿದ್ದಾರೆ. ಹಿಂದೆಯೂ ನಾವು ಪ್ರಶಸ್ತಿ ವಿತರಣೆ, ಸಬ್ಸಿಡಿಯಂತಹ ಕೆಲಸಗಳು ಕಾಲ ಕಾಲಕ್ಕೆ ಆಗಬೇಕು ಎಂಬ ನಿಟ್ಟಿನಲ್ಲಿ ಸರ್ಕಾರಕ್ಕೆ ಒತ್ತಡ ತಂದಿದ್ದೆವು. ವಾಣಿಜ್ಯ ಮಂಡಳಿ ಮತ್ತು ಕಲಾವಿದರ ಸಂಘ ಜತೆಯಾಗಿ ಮಾರ್ಚ್, ಏಪ್ರಿಲ್‌ ಹೊತ್ತಿಗೆ ಈ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಯೋಚಿಸಿದ್ದೇವೆ’ ಎನ್ನುತ್ತಾರೆ ರಾಕ್‌ಲೈನ್‌ ವೆಂಕಟೇಶ್‌.

ಕನ್ನಡ ಸಿನಿಮಾಗಳಿಗೆ ರಾಜ್ಯ ಸರ್ಕಾರ ಪ್ರಶಸ್ತಿ ನೀಡೋದು ಯಾವಾಗ?

ನ್ಯಾಯಾಲಯದ ವ್ಯಾಜ್ಯಗಳು

ಪ್ರಶಸ್ತಿ ವಿತರಣೆಗೆ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ ಜತೆಗೆ ಘೋಷಣೆಯಾದ ಪ್ರಶಸ್ತಿಗಳ ಮೇಲೆ ಇರುವ ಕೋರ್ಟ್‌ ಕೇಸುಗಳು ಕಾರಣ ಎನ್ನಲಾಗುತ್ತಿದೆ. 2018ರ ಪ್ರಶಸ್ತಿಯನ್ನು ನೀಡದಂತೆ ಹೈಕೋರ್ಟ್‌ ಈಗಾಗಲೇ ಆದೇಶ ನೀಡಿದೆ.

‘ನಮ್ಮ ಮಗು’ ಚಿತ್ರ : ಮತ್ತೆ ವಿವಾದದಲ್ಲಿ ರಾಜ್ಯ ಪ್ರಶಸ್ತಿ ಸಿನಿಮಾ!

ವಾರ್ತಾ ಇಲಾಖೆಯತ್ತ ಎಲ್ಲರ ಚಿತ್ತ

ಸ್ಯಾಂಡಲ್‌ವುಡ್‌ನ ಹಿರಿಯ ನಿರ್ದೇಶಕರು, ಚಿತ್ರಪ್ರೇಮಿಗಳು ಹೀಗೆ ಯಾರನ್ನೇ ಕೇಳಿದರೂ ವಾರ್ತಾ ಇಲಾಖೆಯತ್ತ ಎಲ್ಲರೂ ಬೊಟ್ಟು ಮಾಡಿ ತೋರಿಸುತ್ತಾರೆ. ವಾರ್ತಾ ಇಲಾಖೆಯ ಅಧಿಕಾರಿಗಳು ಕೊಂಚ ಮುತುವರ್ಜಿ ವಹಿಸಿ ಕೆಲಸ ಮಾಡಿದರೆ ಸಿನಿಮಾ ನೋಡುವ ಸಮಿತಿ ರಚನೆಯಾಗುತ್ತಿತ್ತು. ಜಡ್ಡುಗಟ್ಟಿದ ಅಧಿಕಾರಿ ವರ್ಗವನ್ನು ಯಾರು ಚುರುಕುಗೊಳಿಸುತ್ತಾರೆ. ಇದೊಂದು ರೀತಿಯಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬಂತಾಗಿದೆ.

‘ಮುಂದಿನ ವಾರ ಚಿತ್ರೋತ್ಸವದ ವಿಚಾರಕ್ಕೆ ಮುಖ್ಯಮಂತ್ರಿಗಳನ್ನು ಭೇಟಿಯಾಗುತ್ತೇನೆ. ಆಗ ಪ್ರಶಸ್ತಿಯ ವಿಚಾರವನ್ನು ಪ್ರತ್ಯೇಕವಾಗಿ ಚರ್ಚೆ ಮಾಡಿ ಮಾತನಾಡುತ್ತೇನೆ’ ಎಂದಿದ್ದಾರೆ ಸುನಿಲ್‌ ಪುರಾಣಿಕ್‌, ಚಲನಚಿತ್ರ ಅಕಾಡೆಮಿ ಅಧ್ಯಕ್ಷ

‘ಚಿತ್ರರಂಗವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ. ಇದಕ್ಕೆ ಉದಾಹರಣೆಯೆಂಬಂತೆ ಪ್ರಶಸ್ತಿ ವಿತರಣೆ ಆಗಿಲ್ಲ. ಚಿತ್ರರಂಗವೆಂದರೆ ಬರೀ ಮನರಂಜನೆಯಲ್ಲ. ಇದೊಂದು ಉದ್ಯಮ ಎಂದು ಗಮನದಲ್ಲಿಟ್ಟುಕೊಂಡು ನಮ್ಮ ಕಡೆ ಸರ್ಕಾರ ನೋಡಬೇಕು. ಈ ಬಗ್ಗೆ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ’ ಎಂದಿದ್ದಾರೆ ರಾಕ್‌ಲೈನ್‌ ವೆಂಕಟೇಶ್‌, ಕಲಾವಿದರ ಸಂಘದ ಕಾರ್ಯದರ್ಶಿ

ಪ್ರಶಸ್ತಿಗಳು, ಚಿತ್ರೋತ್ಸವದ ಮೇಲೂ ಕೊರೊನಾಘಾತ! ಈ ವರ್ಷವೂ ಸಮಾರಂಭ ಅನುಮಾನ



Read more

[wpas_products keywords=”deal of the day party wear dress for women stylish indian”]