Karnataka news paper

ಚಲ್ಲಘಟ್ಟ ಮೆಟ್ರೊ ಮಾರ್ಗ ಶೇ.90ರಷ್ಟು ಕಾಮಗಾರಿ ಪೂರ್ಣ! ಆಗಸ್ಟ್‌ನಲ್ಲಿ ಸಂಚಾರಕ್ಕೆ ಮುಕ್ತ


ಹೈಲೈಟ್ಸ್‌:

  • ಕೆಂಗೇರಿಯಿಂದ ಚಲ್ಲಘಟ್ಟ ನಡುವಿನ ಎರಡು ಕಿ.ಮೀ ಮೆಟ್ರೊ ಮಾರ್ಗ
  • ಶೇ. 90ರಷ್ಟು ಕಾಮಗಾರಿ ಪೂರ್ಣ
  • ಆಗಸ್ಟ್‌ ವೇಳೆಗೆ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ

ಬೆಂಗಳೂರು: ಕೆಂಗೇರಿಯಿಂದ ಚಲ್ಲಘಟ್ಟ ನಡುವಿನ ಎರಡು ಕಿ.ಮೀ ಮೆಟ್ರೊ ಮಾರ್ಗದ ಶೇ. 90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಈ ವರ್ಷದ ಆಗಸ್ಟ್‌ ವೇಳೆಗೆ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.

ಚಲ್ಲಘಟ್ಟ ನಿಲ್ದಾಣದ ಬಹುತೇಕ ಕಾಮಗಾರಿ ಮುಗಿದಿದ್ದು, ನೆಲದ ಮೇಲೆ ಗ್ರಾನೈಟ್‌ ಅಳವಡಿಕೆ, ಪಿನ್ನಿಂಗ್‌ ಮತ್ತಿತರ ಬಾಹ್ಯ ಕಾಮಗಾರಿಗಳು ಮುಂದಿನ ತಿಂಗಳ ಮೊದಲ ವಾರದಲ್ಲಿ ಆರಂಭವಾಗಲಿದ್ದು, ಜುಲೈ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಹಳಿಯನ್ನು ಸೇರಿಸಲು ವೆಲ್ಡಿಂಗ್‌ ಕಾಮಗಾರಿ ಮುಗಿದಿದ್ದು, ಪ್ಲಿಂತ್‌ ಹಾಕುವ ಕೆಲಸ ನಡೆಯುತ್ತಿದೆ.

ಚಲ್ಲಘಟ್ಟ ಡಿಪೊ ವಿಳಂಬಕ್ಕೆ ಕಾರಣ
ಜ.2017ರಂದು ಕೆಂಗೇರಿ – ಚಲ್ಲಘಟ್ಟ ಮೆಟ್ರೊ ಯೋಜನೆಯ ಸಿವಿಲ್‌ ಕಾಮಗಾರಿ ಆರಂಭವಾಗಿತ್ತು. ಅಂದುಕೊಂಡಂತೆ ಎಲ್ಲವೂ ನಡೆದಿದ್ದರೆ 2019ರಲ್ಲಿಯೇ ಮಾರ್ಗ ಸಂಚಾರಕ್ಕೆ ಮುಕ್ತವಾಗಬೇಕಿತ್ತು. ಆದರೆ, ಚಲ್ಲಘಟ್ಟದವರೆಗೆ ಮಾರ್ಗ ನಿರ್ಮಾಣಕ್ಕೆ ಬಿಡಿಎದಿಂದ 12 ಎಕರೆ ಜಾಗದ ಅವಶ್ಯಕತೆ ಇತ್ತು, ಬಿಎಂಆರ್‌ಸಿಎಲ್‌ ಮಾರುಕಟ್ಟೆ ಬೆಲೆ ಕೇಳುತ್ತಿರುವುದರಿಂದ ಜಾಗ ಪರಭಾರೆ ತಡವಾಯಿತು. ಆನಂತರ ಗುತ್ತಿಗೆದಾರರ ಬದಲಾವಣೆ ಮತ್ತು ನಂತರ ಕೊರೊನಾ ಕಾರಣದಿಂದ ಈ ಮಾರ್ಗ ನಿರ್ಮಾಣದ ಗಡುವು ಮುಂದುವರಿಯುತ್ತಲೇ ಇದೆ.

2025ಕ್ಕೆ 175 ಕಿ.ಮೀ ಮೆಟ್ರೊ ಜಾಲ
ಸದ್ಯ 56 ಕಿ.ಮಿ ಮೆಟ್ರೊ ಮಾರ್ಗವಿದ್ದು, 2022ಕ್ಕೆ ಬೆಂಗಳೂರಿಗೆ 75 ಕಿ.ಮೀ ಮೆಟ್ರೊ ಜಾಲ ಮತ್ತು 2025ಕ್ಕೆ 175 ಕಿ.ಮೀಗಳ ಮೆಟ್ರೊ ಜಾಲ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ . ಕಾಮಗಾರಿ ಮತ್ತು ಭೂಸ್ವಾಧೀನದ ವಿಳಂಬದಿಂದ ಈ ಅವಧಿಯಲ್ಲಿ ಗುರಿ ತಲುಪಲು ಸಾಧ್ಯವೇ ಎನ್ನುವುದು ಪ್ರಶ್ನೆಯಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಸದ್ಯ ನಡೆಯುತ್ತಿರುವ ಎಲ್ಲಾ ಮೆಟ್ರೊ ಕಾಮಗಾರಿಗಳನ್ನು 2025ರ ಒಳಗೆ ಮುಗಿಸುವಂತೆ ಬಿಎಂಆರ್‌ಸಿಎಲ್‌ ಅಧಿಕಾರಿಗಳಿಗೆ ಸೂಚಿದ್ದಾರೆ.

ಕಳೆದ ವರ್ಷ ಕೆಂಗೇರಿ ಮಾರ್ಗ ಉದ್ಘಾಟನೆ
ಚಲ್ಲ ಘಟ್ಟ ಮಾರ್ಗದ, ಮೈಸೂರು ರಸ್ತೆ ಮೆಟ್ರೊ ನಿಲ್ದಾಣದಿಂದ ಕೆಂಗೇರಿ ಮೆಟ್ರೊ ನಿಲ್ದಾಣದವರೆಗಿನ 7.5 ಕಿ.ಮೀ. ಮೆಟ್ರೊ ನೇರಳೆ ಮಾರ್ಗವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ವಸತಿ, ನಗರ ವ್ಯವಹಾರ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್‌ ಸಿಂಗ್‌ ಪುರಿ ಕಳೆದ ವರ್ಷದ ಆ.29ರಂದು ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಿದ್ದರು.

ಎರಡು ವರ್ಷ ವಿಳಂಬ
7.5 ಕಿ.ಮೀ. ಉದ್ದದ, ಮೈಸೂರು ರಸ್ತೆ ಮೆಟ್ರೊ ಕೆಂಗೇರಿ ವಿಸ್ತರಿತ ಮಾರ್ಗದಲ್ಲಿ 2019ರ ಕೊನೆಯ ವೇಳೆಗೆ ಸಂಚಾರ ಆರಂಭವಾಗಬೇಕಿತ್ತು. ಅದಾಗಲಿಲ್ಲ. ನಂತರ 2021ರ ಫೆಬ್ರುವರಿಗೆ ಗಡುವು ನೀಡಲಾಯಿತು. ಅದು ಕೂಡ ಹುಸಿಯಾಯಿತು. ಅಂತಿಮವಾಗಿ ಆ.29, 2021ರಂದು ಹಸಿರು ನಿಶಾನೆ ತೊರಿಸಲಾಯಿತು.

ಇಂದಿನಿಂದ ಮೆಟ್ರೊ ಸಹಜ ಸಂಚಾರ
ರಾಜ್ಯದಲ್ಲಿ ವೀಕೆಂಡ್‌ ಕಫ್ರ್ಯೂ ಹಿಂಪಡೆದ ಹಿನ್ನೆಲೆಯಲ್ಲಿ ನಮ್ಮ ಮೆಟ್ರೊ ಸಂಚಾರ ಶನಿವಾರದಿಂದ (ಜ. 22) ಯಥಾಸ್ಥಿತಿಯಲ್ಲಿರಲಿದೆ. ಪ್ರತಿ ಐದು ನಿಮಿಷಕ್ಕೆ ಒಂದರಂತೆ ಮೆಟ್ರೊ ರೈಲು ಸಂಚಾರ ನಡೆಸಲಿವೆ. ಬೆಳಿಗ್ಗೆ 5 ರಿಂದ ರಾತ್ರಿ 11 ಗಂಟೆಯವರೆಗೂ ನಮ್ಮ ಮೆಟ್ರೊ ರೈಲುಗಳು ಕಾರ್ಯಾಚರಣೆ ನಡೆಸಲಿವೆ. ಭಾನುವಾರ ಮಾತ್ರ ಬೆಳಗ್ಗೆ 7 ರಿಂದ ಸಂಜೆ 11 ಗಂಟೆಯವರೆಗೆ ಸಂಚಾರ ನಡೆಸಲಿದೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ. ರಾತ್ರಿ 11 ಗಂಟೆಗೆ ಟರ್ಮಿನಲ್‌ ಸ್ಟೇಷನ್‌ನಿಂದ ಕೊನೆಯ ರೈಲು ಹೊರಡಲಿದೆ. ವೀಕೆಂಡ್‌ ಕರ್ಫ್ಯೂ ವೇಳೆ 30 ನಿಮಿಷಗಳಿಗೆ ಒಂದು ರೈಲು ಕಾರ್ಯಾಚರಣೆಯಾಗುತ್ತಿತ್ತು.



Read more

[wpas_products keywords=”deal of the day sale today offer all”]