Karnataka news paper

ಬಳ್ಳಾರಿಯ ಬೆಂಗಳೂರು ರಸ್ತೆಯಲ್ಲಿ ಬೇಕಾಬಿಟ್ಟಿ ಬೈಕ್‌ ನಿಲುಗಡೆಗೆ ತಡೆ : ‘ಸಮ-ಬೆಸ’ ಪಾರ್ಕಿಂಗ್‌ ಜಾರಿ


ಹೈಲೈಟ್ಸ್‌:

  • ಬೆಂಗಳೂರು ರಸ್ತೆಯಲ್ಲಿ ಬೇಕಾಬಿಟ್ಟಿ ಬೈಕ್‌ ನಿಲುಗಡೆಗೆ ತಡೆ
  • ಬೆಂಗಳೂರು ರಸ್ತೆಯಲ್ಲಿ ‘ಸಮ-ಬೆಸ’ ಪಾರ್ಕಿಂಗ್‌ ಜಾರಿ
  • ಮಳಿಗೆ ಮಾಲೀಕರು, ಕೆಲಸಗಾರರ ವಾಹನಗಳಿಂದಲೇ ಸಮಸ್ಯೆ
  • ಪಾದಚಾರಿಗಳು, ಸಾರ್ವಜನಿಕರಿಗೆ ನಿತ್ಯ ಕಿರಿಕಿರಿ
  • ನಿಮಯ ಉಲ್ಲಂಘಿಸಿದರೆ ಪೊಲೀಸರಿಂದ ದಂಡ

ಎಸ್‌.ಎರ್ರಿಸ್ವಾಮಿ

ಬಳ್ಳಾರಿ: ನಗರದ ಬೆಂಗಳೂರು ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ಬೈಕ್‌ ನಿಲುಗಡೆಗೆ ಬ್ರೇಕ್‌ ಹಾಕಿರುವ ಸಂಚಾರ ಪೊಲೀಸರು ‘ಸಮ-ಬೆಸ’ ನಿಯಮ ಜಾರಿ ಮಾಡುವ ಮೂಲಕ ಪಾದಚಾರಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ. ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸವಾರರು ರಸ್ತೆಯ ಎರಡೂ ಬದಿಯಲ್ಲಿ ಬೈಕ್‌ಗಳನ್ನು ಪಾರ್ಕ್ ಮಾಡುತ್ತಿದ್ದ ಪರಿಣಾಮ ಪಾದಚಾರಿಗಳು, ಶಾಲಾ ಮಕ್ಕಳು ಹಾಗೂ ವೃದ್ಧರು ಪರದಾಡುವಂತಾಗಿತ್ತು.

ಇದನ್ನು ಅರಿತ ಪೊಲೀಸರು ‘ಸಮ-ಬೆಸ’ ನಿಯಮವನ್ನು ಜಾರಿಗೊಳಿಸಿದ್ದಾರೆ. ಅಲ್ಲದೆ, ರಸ್ತೆಯ ಎರಡೂ ಬದಿಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿದ್ದಾರೆ.

ಏನಿದು ‘ಸಮ-ಬೆಸ’ ವ್ಯವಸ್ಥೆ!
ಈ ನಿಯಮದಂತೆ ಸಮ ದಿನಗಳಾದ 2, 4, 6, 8ನೇ ತಾರೀಖಿನಂದು ರಸ್ತೆಯ ಬಲ ಭಾಗದಲ್ಲಿ ಹಾಗೂ ಬೆಸ ದಿನಗಳಾದ 1, 3, 5, 7ನೇ ತಾರೀಖಿನಂದು ರಸ್ತೆಯ ಎಡ ಭಾಗದಲ್ಲಿ ಬೈಕ್‌ಗಳನ್ನು ನಿಲುಗಡೆ ಮಾಡಬೇಕು. ಈ ವ್ಯವಸ್ಥೆಯು ಬ್ರೂಸ್‌ಪೇಟೆ ಪೊಲೀಸ್‌ ಠಾಣೆವರೆಗೆ ಮಾತ್ರ ಜಾರಿಯಲ್ಲಿದ್ದು, ಅದರ ಮುಂದೆ ರಸ್ತೆ ಅಗಲೀಕರಣ ಕಾಮಗಾರಿ ನಡೆದಿರುವುದರಿಂದ ಜಾರಿ ಮಾಡಿಲ್ಲ. ನೂತನ ನಿಮಯದಿಂದ ರಸ್ತೆಯ ಒಂದು ಬದಿ ಸದಾ ಖಾಲಿ ಉಳಿಯಲಿದ್ದು, ಪಾದಚಾರಿಗಳು, ಶಾಲಾ ಮಕ್ಕಳು ಹಾಗೂ ವೃದ್ಧರು ಭಯ ಮುಕ್ತರಾಗಿ ಸಂಚರಿಸಬಹುದಾಗಿದೆ.

ಸಂಚಾರಿ ನಿಯಮ ಉಲ್ಲಂಘನೆ: ಕಳೆದ ನಾಲ್ಕು ವರ್ಷಗಳಲ್ಲಿ 727.84 ಕೋಟಿ ರೂ ದಂಡ ವಸೂಲಿ!

ಜನನಿಬಿಡ ರಸ್ತೆ!
ಬೆಂಗಳೂರು ರಸ್ತೆಯ ಎರಡೂ ಬದಿಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಾಣಿಜ್ಯ ಮಳಿಗೆಗಳಿವೆ. ಹಣ್ಣು, ತರಕಾರಿ, ಬಟ್ಟೆ, ಶೂ, ಚಪ್ಪಲಿ, ಮೊಬೈಲ್‌, ಕಿರಾಣಿ ಅಂಗಡಿ ಸೇರಿದಂತೆ ನಾನಾ ಬಗೆಯ ಅಂಗಡಿಗಳು ಈ ರಸ್ತೆಯಲ್ಲಿ ಇವೆ. ಹೀಗಾಗಿ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಅಲ್ಲದೆ, ಬೈಕ್‌ ಸವಾರರು ರಸ್ತೆಯ ಎರಡೂ ಬದಿಗಳಲ್ಲಿ ಬೈಕ್‌ ನಿಲುಗಡೆ ಮಾಡುತ್ತಿದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿತ್ತು. ಇದೀಗ ‘ಸಮ-ಬೆಸ’ ನಿಯಮ ಜಾರಿಯಿಂದ ಕಿರಿಕಿರಿ ತಪ್ಪಿದಂತಾಗಿದೆ.

ಏಕಮುಖ ರಸ್ತೆ!
ಅನೇಕ ವಾಣಿಜ್ಯ ಮಳಿಗೆಗಳನ್ನು ಹೊಂದಿರುವ ಬೆಂಗಳೂರು ರಸ್ತೆಯು ಮೊದಲಿನಿಂದಲೂ ಏಕಮುಖ ರಸ್ತೆಯಾಗಿದೆ. ಹೀಗಿದ್ದೂ ಈ ರಸ್ತೆಯಲ್ಲಿ ಸದಾ ಸಂಚಾರ ದಟ್ಟಣೆ ಇದ್ದೇ ಇರುತ್ತದೆ. ಈ ಕಾರಣಕ್ಕಾಗಿಯೇ ಈ ರಸ್ತೆಯಲ್ಲಿ ‘ಸಮ-ಬೆಸ’ ನಿಯಮ ಜಾರಿಗೊಳಿಸಲಾಗಿದೆ.

ಮಾಲಿಕರಿಂದಲೇ ಸಮಸ್ಯೆ?!
ಇಲ್ಲಿನ ಗಡಗಿ ಚೆನ್ನಪ್ಪ ವೃತ್ತದಿಂದ ಎಪಿಎಂಸಿ ಮಾರುಕಟ್ಟೆಯವರೆಗೆ ನಾನಾ ರೀತಿಯ ವಾಣಿಜ್ಯ ಮಳಿಗೆಗಳು ಇವೆ. ಒಂದೂಂದು ಮಳಿಗೆಗಳಲ್ಲಿಕಡಿಮೆ ಅದರೂ ನಾಲ್ಕಕ್ಕಿಂತ ಹೆಚ್ಚು ಜನರು ಕೆಲಸ ಮಾಡುತ್ತಾರೆ. ಅವರ ಮತ್ತು ಅವರ ಮಾಲೀಕರ ಬೈಕ್‌ ಪಾರ್ಕಿಂಗ್‌ನಿಂದಲೇ ಅರ್ಧ ಸಮಸ್ಯೆ ಉಂಟಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಮಳಿಗೆಗಳ ಮಾಲೀಕರು ಮತ್ತು ಕೆಲಸಗಾರರಿಗೆ ಪರ್ಯಾಯ ಪಾರ್ಕಿಂಗ್‌ ಸ್ಥಳ ನಿಗದಿಪಡಿಸಿದರೆ, ಟ್ರಾಫಿಕ್‌ ಸಮಸ್ಯೆ ಅರ್ಧ ಬಗೆಹರಿಯುತ್ತದೆ ಎಂಬುದು ಹಲವರ ಅಭಿಪ್ರಾಯವಾಗಿದೆ.

ಬೆಂಗಳೂರು ರಸ್ತೆಯಲ್ಲಿ ಅನೇಕೆ ವಾಣಿಜ್ಯ ಮಳಿಗೆಗಳು ಇರುವುದರಿಂದ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತದೆ. ‘ಸಮ-ಬೆಸ’ ಪಾರ್ಕಿಂಗ್‌ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಮಳಿಗೆಗಳ ಮಾಲೀಕರು ಹಾಗೂ ಕೆಲಸಗಾರರ ವಾಹನಗಳಿಗೆ ಬೇರೆ ಕಡೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಸೂಕ್ತ ಕ್ರಮ ವಹಿಸಲಾಗುವುದು.

– ನಾಗರಾಜ್‌ ಎಂ.ಮಾಡರಹಳ್ಳಿ, ಸಿಪಿಐ, ಸಂಚಾರ ಪೊಲೀಸ್‌ ಠಾಣೆ, ಬಳ್ಳಾರಿ.

ಬೆಂಗಳೂರು ರಸ್ತೆಯಲ್ಲಿ’ಸಮ-ಬೆಸ’ ನಿಯಮದಿಂದ ಸಾಕಷ್ಟು ಅನುಕೂಲವಾಗಲಿದೆ. ಮಾಲೀಕರು ಹಾಗೂ ಕೆಲಸಗಾರರ ವಾಹನಗಳ ಪಾರ್ಕಿಂಗ್‌ಗೆ ಜಿಲ್ಲಾಡಳಿತ ಸೂಕ್ತ ಸ್ಥಳ ನಿಗದಿಪಡಿಸಿದರೆ ಟ್ರಾಫಿಕ್‌ ಸಮಸ್ಯೆ ನಿಯಂತ್ರಿಸಬಹುದು.

– ದೇವರಾಜ್‌, ಕೆಲಸಗಾರ, ಬೇಕರಿ, ಬಳ್ಳಾರಿ.



Read more

[wpas_products keywords=”deal of the day sale today offer all”]