Karnataka news paper

ಓಮಿಕ್ರಾನ್ ಏರಿಕೆ ನಡುವೆ ಸಂತಸದ ಸುದ್ದಿ: 571 ದಿನಗಳಲ್ಲಿಯೇ ಕಡಿಮೆ ಕೋವಿಡ್ ಪ್ರಕರಣ


ಹೈಲೈಟ್ಸ್‌:

  • ದಿಲ್ಲಿಯಲ್ಲಿ 4 ಮತ್ತು ರಾಜಸ್ಥಾನದಲ್ಲಿ 8 ಹೊಸ ಓಮಿಕ್ರಾನ್ ಕೇಸ್
  • ಭಾರತದ ಪತ್ತೆಯಾದ ಒಟ್ಟು ಓಮಿಕ್ರಾನ್ ಪ್ರಕರಣಗಳು 53ಕ್ಕೆ ಏರಿಕೆ
  • ದೇಶದಲ್ಲಿ 24 ಗಂಟೆಗಳಲ್ಲಿ 5,784 ಕೋವಿಡ್ ಪ್ರಕರಣಗಳು ಪತ್ತೆ
  • ಕಳೆದ 571 ದಿನಗಳಲ್ಲಿಯೇ ಅತ್ಯಂತ ಕಡಿಮೆ ದೈನಂದಿನ ಪ್ರಕರಣ

ಹೊಸದಿಲ್ಲಿ: ಭಾರತದಲ್ಲಿನ ಓಮಿಕ್ರಾನ್ ತಳಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 53ಕ್ಕೆ ಏರಿಕೆಯಾಗಿದೆ. ದಿಲ್ಲಿ ಮತ್ತು ರಾಜಸ್ಥಾನಗಳಲ್ಲಿ ಹೊಸ ಪ್ರಕರಣಗಳು ಮಂಗಳವಾರ ದೃಢಪಟ್ಟಿವೆ. ರಾಜಸ್ಥಾನದಲ್ಲಿ ಎಂಟು ಮಂದಿಯಲ್ಲಿ ಓಮಿಕ್ರಾನ್ ಕೋವಿಡ್ 19 ತಳಿ ಕಂಡುಬಂದಿದೆ. ಇದರಿಂದ ರಾಜ್ಯದ ಒಟ್ಟು ಓಮಿಕ್ರಾನ್ ಪ್ರಕರಣಗಳು 17ಕ್ಕೆ ಏರಿಕೆಯಾಗಿವೆ. ದಿಲ್ಲಿಯಲ್ಲಿ ನಾಲ್ವರಲ್ಲಿ ಹೊಸ ಪ್ರಭೇದದ ಕೋವಿಡ್ 19 ಪತ್ತೆಯಾಗಿದೆ. ಇದರಿಂದ ರಾಜಧಾನಿಯಲ್ಲಿನ ಒಟ್ಟು ಪ್ರಕರಣಗಳು ಆರಕ್ಕೆ ಏರಿಕೆಯಾಗಿವೆ.

ದಿಲ್ಲಿಯ ಮೊದಲ ಓಮಿಕ್ರಾನ್ ಸೋಂಕಿತ ರೋಗಿ ಸಂಪೂರ್ಣ ಗುಣಮುಖರಾಗಿದ್ದು, ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಂಚಿ ನಿವಾಸಿಯಾಗಿರುವ 37 ವರ್ಷದ ಈ ವ್ಯಕ್ತಿ, ತಾಂಜಾನಿಯಾದಿಂದ ದೋಹಾಕ್ಕೆ, ಅಲ್ಲಿಂದ ದಿಲ್ಲಿಗೆ ಕತಾರ್ ಏರ್‌ವೇಸ್ ವಿಮಾನದಲ್ಲಿ ಪ್ರಯಾಣಿಸಿದ್ದರು. ಅವರು ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ನಲ್ಲಿ ಒಂದು ವಾರ ಉಳಿದುಕೊಂಡಿದ್ದರು.
Omicron Variant: ಕರ್ನಾಟಕದಲ್ಲಿ ಮತ್ತೊಂದು ಒಮಿಕ್ರಾನ್ ಪ್ರಕರಣ ಪತ್ತೆ!
ಅತಿ ಹೆಚ್ಚು ಓಮಿಕ್ರಾನ್ ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗಿದ್ದು, ಅಲ್ಲಿ 20 ಕೇಸ್‌ಗಳು ಖಚಿತವಾಗಿವೆ. ರಾಜಸ್ಥಾನದಲ್ಲಿ 17, ದಿಲ್ಲಿಯಲ್ಲಿ 6, ಗುಜರಾತ್ 4, ಕರ್ನಾಟಕ 3, ಕೇರಳ, ಆಂಧ್ರಪ್ರದೇಶ ಮತ್ತು ಚಂಡೀಗಡದಲ್ಲಿ ತಲಾ ಒಂದು ಪ್ರಕರಣಗಳು ಇದುವರೆಗೂ ದೃಢಪಟ್ಟಿವೆ.

ಕೋವಿಡ್ ಪ್ರಕರಣಗಳಲ್ಲಿ ಇಳಿಕೆ
ಒಂದೆಡೆ ಓಮಿಕ್ರಾನ್ ಪ್ರಕರಣಗಳಲ್ಲಿ ನಿಧಾನ ಏರಿಕೆಯಾಗುತ್ತಿರುವುದು ಆತಂಕ ಮೂಡಿಸಿದ್ದರೆ, ಇನ್ನೊಂದೆಡೆ ದೇಶದ ಒಟ್ಟಾರೆ ಕೋವಿಡ್ ಪ್ರಕರಣಗಳಲ್ಲಿ ಮಂಗಳವಾರ ಗಮನಾರ್ಹ ಇಳಿಕೆಯಾಗಿರುವುದು ನೆಮ್ಮದಿಯ ಮೂಡಿಸಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 5,784 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಸೋಮವಾರ 7,350 ಪ್ರಕರಣಗಳು ದೃಢಪಟ್ಟಿದ್ದವು. ಅಂದರೆ 24 ಗಂಟೆಗಳಲ್ಲಿ ಶೇ 21.3ರಷ್ಟು ಪ್ರಕರಣಗಳಲ್ಲಿ ಇಳಿಕೆಯಾಗಿದೆ. ಇದು ಕಳೆದ 571 ದಿನಗಳಲ್ಲಿಯೇ ಅತ್ಯಂತ ಕಡಿಮೆ ಪ್ರಕರಣ ಎನ್ನುವುದು ಗಮನಿಸಬೇಕಾದ ಸಂಗತಿ.
ಓಮಿಕ್ರಾನ್‌ಗೆ ಬ್ರಿಟನ್‌ನಲ್ಲಿ ಮೊದಲ ಬಲಿ, ಕಾಳ್ಗಿಚ್ಚಿನಂತೆ ಹರಡುತ್ತಿದೆ ಕೊರೊನಾ ರೂಪಾಂತರಿ
ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 88,993 ಇದ್ದು, ಇದು ಕೂಡ ಕಳೆದ 563 ದಿನಗಳಲ್ಲಿ ಅತ್ಯಂತ ಕಡಿಮೆಯಾಗಿದೆ. 252 ಮಂದಿ ಸೋಂಕಿತರು ಕಳೆದ 24 ಗಂಟೆಗಳಲ್ಲಿ ಮೃತಪಟ್ಟಿದ್ದಾರೆ. ಚೇತರಿಕೆ ಪ್ರಮಾಣ ಶೇ 98.37ರಷ್ಟಿದೆ. ಇದು 2020ರ ಮಾರ್ಚ್‌ ನಂತರದ ಅತ್ಯಧಿಕ ದಾಖಲೆಯಾಗಿದೆ. ದೈನಂದಿನ ಪಾಸಿಟಿವಿಟಿ ದರ ಶೇ 0.58ರಷ್ಟಿದ್ದು, ಕಳೆದ 71 ದಿನಗಳಿಂದ ಶೇ 2ಕ್ಕಿಂತಲೂ ಕಡಿಮೆ ಇದೆ.

ಓಮಿಕ್ರಾನ್ ಭಯದ ಕಾರಣ ಬೂಸ್ಟರ್ ಡೋಸ್ ಲಸಿಕೆ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಓಮಿಕ್ರಾನ್ ಅಪಾಯಕಾರಿಯಾಗಿ ಕಾಣಿಸಿಲ್ಲ. ಹೀಗಾಗಿ ಬೂಸ್ಟರ್ ಬಗ್ಗೆ ಆತುರ ಬೇಡ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.



Read more